ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಸತ್ತಿನ ಸಹಜ ಕಲಾಪ ಸಾಧ್ಯವೇ?

Vishwanath S
Updated On : 9 Dec 2013, 11:04 am

ಈಗಿನ ಸಂಸತ್ತಿನ ಚುನಾಯಿತ ಅವಧಿ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಲೋಕಸಭೆ ಚುನಾವಣೆಗೆ ಮುನ್ನವೇ ಹಲವು ಹತ್ತು ಪ್ರಮುಖ ನಿರ್ಧಾರಗಳನ್ನು ಜಾರಿಗೆ ತರುವ ಬಯಕೆ ಆಳುವ ಕಾಂಗ್ರೆಸ್ ಕೂಟದ್ದು.
ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಷರಶಃ ಹಾಗೂ ವಸ್ತುಶಃ ಕಾಂಗ್ರೆಸ್ಸಿನ ನೈತಿಕ ಸ್ಥೈರ್ಯವನ್ನು ಅಲುಗಾಡಿಸಿರುವುದೂ ನಿಜ. ಇಂತಹ ಸನ್ನಿವೇಶದಲ್ಲಿ ಈಗಿನ ಸಂಸತ್ತು ತನ್ನ ಕಾರ್ಯಕಲಾಪವನ್ನು ಸಹಜವಾದ ರೀತಿಯಲ್ಲಿ ನಡೆಸುವುದು ಸಾಧ್ಯವೇ ಎನ್ನುವುದೊಂದು ಬೃಹದಾಕಾರದ ಪ್ರಶ್ನೆ.
ಸೋಮವಾರ ಉಭಯ ಸದನಗಳಲ್ಲೂ ನಡೆದ ಗದ್ದಲ- ಗೊಂದಲದಿಂದ ಕಾರ್ಯಕಲಾಪ ಹಠಾತ್ತನೆ ಮುಂದಕ್ಕೆ ಹೋದ ರೀತಿ -ನೀತಿಯನ್ನು ಗಮನಿಸಿದರೆ, ಈ ಸಂಸತ್ತು ತನ್ನ ಉಪಯುಕ್ತತೆಯನ್ನು ಕಳೆದುಕೊಂಡಿದೆ ಎನ್ನುಬಹುದು. ಒಂದು ರೀತಿಯಲ್ಲಿ ಸಂಸತ್ತಿನ ಕಾರ್ಯಕಲಾಪವೇ ಅರ್ಥಹೀನವಾಗುವ ಸ್ಥಿತಿ ತಲುಪಿದೆ.
ಸೋಮವಾರ ಗದ್ದಲ- ಗೊಂದಲಕ್ಕೆ ಆಂಧ್ರ ಪ್ರದೇಶದ ವಿಭಜನೆ, ತೆಲಂಗಾಣ ರಾಜ್ಯ ನಿರ್ಮಾಣದ ಸರ್ಕಾರದ ನಿರ್ಧಾರ ಮೊದಲು ಗ್ರಾಸ ಒದಗಿಸಿದ್ದು. ತೆಲುಗುದೇಶಂ, ವಾಮರಂಗ ಹಾಗೂ ಬಹುಜನ ಸಮಾಜ ಪಾರ್ಟಿಯ ಸದಸ್ಯರು ಲೋಕಸಭೆಯ ಧರಣಿ ಸ್ಥಾನಕ್ಕೆ ನುಗ್ಗಲು ಬಳಸಿದ ಹಲವು ನೆಪಗಳಲ್ಲಿ ಒಂದು ಮಾತ್ರ.
ಎರಡನೇ ತಲೆಮಾರಿನ ತರಂಗಾಂತರ ಗುಚ್ಛಗಳ ಹಂಚಿಕೆಯ ಹಗರಣ ಕುರಿತಂತೆ ಸಂಯುಕ್ತ ಸಂಸದೀಯ ಸಮಿತಿಯ ವರದಿಯನ್ನು ಮಂಡಿಸಲು ಅಧ್ಯಕ್ಷ ಚಾಕೋ ಪ್ರಯತ್ನಿಸಿದಾಗಲೇ ಅಬ್ಬರದ ಆರ್ಭಟ ಸಹಿತ ಗಂಟಲ ಶಕ್ತಿಯ ಪ್ರದರ್ಶನ.
ಆ ಸಮಯದಲ್ಲೇ ಉತ್ತರ ಪ್ರದೇಶದ ಮುಜಫರ ನಗರದ ನಿರಾಶ್ರಿತರ ಶಿಬಿರಗಳಲ್ಲಿ ಚಳಿಯಿಂದ ಐವತ್ತಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಸತ್ತಿದ್ದಾರೆನ್ನುವ ವರದಿಯ ಸಂಬಂಧವೂ ಬಹುಜನ ಸಮಾಜ ಪಕ್ಷದ ಉಗ್ರ ಪ್ರತಿಭಟನೆ.
ಇವೆಲ್ಲದರ ನಡುವೆಯೇ ಸೀಮಾಂಧ್ರ ಪ್ರದೇಶದ ಆರು ಮಂದಿ ಕಾಂಗ್ರೆಸ್ ಸದಸ್ಯರೇ ಸರ್ಕಾರದ ವಿರುದ್ಧ ಅವಿಶ್ವಾಸವನ್ನು ಸೂಚಿಸುವ ನಿರ್ಣಯದ ಮಂಡನೆಗೆ ನೋಟೀಸು ಕೊಡಲು ಪ್ರಯತ್ನಿಸಿದ ವರದಿಗಳೂ ಸೇರಿಕೊಂಡವು.
ರಾಜ್ಯಸಭೆಯಲ್ಲೂ ತೆಲುಗುದೇಶಂ, ವಾಮರಂಗ, ಬಹುಜನ ಸಮಾಜ ಪಕ್ಷಗಳ ಪ್ರತಿಭಟನೆ. ಈ ಎಲ್ಲ ಸಮಸ್ಯೆಗಳೂ ಸರ್ಕಾರವನ್ನು ದೀರ್ಘಕಾಲ ಕಾಡುವ ಸಮಸ್ಯೆಗಳೇ. ಈ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡುತ್ತಿರುವುದು ನೆಪಕ್ಕೆ ಮಾತ್ರ. ಪ್ರತಿಪಕ್ಷಗಳ ನಿಜವಾದ ಉದ್ದೇಶ ಸಾಧ್ಯವಿರುವಷ್ಟು ಮಟ್ಟಿಗೂ ಸರ್ಕಾರದ ಪ್ರತಿಷ್ಠೆಯನ್ನು ಮುಕ್ಕಾಗಿಸಿ, ದೇಶಕ್ಕೆ ಸರ್ಕಾರದ ಉಪಯುಕ್ತತೆಯೂ ಮುಗಿದಿದೆ ಎಂದು ತೋರಿಸುವುದು.  ಸಂಸತ್ತಿನ ಅಧಿವೇಶನ, ವಾಸ್ತವದಲ್ಲಿ ದೇಶದಲ್ಲಿ ಈಗ ಎಲ್ಲ ಕಡೆ ಕಂಡುಬರುತ್ತಿರುವ ವಾತಾವರಣವನ್ನು ಪ್ರತಿಬಿಂಬಿಸುತ್ತಿರುವಂತಿದೆ.
ನಿಜ. ಸಾಂಪ್ರದಾಯಿಕವಾಗಿ, ಈ ಅಧಿವೇಶನದಲ್ಲಿ ಅಗಲೇಬೇಕಾದ ಕೆಲಸಗಳೂ ಇರಬಹುದು. ಅದೆಲ್ಲವನ್ನು ಹೇಗೋ ಮುಗಿಸಿದ ಶಾಸ್ತ್ರದೊಡನೆ, ಸಂಸತ್ತು ಮುಂದಿನ ವರ್ಷವನ್ನು ಪ್ರವೇಶಿಸಲೂಬಹುದು.
ಇಂತಹ ಪರಿಸ್ಥಿತಿಯನ್ನು, ಜನತಾಂತ್ರಿಕ ವ್ಯವಸ್ಥೆಯ ತಿರುಳನ್ನು ಬಲಿಕೊಟ್ಟು ಕೇವಲ ಚೌಕಟ್ಟನ್ನು ಉಳಿಸಿಕೊಂಡಂತೆ ಎಂದು ಹೇಳದೇ ಬೇರೆ ವಿಧಿಯೇ ಇಲ್ಲ. ಸರ್ಕಾರಕ್ಕೆ ಬೆಂಬಲ ನೀಡಿದ್ದ ಡಿಎಂಕೆ ಬೆಂಬಲವನ್ನು ಹಿಂದಕ್ಕೆ ಪಡೆದಿದೆ. ಅದು ಹಿಂದೆಯೇ ಪ್ರಕಟವಾಗಿತ್ತು. ಈಗ ಆಂಧ್ರದಲ್ಲಿ ಕೆಲವು ಕಾಂಗ್ರೆಸ್ ಸಂಸದರೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಸೂಚನೆಯನ್ನು ನೀಡಿರುವ ವರದಿಗಳ ಹಿನ್ನೆಲೆಯಲ್ಲಿ ಸಂಸತ್ತಿನ ಕಾರ್ಯಕಲಾಪದ ವಿಶ್ವಾಸಾರ್ಹತೆಯೇ ಅನುಮಾನದ ಹಂತದಲ್ಲಿದೆ.
ಸರ್ಕಾರ ಸ್ವಯಂ ಪ್ರೇರಣೆಯಿಂದ ತನ್ನ ಬಹುಮತವನ್ನು ಪ್ರದರ್ಶಿಸಿ, ತನ್ನ ಹಾಗೂ ಸಂಸತ್ತಿನ ಗೌರವವನ್ನು ಉಳಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement