ಆಮ್ ಆದ್ಮಿ ಪೊರಕೆ ಪವಾಡ
ರಾಷ್ಟ್ರೀಯ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ, ಅರವಿಂದ ಕೇಜ್ರಿವಾಲ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಪೊರಕೆ ದೇಶದ ಸರ್ಕಾರವನ್ನು ನಡೆಸುವ ಕಾಂಗ್ರೆಸ್ಸನ್ನು ಮೂರನೆಯ ಸ್ಥಾನಕ್ಕೆ ತಳ್ಳಿದ್ದು ಒಂದು ಪವಾಡ ಸದೃಶ ಚುನಾವಣೆ ಸಾಧನೆ.
ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಗಳಿಸಿ, ಹದಿನೈದು ವರ್ಷಗಳ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನೂ ಕೇಜ್ರಿವಾಲ ಅವರು ಮೂರನೆಯ ಸ್ಥಾನಕ್ಕೆ ತಳ್ಳಿ ಮತ್ತೊಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಭಾನುವಾರ ಪ್ರಕಟವಾದ ಚುನಾವಣೆ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿಯ ಶಿವರಾಜಸಿಂಗ್ ಚೌಹಾಣ್ ಮಧ್ಯಪ್ರದೇಶದಲ್ಲಿ ಹ್ಯಾಟ್ರಿಕ್ ಗಳಿಸಿದ್ದರೆ, ವಸುಂಧರಾ ರಾಜೆ ಅವರು ರಾಜಸ್ಥಾನದಲ್ಲಿ ಕಳೆದ ಬಾರಿಯ ಸೋಲಿಗೆ ಪಕ್ಷದ ಪರವಾಗಿ ಸೇಡು ತೀರಿಸಿಕೊಂಡಿದ್ದಾರೆ.
ಮಧ್ಯ ಪ್ರದೇಶ - ರಾಜಸ್ಥಾನಗಳಲ್ಲಿ ಸ್ಪಷ್ಟವಾಗಿ ದೊಡ್ಡ ಬಹುಮತದಿಂದ ಚುನಾವಣೆಯಲ್ಲಿ ಗೆದ್ದು ನೂತನ ಸರ್ಕಾರ ರಚಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಚತ್ತೀಸಗಢದಲ್ಲಿ ಕೂದಲೆಳೆಯ ಅಂತರದಲ್ಲಿ ಕಾಂಗ್ರೆಸ್ - ಬಿಜೆಪಿಗಳ ನಡುವೆ ಸೆಣಸಾಟ ನಡೆದಿದ್ದು ಅತಂತ್ರ ವಿಧಾನಸಭೆ ರಚನೆಯಾಗುವ ಸಂಭವ ಕಂಡುಬಂದಿದೆ. ದೆಹಲಿಯಲ್ಲಿ ಯಾವ ಪಕ್ಷವೂ ಸರ್ಕಾರ ರಚಿಸುವ ಹಂತವನ್ನು ಮುಟ್ಟಿಲ್ಲ.
ಈ ಚುನಾವಣೆ ಸರಣಿಯ ಪ್ರಶಸ್ತಿ ನಿಸ್ಸಂದೇಹವಾಗಿ, ಆಮ್ ಆದ್ಮಿ ಪಾರ್ಟಿಗೇ ಸೇರಬೇಕು. ಪಕ್ಷ ಸ್ಥಾಪನೆಯಾಗಿ ಮೂರು ವರ್ಷಗಳು ಕಳೆಯದೇ ಇದ್ದರೂ ಚುನಾವಣೆ ಕಣದ ಪ್ರವೇಶದ ಮೊದಲ ವರ್ಷದ ಈ ಸಾಧನೆ ಅಭಿನಂದನಾರ್ಹ.
ಅರವಿಂದ ಕೇಜ್ರಿವಾಲ ಹಾಗೂ ಅವರ ಸಂಗಾತಿಗಳು ತಾವು ಯಾರಿಗೂ ಬೆಂಬಲ ಕೊಡುವುದಿಲ್ಲ, ಯಾರಿಂದಲೂ ಬೆಂಬಲವನ್ನು ಪಡೆದು ಸರ್ಕಾರವನ್ನು ರಚಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಾರಿ, ದೆಹಲಿಯ ಸರ್ಕಾರದ ಭವಿಷ್ಯವನ್ನು ಅನಿಶ್ಚಿತತೆಯ ಕಡೆಗೆ ದೂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ನಾಯಕರು ಈ ವಿಜಯವನ್ನು ಜನತೆಯ ವಿಜಯ ಎಂದೇ ಬಣ್ಣಿಸಿ, ಅದರ ಕೀರ್ತಿಯನ್ನು ಜನತೆಗೇ ಅರ್ಪಿಸಿದ್ದಾರೆ.
ಹೇಗಾದರೂ ಮಾಡಿ ಸರ್ಕಾರದ ರಚನೆಯ ವಿಶ್ವಾಸವನ್ನು ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿ ಸ್ಥಾನದ ಹರ್ಷವರ್ಧನ ಅವರು ವ್ಯಕ್ತಪಡಿಸಿರುವುದೂ ಸಹಜ ಪ್ರತಿಕ್ರಿಯೆಯೇ. ಈಗ ವಿಧಾನ ಸಭೆಯಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷ.
ನಾಲ್ಕೂ ರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಭಾರತೀಯ ಜನತಾ ಪಾರ್ಟಿ ದೇಶದ ಭವಿಷ್ಯದ ಸೂಚನೆಯಂತಿದೆ ಎಂದು ಬಣ್ಣಿಸಿರುವುದರಲ್ಲೂ ಆಶ್ಚರ್ಯವೇನೂ ಇಲ್ಲ. ಇಡೀ ದೇಶದಲ್ಲಿ ಹಲವಾರು ಕಡೆಗಳಲ್ಲಿ ಬಿಜೆಪಿ ನಾಯಕರು ಪಕ್ಷದ ಗೆಲವನ್ನು ಎಲ್ಲ ಕಡೆ ಹಬ್ಬಿರುವ ಪಕ್ಷದ ಪ್ರಧಾನಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾದ ಅಲೆಯ ಪರಿಣಾಮವೆಂದೇ ಭಾವಿಸಿರುವುದನ್ನೇನೂ ಮುಚ್ಚಿಟ್ಟಿಲ್ಲ.
ಸಾಮಾನ್ಯವಾಗಿ ಚುನಾವಣೆ ಫಲಿತಾಂಶದ ಪ್ರಕಟಣೆಯ ತತ್ಕ್ಷಣವೇ ತೆರೆಮರೆಗೆ ಸರಿಯುವುದು ಸೋತ ಪಕ್ಷದ ವರ್ತನೆ. ಆದರೆ ಈ ಬಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ ಗಾಂಧಿ ಪ್ರತ್ಯೇಕವಾಗಿ ಪತ್ರಕರ್ತರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನೇ ಪ್ರಕಟಿಸಿದರು.
ಜನರ ತೀರ್ಮಾನವನ್ನು ನಮ್ರತೆಯಿಂದ ಒಪ್ಪಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ರಾಹುಲ ಗಾಂಧಿ ಒಂದು ಹೆಜ್ಜೆ ಮುಂದೆ ಹೋಗಿ, ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಹಾಗೂ ಪರಿವರ್ತನೆಯ ಅಗತ್ಯದ ಮನವರಿಕೆಯಾಗಿರುವುದನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಪರಿವರ್ತನೆಯ ಕೆಲಸಕ್ಕೇ ಆದ್ಯತೆ ನೀಡುವುದಾಗಿ ಹೇಳಿ ಹೊಸ ದಾರಿಯನ್ನೇ ಕಂಡು ಕೊಂಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ನಾಯಕರಲ್ಲಿ ಬಹುಮಂದಿ, ಈ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಖಂಡಿತವಾಗಿಯೂ ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಬೀರಲಿದೆ ಎನ್ನುವ ಮಾತಿನ ಮೂಲಕ, ನರೇಂದ್ರ ಮೋದಿಯವರ ರ್ಯಾಲಿಗಳ ಪ್ರಭಾವ ನಿಚ್ಚಳವಾಗಿ ಕಂಡುಬಂದಿರುವುದನ್ನು ಪದೇ ಪದೆ ಪ್ರಸ್ತಾಪಿಸಿದ್ದು ಗಮನಾರ್ಹ.
ಈ ನಾಲ್ಕೂ ರಾಜ್ಯಗಳಲ್ಲಿ ಚುನಾವಣೆ ಪ್ರಚಾರ ಸಮರದಲ್ಲಿ ಸ್ಪಷ್ಟವಾಗಿ ಪ್ರಸ್ತಾಪವಾಗಿದ್ದ ವಿಷಯಗಳಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರ. ಭ್ರಷ್ಟಾಚಾರ ಇರುವುದನ್ನು ಯಾವ ಪಕ್ಷವೂ ಅಲ್ಲಗೆಳೆದಿಲ್ಲ. ಯಾವ ಪಕ್ಷವೂ ಅದನ್ನು ಮೂಲೋತ್ಪಾಟನೆ ಮಾಡಬೇಕೆನ್ನುವ ಮಾತನ್ನೂ ತಿರಸ್ಕರಿಸಿಲ್ಲ. ಯರಿಗೂ ಬೇಡವಾದ ಭ್ರಷ್ಟಾಚಾರ ದೇಶದ ಎಲ್ಲ ಕಡೆ ಹಬ್ಬಿರುವುದಾದರೂ ಹೇಗೆ? ಎಲ್ಲ ಪಕ್ಷಗಳೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲುಗೊಳ್ಳಲು ಸಿದ್ಧವಾಗಿರುವುದನ್ನು ಬಹಿರಂಗವಾಗಿ ಪ್ರಕಟಿಸಿರುವುದನ್ನು ಕಾರ್ಯಾಚರಣೆಯ ಸ್ವರೂಪಕ್ಕೆ ಇಳಿಸಬೇಕಾದ್ದು ಸರ್ಕಾರ ಹಾಗೂ ಜನರ ಕರ್ತವ್ಯ.
ಚುನಾವಣೆ ಪ್ರಚಾರ ಸಮರದಲ್ಲಿ ಪ್ರಮುಖವಾಗಿ ಪ್ರಸ್ತಾಪವಾದ ಮತ್ತೊಂದು ವಿಚಾರ ಅರ್ಥಪೂರ್ಣ. ಪರಿಣಾಮಕಾರಿ ಸಾಮಾಜಿಕ ನ್ಯಾಯ ವಿತರಣೆ ನೀತಿಯ ಜಾರಿಯದ್ದು. ಈಗಿನ ಕಾಯಿದೆಯ ಚೌಕಟ್ಟಿನಲ್ಲೇ ಸಾಮಾಜಿಕ ನ್ಯಾಯ ವಿತರಣೆ ಸಾಧ್ಯವೆಂದು ಕೆಲವು ರಾಜ್ಯಗಳು ತೋರಿಸಿವೆ. ಅದು ಎಲ್ಲ ಕಡೆ ಜಾರಿಗೆ ಬರುವಂತೆ ಆಗಬೇಕು. ಹಾಗೆ ಆಗುವಂತೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು.