ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗತಿಗೇಡಿನ ಗ್ರಾಮ ಸ್ಪಂದನೆಯ ಅಗತ್ಯವಿಲ್ಲ

Vishwanath S
Updated On : 12 Dec 2013, 11:24 am

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮ ಸ್ಪಂದನ ಸರ್ಕಾರಿ ಕಾರ್ಯಕ್ರಮವನ್ನು ಡಿ.9ರಂದು ಆಯೋಜಿಸಲಾಗಿತ್ತು.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾರ್ವಜನಿಕರು ಮೊದಲ ಬಾರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರುವ ಕಾತರದಿಂದಿದ್ದರು. ವಿಶೇಷವಾಗಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ವಿಕಲಾಂಗ ಪಿಂಚಣಿಗಳು ತಡೆಯಾದ ಹಲವು ಅಸಹಾಯಕರು ಹಾಗೂ ಹಾಸನ-ಬಿಸಿ ರೋಡ್ ಚತುಷ್ಪಥದಿಂದ ಮನೆ ಹಾಗೂ ಜೀವನಾಧಾರಕ್ಕೆ ಆಧಾರವಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡು ಸಂತ್ರಸ್ತರಾಗುವವರು ಸಚಿವರಿಗೆ ಮನವಿ ಸಲ್ಲಿಸಲು ಕಾಯುತ್ತಿದ್ದರು.
ಮೊದಲೇ ಸಮಯ ಮೀರಿ ಬಂದ ಸಚಿವರು ತಮ್ಮ ಹಿಂಬಾಲಕರೊಂದಿಗೆ ಒಂದಿಷ್ಟು ಹೊತ್ತು ಕುಶಲೋಪಚಾರ ನಡೆಸಿ 15 ನಿಮಿಷದಷ್ಟು ಕಾಲ ತಮ್ಮ ಸಾಧನೆಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಭಿತ್ತರಿಸಿದರು. ತದನಂತರ ತಮಗೆ ಮಡಿಕೇರಿಗೆ ಹೋಗಲು ಇರುವುದರಿಂದ ಬೇಗನೇ ಮನವಿ ಸಲ್ಲಿಸುವಂತೆ ತಿಳಿಸಿದರು. ಇದರಿಂದ ಒಮ್ಮೆಲೇ ಇದ್ದ ಬಿದ್ದವರೆಲ್ಲಾ ಸಚಿವರಿಗೆ ಮನವಿ ಸಲ್ಲಿಸಲು ಪ್ರಯತ್ನಿಸುವುದರಿಂದ ನೂಕು ನುಗ್ಗಲು ಸಂಭವಿಸಿತು. ಈ ಸಂದರ್ಭದಲ್ಲಿ ವೃದ್ಧರು ಹಾಗೂ ವಿಕಲಾಂಗರ ಸ್ಥಿತಿ ತುಂಬಾ ಶೋಚನಿಯವಾಗಿತ್ತು. ಕೇವಲ ಅರ್ಧ ಗಂಟೆಯೊಳಗೆ ಗ್ರಾಮ ಸ್ಪಂದನೆ ಎಂಬ ಹರಕೆಯನ್ನು ತೀರಿಸಿ ಸಚಿವರು ಅಲ್ಲಿಂದ ಕಾಲ್ಕಿತ್ತರು.  
ರಾಜ್ಯದ ಮುಖ್ಯಮಂತ್ರಿ ರಾಜಧಾನಿಯಲ್ಲಿ ತದೇಕಚಿತ್ತದಿಂದ ಜನಸಂಪರ್ಕ ಸಭೆಯ ಮುಖಾಂತರ ಜನ ಸಾಮಾನ್ಯರ ಸಮಸ್ಯೆಯನ್ನು ಆಲಿಸಿದರೆ, ನೆರೆಯ ರಾಜ್ಯದ ಮುಖ್ಯಮಂತ್ರಿ ಕಾಸರಗೋಡಿನಲ್ಲಿ 2 ವಾರಗಳ ಹಿಂದೆ ಒಂದು ದಿನ ಪೂರ್ತಿ ಜನರೊಂದಿಗೆ ಬೆರೆತುಸಮಸ್ಯೆ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ. ಆದರೆ ತಮಗೆ ಮತ ನೀಡಿದ ಕ್ಷೇತ್ರದ ಮತದಾರರೊಂದಿಗೆ ಕೇವಲ ಒಂದೆರಡು ಗಂಟೆ ಕಾಲ ಬೆರೆತು ಸಮಸ್ಯೆ ಆಲಿಸಲು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗದೇ ಇರುವುದು ದುರದೃಷ್ಟಕರ. ಸಚಿವರ ಈ ರೀತಿಯ ಕಾರ್ಯವೈಖರಿಯನ್ನು ನೋಡಿದ ಯುವ ಜನತೆ ಖಂಡಿತ ಆಮ್ ಆದ್ಮಿಯಂಥ ಪಾರ್ಟಿಯನ್ನು ಅರಸಿಕೊಂಡು ಹೋಗುತ್ತಾರೆ ವಿನಃ ನಿಮ್ಮನ್ನು ಮತ್ತೊಮ್ಮೆ ಚುನಾಯಿಸುವ ದುಸ್ಸಾಹಸಕ್ಕೆ ಪ್ರಯತ್ನಿಸುವುದಿಲ್ಲ.
- ನವೀನ್ ಶೆಟ್ಟಿ, ಬಂಟ್ವಾಳ



ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement