ತಂಬೂರಿಗೆ ಮುಸುಕು ಹಾಕಿ ಮೇಲೇಳು
ಮಹಾವೈದ್ಯನಾಥಯ್ಯರ್ ಕರ್ನಾಟಕ ಸಂಗೀತದ ವಿದ್ವಾಂಸರಾಗಿ ಹೆಸರು ಗಳಿಸಿದವರು. ಅವರು 72 ರಾಗಗಳಿಂದ ಕೂಡಿದ 'ರಾಗಮಾಲಿಕೆ'ಯ ಜನಕರಾಗಿ ರಸಿಕರ ಮನಸ್ಸನ್ನು ಸೆಳೆದಿದ್ದರು. ತ್ಯಾಗರಾಜರ ಶಿಷ್ಯರಾದ ಎಂ.ವೆಂಕಟಸುಬ್ಬಯ್ಯರವರಲ್ಲಿಯೂ ಅವರ ವಿದ್ಯಾಭ್ಯಾಸ ಆಗಿತ್ತು. ಅವರು ಮಿತಭಾಷಿಗಳಾಗಿದ್ದುದರಿಂದ ಅವರ ಅಣ್ಣ ರಾಮಸ್ವಾಮಿ ಶಿವನ್ ಅವರೇ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಅವರು ತಮ್ಮ ಅಣ್ಣನ ಮಾತಿಗೆ ಪ್ರತಿಯಾಗಿ ಏನೂ ಹೇಳುತ್ತಿರಲಿಲ್ಲ. ಅಷ್ಟು ಗೌರವ ಅವರಿಗೆ. ಒಮ್ಮೆ ಧನಿಕರೊಬ್ಬರ ಮನೆಯಲ್ಲಿ ವೈದ್ಯನಾಥಯ್ಯರ್ ಅವರ ಕಛೇರಿ ಏರ್ಪಾಡಾಗಿತ್ತು. ಆ ಶ್ರೀಮಂತರೋ ಸಂಗೀತಪ್ರೇಮಿಗಳೂ, ಉದಾರ ಮನಸ್ಸಿನವರೂ ಆಗಿದ್ದರು. ವಿದ್ವಾಂಸರಿಗೆ ಸಲ್ಲಬೇಕಾದ ಸಕಲ ಗೌರವವನ್ನೂ ಅರ್ಪಿಸಿದ್ದಲ್ಲದೆ, ಬೆಲೆಬಾಳುವ ಅಮೂಲ್ಯ ವಸ್ತ್ರಾಭರಣಗಳನ್ನು ನೀಡಿ ಸತ್ಕರಿಸಿದ್ದರು. ಇದನ್ನೆಲ್ಲಾ ನೋಡಿದ ಸಭಿಕರಿಗೂ ಸಂಗೀತಗಾರರ ಬಗ್ಗೆ ಅಪಾರ ಗೌರವಾದರಗಳು ಮೂಡಿದವು. ಅಯ್ಯರ್ ಭೈರವಿ ರಾಗದ ಕೃತಿಯೊಂದನ್ನು ರೂಪಕತಾಳದಲ್ಲಿ ಪ್ರಾರಂಭದಲ್ಲಿ ಹಾಡಿದರು. ಅದು ನೆರೆದಿದದ್ದವರಿಗೆಲ್ಲಾ ಸಂತಸವನ್ನುಂಟುಮಾಡಿತು. ಹೀಗೆ ಪ್ರಾರಂಭವಾದ ಕಛೇರಿ ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ ನಡೆದರೂ ಸಮಯ ಹೋಗಿದ್ದೇ ತಿಳಿಯಲಿಲ್ಲ. ಎಲ್ಲರೂ ಸಮ್ಮೋಹನಕ್ಕೆ ಸಿಲುಕಿದವರಂತೆ ಸಂಗೀತದ ಮೋಡಿಗೆ ಒಳಗಾಗಿದ್ದರು. ಅದೇ ಸಮಯಕ್ಕೆ ಕಛೇರಿಯನ್ನು ಏರ್ಪಡಿಸಿದ ಶ್ರೀಮಂತನಿಗೆ ಯಾವುದೋ ಒಂದು ನಿರ್ದಿಷ್ಟ ಕೀರ್ತನೆಯನ್ನು ಕೇಳಬೇಕೆಂಬ ಹಂಬಲ ಉಂಟಾಯಿತು. ಆಗ ಅವನು ಒಂದು ಕಾಗದದಲ್ಲಿ ಆ ಕೀರ್ತನೆಯ ಸಾಲನ್ನು ಬರೆದು ಅದನ್ನು ಹಾಡಿಸುವಂತೆ ವಿನಂತಿಸಿ ಅದನ್ನು ವೈದ್ಯನಾಥಯ್ಯರ್ ಅವರ ಅಣ್ಣನವರ ಕಡೆ ನೀಡಿದರು. ಹೀಗೆ ಮಡಿಚಿಕೊಟ್ಟ ಚೀಟಿಯನ್ನು ತೆಗೆದು ಓದಿದ ರಾಮಸ್ವಾಮಿ ಶಿವನ್ ಅವರ ಮುಖಚರ್ಯೆಯೇ ಬದಲಾಯಿಸಿತು. ಅವರ ಮುಖದಲ್ಲಿ ಸಿಟ್ಟು ರಾರಾಜಿಸುತ್ತಿತ್ತು. ಕೂಡಲೇ, "ತಂಬೂರಿಗೆ ಮುಸುಕು ಹಾಕಿ ಮೇಲೇಳು" ಎಂದು ತಮ್ಮನಿಗೆ ಆಜ್ಞಾಪಿಸಿದರು. ಅದಕ್ಕೆ ಎದುರಾಡದೆ ವೈದ್ಯನಾಥಯ್ಯರ್ ಎದ್ದೇ ಬಿಟ್ಟರು. ಎಲ್ಲರಿಗೂ ಆಶ್ಚರ್ಯ. ತನ್ನಿಂದ ಅಪಚಾರವಾಯಿತೇ ಎಂದು ಆ ಶ್ರೀಮಂತ ಮೊರೆಯಿಟ್ಟ. ಅದಕ್ಕೆ ರಾಸ್ವಾಮಿಯವರು "ಇನ್ನು ಮುಂದೆ ಸಂಗೀತಗಾರ ತನಗೆ ತೋರಿದುದನ್ನು ಹಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಭಿಕರ ಇಷ್ಟಾನಿಷ್ಟಗಳಿಗೆ ತಕ್ಕಂತೆ ಹಾಡುವ ದೌರ್ಭಾಗ್ಯ ಒದಗಿ ಬಂದುದರಿಂದ, ಇನ್ನು ಮುಂದೆ ಆತ್ಮಾನಂದಕ್ಕೆ ಮಾತ್ರ ಹಾಡಬೇಕು" ಎಂದು ತಮ್ಮನಿಗೆ ಆಜ್ಞಾಪಿಸಿ ಎದ್ದರು. ಧನಿಕನು ಕ್ಷಮೆಯಾಚಿಸಿದರೂ ಕೇಳಿಸಿಕೊಳ್ಳದೆ ಇಬ್ಬರೂ ಸಹೋದರರು ಹೊರಟೇ ಹೋದರು. ಅಂದಿನಿಂದ ಮಹಾವೈದ್ಯನಾಥಯ್ಯರ್ ಅವರ ಬಹಿರಂಗ ಕಛೇರಿ ನಡೆಯಲೇ ಇಲ್ಲ. ಈ ಘಟನೆಗೆ ಸಾಕ್ಷಿಯಾಗಿದ್ದ ವಾಸುದೇವಾಚಾರ್ಯರು ಇದನ್ನು ತಮ್ಮ ಕೃತಿಯೊಂದರಲ್ಲಿ ಪ್ರಸ್ತಾಪಿಸಿದ್ದಾರೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.