ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಬಿಟ್ಟರೆ ಬೇರೆ ಯಾರಿದ್ದಾರೆ
ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನ ಸಭೆ ಚುನಾವಣೆ ಫಲಿತಾಂಶದಿಂದ ಧೃತಿಗೆಟ್ಟಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ನೇರವಾಗಿ ರಾಹುಲ ಗಾಂಧಿ ಅವರನ್ನೇ ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿಯಾಗಿ ಪ್ರತಿಬಿಂಬಿಸಲು ನಿರ್ಧರಿಸಿ ಹೊಸ ಹಾದಿಯನ್ನೇ ತುಳಿಯಲಿದೆ.
ಇದುವರೆಗೂ ಕಾಂಗ್ರೆಸ್ಸಿಗೆ ಪ್ರಧಾನಿ ಪೀಠದ ಅಭ್ಯರ್ಥಿಯನ್ನು ಚುನಾವಣೆಗೆ ಮುನ್ನ ಪ್ರಕಟಿಸುವ ಅಭ್ಯಾಸವೂ ಇರಲಿಲ್ಲ, ಅಗತ್ಯವೂ ಇರಲಿಲ್ಲ. ನೆಹರೂ, ಇಂದಿರಾಗಾಂಧಿ ಅವರು ಸಹಜವಾಗಿಯೇ ಆ ಪೀಠದ ಅಭ್ಯರ್ಥಿಗಳೆಂದು ಜನರೇ ನಿರ್ಧರಿಸಿದ್ದ ವಾತಾವರಣ ಇತ್ತು. ಆಗೆಲ್ಲ ಪ್ರತಿಪಕ್ಷಗಳಿಗೂ ಪ್ರಧಾನಿ ಪೀಠದ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಹೆಸರಿಸುವ ಅಗತ್ಯವೂ ಇರಲಿಲ್ಲ. ಅಟಲ ಬಿಹಾರಿ ವಾಜಪೇಯಿ ಅವರೇ ಮೊದಲು ಬಿಜೆಪಿಯ ಪರವಾಗಿ 'ಈ ಬಾರಿ ಬಿಜೆಪಿ-ವಾಜಪೇಯಿ ಪ್ರಧಾನಿ' ಎನ್ನುವ ಘೋಷಣೆಗೆ ಸ್ಫೂರ್ತಿಯಾಗಿದ್ದು. ಆಗ ಕಾಂಗ್ರೆಸ್ ತನ್ನ ಸಂಪ್ರದಾಯವಲ್ಲ ಅದು ಎಂದು ಹೇಳಿ ಸುಮ್ಮನಾಗಿತ್ತು.
ಈಗ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪೀಠಕ್ಕೆ ತನ್ನ ಅಭ್ಯರ್ಥಿ ಎಂದು ಬಿಜೆಪಿ ಪ್ರಕಟಿಸಿದ ಕೂಡಲೇ ಇಡೀ ದೇಶದಲ್ಲಿ ರಾಜಕೀಯ ವಾತಾವರಣದಲ್ಲಿ ಕಾವೇರಿದಾಗ ಕಾಂಗ್ರೆಸ್ ತನ್ನ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೂ ಉತ್ತರ ಕೊಡಲೇ ಬೇಕಾಗಿತ್ತು. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಒಂದು ಅವಧಿಯನ್ನು ಮುಗಿಸಿ, ಎರಡನೇ ಅವಧಿಯ ಕೊನೆಯ ಹಂತದಲ್ಲಿ ಇದ್ದರೂ, ಕಾಂಗ್ರೆಸ್ ಮೋದಿಯವರ ಸವಾಲನ್ನು ಎದುರಿಸಲು ತಲೆಮಾರಿನ ಬದಲಾವಣೆಯನ್ನು ತರಲೇಬೇಕಾದ ಅಗತ್ಯವನ್ನು ಮನಗಂಡಿತ್ತು. ಈಗಿನ ಕಾಂಗ್ರೆಸ್ನಲ್ಲಿ ರಾಹುಲ ಗಾಂಧಿ ಅವರಲ್ಲದೇ ಬೇರೆ ಯಾರಿದ್ದಾರೆ ಆ ತಲೆಮಾರಿನ ಬದಲಾವಣೆಯನ್ನು ಪ್ರದರ್ಶಿಸಬಲ್ಲ ವ್ಯಕ್ತಿ?
ಕಾಂಗ್ರೆಸ್ಸಿಗೆ ಈಗ ರಾಹುಲ ಗಾಂಧಿ ನಾಯಕತ್ವ ಅಗತ್ಯವೋ ಅಲ್ಲವೋ ಎನ್ನುವುದಕ್ಕಿಂತ ಹೆಚ್ಚಾಗಿ, ರಾಹುಲ ಗಾಂಧಿ ಅವರಿಗೆ ಪ್ರಧಾನಿ ಪೀಠದ ಅಭ್ಯರ್ಥಿ ಎನ್ನುವ ಪ್ರಭಾವಳಿಯನ್ನು ಹಾಕಬೇಕಾದ ಅವಶ್ಯಕತೆ ಕಂಡುಬಂದಿದ್ದು ನಿಜ. ಕೆಲವೇ ದಿನಗಳ ಹಿಂದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯಾರೂ ಕೇಳದೇನೇ, ಜನವರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದೆಂದು ಹೇಳಿದಾಗಲೇ, ರಾಹುಲ ಗಾಂಧಿ ಬಿಟ್ಟು ಬೇರೆ ಯಾವ ಹೆಸರೂ ಮುಂದೆ ಬಾರದಂತೆ ನೋಡಿಕೊಳ್ಳಲು ಅಂತರಂಗದಲ್ಲಿ ಎಚ್ಚರಿಕೆಯನ್ನು ವಹಿಸಿರಲೇಬೇಕು. ಎಐಸಿಸಿ ಅಧಿವೇಶನವನ್ನು ಜನವರಿ ಹದಿನೇಳಕ್ಕೆ, ಅಂದರೆ ಸಂಕ್ರಮಣ ಕಳೆದ ಅನಂತರದ ದಿನ ನಡೆಸುವ ನಿರ್ಧಾರದ ಹಿಂದೆ ಇರುವ ಶಕ್ತಿ ಯಾವುದು ಎನ್ನುವುದನ್ನು ಊಹಿಸುವುದು ಕಷ್ಟವೇನೂ ಇಲ್ಲ. ರಾಹುಲ ಗಾಂಧಿ ವರ್ಸಸ್ ನರೇಂದ್ರ ಮೋದಿ ನಡುವಣ ಪ್ರಚಾರ ಸಮರದ ಆರಂಭ ಈಗಾಗಲೇ ಆರಂಭವಾಗಿದೆ. ಅದು ಮುಂದೆ ಯಾವ ಸ್ವರೂಪವನ್ನು ಪಡೆದುಕೊಳ್ಳುವುದೋ ಕಾದುನೋಡಬೇಕು.