ನಾನು ಈ ಬಳೆಗಳನ್ನು ಒಡೆದರೆ?
ಲಲಿತಾ ಶಾಸ್ತ್ರಿಯವರು ತಮ್ಮ ಅತ್ತೆಯವರ ಆದೇಶದಂತೆ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿಗಳಿಗೆ ತಮ್ಮ ಪತ್ನಿಯೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಬೇಕೆಂಬ ಆಸೆಯಿದ್ದರೂ, "ಈ ಚಳುವಳಿ, ರಾಜಕೀಯ ಎಲ್ಲವೂ ನಿನಗೇ ಇರಲಿ" ಎಂದು ಅವರ ತಾಯಿ ರೇಗಿದ್ದರು. ಒಮ್ಮೆ ಕಮಲಾ ನೆಹರು ಅವರು ಲಾಲ್ ಬಹಾದ್ದೂರರ ಬಳಿ ಬಂದು "ನಿಮ್ಮ ಶ್ರೀಮತಿಯನ್ನೇಕೆ ಸತ್ಯಾಗ್ರಹಕ್ಕೆ ಹೊರಡಿಸುವುದಿಲ್ಲ?" ಎಂದು ಕೇಳಿದರು. ನಂತರ ಕಮಲಾ ನೆಹರೂರವರು ಅಮ್ಮಾಜಿಯ ಬಳಿ ಬಂದು ಅವರ ಅನುಮತಿ ಪಡೆದು ಲಲಿತಾ ಶಾಸ್ತ್ರಿಯವರನ್ನು ಸತ್ಯಾಗ್ರಹ ಮಾಡಲು ಕರೆದೊಯ್ದರು. ಅವರು ಹೊರಡುವ ಮುನ್ನ "ನೀವಲ್ಲಿ ಏನು ಮಾಡಲಿದ್ದೀರಿ?" ಎಂದು ಶಾಸ್ತ್ರಿಗಳು ಕಮಲಾ ನೆಹರು ಅವರಿಗೆ ಕೇಳಿದರು. "ಜವಳಿ ಅಂಗಡಿಗಳ ಮುಂದೆನಿಂತು ವಿದೇಶಿ ವಸ್ತ್ರಗಳನ್ನು ಕೊಳ್ಳಬಾರದೆಂದು ನಮ್ರವಾಗಿ ನಿವೇದನೆ ಮಾಡಿ ಜನರ ಮನವೊಲಿಸುವುದು ನಮ್ಮ ಉದ್ದೇಶ" ಎಂದು ಉತ್ತರವಿತ್ತರು ಕಮಲಾ ನೆಹರು. ಬೆಳಿಗ್ಗೆ ಹನ್ನೊಂದರಿಂದ ಎರಡು ಗಂಟೆಯವರೆಗೆ ಆ ರೀತಿ ಪಿಕೆಟಿಂಗ್ ನಡೆಸಿ ವಾಪಸ್ಸು ಬರಲು ತಿಳಿಸಿದರು. ಅದರಂತೆ ಶಾಸ್ತ್ರಿಗಳ ಗೆಳೆಯ ಗೌತಮ್ ಅವರ ಪತ್ನಿ, ಮತ್ತಿತರ ಮಹಿಳೆಯರೊಡನೆ ಲಲಿತಾ ಅವರೂ ಕೂಡ ಒಂದು ಅಂಗಡಿಯ ಮುಂದೆ ನಿಂತು ವಿದೇಶಿ ವಸ್ತ್ರವನ್ನು ಬಹಿಷ್ಕರಿಸಲು ವಿನಂತಿ ಮಾಡುತ್ತಿದ್ದರು. ಆ ಸತ್ಯಾಗ್ರಹದ ನಾಲ್ಕನೆಯ ದಿನ ಲಲಿತಾ ಶಾಸ್ತ್ರಿಯವರು ನಿಂತಿದ್ದ ಅಂಗಡಿಯೊಳಗೆ ಮಹಾಶಯರೊಬ್ಬರು ಮದುವೆಗೆ ಜವಳಿ ಖರೀದಿಸಲು ಬಂದಿದ್ದರು. ಸುಮಾರು ಆರುನೂರು ರುಪಾಯಿಗಳಷ್ಟು ಜವಳಿ ಖರೀದಿಮಾಡಿ ಹೊರಡಲನುವಾದಾಗ ಲಲಿತಾ ಶಾಸ್ತ್ರಿಯವರು ಅಂಗಡಿಯ ಒಳಹೋಗಿ ಅದನ್ನು ತಡೆಯಲೆತ್ನಿಸಿದರು. ಅದಕ್ಕೆ ಅಂಗಡಿಯವನು ಕೋಪದಿಂದ, "ವಿದೇಶಿ ಬಟ್ಟೆಗಳನ್ನು ಕೊಳ್ಳಬಾರದೆಂದು ನೀವು ಅಡ್ಡಿ ಮಾಡುತ್ತಿರುವಿರಿ. ಆದರೆ ನೀವೇ ವಿದೇಶಿ ಬಳೆಗಳನ್ನು ತೊಟ್ಟಿದ್ದೀರಲ್ಲ?" ಎಂದು ಹೇಳಿದ. ಲಲಿತಾ ಶಾಸ್ತ್ರಿಯವರಿಗೆ ಕಸಿವಿಸಿಯಾಯಿತು. ತಾವು ತೊಟ್ಟ ಬಳೆಗಳು ವಿದೇಶೀ ಉತ್ಪನ್ನ ಎಂಬುದು ಅವರಿಗೆ ತಿಳಿದಿರಲಿಲ್ಲ. ಆಗ ಲಲಿತಾ ಶಾಸ್ತ್ರಿಯವರು ಬಳೆಗಳನ್ನು ಬಿಚ್ಚಿ, ತಾವು ಒಂದು ವೇಳೆ ಆ ಬಳೆಗಳನ್ನು ಒಡೆದು ಹಾಕಿದರೆ, ಆತನೂ ತನ್ನ ವಿದೇಶೀ ವಾಚನ್ನು ಒಡೆದು ಹಾಕಬಲನೇ ಎಂದು ಪ್ರಶ್ನಿಸಿದರು. ಅದಕ್ಕೆ ಆತ ಸಮ್ಮತಿಸಿದ. ಕೂಡಲೇ ಅವರು ತಮ್ಮ ಬಳೆಗಳನ್ನು ಒಡೆದು ಹಾಕಿದರು. ಆದರೆ ಅಂಗಡಿಯವನು ತನ್ನ ಮಾತಿಗೆ ತಪ್ಪಿದನು. ಇದನ್ನು ಗಮನಿಸುತ್ತಿದ್ದ 'ವಿದೇಶಿ ಬಟ್ಟೆಗಳನ್ನು ಕೊಂಡ' ಆ ಮಹಾಶಯ, ಅಂಗಡಿಯವನು ಸುಖಾಸುಮ್ಮನೆ ಬಳೆಗಳನ್ನು ಒಡೆಸಿ ಹಾಕಿದ್ದಲ್ಲದೆ ಮಾತು ತಪ್ಪಿದ್ದರಿಂದ ಕೋಪಗೊಂಡು ತಾನು ಕೊಂಡ ಬಟ್ಟೆಗಳಿಗೆ ಬೆಂಕಿ ಹಚ್ಚಿದ! ಅಷ್ಟೇ ಅಲ್ಲದೆ ಅಂಗಡಿಗೂ ಬೆಂಕಿ ಇಟ್ಟು ಚಳವಳಿಗೆ ತನ್ನ ಬೆಂಬಲ ಸೂಚಿಸಿದ!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.