ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿಧಾನ ಮಂಡಲದಲ್ಲಿ ಮಸೂದೆಗಳ ದಿಢೀರ್ ಅಂಗೀಕಾರ

Mainashree
Updated On : 5 Dec 2013, 10:23 am

ಬೆಳಗಾವಿಯಲ್ಲಿ ಸಮಾವೇಶಗೊಂಡಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲೂ ಸರ್ಕಾರ ಸಿದ್ಧಪಡಿಸಿದ್ದ ವಿಧೇಯಕಗಳು ಬೇಗ ಬೇಗ ಅಂಗೀಕಾರವಾಗುತ್ತಿರುವುದಕ್ಕೆ ಶಾಸನ ರಚನೆಯಲ್ಲಿ ಶಾಸಕರು ವಿಶೇಷವಾದ ಆಸಕ್ತಿಯನ್ನು ಪ್ರದರ್ಶಿಸುತ್ತಿರುವುದೇ ಕಾರಣವೇ?
ಇರಬಹುದು. ಅಲ್ಪಾವಧಿಯ ಕಾಲಕ್ಕೆ ಕರೆದಿರುವ ಹತ್ತೇ ದಿನಗಳ ಅಧಿವೇಶನದ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಪಡಿಸುವಾಗ ತೂಕವಾದ ವಿಷಯಗಳನ್ನು ಅಳವಡಿಸುವುದು ಸರ್ಕಾರಕ್ಕೆ ಕಷ್ಟವಾಗಿರಬಹುದು.
ಬುಧವಾರ ವಿಧಾನ ಮಂಡಲದ ಸದನಗಳಲ್ಲಿ ಪ್ರಸ್ತಾಪವಾಗಿ ಒಂದಲ್ಲ ಒಂದು ಕಡೆ ಅಂಗೀಕಾರದ ಮುದ್ರೆಯನ್ನು ಒತ್ತಿಸಿಕೊಂಡಿರುವ ಕೆಲವು ವಿಧೇಯಕಗಳನ್ನು ಕುರಿತು ಆಳವಾದ, ಅಧ್ಯಯನ ಆಧರಿತ ಚರ್ಚೆ ನಡೆದಿದೆ ಎನ್ನುವ ಭಾವನೆ ಸಾಮಾನ್ಯರಲ್ಲಿ ಮೂಡುತ್ತಿಲ್ಲ. ಹಿಂದೆ ಬೆಳಗಾವಿಯ ಅಧಿವೇಶನದಲ್ಲೇ, ಕೊನೆಯ ದಿನ ಆತುರಾತುರದಲ್ಲಿ ಅಂಗೀಕರಿಸಿದ ವಿಧೇಯಕಗಳಲ್ಲಿ ಕೆಲವು ಕಾಯಿದೆಯ ತೊಡಕುಗಳಲ್ಲಿ ಸಿಕ್ಕಿಬಿದ್ದಿದ್ದೂ ನಿಜ. ಇನ್ನೂ ಅಂತಹ ಒಂದೆರಡು ವಿಧೇಯಕಗಳಿಗೆ ಮೋಕ್ಷ ಸಿಕ್ಕಿಲ್ಲ.
ಈಗಲೂ ಹಾಗೇ ಆಗಿದೆಯೇನೋ ಎನ್ನುವ ಭಾವನೆ ಮೂಡಲು ಈಗ ಅಂಗೀಕಾರವಾದ ಒಂದೆರಡು ವಿಧೇಯಕಗಳು ಅವಕಾಶವನ್ನು ಕಲ್ಪಿಸಿಕೊಟ್ಟಿವೆ.
ಉದಾಹರಣೆಗೆ ನಗರಗಳು ಹಾಗೂ ಪೇಟೆ ಪಟ್ಟಣಗಳಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ, ಕೆಲವು ಷರತ್ತುಗಳಿಗೆ ಒಳಪಟ್ಟು ಅದನ್ನು ಸಕ್ರಮಗೊಳಿಸುವ ವಿಧೇಯಕ ಅಂಗೀಕೃತವಾಗಿದೆ.
ಇಂತಹದ್ದೇ ಒಂದು ಕಾಯಿದೆಯನ್ನು ತಮಿಳುನಾಡು ಸರ್ಕಾರ ಹಿಂದೆಯೇ ರಚಿಸಿದ್ದು, ಅದನ್ನು ಸುಪ್ರೀಮ್ ಕೋರ್ಟ್ ರದ್ದುಪಡಿಸಿದ ವರದಿಗಳೂ ಪ್ರಕಟವಾಗಿವೆ. ಕರ್ನಾಟಕದಲ್ಲೂ ಇಂತಹ ಒಂದು ವಿಧೇಯಕವನ್ನು ರಾಜ್ಯಪಾಲರು ಅಂಗೀಕಾರ ಮುದ್ರೆಯನ್ನು ಒಪ್ಪಲು ನಿರಾಕರಿಸಿ ಹಿಂದಕ್ಕೆ ಕಳಿಸಿದ್ದೂ ಉಂಟು. ಮತ್ತೆ ಅದೇ ಕಾಯಿದೆಯನ್ನು ಹೋಲುವ ವಿಧೇಯಕವನ್ನು ಅಂಗೀಕರಿಸುವುದು ಎಷ್ಟರ ಮಟ್ಟಿಗೆ ಸರಿ?
ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಗೆ ವಿಧಾನ ಮಂಡಲದಲ್ಲಿ ಅಂಗೀಕಾರವಾಗಿರುವ ತಿದ್ದುಪಡಿಯನ್ನು ಪ್ರತಿಪಕ್ಷಗಳು ವಿರೋಧಿಸಿ, ಪ್ರತಿಭಟನಾ ಸಭಾತ್ಯಾಗ ಮಾಡಿದ್ದು ಸರಿ. ಮುಷ್ಕರ ನಿರತ ನೌಕರ - ಕಾರ್ಮಿಕ ಸಂಘಟನೆಗೆ ಸೇರಿದವರನ್ನು ವಾರಂಟ್ ಇಲ್ಲದೇ ಬಂಧಿಸುವ, ವಿಚಾರಣೆ ಇಲ್ಲದೇ ಬಂಧನದಲ್ಲಿಡುವ ಅಧಿಕಾರವನ್ನು ಸಾಮಾನ್ಯ ಪೊಲೀಸ್ ಅಧಿಕಾರಿಗಳಿಗೆ ಕೊಡುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಮೂಡಿರುವುದು ಯಾಕೆ? ಈಗ ರಾಜ್ಯದಲ್ಲಿ ಔದ್ಯಮಿಕ ಬಾಂಧವ್ಯ ಸಂಬಂಧಗಳ ಸ್ಥಿತಿಗತಿ ಚೆನ್ನಾಗಿಯೇ ಇದೆ. ಯಾವುದೇ ವಲಯದಲ್ಲೂ ದೊಡ್ಡ ರೀತಿಯಲ್ಲಿ ಮುಷ್ಕರ ಅಥವಾ ಬಂದ್ ನಡೆದಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಅನಧಿಕೃತ, ಅಘೋಷಿತ ಬೀಗಮುದ್ರೆಯ ಸ್ಥಿತಿ ಇದೆ ಎನ್ನುತ್ತಾರೆ, ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳಲ್ಲಿ ಕೆಲಸ ಮಾಡುವವರು. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಯಿದೆಯಂತೆಯೇ ಎತ್ತಲಾಗಿರುವ ಹಲವಾರು ವಿವಾದಗಳ ವಿಚಾರಣೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗುವುದರಲ್ಲಿ ವರ್ಷಗಟ್ಟಲೆ ವಿಳಂಬವಾಗುವ ಪರಿಸ್ಥಿತಿ ಇದೆ. ಕಾರ್ಮಿಕ, ಔದ್ಯಮಿಕ ವಲಯದಲ್ಲಿನ ಗಂಭೀರ ಸಮಸ್ಯೆಗಳ ಗೊಡವೆಗೇ ಹೋಗದೇ, ಅಗತ್ಯ ಸೇವಾ ನಿರ್ವಹಣೆಯ ಕಾಯಿದೆಯಲ್ಲಿ ಪೊಲೀಸರಿಗೆ ವಿಪರೀತ ಅಧಿಕಾರವನ್ನು ಕೊಡುವುದು ಈಗಿನ ತುರ್ತು ಅಗತ್ಯವಾಗಿತ್ತೇನು?
ವಿಧಾನಮಂಡಲದ ಕಾರ್ಯ ಕಲಾಪದ ಒಂದು ಪ್ರಕಟಿತ ವರದಿಯಲ್ಲಿ ಬಿದಾಯಿ ಯೋಜನೆ ಕೆಲವರಿಗೆ ಸಂವಿಧಾನದ ವಿಧಿ-ನಿಯಮಗಳಿಗೆ ವಿರುದ್ಧವಾಗಿದೆ ಎನಿಸಿದರೆ, ಅವರು ಬೇಕಾದರೆ ಕೋರ್ಟಿಗೆ ಹೋಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆಂದಿದೆ. ಅದು ಮುಖ್ಯಮಂತ್ರಿ ಆಡುವ ಮಾತಲ್ಲ. ಕೋರ್ಟಿಗೆ ಹೋಗಲು ಸಾರ್ವಜನಿಕರಿಗೆ ಯಾರ ಪರವಾನಗಿಯೂ ಬೇಕಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement