ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್.ಆನಂದರಾಮಶಾಸ್ತ್ರೀ ಪತ್ರ ಕಳುಹಿಸಿದ್ದಾರೆ. "ನೋಟಾ'ದ ಮೇಲೆ ನಿಮ್ಮ ಬರಹಗಾರರು ಬೀರಿರುವ ನೋಟ ದೋಷಪೂರಿತವಾಗಿದೆಯೆಂದು ನೀಟಾಗಿ ಹೇಳಬಲ್ಲೆ. 'ಛತ್ತೀಸ್ಗಡದಲ್ಲಿ ಅತಿ ಹೆಚ್ಚು ಅಂದರೆ ಶೇ.3, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ತಲಾ ಶೇ.2 ಹಾಗೂ ದೆಹಲಿಯಲ್ಲಿ ಶೇ.1ರಷ್ಟು ನೋಟಾ ಮತಗಳನ್ನು ಚಲಾಯಿಸಲಾಗಿದೆ.' ಎಂದು ಡಿ.9ರ ಸಂಚಿಕೆಯಲ್ಲಿ ವರದಿಯಾಗಿದೆ. ರಾಜಸ್ಥಾನದಲ್ಲಿ ಶೇ.1.92 ಮತ್ತು ದೆಹಲಿಯಲ್ಲಿ ಶೇ.1ಕ್ಕಿಂತ ಕಡಿಮೆ 'ನೋಟಾ'ಗಳು ಚಲಾವಣೆಗೊಂಡಿವೆ. ನಿಮ್ಮ ಪತ್ರಿಕೆಯಲ್ಲಿ ಎಲ್ಲವನ್ನೂ ರೌಂಡ್ ಫಿಗರ್ ಮಾಡಿದ್ದಾರೆ ಅಥವಾ ಅವರಿಗೆ ಅದೇ ರೀತಿ ಮಾಹಿತಿ ದೊರೆತಿದೆ, ಇರಲಿ. ಆದರೆ ಒಟ್ಟು 'ಶೇ.8ರಷ್ಟು ನೋಟಾ' ಮತಗಳು ಚಲಾವಣೆಯಾಗಿದೆಯೆಂದು ವರದಿಯ ಶೀರ್ಷಿಕೆಯಲ್ಲಿ ಹಾಗೂ ವರದಿಯಲ್ಲಿ ಎರಡು ಕಡೆ ಬರೆಯಲಾಗಿದೆ. ಶೇ.3,2,2,1 ಈ ಪ್ರಮಾಣದಲ್ಲಿ ನೋಟಾ ಚಲಾವಣೆಯಾಗಿರುವಾಗ, ಒಟ್ಟು ಪ್ರಮಾಣವು ಶೇ.8 ಆಗುವುದು ಹೇಗೆ ಸ್ವಾಮಿ? ಅದು ಶೇ.1.8 ಇರಬಹುದೇನೋ? ಅಂದಹಾಗೆ ಇದೇ ವರದಿಯಲ್ಲಿ ನೋಟಾವನ್ನು 'ನನ್ ಆಫ್ ಅಬೊವ್' ಎಂದು ವಿಸ್ತರಿಸಲಾಗಿದೆ. 'ನನ್ ಆಫ್ ದ ಅಬೊವ್' ಎಂಬುದು ಸರಿಯಾದ ವಿಸ್ತಾರ ರೂಪ. 'ನನ್ ಆಫ್ ಅಬೊವ್' ಎನ್ನುವುದು ನೋಟಾ ಆಗುವುದಿಲ್ಲ, ಬದಲಾಗಿ ನೋಆ(ಎನ್ಒಎ) ಆಗುತ್ತದೆ. ಇನ್ನು ಅಬೊವ್ಗಿಂತ ಅಬವ್ ಸರಿಯಾದ ಉಚ್ಚಾರ. ಇನ್ನು ಇದೇ ವರದಿಯಲ್ಲಿ 'ಮೌಲ್ಯಯುಕ್ತ' ಎಂದು ಬರೆಯಲಾಗಿದೆ. ಅದು 'ಮೌಲ್ಯಯುತ' ಎಂದಾಗಬೇಕು.'
'ಡಿ.10ರ 'ಬೈಟು ಕಾಫಿ'ಯಲ್ಲಿ ತ.ರಾ.ಸು ಅವರ 'ಫ್ಲ್ಯಾಟ್'ಅನ್ನು(ಶೀರ್ಷಿಕೆಯಲ್ಲಿ) 'ಪ್ಲಾಟ್' ಮಾಡುವ ಮೂಲಕ ಕಟ್ಟಡವನ್ನೇ ಸಪಾಟು(ಫ್ಲ್ಯಾಟ್) ಆಗಿಸಿದ್ದೀರಿ' ಎಂದಿದ್ದಾರೆ.
ನೋಟಾ ಸರಾಸರಿ ಪ್ರಮಾಣವು ಶೇ.2ರಷ್ಟು ಎಂದಾಗಬೇಕಿತ್ತು. ಆದರೆ ನಾಲ್ಕು ರಾಜ್ಯಗಳ ನೋಟಾವನ್ನು ಸೇರಿಸಿ ಶೇ.8 ಎಂದು ತಪ್ಪಾಗಿ ಬರೆಯಲಾಗಿದೆ.
ಡಿ.7ರ 'ಬೈಟು ಕಾಫಿ'ಯಲ್ಲಿನ ತಪ್ಪಿನ ಬಗ್ಗೆ ಇಬ್ಬರು ಓದುಗರು ಗಮನಕ್ಕೆ ತಂದಿದ್ದಾರೆ. ಶಿವಮೊಗ್ಗದಿಂದ ಸರೋಜಾ ಬೀಬಿ ಹಾಗೂ ಬೆಂಗಳೂರಿನಿಂದ ತಂತ್ರಾಡಿ ಸುಬ್ರಹ್ಮಣ್ಯ ಬಾಯರ್ ಅವರು ಪತ್ರ ಬರೆದಿದ್ದಾರೆ. 'ಮಾಹಿತಿ.ಕಾಂನಲ್ಲಿ 'ಕಲ್ಲಂಗಡಿ ಹಣ್ಣು' ಎಂದು ಶೀರ್ಷಿಕೆಯಿದೆ, ಆದರೆ ಹಲಸಿನ ಹಣ್ಣಿನ ವಿವರವಿದೆ. ಲೆಕ್ಕ ರಾಜ ರಾಣಿ ಅಂಕಣದಲ್ಲಿ ಅವರೇಕಾಯಿ ಎಂದು ಶೀರ್ಷಿಕೆ ನೀಡಿ ಹಲಸಿನ ಬಗ್ಗೆ ವಿವರ ನೀಡಲಾಗಿದೆ. ಒಟ್ಟಿನಲ್ಲಿ ಬೈಟು ಕಾಫಿಯಲ್ಲಿ ಹಲಸು, ಕಲ್ಲಂಗಡಿ, ಅವರೇಕಾಯಿ ಮಿಕ್ಸ್ ಮಾಡಿ ಹೊಸ ರುಚಿ ತೋರಿಸಿದ್ದೀರಿ' ಎಂದು ಹೇಳಿದ್ದಾರೆ.
ಇದು ಪುಟ ನಿರ್ಮಿಸುವಾಗ ಆದ ಪ್ರಮಾದವಾಗಿದೆ. ಹಿಂದಿನ ದಿನದ ಪುಟದ ಶೀರ್ಷಿಕೆಯನ್ನು ಹಾಗೆಯೇ ಉಳಿಸಿಕೊಂಡು ವಿವರಣೆ ಮಾತ್ರ ಬದಲಿಸಲಾಗಿದೆ. ಡಿ.5ರ ಸಂಚಿಕೆಯಲ್ಲೂ ಇದೇ ತಪ್ಪಾಗಿದೆ.
-ವಿಶ್ವೇಶ್ವರ ಭಟ್