ಕುಚೋದ್ಯಕ್ಕೆ ಮಿತಿ ಬೇಡವೆ?
ಸ್ವಾತಂತ್ರ್ಯ ಬಂದ ನಂತರವೂ ಅನೇಕ ಗ್ರಾಮೀಣ ಪ್ರದೇಶಗಳಿಗೆ ದಿನಪತ್ರಿಕೆಗಳು ತಲುಪುತ್ತಿರಲಿಲ್ಲ. ಅದಕ್ಕೆ ಅನೇಕ ಸಂಚಾರ ಅವ್ಯವಸ್ಥೆ ಮತ್ತು ಓದುಗರ ನಿರಾಸಕ್ತಿ ಕಾರಣವಿರಬಹುದು. ಆದರೆ ಈಗ ಪತ್ರಿಕೆಗಳು ತಲುಪದ ಹಳ್ಳಿಗಳಿಲ್ಲ. ಕನ್ನಡಪ್ರಭ ಪತ್ರಿಕೆ ಪ್ರತಿಭಾನ್ವಿತ ಪತ್ರಿಕೆಗಳಲ್ಲೊಂದು ಇದರಲ್ಲಿ ಎರಡು ಮಾತಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಂಡ ಅಲ್ಲಿಯ ಪರಿಸರ ವಿದ್ಯಮಾನಗಳು ಜೊತೆಗೆ ಮಹಾತ್ಮ ಗಾಂಧೀಜಿಯವರ ಡರ್ಬನ್ ವಾಸ್ತವ್ಯ ಹಾಗೂ ಬದುಕಿನ ಚಿತ್ರಣ, ಇತ್ಯಾದಿ ಸುಂದರ ಸೊಬಗನ್ನೂ ಓದುಗರಿಗೆ ಉಣಬಡಿಸಿದ್ದಾರೆ. ಎಣ್ಣೆಯಲ್ಲಿ ತೊಯ್ದು ಬತ್ತಿಯಂತಿರುವ ವಿಶ್ವೇಶ್ವರಭಟ್ಟರ ಬರಹಗಳು ಕನ್ನಡಪ್ರಭ ಓದುಗರಿಗೆ ಸಂತಸ ತಂದಿವೆ.
-ಸಿ. ನಾಗರಾಜ ಮತ್ತು ಸ್ನೇಹಿತರು, ಅರದೋಟ್ಲು, ಭದ್ರಾವತಿಮೊ. 994565 2873
ನಾಲ್ಕೂ ಬಿಜೆಪಿಗೆ (ಕ.ಪ್ರ. ದಿ. 5.12.13) - ಮುಖಪುಟದಲ್ಲಿ ನಿಮ್ಮ ಈ ಶೀರ್ಷಿಕೆ ಹಿತಕರವಾಗಿಲ್ಲ. ಕಾರಣ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. ಆದರೆ ಫಲಿತಾಂಶ ಹೊರಬಿದ್ದಿಲ್ಲ. ಆದರೆ ಯಾರಾದರೂ ಓದಿದಾಗ ಬಿಜೆಪಿ ಅಧಿಕಾರಕ್ಕೆ ಬಂದಂತೆ ಭಾಸವಾಗುತ್ತದೆ. ನಿಮ್ಮ ಈ ಶೀರ್ಷಿಕೆ ಫಲಿತಾಂಶದ ನಂತರ ಹಾಕಬಹುದಾಗಿತ್ತು. ಸಮೀಕ್ಷೆಯಂತೆ (ಅದೂ ಕೂಡ ಆಂಗ್ಲವಾಹಿನಿಗಳ ಪ್ರಕಾರ) ಬಿಜೆಪಿ ಅಧಿಕಾರ ಪಡೆಯಬಹುದು. ಆದರೆ ಅಧಿಕಾರ ಇನ್ನೂ ಕೈಗೆ ಸಿಕ್ಕಿಲ್ಲ. ಆದುದರಿಂದ ನಿಮ್ಮ ಈ ಶೀರ್ಷಿಕೆ ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. ಆದುದರಿಂದ ಇನ್ನು ಮುಂದೆ ವಿಷಯ ಖಚಿತವಾದ ನಂತರ ಈ ರೀತಿಯ ಶೀರ್ಷಿಕೆ ಬಳಸುವುದು ಉತ್ತಮ.
-ಬ್ಯಾಂಕ್ ಶಿವಕುಮಾರ್, ಮೈಸೂರು.ಮೊ. 9886 301186
'ಬೈಟು ಕಾಫಿ'ಯ 'ಸಲ್ಲಾಪ' ಅಂಕಣಕಾರ ಡಿಯರ್ ಹರಿಹರ... ಚುಂಬನ, ಕುಂಭಕುಚ, ನಿತಂಬ, ಹೊಕ್ಕಳು ಬಿಟ್ಟರೆ ನಿನ್ನ ರಗಳೆಗೆ ಬೇರಾವ ವಿಷಯವೂ ಸಿಗುತ್ತಿಲ್ಲವೆ? ಕೃಷ್ಣ ರಾಧೆಯನ್ನು ಗೋಕುಲದಿಂದ ಬಿಟ್ಟು ಹೊರಟಾಗ, ಆತನ ವಯಸ್ಸು ಎಂಟೋ, ಒಂಭತ್ತೋ ಇದ್ದಿರಬಹುದು. ಆತನಿಗಿಂತ ರಾಧೆ ಒಂದೆರಡು ವರ್ಷ ದೊಡ್ಡವಳಿರಬಹುದು. ರಾಧೆಯ ಕುಚವನ್ನು, ಆನೆಯ ಕುಂಬ ಸ್ಥಳವನ್ನು ಹೋಲಿಸಿ ನೋಡಿದ ಕೃಷ್ಣನಿಗೆ (ಸಲ್ಲಾಪ, ಕ.ಪ್ರ. 26.11.13) ಬೆವರು ಬಂತು ಎಂಬುದಾಗಿ ಜಯದೇವ ತಿಳಿಸಿದ್ದಾನೆ ಎಂದು ಹೇಳುವ ನಿನಗಾದರೂ ರಾಧಾಕೃಷ್ಣರ ವಯಸ್ಸು ನೆನಪಿಗೆ ಬರುತ್ತಿಲ್ಲವೆ? ಹದಿಹರೆಯದ ಬಾಲಿಕೆಯ ಕುಚಕ್ಕು, ಬುಲ್ಡೋಜರ್ ಕುಚಕ್ಕು ಇರುವ ವ್ಯತ್ಯಾಸ, ಕುಚಪಂಡಿತನಾದ ನಿನಗೂ ಗೊತ್ತಾಗಲಿಲ್ಲವೆ?
-ಇಂಚರ, ಮೈಸೂರು.
ಕ.ಪ್ರ.ದ 'ಜಗ-ಜೀವನ'ದಲ್ಲಿ (ದಿ. 3.12.13ರ ಲೇಖನ) ಕೆ.ಎಸ್. ಜಗನ್ನಾಥರ "ಸುತ್ತುವರಿಯುತ್ತಿದೆ ಚೀನಾ.. " ಲೇಖನ ಸಮಯೋಚಿತ ಮತ್ತು ಗಂಭೀರ ಎಚ್ಚರಿಕೆಯಾಗಿದೆ. ಕನ್ನಡಪ್ರಭ ಪತ್ರಿಕೆ ಇಂತಹ ಲೇಖನಗಳಿಂದ ಪ್ರಾದೇಶಿಕ ಭಾಷೆಯಲ್ಲಿ ರಾಷ್ಟ್ರೀಯ ಜವಾಬ್ದಾರಿಯನ್ನು ಅತ್ಯಂತ ಕಳಕಳಿಯಿಂದ ನಿರ್ವಹಿಸುತ್ತಿರುವುದು ತುಂಬಾ ಶ್ಲಾಘನೀಯ.
-ಶ್ರವಣಕುಮಾರ ರಾಯ್ಕರ್, ಗಂಗಾವತಿ, ಮೊ. 9448 718444
ಬೈಟು ಕಾಫಿಯಲ್ಲಿ ಪ್ರಕಟವಾಗುವ 'ಹರಿಹರ'ರ 'ಸಲ್ಲಾಪ' ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಅಂಕಣವನ್ನು ನಿಲ್ಲಿಸಬೇಡಿ.
-ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ.
ಈ ನನ್ನ ಆಲೋಚನೆ ಸ್ವಲ್ಪ ಅತಿರೇಕದ್ದೇ ಅನ್ನಿಸಬಹುದು. ಆದರೂ ಹೇಳಲೇಬೇಕಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈಗ ಅಧಿವೇಶನವನ್ನು ನಡೆಸುತ್ತಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು, ಕನ್ನಡಪ್ರಭದಲ್ಲಿ ಬರೆಯುತ್ತಿರುವಂತೆ "ಸುವರ್ಣ ವಿಧಾನಸಭೆ" ಮತ್ತು "ಸುವರ್ಣ ವಿಧಾನಪರಿಷತ್ತು"ಗಳು ಹೌದಾಗಿದ್ದರೆ, ಈ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿಗಳು, ಎಲ್ಲಾ ಸಚಿವರು, ವಿಧಾನಸಭಾ ಅಧ್ಯಕ್ಷರು, ವಿಧಾನಪರಿಷತ್ತಿನ ಸಭಾಪತಿಗಳು, ಶಾಸಕರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು-ಇವರೆಲ್ಲರ ಬಗ್ಗೆ ಬರೆಯುವಾಗಲೂ ಇವರ ಹುದ್ದೆಗಳ ಹೆಸರಿನ ಹಿಂದೆ 'ಸುವರ್ಣ' ಎಂಬ ವಿಶೇಷಣವನ್ನು ಸೇರಿಸಿ ಬರೆಯಬೇಕಲ್ಲವಾ? ಹೇಗೆಂದರೆ, ಸುವರ್ಣ ಮುಖ್ಯಮಂತ್ರಿಗಳು, ಸುವರ್ಣ ಗೃಹ ಸಚಿವರು, ಸುವರ್ಣ ವಿಧಾನಸಭಾಧ್ಯಕ್ಷರು, ಸುವರ್ಣ ವಿಧಾನ ಪರಿಷತ್ ಸಭಾಪತಿಗಳು, ಸುವರ್ಣ ಶಾಸಕರು, ಸುವರ್ಣ ಮುಖ್ಯ ಕಾರ್ಯದರ್ಶಿಗಳು ಇತ್ಯಾದಿ? ಇವರೆಲ್ಲ "ಸುವರ್ಣ" ಆಗುವುದು ಅಸಾಧ್ಯವೆಂದಾದರೆ, ವಿಧಾನಸಭೆ ಮತ್ತು ವಿಧಾನಪರಿಷತ್ತುಗಳು" "ಸುವರ್ಣ" ಆಗಲು ಹೇಗೆ ಸಾಧ್ಯ?
-ಬೊ.ನಾ. ಕೃಷ್ಣಮೂರ್ತಿ, ವಿಜಯನಗರ, ಸಾಗರ,ದೂ. 08183- 227488
ಪ್ರತಿಪಕ್ಷಗಳಿಗೆ ಮಂತ್ರಿಗಳ ತಿವಿತ, ಕಬ್ಬಿಗರ ನೋವಿನ ಚರ್ಚೆ ಅವಿರತ ಅಕ್ರಮ ಗಣಿಗಾಗಿ ಜಗಳ ಅಬಾಧಿತ (ಕ.ಪ್ರ. 27.11.2013). ಪ್ರತಿಪಕ್ಷಗಳಿಗೂ, ಮಂತ್ರಿಗಳಿಗೂ, ಅಕ್ರಮ ಗಣಿಗಾರಿಕೆಗೂ ಸಂಬಂಧವಿರಬಹುದು. ಆದರೆ ಇವರೊಂದಿಗೆ ಕಬ್ಬಿಗರ ನೋವಿನ ಚರ್ಚೆ ಬಗ್ಗೆ ಅನುಮಾನ ಮೂಡಿತು. ಕಬ್ಬಿಗ ಎಂದರೆ ಕವಿ! ನೀವು ಕಬ್ಬು ಬೆಳೆಗಾರರನ್ನು ಕಬ್ಬಿಗರು ಎಂದು ಬಣ್ಣಿಸಿದ್ದು ಏಕೋ ಸರಿ ಕಾಣಲಿಲ್ಲ! ರಾಗಿ ಬೆಳೆಯುವವಳನ್ನು ರಾಗಿಣಿ ಎಂದಂತಾಯ್ತು.
-ಪಿ.ಜೆ. ರಾಘವೇಂದ್ರ, ಮೈಸೂರು, ಮೊ. 988 6030677
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.