ಹೀಗೊಂದು ಪ್ರಾಯಶ್ಚಿತ್ತ
ಅಶ್ವಿನಿ ಕುಮಾರ ದತ್ತಾ ಒಬ್ಬ ಶಿಕ್ಷಣ ತಜ್ಞರಾಗಿ, ಸಮಾಜಸೇವಕರಾಗಿ, ಅಪ್ರತಿಮ ರಾಷ್ಟ್ರಭಕ್ತನಾಗಿ, ಮಹಾದಾನಿಯಾಗಿ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಪ್ರಾರಂಭದಲ್ಲಿ ಶಿಕ್ಷಕ ವೃತ್ತಿಯನ್ನು ಅವಲಂಬಿಸಿ, ಮುಖ್ಯ ಶಿಕ್ಷಕರಾಗಿ ನಂತರದ ದಿನಗಳಲ್ಲಿ ನ್ಯಾಯವಾದಿಯಾಗಿ ಜನಮನ್ನಣೆಗೆ ಪಾತ್ರರಾದರು. 1856 ರಿಂದ 1923 ರ ವರೆಗಿನ ಅವರ ಜೀವನ ಸತ್ಯ ಮತ್ತು ಪರೋಪಕಾರದ ತಳಹದಿಯ ಮೇಲೆ ನಿಂತಿತ್ತು. ಅವರು ಪ್ರಸಿದ್ಧ ವಕೀಲರೆಂದು ಹೆಸರು ಪಡೆದುಕೊಂಡಿದ್ದರಿಂದ ಜನ ಹೆಚ್ಚು ಹೆಚ್ಚಾಗಿ ಅವರ ಬಳಿ ಬರುತ್ತಿದ್ದರು. ಇದರಿಂದ ಅವರ ಆದಾಯದ ಮಟ್ಟ ಏರುತ್ತಿತ್ತು. ಅವರು ಸಂಪಾದಿಸಿದ ಹೆಚ್ಚಿನ ಹಣವನ್ನು ದಾನಧರ್ಮಗಳಿಗೆ ವಿನಿಯೋಗಿಸುತ್ತಿದ್ದರು. ತಮ್ಮ ತಂದೆಯ ಹೆರಿನಲ್ಲಿ 'ಬ್ರಜಮೋಹನ್ ಶಾಲೆ' ಯನ್ನು ಸ್ಥಾಪಿಸಿದರು.
ಅವರು ಚಿಕ್ಕಂದಿನಿಂದಲೇ ಪ್ರಾಮಾಣಿಕತೆಯನ್ನು ಹೇಗೆ ಬೆಳೆಸಿಕೊಂಡಿದ್ದರು ಎಂಬುದನ್ನು ತಿಳಿಸುವ ಈ ಮುಂದಿನ ಘಟನೆ ಎಲ್ಲರಿಗೆ ಮಾರ್ಗದರ್ಶಿಯಾದುದು. ಅಶ್ವಿನಿ ಕುಮಾರಗೆ ಆಗ ಹದಿನಾಲ್ಕು ವರ್ಷ. ಆ ಸಮಯದಲ್ಲಿ ಅವರು ಮೆಟ್ರಿಕ್ ಪರೀಕ್ಷೆಗೆ ಕುಳಿತಿದ್ದರು. ಆದರೆ ಕಲ್ಕತ್ತಾ ವಿಶ್ವವಿದ್ಯಾನಿಲಯದ ನಿಯಮದ ಪ್ರಕಾರ ಮೆಟ್ರಿಕ್ ಪರೀಕ್ಷೆಗೆ ಕುಳಿತುಕೊಳ್ಳಲು ಹದಿನಾರು ವರ್ಷ ತುಂಬಿರಲೇಬೇಕಾಗಿತ್ತು. ಅದಕ್ಕಾಗಿ ಅವರೂ ಸಹ ಎಲ್ಲರಂತೆ ತಮ್ಮ ವಯಸ್ಸನ್ನು ತಾವೇ ಎರಡುವರ್ಷ ಜಾಸ್ತಿ ಮಾಡಿಕೊಂಡು ತಪ್ಪು ಮಾಹಿತಿಕೊಟ್ಟು ಪರೀಕ್ಷೆಗೆ ಕುಳಿತರು. ಅದರಲ್ಲಿ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೂ ಸಹ. ಮರುವರ್ಷ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪರೀಕ್ಷೆಯಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಆದರೆ ಅವರ ಮನಸ್ಸಿನಲ್ಲೆಲ್ಲೋ ಒಂದು ಕಡೆ ತಾವು ಮಾಡಿದ ತಪ್ಪು ಸಣ್ಣಗೆ ಕೊರೆಯುತ್ತಿತ್ತು. ಅವರ ತಂದೆ ಪ್ರಸಿದ್ಧ ನ್ಯಾಯಾಧೀಶರಾಗಿದ್ದರು. ಅಂತಹವರ ಮಗ ಯಃಕಶ್ಚಿತ್ ಒಂದು ಪರೀಕ್ಷೆಗೆ ಕುಳಿತುಕೊಳ್ಳಲು ಸುಳ್ಳು ಹೇಳಬೇಕಾಯಿತೆಂದು ಅವರ ಮನಸ್ಸಿಗೆ ತುಂಬಾ ಘಾಸಿಯಾಯಿತು. ಹೀಗೆ ಅಸತ್ಯ ಆಚರಣೆಗೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿ, ಕಾಲೇಜಿನ ಪ್ರಾಚಾರ್ಯರನ್ನೂ, ಕಲ್ಕತ್ತಾ ವಿಶ್ವ ವಿದ್ಯಾನಿಲಯದ ಕುಲಪತಿಗಳನ್ನೂ ಕಂಡು ಆ ಬಗ್ಗೆ ತಮಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡರು. ಆದರೆ ಅವರಿಬ್ಬರೂ ಆ ವಿಷಯದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಕೊನೆಗೆ ಅಶ್ವಿನಿಕುಮಾರ್ ತಾವೇ ಇದಕ್ಕೊಂದು ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿ, ಮುಂದಿನ ಎರಡು ವರ್ಷಗಳ ಕಾಲ ತಮ್ಮ ಕಾಲೇಜು ಅಧ್ಯಯನವನ್ನು ನಿಲ್ಲಿಸಿ, ನಂತರ ಮತ್ತೆ ಕಾಲೇಜಿಗೆ ಸೇರಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು!
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.