ಪತ್ರಪ್ರಭ
ಶಿಕ್ಷಣದ ಸುಧಾರಣೆ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಆರು ತಿಂಗಳೊಳಗೆ ಅಗತ್ಯ ಕ್ರಮಕೈಗೊಳ್ಳುವಂತೆ ಮಾನ್ಯ ಲೋಕಾಯುಕ್ತ ನ್ಯಾಯಮೂರ್ತಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆದೇಶಿಸಿರುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸದ ವೇಳೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಗುಣಮಟ್ಟದ ಕೊರತೆ ಇದೆ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿಯಿತು. ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಸ್ಥಿತಿ ಭಿನ್ನವಾಗೇನಿಲ್ಲ.
ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಗುಣಮಟ್ಟ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳುವುದು ಅವರ ಜವಾಬ್ದಾರಿಯಲ್ಲವೇ? ರಾಜ್ಯ ಮಟ್ಟದಲ್ಲಿರುವ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಏನು ಮಾಡುತ್ತಿದೆ? ಆರು ತಿಂಗಳಲ್ಲಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಬಹುದು. ಆದರೆ ಫಲ ಸಿಗಲು ವರ್ಷಗಳೇ ಬೇಕು. ಏಕೆಂದರೆ ಪ್ರಮುಖವಾಗಿ 'ಇಂಗ್ಲಿಷ್' ಭಾಷಾ ಬೋಧನೆ ಅತ್ಯಂತ ಕಷ್ಟಕರ. ಪದವಿ ಪಡೆದರೂ ಇಂಗ್ಲಿಷ್ ಮಾತನಾಡಲು ಕಷ್ಟಪಡುವಂತಾಗಿದೆ. ಕೆಳಹಂತದಿಂದ ಪರಿಣಾಮಕಾರಿ ಬೋಧನೆಯಾಗುತ್ತಿಲ್ಲ. ಏಕೆಂದರೆ ಶಿಕ್ಷಕರು ಯಾವುದೇ ಭಾಷೆ ಬೋಧಿಸುವಾಗ ಸಂಬಂಧಿಸಿದ ಭಾಷೆಯಲ್ಲಿಯೇ ವ್ಯವಹರಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು- ಈ ನಾಲ್ಕು ಕೌಶಲಗಳನ್ನು ಬೆಳೆಸಬೇಕು. ಇವುಗಳಲ್ಲಿ ಮಾತನಾಡುವುದು ಮತ್ತು ಬರೆಯುವುದು ಅತ್ಯಂತ ಪ್ರಮುಖವಾದವು. ಆದರೆ ಅನುಷ್ಠಾನಗೊಳ್ಳುತ್ತಿಲ್ಲ. ಆದ್ದರಿಂದ ಶಿಕ್ಷಕರಿಗೆ ಸೂಕ್ತ ತರಬೇತಿ ಕೊಡಿಸಿ, ಕೆಳಹಂತದಿಂದಲೇ ಸರಿಯಾದ ಉಚ್ಚಾರಣೆಯೊಡನೆ ಪರಿಣಾಮಕಾರಿಯಾಗಿ ಮಾತನಾಡುವಂತೆ ಮತ್ತು ಬರೆಯುವಂತಾದರೆ ಮಕ್ಕಳೂ ಭಾಷೆ ಕಲಿಯಲು ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟವರಲ್ಲಿ ಮನವಿ.
-ಎಸ್. ಸಿದ್ದರಾಜು, ಮೈಸೂರು
ಬಿಸಿಯೂಟ ತಯಾರಕರ ಸಂಭಾವನೆ ಹೆಚ್ಚಿಸಿ
ನಮ್ಮ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 50 ಸಾವಿರ ಬಿಸಿಯೂಟ ತಯಾರಕರನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇಮಿಸಿರುವುದು ಸರಿಯಷ್ಟೆ. ಜೊತೆಗೆ ಹಾಲು ಕೊಡುವ ಜವಾಬ್ದಾರಿಯನ್ನು ಹೊರಿಸಿದೆ. ಇವರ ಕೆಲಸದ ವೇಳೆ ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಹಿಡಿಯುತ್ತದೆ. ಸ್ವಚ್ಛತೆ ಹಾಗೂ ಊಟ ತಯಾರಿಕೆಯಲ್ಲಿ ಗುರುತರವಾದ ಕೆಲಸ ನಿರ್ವಹಿಸುವ ಇವರಿಗೆ ತಿಂಗಳಿಗೆ 1,100/- ರು. ಮಾತ್ರ. ಸರಾಸರಿ ದಿನಕ್ಕೆ 40-00 ರು. ಕೂಲಿಯಾಗಿದೆ. ಇದು ಗ್ರಾಮೀಣ ಕೃಷಿ ಕೂಲಿಗಿಂತ ಕೆಳಮಟ್ಟದ್ದಾಗಿದೆ. ಇದರಿಂದ ಬಿಸಿಯೂಟ ತಯಾರಕ ಪಾಡು ನಾಯಿ ಪಾಡಾಗಿದೆ. ಸರ್ಕಾರ ಎಲ್ಲಾ ಕೂಲಿಗಾರರಿಗೂ 'ಕನಿಷ್ಟ ವೇತನ' ನಿಗದಿ ಮಾಡಿದೆಯಾದರೂ, ಬಿಸಿಯೂಟ ತಯಾರಕರಿಗೇಕೆ ಅನ್ವಯಿಸಿಲ್ಲ? ಇಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯಿದೆ ಕೂಡ ಗಾಳಿಗೆ ತೂರಿದಂತಾಗಿದೆ. ಬಡತನ ರೇಖೆಗಿಂತ ಕೆಳಗಿನವರು ಮತ್ತು ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇವರ ಬದುಕನ್ನು ಉತ್ತಮಪಡಿಸಲು ಈಗಿರುವ ಸಂಭಾವನೆಯನ್ನು 'ಕನಿಷ್ಟ ವೇತನ' ಕ್ಕೆ ಬದಲಾಯಿಸಿದರೆ, ಇವರ ಉದ್ಯೋಗ ಬದುಕಿಗೊಂದು ಊರುಗೋಲಾಗುವುದರಲ್ಲಿ ಸಂಶಯವಿಲ್ಲ.
-ಸಿ. ನಾಗರಾಜ, ಅರದೋಟ್ಲು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.