ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಾನವ ಜನ್ಮಕ್ಕೆ ವಿನಯವೇ ಭೂಷಣ

Vishwanath S
Updated On : 13 Dec 2013, 10:56 am

ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದವರು. ಒಟ್ಟು 52 ವರ್ಷಗಳು ಮಠಾಧಿಪತಿಯಾಗಿ ಶೃಂಗೇರಿಯ ಪಾರಮ್ಯವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ಒಂದು ಪ್ರತಿಷ್ಠಿತ ಮಠದ ಪೀಠಾಧಿಕಾರಿಗಳಾಗಿದ್ದರೂ ಅವರಿಗೆ ಆ ಬಗ್ಗೆ ಯಾವ ಹಮ್ಮೂ-ಬಿಮ್ಮೂ ಇರಲಿಲ್ಲ. ಪೀಠಾಧಿಪತಿಗಳಾಗುವ ಮುನ್ನ ಅವರಿಗೆ ಪಾಠಹೇಳಲು ಹಾನಗಲ್ಲ ವಿರೂಪಾಕ್ಷ ಶಾಸ್ತ್ರಿಗಳನ್ನು ನೇಮಿಸಲಾಗಿತ್ತು. ವಿರೂಪಾಕ್ಷ ಶಾಸ್ತ್ರಿಗಳು ತರ್ಕ ಮತ್ತು ವೇದಾಂತ ವಿಷಯಗಳಲ್ಲಿ ಪಾರಂಗತರಾದವರು. ಅವರಷ್ಟು ಸರಳವಾಗಿ ವೇದಾಂತವನ್ನು ಪಾಠಮಾಡುವವರು ಆಗ ಯಾರೂ ಇರಲಿಲ್ಲ. ಅವರು ಬೆಂಗಳೂರಿನ ಶಂಕರಮಠದಲ್ಲಿ ವೇದಾಂತ ಉಪಾಧ್ಯಾಯರಾಗಿಯೂ, ಮೈಸೂರು ಮಹಾರಾಜರ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು. ನಾಲ್ಮಡಿ ಕೃಷ್ಣರಾಜ ಒಡೆಯರ್‌ರಿಗೆ ವೇದಾಂತ ಪಾಠವನ್ನು ಮಾಡಿದ ಕೀರ್ತಿಗೆ ಭಾಜನರಾದವರು. ಒಮ್ಮೆ ಚಂದ್ರಶೇಖರ ಭಾರತೀ ಸ್ವಾಮಿಗಳನ್ನು ನೋಡಲು ವಿರೂಪಾಕ್ಷ ಶಾಸ್ತ್ರಿಗಳು ಶೃಂಗೇರಿಗೆ ಬಂದಿದ್ದರು. ತಮ್ಮ ಶಿಷ್ಯ ಆಗ ಸನ್ಯಾಸಿಯಾಗಿದ್ದರಿಂದ ಅವರನ್ನು ತಮ್ಮ ಶಿಷ್ಯ ಎಂಬ ದೃಷ್ಟಿಯಲ್ಲಿ ನೋಡದೆ ಅದ್ವೈತ ಪರಂಪರೆಯ ಹರಿಕಾರರಾಗಿ, ಒಂದು ಪ್ರತಿಷ್ಠಿತ ಮಠದ ಪೀಠಾಧಿಪತಿಯಾಗಿದ್ದುದರಿಂದ ಅವರ ದರ್ಶನಾಭಿಲಾಷಿಯಾಗಿ ಬಂದಿದ್ದರು. ಹೀಗಾಗಿ ಗುರುಗಳ ಕೊಠಡಿಗೆ ಬಂದವರೇ ಸ್ವಾಮಿಗಳಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ಆಗ ಸಂಕೋಚಗೊಂಡ ಗುರುಗಳು ತಮ್ಮ ಪೀಠದಿಂದ ಮೇಲೆದ್ದು, ಈಚೆಗೆ ಬಂದು ಹೇಳಿದರು, "ನೋಡಿ, ಈ ಪೀಠ ವೇದಾಂತದ ಪಾರಮ್ಯವನ್ನು ಪಡೆದಿರುವ ಪೀಠ. ಇದರಲ್ಲಿ ತಾವು ಕೂಡಬೇಕಾಗಿತ್ತು. ಅದೃಷ್ಟವೋ ದುರಾದೃಷ್ಟವೋ ನಾನು ಕೂತಿದ್ದೇನೆ ಕ್ಷಮಿಸಬೇಕು" ಎಂದು ವಿನೀತರಾಗಿ ಹೇಳಿದರು. ಅವರ ವಿನಯಪೂರ್ವಕ ಮಾತುಗಳನ್ನು ಕೇಳಿ ಶಾಸ್ತ್ರಿಗಳ ಕಣ್ಣಿನಲ್ಲಿ ನೀರು ಇಳಿಯತೊಡಗಿತು. ಅವರ ವಿನಯ ಮತ್ತು ಸಹೃದಯತೆ ಕಂಡು ಮೂಕರಾದರು. ತಾವು ಕಲಿಸಿದ ಪಾಠ ಇಷ್ಟರ ಮಟ್ಟಕ್ಕೆ ಸ್ವಾಮಿಗಳನ್ನು ಏರಿಸಿದೆ ಎಂದು ತಿಳಿದು, ಅವರ ಮನಸ್ಸಿಗೆ ಸಂತೋಷವೂ ಉಂಟಾಯಿತು. ಆಗ ಸ್ವಾಮಿಗಳನ್ನುದ್ದೇಶಿಸಿ ವಿರೂಪಾಕ್ಷ ಶಾಸ್ತ್ರಿಗಳು ತಾವೀಗ ಗುರು ಸ್ಥಾನದಿಂದ ಅವರನ್ನು ಕಾಣಲು ಬಂದಿಲ್ಲವೆಂದೂ, ಮಠದ ಒಬ್ಬ ಭಕ್ತನಾಗಿ ಆಗಮಿಸಿರುವುದಾಗಿಯೂ, ಅದಕ್ಕಾಗಿ ಅವರು ಎದ್ದು ನಿಂತು ಗೌರವ ಸೂಚಿಸುವ ಅವಶ್ಯಕತೆ ಇರಲಿಲ್ಲವೆಂದು ತಿಳಿಸಿದರು. ಅದಕ್ಕೆ ಚಂದ್ರಶೇಖರ ಭಾರತಿ ಸ್ವಾಮಿಗಳು ಮಾನವ ಜನ್ಮಕ್ಕೆ ವಿನಯವೇ ಭೂಷಣ ಎಂದು ಹೇಳಿ ಯಥೋಚಿತ ಸತ್ಕಾರವನ್ನು ಮಾಡಿದರು. ಒಂದು ವಿಶೇಷತೆಯೆಂದರೆ ಚಂದ್ರಶೇಖರ ಭಾರತೀ ಸ್ವಾಮಿಗಳು ಜನ್ಮ ತಳೆದದ್ದು, ಉಪನಯನ ಮಾಡಿಕೊಂಡಿದ್ದು, ಸನ್ಯಾಸ ಸ್ವೀಕರಿಸಿದ್ದು ಕಡೆಗೆ ವಿದೇಹ ಮುಕ್ತಿಯನ್ನು ಹೊಂದಿದ್ದೂ ಸಹ ಭಾನುವಾರದಂದೇ!



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments