ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರಾಜ್ಯವನ್ನು ಕಾಪಾಡಿದ ಹರಿಶರಣ್ ಕೌರ್

Vishwanath S
Updated On : 9 Dec 2013, 11:13 am

ನಮ್ಮ ನಾಡಿನ ಮಣ್ಣಿನ ಗುಣವೇ ಹಾಗೆ. ಅಬಲೆಯರೂ ಎದ್ದುನಿಂತು ಶೌರ್ಯ ಮೆರೆದ ಅದೆಷ್ಟೋ ಘಟನೆಗಳು ನಮ್ಮ ಇತಿಹಾಸದಲ್ಲಿ ನಡೆದಿವೆ. ಅಂತಹ ಒಂದು ಘಟನೆ ಪಂಜಾಬಿನಲ್ಲಿ ನಡೆದು, ವೀರ ವನಿತೆ ಹರಿಶರಣ್ ಕೌರಳ ಶೌರ್ಯವನ್ನು ಪರಿಚಯ ಮಾಡಿಕೊಡುತ್ತದೆ. 1737ರ ಸಮಯ. ರಾಜಾ ಹರಿಸಿಂಹ ನಲವಾನ ಸರದಾರ ಮಾನ್‌ಸಿಂಹ ಜಮರೌ ಕೋಟೆಯ ಅರಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಹರಸಿಂಹ ಪೆಶಾವರದಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದೇ ಸಂದರ್ಭಾವನ್ನುಪಯೋಗಿಸಿ, ಆಫ್ಘನ್ ಸೈನ್ಯ ತನ್ನ ಅಮಿತ ಬಲದಿಂದ ಅಮೀರ್ ಅಹಮದ್ ಖಾನ್‌ನ ನೇತೃತ್ವದಲ್ಲಿ ಜಮರೌ ಕೋಟೆಯ ಮೇಲೆ ದಾಳಿಮಾಡಿತು. ಏಕೆಂದರೆ ಈ ಕೋಟೆ ಖೈಬರ್ ಕಣಿವೆಯ ಪ್ರವೇಶದ ಆಯಕಟ್ಟಿನ ಸ್ಥಳದಲ್ಲಿತ್ತು. ಅದನ್ನು ಗೆದ್ದರೆ ಪಂಜಾಬ್ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ಳಬಹುದೆಂಬ ಆಲೋಚನೆ ಖಾನ್‌ನದ್ದು. ಹೀಗಾಗಿ ಎಲ್ಲ ನವಾಬರ ಬೆಂಬಲದಿಂದ ಪ್ರಬಲವಾದ ಸೈನ್ಯದೊಡನೆ ಕೋಟೆಗೆ ಮುತ್ತಿಗೆ ಹಾಕಲಾಯಿತು. ಖಾನ್‌ನ ಸೈನ್ಯಕ್ಕೆ ಹೋಲಿಸಿದರೆ, ಜಮರೌದ ಸೈನ್ಯ ಬಲ ಕಡಿಮೆ. ಅಷ್ಟು ಕಡಿಮೆ ಸೈನ್ಯ ಅಮೀರನ ಸೈನ್ಯವನ್ನೆದುರಿಸಲು ಅಸಮರ್ಥವಾಗಿತ್ತು. ಹರಿಸಿಂಹನಿಗೆ ಸುದ್ದಿ ಕಳಿಸಿ, ಸೈನ್ಯ ತರಿಸೋಣವೆಂದರೆ, ಕೋಟೆಯ ಸುತ್ತ ಶತ್ರು ಸೈನಿಕರು ಅಪಾರ ಸಂಖ್ಯೆಯಲ್ಲಿ ಮದ್ದುಗುಂಡುಗಳೊಡನೆ ಸಿದ್ಧರಾಗಿ ನಿಂತಿದ್ದರು. ಯಾರಾದರೊಬ್ಬ ಸೈನಿಕ ಕೋಟೆಯೊಳಗಿಂದ ಹೊರಹೋದರೆ ಅವನು ಗುಂಡಿಗೆ ಬಲಿಯಾಗುವುದಂತೂ ಖಚಿತವಾಗಿತ್ತು. ಆದ್ದರಿಂದ ಮಾನ್‌ಸಿಂಹ ತನ್ನ ಅಲ್ಪ ಸೈನ್ಯದ ನೆರವಿನಿಂದ ಕೋಟೆಯನ್ನು ಸಾಧ್ಯವಾದಷ್ಟೂ ಕಾಪಾಡಿಕೊಂಡು ಬಂದಿದ್ದ. ಆದರೆ ಹೊರಗಿನ ಸೈನ್ಯದ ನೆರವಿಲ್ಲದೆ ಹೆಚ್ಚುದಿನ ಕೋಟೆಯನ್ನು ರಕ್ಷಿಸುವುದು ಸಾಧ್ಯವಿಲ್ಲವೆಂದರಿತು ಚಿಂತಾಕ್ರಾಂತನಾಗಿ ಕುಳಿತಿದ್ದ. ಪೆಶಾವರದಲ್ಲಿರುವ ಹರಿಸಿಂಹರಿಗೆ ಸುದ್ದಿ ಮುಟ್ಟಿಸುವುದು ಹೇಗೆ ಎಂದು ಯೋಚಿಸುತ್ತಿರುವಾಗ ಅಡುಗೆ ಮನೆಯಲ್ಲಿದ್ದ ಬಾಲಕಿಯೊಬ್ಬಳು ಹೊರಬಂದು ತಾನು ಆ ಕಾರ್ಯವನ್ನು ಯಶಸ್ವಿಯಾಗಿ ಮಾಡುವುದಾಗಿಯೂ, ಹರಿಸಿಂಹರಿಗೆ ಅಗತ್ಯವಾದ ಪತ್ರವನ್ನು ಬರೆದುಕೊಡಬೇಕೆಂದೂ ಮನವಿ ಮಾಡಿದಳು. ಮಧ್ಯ ರಾತ್ರಿ ಕಗ್ಗತ್ತಲು ಕವಿದ ಆ ಸಮಯದಲ್ಲಿ ಅರೆ ತೆಗೆದ ಕೋಟೆ ಬಾಗಿಲಿನ ಸಂದಿಯಿಂದ ನಾಯಿಯ ಹೊದಿಕೆ ಹೊದ್ದ ಆ ಬಾಲಕಿ ಹರಿಶರಣ ಕೌರ್ ನಿಧಾನವಾಗಿ ನಡೆದು ಹೋಗುವುದನ್ನು ನೋಡಿದ ಆಫ್ಘನ್ ಸೈನಿಕ ನಾಯಿಯೆಂದೇ ಬಗೆದು ಎತ್ತಿದ ಬಂದೂಕನ್ನು ಕೆಳಗಿಳಿಸಿದ. ಸ್ವಲ್ಪ ದೂರ ಸಾಗಿದ ಕೌರ್ ತನ್ನ ಮೇಲ್ಮುಸುಕನ್ನು ತೆಗೆದು ಬಿಸುಟು, ಓಡೋಡುತ್ತಲೇ ಪೆಶಾವರವನ್ನು ತಲುಪಿ ಹರಿಸಿಂಹರನ್ನು ಭೇಟಿಯಾಗಿ ವಿಷಯವನ್ನು ತಿಳಿಸಿ ಸರದಾರನ ಪತ್ರವನ್ನು ನೀಡಿದಳು. ಹರಿಸಿಂಹ ತನ್ನ ಬಲಿಷ್ಠ ಸೈನ್ಯವನ್ನು ಆಫ್ಘನ್ನರ ಮೇಲೆ ಯುದ್ಧ ಮಾಡಲು ಕಳುಹಿಸಿಕೊಟ್ಟ. ಭಯಂಕರವಾದ ಯುದ್ಧ ನಡೆದು ಆಫ್ಘನ್ ಸೈನ್ಯ ನುಚ್ಚುನಾರಾಗಿ ಹೋಯಿತು. ಕೋಟೆ ಉಳಿಸಿದ ಕುಮಾರಿ ಹರಿಶರಣ ಕೌರಳನ್ನು ಎಲ್ಲರೂ ಶ್ಲಾಘಿಸುವವರೇ. ಇಂದಿಗೂ ಈ ಪ್ರಸಂಗ ಪಂಜಾಬ್‌ನಲ್ಲಿ ಮನೆಮಾತಾಗಿದೆ.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments