ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಳ್ಳಿ ಮಕ್ಕಳಿಗಿಲ್ಲ ಕಂಪ್ಯೂಟರ್ ಶಿಕ್ಷಣ ಭಾಗ್ಯ!

Vishwanath S
Updated On : 13 Dec 2013, 10:57 am

ರಾಜ್ಯ ಸರ್ಕಾರವು ಒಂದು ಕಡೆ ಬಡವರಿಗೆಂದೇ ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿಭಾಗ್ಯ, ಶಾದಿಭಾಗ್ಯ ಎಂಬ ಯೋಜನೆ ಜಾರಿಗೆ ತರುವ ಆತುರದಲ್ಲಿ ಇನ್ನೊಂದಡೆ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಜಾರಿಯಲ್ಲಿದ್ದ ಉಚಿತ ಕಂಪ್ಯೂಟರ್ ಶಿಕ್ಷಣ ಭಾಗ್ಯವನ್ನು ಕಸಿದುಕೊಂಡಿದೆ. ಬಡವರ, ರೈತರ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಅದೇ ಬಡವರ, ರೈತರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಭಾಗ್ಯ ಸ್ಥಗಿತಗೊಂಡರು ಅದನ್ನು ಮುಂದುವರೆಸುವ ಪ್ರಯತ್ನ ಮಾಡಲಿಲ್ಲ, ಸುಮಾರು ಎರಡು ವರ್ಷಗಳೇ ಕಳೆದು ಹೋದವು. ರಾಜ್ಯ ಸರಕಾರದ ಮಾಹಿತಿಸಿಂಧು ಉಚಿತ ಕಂಪ್ಯೂಟರ್ ಶಿಕ್ಷಣ ಹಾಗೂ ಕೇಂದ್ರ / ರಾಜ್ಯ ಸರಕಾರದ ಸಹಕಾರದ ಐ.ಸಿ.ಟಿ ಫೇಸ್-1 ಮತ್ತು ಫೇಸ್-2  ಯೋಜನೆಗಳು ಕೂಡ ಸ್ಥಗಿತಗೊಂಡಿವೆ! ಈ ಯೋಜನೆಗಳು ಗ್ರಾಮೀಣ ಬಡವ, ಕೂಲಿಕಾರ್ಮಿಕರ ಮತ್ತು ರೈತರ ಮಕ್ಕಳಿಗೆ ಉಚಿತವಾಗಿ  ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದವು. ಈಗ ಕಂಪ್ಯೂಟರ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಶಿಕ್ಷಕರು ಬೀದಿಪಾಲಾಗಿದ್ದಾರೆ. ಇದಕ್ಕೆಲ್ಲ ಕಾರಣ ಸರಕಾರ ಈ ಯೋಜನೆಗಳನ್ನು ತಾನೇ ನಿರ್ವಹಿಸದೆ ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಿರುವುದು. ಆದಷ್ಟು ಬೇಗ ಉಚಿತ ಕಂಪ್ಯೂಟರ್ ಶಿಕ್ಷಣ ಭಾಗ್ಯವನ್ನು ಯಾವುದೇ ಖಾಸಗಿ ಕಂಪನಿಗಳಿಗೆ ವಹಿಸದೆ ಸರಕಾರವೇ ನೇರವಾಗಿ ಶಿಕ್ಷಣ ಇಲಾಖೆಯಿಂದಲೇ ಮತ್ತೆ ಪ್ರಾರಂಭಿಸಿ ಲಕ್ಷಾಂತರ ಗ್ರಾಮೀಣ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಹಾಗೂ ಬೀದಿಪಾಲಾದ ಶಿಕ್ಷಕರಿಗೆ ಖಾಯಂ ಉದ್ಯೋಗ  ನೀಡಬೇಕು.                           
-ಎಸ್. ಸೈಯದ್ ಏಜಾಜ್, ಶಿಕಾರಿಪುರ

ಹಂಚಿಕೆಯಲ್ಲೇಕೆ ವಿಳಂಬ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ಸಂಖ್ಯೆ: 1/2011-12 ದಿನಾಂಕ 19.9.2011ರ ಪ್ರಕಾರ, 2011ನೇ ಇಸವಿ ಸಾಲಿನ ನಿವೇಶನ ಹಂಚಿಕೆಗಾಗಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು, ಮುಂಗಡ ಠೇವಣಿ 38000/- ರು.ಗಳೊಡನೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಆಶ್ಚರ್ಯದ ಸಂಗತಿ ಏನೆಂದರೆ ಮೂಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸಂಸ್ಥೆಯು ಎರಡು ವರ್ಷ ಕಳೆದರೂ ಸಹ ಅರ್ಜಿದಾರರಿಗೆ ನಿವೇಶನ ಹಂಚಲು ವಿಳಂಬ ಮಾಡುತ್ತಿದೆ. ನಿವೇಶನ ಆಕಾಂಕ್ಷಿಗಳು ಶೇ. 30ರಷ್ಟು ಮಧ್ಯಮ ವರ್ಗದವರು ಹಾಗೂ ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದಾರೆ. ನಾನಾ ರೀತಿಯಲ್ಲಿ ಸಾಲ ಪಡೆದು ಠೇವಣಿ ಹಣವನ್ನು ಮೂಡಾ ಸಂಸ್ಥೆಗೆ ಪಾವತಿಸಿದ್ದಾರೆ. ಆ ಹಣಕ್ಕೆ ಬಡ್ಡಿಯನ್ನೂ ನೀಡಬೇಕಾಗಿದೆ. ಈ ಸಂಕಷ್ಟದ ನಿವಾರಣೆಗೆ ಮೂಡಾ ನಿವೇಶನವನ್ನು ಆದಷ್ಟು ಬೇಗ ಕೊಡಬೇಕು ಅಥವಾ ಠೇವಣಿ ಹಣವನ್ನು ವಾಪಸ್ಸು ಅರ್ಜಿದಾರರಿಗೆ ಪಾವತಿ ಮಾಡಬೇಕು.
-ಎಸ್. ಚೇತನ್ ಹಾಗೂ ಇತರೇ ಅರ್ಜಿದಾರರು

ಮತದಾರ ಎಚ್ಚೆತ್ತುಕೊಳ್ಳಲಿ
ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಪ್ರಮುಖ ಪಾತ್ರ ಜನತೆಗೆ ಸ್ಪಂದಿಸಬಲ್ಲ ಅಭಿವೃದ್ಧಿಗೆ ಗಮನ ಕೊಡಬಲ್ಲ ಕ್ರಿಯಾಶೀಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಮತದಾರನ ಜವಾಬ್ದಾರಿ. ಆದರೆ 66 ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ವ್ಯವಸ್ಥೆಯನ್ನು ಅಪವಿತ್ರಗೊಳಿಸಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಹಣ-ಹೆಂಡ ಹಂಚಿ ಮತದಾರರ, ಕಾರ್ಯಕರ್ತರ ಚಾರಿತ್ರ್ಯ ಹಾಳು ಮಾಡಿದ್ದಾರೆ. ಮತದಾರ ಐದು ವರ್ಷದ ಭವಿಷ್ಯ ಚಿಂತಿಸದೇ ಕ್ಷಣಿಕ ಚಟಕ್ಕಾಗಿ ಹಣ ಪಡೆದು ಮತಹಾಕುವ ಕೀಳು ಮಟ್ಟಕ್ಕೆ ಇಳಿದಿದ್ದಾನೆ. ಮತದಾರ ಬುಟ್ಟಿ ತಿಂದರೆ ರಾಜಕಾರಣಿ ಬೆಟ್ಟ ತಿನ್ನುತ್ತಿದ್ದಾನೆ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.  ದಿಲ್ಲಿಯ ಮತದಾರ ಆದರ್ಶ ಮಾರ್ಗ ಅನುಸರಿಸಿ ಮತ ಹಾಕಿದ್ದಾನೆ.
-ಅಶೋಕ್ ಕುಮಾರ್ ಅರ್ಕಸಾಲಿ, ಕಲಘಟಗಿ

ಹಾಸ್ಟೆಲ್ ಸಿಬ್ಬಂದಿಯ ವರ್ತನೆ
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಆಡಿದ್ದೇ ಆಟ. ಈ ಮಾತು ನೂರಕ್ಕೆ ನೂರು ಸತ್ಯ ಎಂದರೂ ತಪ್ಪಾಗಲ್ಲ. ಯಾವ ಹಾಸ್ಟೆಲ್‌ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ, ಎಷ್ಟು ಮಕ್ಕಳು ಊಟ, ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಇಲಾಖೆಗೆ ಮಾಹಿತಿ ಸಿಗುತ್ತಿಲ್ಲ. ಜೊತೆಗೆ ಹಾಸ್ಟೆಲ್ ಸಿಬ್ಬಂದಿಗಳು ತಮಗೆ ಮನಬಂದಂತೆ ವರ್ತಿಸುತ್ತಿದ್ದಾರೆ ಹಾಗೂ ಮಕ್ಕಳೊಂದಿಗೆ ಎಲ್ಲ ಒಡನಾಟಗಳನ್ನು ಕಡಿದುಕೊಂಡೇ ತಮ್ಮದೇ ಆಟ ನಡೆಸಿದ್ದಾರೆ. ದಯವಿಟ್ಟು ನಮ್ಮ ಸರ್ಕಾರ ಈ ಬಗ್ಗೆ ಗಮನ ಹರಿಸಲಿ.
-ಶೋಭಾ ಎಂ. ವಗ್ಗರ್, ಉಜಿರೆ


-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement