ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೀಗೊಬ್ಬ ನಿಷ್ಠಾವಂತ

ಸರ್ಕಾರದ ಕೆಲವು ಇಲಾಖೆಗಳನ್ನು ಭ್ರಷ್ಟಾಚಾರಿಗಳ ಸ್ವರ್ಗ ಎಂದೇ ಭಾವಿಸಲಾಗುತ್ತಿದೆ. ಆದರೆ ಇಂತಹ ವಾತಾವರಣದಲ್ಲಿಯೂ....

Rashmi Kasaragodu
Updated On : 5 Dec 2013, 12:13 pm

ಸರ್ಕಾರದ ಕೆಲವು ಇಲಾಖೆಗಳನ್ನು ಭ್ರಷ್ಟಾಚಾರಿಗಳ ಸ್ವರ್ಗ ಎಂದೇ ಭಾವಿಸಲಾಗುತ್ತಿದೆ. ಆದರೆ ಇಂತಹ ವಾತಾವರಣದಲ್ಲಿಯೂ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಕೆಲವರು ಅಲ್ಲಲ್ಲಿ ಕಂಡುಬರುತ್ತಾರೆ. ಅಂತಹವರಲ್ಲಿ ಒಬ್ಬರು ಚನ್ನಬಸಪ್ಪ ಎಂಬ ತಾಲೂಕು ಕಚೇರಿ ಗುಮಾಸ್ತರಾಗಿದ್ದವರು. ಈ ಘಟನೆ ಈಗಿನದಲ್ಲ. 60ವರ್ಷ ಹಿಂದಿನದು. ಚನ್ನಬಸಪ್ಪ ಆಲೂರಿನ ತಾಲ್ಲೂಕು ಕಚೇರಿಯಲ್ಲಿ ಭಾರತ ಸ್ವಾತಂತ್ರ ಗಳಿಸಿದ ಸಮಯದಲ್ಲಿ ಗುಮಾಸ್ತರಾಗಿ ಸೇವೆಸಲ್ಲಿಸಿದವರು. ಅವರ ತಂದೆ ಬಸಪ್ಪ ಕಚೇರಿಯ ಬಳಿ ಸ್ಟಾಂಪ್ ವೆಂಡರ್. ಚನ್ನಬಸಪ್ಪ ಸೇವೆಗೆ ಸೇರಿದಾಗಿನಿಂದ, ನಿವೃತ್ತರಾಗುವವರೆಗೂ ವೃತ್ತಿಯಲ್ಲಿ ಪರಿಶುದ್ದತೆಯನ್ನು ಕಾಪಾಡಿಕೊಂಡು ಬಂದವರು. ಕೆಲವೊಮ್ಮೆ ಅವರ ತಂದೆ ಮಗನಿಗೆ "ಅಷ್ಟೊಂದು ಪ್ರಾಮಾಣಿಕತೆಯ ಅವಶ್ಯಕತೆಯಿಲ್ಲ" ಎಂದು ಹೇಳಿದರೂ ಅದನ್ನು ಕೇಳದೆ, ತಮ್ಮ ಮನಸ್ಸಿಗೆ ವಿರುದ್ಧವಾದ ಯಾವ ಕಾರ್ಯವನ್ನೂ ಅವರು ಮಾಡುತ್ತಿರಲಿಲ್ಲ. ವೃತ್ತಿಯಲ್ಲಿ ಮೇಲೇರುತ್ತಿದ್ದರೂ, ಎಂದಿಗೂ ಎಂಜಲು ಕಾಸಿಗೆ ಕೈಯೊಡ್ಡದೆ ಸಾರ್ವಜನಿಕರ ಸೇವೆಯನ್ನು ನಿಷ್ಠೆಯಿಂದ ಮಾಡಿಕೊಂಡು ಬಂದವರು. ಸಹೋದ್ಯೋಗಿಗಳಿಗೆ ಸಿಂಹಸ್ವಪ್ನವಾಗಿ, ಬಡವರ, ದುರ್ಬಲರ ಧ್ವನಿಯಾಗಿದ್ದರು ಅವರು. ಅವರೊಂದು ಸಮಾರಂಭದಲ್ಲಿ ಭಾಗಿಯಾಗಿದ್ದರು. ಅವರ ಸೇವೆಯನ್ನು ಗೌರವಿಸಬೇಕೆಂದು ಅವರನ್ನು ಬಲವಂತವಾಗಿ ವೇದಿಕೆಗೆ ಕರೆದೊಯ್ದು ಶಾಲು ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಸಭಾಸದರು ತುಂಬಾ ಸಂತೋಷಪಟ್ಟರು. ಸನ್ಮಾನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೇದಿಕೆಯಿಂದ ಇಳಿದವರೇ, ಛಳಿಯಿಂದ ನಡುಗುತ್ತಿದ್ದ ಒಬ್ಬ ಹಿರಿಯರಿಗೆ ಶಾಲನ್ನು ಹೊದ್ದಿಸಿ, ಫಲತಾಂಬೂಲವನ್ನು ಅಲ್ಲಿಯೇ ಹಂಚಿ ಹಾಗೆಯೇ ಬರಿಗೈಯಲ್ಲಿ ಮನೆಗೆ ಹೋದರು. ನಿವೃತ್ತರಾದ ಮೇಲೆ ವಾರದ ಏಳೂದಿನ ನಡೆಯುವ ಹಳ್ಳಿಯ ಸಂತೆಗೆ ತೆರಳಿ ಅನಕ್ಷರಸ್ಥ ಬಡವರ ಕಷ್ಟ ಸುಖಗಳನ್ನು ವಿಚಾರಿಸಿ, ಸರ್ಕಾರದ ವಿವಿಧ ಇಲಾಖೆಗಳಿಗೆ ಅವರ ಅವಶ್ಯಕತೆಗೆ ತಕ್ಕಂತೆ ಅರ್ಜಿಗಳನ್ನು ಬರೆದುಕೊಟ್ಟು ಬರುತ್ತಿದ್ದರು. ಅದಕ್ಕಾಗಿ ಯಾರಿಂದಲೂ ಯಾವ ಸಂಭಾವನೆಯನ್ನೂ ಪಡೆಯುತ್ತಿರಲಿಲ್ಲ. ಕಚೇರಿಗಳಲ್ಲಿ ಚನ್ನಬಸಪ್ಪನವರ ಕೈಬರಹದ ಅರ್ಜಿಯನ್ನು ನೋಡಿದ ಅಧಿಕಾರಿಗಳು ಅವನ್ನು 'ಲಂಚನಿರೋಧಕ' ಅರ್ಜಿಗಳೆಂದೇ ಪರಿಗಣಿಸಿ ವಿಲೇವಾರಿ ಮಾಡುತ್ತಿದ್ದರು. ಇದು ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಸಲ್ಲಿಸುತ್ತಿದ್ದ ಗೌರವವಾಗಿತ್ತು.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments