ಸಲಿಂಗರತಿ: ಸುಪ್ರೀಂ ತೀರ್ಪು ಕುರಿತ ವಿವಾದ
ಭಾರತದಲ್ಲಿ ಸಲಿಂಗರತಿ ಶಿಕ್ಷಾರ್ಹ ಅಪರಾಧವೆನ್ನುವುದು ಅಪರಾಧ ಸಂಹಿತೆಯಲ್ಲಿ 1860 ರಿಂದಲೇ ಕಾಯಿದೆಯಲ್ಲಿತ್ತು. ಸಂಹಿತೆಯ ಈ ವಿಧಿಯನ್ನು ಹಲವು ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, 2009 ರಲ್ಲಿ ದೆಹಲಿ ಹೈಕೋರ್ಟ್ ಬದಲಾದ ವ್ಯವಸ್ಥೆಯಲ್ಲಿ ಆ ವಿಧಿಯನ್ನು ರದ್ದುಗೊಳಿಸಿತ್ತು. ದೆಹಲಿ ಹೈಕೋರ್ಟ್ನ ತೀರ್ಪು ಸುಪ್ರೀಮ್ ಕೋರ್ಟಿನ ಮುಂದೆ ವಿಚಾರಣೆಗೆ ಬಂದಾಗ, ಮತ್ತೆ 1860ರ ಕಾಯಿದೆಯ 377ನೇ ವಿಧಿ ಸಿಂಧು ಎನ್ನುವ ತೀರ್ಮಾನ ಬುಧವಾರ ಪ್ರಕಟವಾಗಿದೆ.
ಈ ಅವಧಿಯಲ್ಲಿ, ಅನೇಕ ದೇಶಗಳಲ್ಲಿ ನಡೆದಂತೆಯೇ ವ್ಯಕ್ತಿಗಳ ಲೈಂಗಿಕ ಹಕ್ಕಿನ ಪರವಾಗಿ ಹೋರಾಡಲು ಭಾರತದಲ್ಲೂ ಸಂಘಟನೆಗಳು ಹುಟ್ಟಿಕೊಂಡಿವೆ. ಈಗ ಸಾಮಾಜಿಕವಾಗಿ, ಸಲಿಂಗ ರತಿಯ ವಿಚಾರದಲ್ಲಿ ಹಿಂದೆ ಇದ್ದ ಕೀಳು ಭಾವನೆ ಅನೇಕ ವರ್ಗಗಳಲ್ಲಿ ಇಲ್ಲ. ಸಲಿಂಗರತಿಯನ್ನು ಒಂದು ಜೀವನ ಶೈಲಿ ಎಂದೇ ಭಾವಿಸುವವರು ಬೇಕಾದಷ್ಟು ಜನರಿದ್ದಾರೆ. ಆದರೆ ಸುಪ್ರೀಮ್ ಕೋರ್ಟ್ ತನ್ನ ತೀರ್ಪಿನಲ್ಲಿ ಸಲಿಂಗರತಿ ಅಥವಾ ಕಾಮ ಅಥವಾ ಪ್ರಣಯ ಸಹಜ ನೈಸರ್ಗಿಕ ಕ್ರಿಯೆ ಅಲ್ಲ ಎನ್ನುವ ಅರ್ಥ ಬರುವ ಪದಗಳನ್ನು ಬಳಸಿರುವುದರಿಂದ, ಆ ತೀರ್ಪು ಮಾಧ್ಯಮ ಪ್ರಪಂಚದಲ್ಲಿ ಬಹುತೇಕವಾಗಿ ತೀವ್ರ ಸ್ವರೂಪದ ಟೀಕೆಗೆ ಒಳಗಾಗಿದೆ.
ಸೋನಿಯಾ ಗಾಂಧಿ, ಚಿದಂಬರಂ, ಕಪಿಲ್ ಸಿಬಲ್ ಅವರಂತಹವರೂ ವ್ಯಕ್ತಿಗಳ ಲೈಂಗಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದೇ ಹೇಳಿದ್ದಾರೆ. ಇದೆಲ್ಲ ಪ್ರಕಟಿತ ಪ್ರತಿಕ್ರಿಯೆಗಳು. ಆದರೆ ಸಲಿಂಗರತಿಯನ್ನು ಅಸಹಜ, ಅನೈಸರ್ಗಿಕ, ಅನೈತಿಕ ಚಟುವಟಿಕೆ ಎನ್ನುವ ಜನವರ್ಗಗಳು ಬಹಿರಂಗವಾಗಿ ತಮ್ಮ ನಿಲವನ್ನು ಪ್ರತಿಪಾದಿಸಲು ಹಿಂಜರಿಯುವ ಜನ. ಹಾಗೆಂದ ಮಾತ್ರಕ್ಕೇ ಅವರ ಸಂಖ್ಯೆ ಕಡಿಮೆ ಏನೂ ಅಲ್ಲ.
ಈಗಿನ ವಿವಾದದಲ್ಲಿ, ಗಮನಿಸಬೇಕಾದ ಒಂದು ಪ್ರಮುಖ ಅಂಶ ಅಂದರೆ, ದೆಹಲಿ ಹೈಕೋರ್ಟ್ ಅಥವಾ ಸುಪ್ರೀಮ್ ಕೋರ್ಟ್ಗಳಿಗೆ ಕಾಯಿದೆ ರಚನೆಯ ಅಧಿಕಾರ ಇಲ್ಲ ಎನ್ನುವುದನ್ನು. ಶಾಸಕಾಂಗ ಜಾರಿಗೆ ತರಲು ಬಯಸಿದ ಶಾಸನಗಳನ್ನು ಯಾರಾದರೂ ಪ್ರಶ್ನಿಸಿದಾಗ, ನ್ಯಾಯಾಂಗ ಅದನ್ನು ವಿಮರ್ಶಿಸಿ, ವಿಚಾರಣೆ ನಡೆಸಿ ಸಂವಿಧಾನ ಬದ್ಧತೆಯನ್ನು ಕುರಿತು ಕೊಡುವ ತೀರ್ಪು ಶಾಸಕಾಂಗ-ಕಾರ್ಯಾಂಗಗಳನ್ನು ಬಂಧಿಸುತ್ತದೆ ಅಷ್ಟೇ. ಈಗಿನ ಸಲಿಂಗರತಿಯ ವಿಚಾರದಲ್ಲಿ ಈಗಾಗಲೇ ಪ್ರಕಟವಾಗಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಬಹುತೇಕವಾಗಿ ಸಾಮಾಜಿಕ ಶಕ್ತಿಗಳು ವ್ಯಕ್ತಿಗಳಿಗೆ ಲೈಂಗಿಕ ಸ್ವಾತಂತ್ರ್ಯವನ್ನು ಕೊಡಬೇಕೆನ್ನುವ ಅಭಿಪ್ರಾಯದ ಕೈಯೇ ಮೇಲಾಗಿರುವಂತೆ ಕಂಡು ಬರುತ್ತಿರುವುದೂ ನಿಜ.
ಸುಪ್ರೀಮ್ ಕೋರ್ಟ್ನ ತೀರ್ಪನ್ನು ಆ ಕೋರ್ಟ್ನಲ್ಲೇ ಮರು ಪರಿಶೀಲನೆಗೆ ಒಳಪಡಿಸುವುದೂ ಸಾಧ್ಯ. ಸಂಸತ್ತು ಶಾಸನ ರಚನೆಯಲ್ಲಿ ತನ್ನ ಸಾರ್ವಭೌಮಾಧಿಕಾರವನ್ನು ಬಳಸಿ, ಹೊಸ ಕಾಯಿದೆಯನ್ನೇ ರಚಿಸಲೂ ಮುಂದಾಗಬಹುದು.
ಆದರೆ ಅದಕ್ಕೆ ಸಮಯ ಬೇಕು. ಸುಪ್ರೀಂ ಕೋರ್ಟ್ನ ಈಗಿನ ತೀರ್ಪಿನಂತೆ, ದೇಶದಲ್ಲಿ ಮತ್ತೆ 1860 ರ ಶಾಸನವೇ ಜಾರಿಯಲ್ಲಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಕಾರ್ಯಾಚರಣೆ ನಡೆದರೆ ಅದನ್ನು ಈಗ ತಡೆಯಬಲ್ಲ ಆದೇಶ ಯಾವುದೂ ಇಲ್ಲ. ಕೇಂದ್ರ ಸರ್ಕಾರದ ಪ್ರಭಾವಿ ಸಚಿವರ ಅಭಿಪ್ರಾಯವನ್ನು ಗಮನಿಸಿದರೆ, ಅಗತ್ಯ ಬಿದ್ದರೆ, ತುರ್ತು ಶಾಸನದ ಮೂಲಕವಾದರೂ, ಸುಪ್ರೀಂ ಕೋರ್ಟ್ನ ತೀರ್ಪಿನ ಜಾರಿಯನ್ನು ತಡೆ ಹಿಡಿಯುವ ಕ್ರಮವೂ ಸೇರಿದಂತೆ, ಎಲ್ಲ ಪರ್ಯಾಯ ಮಾರ್ಗಗಳೂ ಪರಿಶೀಲನೆಯಲ್ಲಿರುವಂತೆ ಭಾಸವಾಗುತ್ತಿದೆ. ಹೀಗಾಗಿ 1860ರ ಶಾಸನದ ವಿಧಿಯೇ ಮತ್ತೆ ಕಾರ್ಯಾಚರಣೆಗೆ ಬರುವ ಸಂಭವ ತೀರ ಕಡಿಮೆ. ಸುಪ್ರೀಂ ಕೋರ್ಟಿನಲ್ಲೇ ಪುನರ್ ವಿಮರ್ಶೆ ಮನವಿಯನ್ನು ಸಲ್ಲಿಸುವ ಅವಕಾಶವೂ ಇದ್ದಿದ್ದೇ.
ಸುಪ್ರೀಂ ಕೋರ್ಟ್ನ ತೀರ್ಪು ಕೂಡಾ, ಈ ವಿಚಾರದಲ್ಲಿ ಸಮಗ್ರ ಸ್ವರೂಪದ ಚರ್ಚೆಯ ಅನಂತರ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರ ಸಂಸತ್ತಿಗೇ ಇರುವುದರ ಪ್ರಸ್ತಾಪವೂ ಇದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಂಸತ್ತಿನಲ್ಲಿ ಏನಾದರೂ ಅರ್ಥಪೂರ್ಣ ಕೆಲಸ ನಡೆಯುವುದು ಸಾಧ್ಯವೇ ಎನ್ನುವುದಕ್ಕೆ ಉತ್ತರ ಸಿಗುವ ಸಂಭವ ತೀರ ಕಡಿಮೆ. ಸರ್ಕಾರವೇ ಏನಾದರೂ ಮಾಡಬೇಕು.