ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- "ಬೆಂಗಳೂರು ಫುಟ್ಬಾಲ್ ತಂಡ'ವು ನಿಮ್ಮ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು. ತಯಾರಾಗಿರಿ. ನ.23ರ ಕ್ರೀಡಾ ವರದಿಯಲ್ಲಿ ನಿಮ್ಮ ಪತ್ರಿಕೆಯು ಬಿಎಫ್ಸಿಯ ಸ್ಟಾರ್ ಆಟಗಾರ, ನಾಯಕ, ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಅವರಿಗೆ ಅವಮಾನ ಮಾಡಿದೆ.'
"ತಂಡದ ಸ್ಟಾರ್ ಆಟಗಾರ ಸುನೀಲ್ ಛೆಟ್ರಿ ಅನುಪಸ್ಥಿತಿಯೇ ತವರಿನ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ' ಎಂದು ನಿಮ್ಮ ಕ್ರೀಡಾ ವರದಿಗಾರರು ವಿಶ್ಲೇಷಿಸಿದ್ದಾರೆ. 'ಅನುಪಸ್ಥಿತಿಯೇ' ಎಂಬುದರ ಬದಲು 'ಉಪಸ್ಥಿತಿಯೇ' ಎಂದು ಬರೆದು, ಕಷ್ಟನಷ್ಟಗಳಿಂದ ನಿಮ್ಮ ಪತ್ರಿಕೆ ಪಾರಾಗಬಹುದಿತ್ತು. ಈಗ ಏನು ಮಾಡೋಕಾಗುತ್ತೆ?' ಎಂದು ಪ್ರಶ್ನಿಸಿದ್ದಾರೆ.
ಪತ್ರಿಕೆಯಲ್ಲಿ ಒಮ್ಮೆ ಮುದ್ರಣವಾದ ನಂತರ ಏನೂ ಮಾಡಲು ಸಾಧ್ಯವಿಲ್ಲ. ಆ ತಪ್ಪನ್ನು ಪ್ರಕಟಿಸುವ ಮೂಲಕ ಜನರಿಗೆ ಮಾಹಿತಿ ನೀಡುವುದಲ್ಲದೇ, ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳಲು ಮಾತ್ರ ಸಾಧ್ಯ. ಕೇವಲ ಒಂದು ಅಕ್ಷರದ ವ್ಯತ್ಯಾಸದಿಂದ ವಾಕ್ಯದ ಸಂಪೂರ್ಣ ಅರ್ಥ ಹೇಗೆ ಅಪಾರ್ಥಕ್ಕೀಡಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಇಂತಹದ್ದೇ ತಪ್ಪಿನ ಕುರಿತು ಮಂಗಳೂರಿನಿಂದ ಪ್ರಕಾಶ ಕಿಣಿ ಯು. ಅವರು ಪತ್ರ ಬರೆದಿದ್ದಾರೆ.
ಅವರು ಬರೆಯುತ್ತಾರೆ- 'ನ.12ರಂದು ನಿಮ್ಮ ಪತ್ರಿಕೆಯ (ಮಂಗಳೂರು ಆವೃತ್ತಿ ಪುಟ 3) ವರದಿಯಲ್ಲಿ 'ನಿರಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆಯೇ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ' ಎಂದು ಧಾರವಾಡದ ಸಾಹಿತಿ ಡಾ. ವೀಣಾ ಶಾಂತೇಶ್ವರ ಅವರು ಪ್ರತಿಪಾದಿಸಿದ್ದನ್ನು ಓದಿ ಸಂತೋಷವಾಯ್ತು.'
'ಯಾಕೆಂದರೆ ಈಗ ಆಗುತ್ತಿರುವುದೂ ಅದೇ. ನೈಜ ಅಪರಾಧಿಗಳು ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ನಿರಪರಾಧಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಆದರೆ ಅದನ್ನೇ ಕಾನೂನು ಮಾಡಿ, 'ನಿರಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆಯೇ' ಕ್ರಮ ಕೈಗೊಳ್ಳುವುದು, ಈ ಸಮಯದ ತುರ್ತು. ಡಾ. ವೀಣಾ ಶಾಂತೇಶ್ವರ ಅವರಂತಹ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಅಗತ್ಯಬಿದ್ದರೆ ಜ್ಞಾನಪೀಠಿಗಳು ಒಟ್ಟಾಗಿ ಹೋರಾಟ ಮಾಡಿದಲ್ಲಿ ಇಂತಹ ಕಾನೂನು ಜಾರಿಯಾಗುವಂತೆಯೇ ಮಾಡುವುದು ಅಷ್ಟೇನೂ ಕಷ್ಟವೇನಲ್ಲ' ಎಂದಿದ್ದಾರೆ.
ನಾನು ಭಾವಿಸಿದಂತೆ ಬಹುಶಃ ವೀಣಾ ಶಾಂತೇಶ್ವರ ಅವರು ಹಾಗೆ ಹೇಳಿರಲಿಕ್ಕಿಲ್ಲ. 'ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು, ಅಪರಾಧಿಗಳ ಬಂಧನ ನಡೆಯುತ್ತಿವೆ. ಆದರೆ ಕ್ರೌರ್ಯ ಮಾತ್ರ ಕೊನೆಗೊಳ್ಳುತ್ತಿಲ್ಲ' ಎಂದು ಹೇಳಿದ ನಂತರ ಅವರು ಖಂಡಿತವಾಗಿಯೂ 'ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ' ಎಂದೇ ಹೇಳಿರುತ್ತಾರೆ. ನಮ್ಮ ವರದಿಗಾರರು ಬರೆಯುವಾಗ 'ಅಪರಾಧಿಗಳಿಗೆ' ಎಂಬುದು 'ನಿರಪರಾಧಿಗಳಿಗೆ' ಎಂದಾಗಿಬಿಟ್ಟಿದೆ.
- ವಿಶ್ವೇಶ್ವರ ಭಟ್