ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿ ಪುರಂನಿಂದ ಎಸ್.ರಾಘವೇಂದ್ರ ಅವರು ಮಿಂಚಂಚೆ ಕಳುಹಿಸಿದ್ದಾರೆ. 'ಡಿ.2ರ ಸಂಚಿಕೆಯ 'ಮೈಸೂರು' ಪುಟದಲ್ಲಿ 'ಆಯುರ್ವೇದ ಕೊಡುಗೆ ಅನನ್ಯ, ಧನ್ವಂತ್ರಿ ಜಯಂತಿ ಆಚರಣೆಯಲ್ಲಿ ಶರತ್ ಜೋಯಿಸ್' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿದೆ. ಶೀರ್ಷಿಕೆಯಲ್ಲಿ 'ಧನ್ವಂತ್ರಿ' ಎಂದಿರುವುದು ಸುದ್ದಿ ವಿವರಣೆಯಲ್ಲಿ 'ಧನ್ವಂತರಿ' ಎಂದಿದೆ. ಧನ್ವಂತ್ರಿ, ಧನ್ವಂತರಿ ಇವೆರಡು ಪದ ಪ್ರಯೋಗಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲ ಓದುಗರನ್ನು ಕಾಡುವುದು ಸಹಜ.'
'ಧನ್ವಂತರಿ ಶುದ್ಧ ಪ್ರಯೋಗ, ಧನ್ವಂತ್ರಿ ಅಶುದ್ಧ ಪ್ರಯೋಗ. ಧನ್ವಂತರಿ ಪದವನ್ನು ಸಂಸ್ಕೃತ ಭಾಷಾತಜ್ಞರು ಹೀಗೆ ಒಡೆಯುತ್ತಾರೆ. 'ಧನ್ವಂ ತಾರಯತಿ ಇತಿ ಧನ್ವಂತರಿ' ಅಂದರೆ ರೋಗಗ್ರಸ್ಥನನ್ನು ದಾಟಿಸುವವನು ಎಂಬುದು ಇದರ ಅರ್ಥ. ಅರ್ಥಾತ್ ರೋಗದಿಂದ ರಕ್ಷಿಸುತ್ತಾನೆ ಎಂದು. ಧನ್ವಂತರಿ ವಿಷ್ಣುವಿನ ಅವತಾರ. ಸುರಾಸುರರು ಮಂದರ ಪರ್ವತದಿಂದ ಸಮುದ್ರ ಮಥನ ಮಾಡಿದಾಗ ಧನ್ವಂತರಿ ರೂಪದ ಆವಿರ್ಭಾವವಾಯ್ತು. ಅಮೃತ ಕಲಶ ಹೊತ್ತುಬಂದವನೇ ದೇವ ಧನ್ವಂತರಿ. ಧನ್ವಂತರಿ ಆಯುರ್ವೇದ ಶಾಸ್ತ್ರ ಪ್ರವರ್ತಕ ಎಂಬ ಪೂಜ್ಯ ಭಾವನೆ. ಧನ್ವಂತರಿ ಸ್ತುತಿ ಸಾಹಿತ್ಯವನ್ನು ಹರಿದಾಸರ ದಾಸ ಸಾಹಿತ್ಯದಲ್ಲಿ ವಿಫುಲವಾಗಿ ಕಾಣಬಹುದು. ವಿಜಯದಾಸರಂತು ಧನ್ವಂತರಿ ಸುಳಾದಿಯನ್ನೇ ರಚಿಸಿರುತ್ತಾರೆ. ಗೋಪಾಲದಾಸರ ಒಂದು ನುಡಿ ಹೀಗಿದೆ. 'ಆವ ರೋಗವೋ ಎನಗೆ ದೇವ ಧನ್ವಂತರಿ, ಸಾವದಾನದಿ ಕೈಯ ಪಿಡಿದು ನೋಡಯ್ಯ....' ವಾದಿರಾಜರ ಧನ್ವಂತರಿ ಸ್ತೋತ್ರ ಚಮತ್ಕಾರ ಪೂರ್ವಕವಾಗಿದೆ. ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಪ್ರಾಯೋಜಿತ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ವಿದ್ಯಾಭೂಷಣರು ಹಾಡಿದ ಈ ಸ್ತೋತ್ರ ತುಂಬಾ ಜನಪ್ರಿಯವಾಗಿದೆ. 'ಧನ್ವನ್ತರಂಗ ರುಚಿ ಧನ್ವಂತರೇರಿತು ಧನ್ವಂತರಿ ಭವಸುಧಾ, ಭಾನ್ವಂತ ರಾವಸತ ಮನ್ವನ್ತರಾಧಿಕೃತ ತನ್ವಂತ ರೌಷಧ ನಿಧೆ/ಧನ್ವಂತ ರಂಗ ಶುಗು ಧನ್ವಂತಮಾಜಿಷು ವಿತನ್ವನ್ ಮಮಾಬ್ಧಿತನಯ, ಸೂನ್ವಂತಕಾತ್ಮಹೃತ ತನ್ವನ್ತರಾವಾಯವ ತನ್ವಂತರಾರ್ಥಿ ಜಲಧೌ' ಎಂದಿದೆ' ಎಂದು ಅವರು ಹೇಳಿದ್ದಾರೆ.'
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸುರೇಶ್ ಮತ್ತೆ ಫೋನಾಯಿಸಿದ್ದಾರೆ. 'ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಸುದ್ದಿಯಲ್ಲಾದ ತಪ್ಪುಗಳನ್ನು ನಾನು ತಿಳಿಸಿದ್ದೆ. ಅದನ್ನು ವಿನಮ್ರದಿಂದ 'ತಪ್ಪಾಯ್ತು ತಿದ್ಕೋತೀವಿ' ಎಂದು ಅಂಕಣದಲ್ಲಿ ಹೇಳಿದ್ದೀರಿ. ಆದರೆ ಇದೇ ದಿನ ಮತ್ತೆ ಎರಡನೇ ಪುಟದಲ್ಲಿ 'ಅಶ್ವಿನಿ ಕ್ರೆಡಿಟ್ ಕಾರ್ಡ್‌ನಿಂದ 2.40 ಲಕ್ಷ ಹಣ ಡ್ರಾ ತನಿಖೆ ಚುರುಕು' ಎಂದು ಸುದ್ದಿ ಪ್ರಕಟಿಸಿ, ಈ ಹಿಂದಿನ ದಿನ ಮಾಡಿದ್ದ ತಪ್ಪನ್ನೇ ಪುನರಾವರ್ತಿಸಿದ್ದೀರಿ. ಸುದ್ದಿಯಲ್ಲಿ ಮೂರು ಕಡೆ 'ದೃಶ್ಯ' ಎಂದು ಬರೆಯಲು 'ದೃಷ್ಯ' ಎಂದು ಬರೆಯಲಾಗಿದೆ. ನೀವು ಅಂಕಣದಲ್ಲಿ ತಪ್ಪಾಯ್ತು ತಿದ್ಕೋತೀವಿ ಎಂದು ಹೇಳಿಯೂ ಪತ್ರಿಕೆಯಲ್ಲಿ ಅದೇ ತಪ್ಪು ಮರುಕಳಿಸಿದರೆ ಹೇಗೆ?' ಎಂದು ಅವರು ಪ್ರಶ್ನಿಸಿದ್ದಾರೆ.
-ವಿಶ್ವೇಶ್ವರ ಭಟ್