ಅನಂತಾಚಾರ್ಯರ ಕರುಣಾಮೃತ
ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಪ್ರತಿಪಾದಕರು. ಅವರು ನಾಡಿನಾದ್ಯಂತ ತಿರುಗಿ ತಮ್ಮ ಕೃತಿ ಮತ್ತು ಉಪನ್ಯಾಸಗಳಿಂದ ಜನರ ಮನಸ್ಸನ್ನು ಸೇಳೆದು ಅನೇಕ ಶಿಷ್ಯರನ್ನು ಪಡೆದಿದ್ದರು. ಅಂತಹವರಲ್ಲಿ ಅವರ ಅಂತರಂಗ ಶಿಷ್ಯರಾಗಿದ್ದವರು ಕಿರಂಗೂರಿನ ಅನಂತಾಚಾರ್ಯರು. ಅವರು ಮೂಲ ಕನ್ನಡನಾಡಿನವರು.
ಶ್ರೀರಂಗಪಟ್ಟಣದ ಬಳಿ ಜನಿಸಿದ ಆಚಾರ್ಯರು ರಾಮಾನುಜಾಚಾರ್ಯರ ಶಿಷ್ಯತ್ವವನ್ನು ಪಡೆಯಲೆಂದೇ ಶ್ರೀರಂಗಕ್ಕೆ ಹೋಗಿದ್ದರು. ಅಲ್ಲಿ ಅವರ ಸೇವೆ ಮಾಡುತ್ತಾ, ಅವರ ಬಾಯಿಂದ ಆಳ್ವಾರರ ದಶ ಪಾಶುರಗಳಿಗೆ ವ್ಯಾಖ್ಯಾನವನ್ನು ಮಾಡುತ್ತಾ, ತಿರುಪತಿಯ ವೈಭವವನ್ನು ಹೇಳಿದ್ದು ಕೇಳಿ ಅವರಿಗೂ ಸಹ ತಿರುಪತಿಗೆ ಹೋಗಿಬರಬೇಕೆಂಬ ಹಂಬಲವಾಯಿತು. ನಂತರ ಗುರುಗಳ ಅನುಮತಿ ಪಡೆದು ತಿರುಪತಿಗೆ ಹೊರಟೇ ಬಿಟ್ಟರು. ಅವರಿಗೆ ಶ್ರೀನಿವಾಸನ ಬಗ್ಗೆ ಅದೆಷ್ಟು ಭಕ್ತಿಯಿತ್ತೆಂದರೆ, ಅವರಿಗೆ ಪರಮಾತ್ಮನ ಸಾಕ್ಷಾತ್ಕಾರವಾಗಿತ್ತು ಎಂದು ಹೇಳಲಾಗುತ್ತದೆ. ಅನೇಕ ತನಿಯನ್ಗಳನ್ನು ರಚಿಸಿ ಪ್ರಸಿದ್ಧರಾಗಿದ್ದರು. ಅಲ್ಲದೆ, ಶ್ರೀ ರಾಮಾನುಜ ಚತು-ಶ್ಲೋಕಿ, ಶ್ರೀ ಗೋದಾ ಚತು-ಶ್ಲೋಕಿ, ತನಿಯನ್ಗಳು, ಮತ್ತು ಶ್ರೀ ವೆಂಕಟಾಚಲ ಇತಿಹಾಸ ಮಾಲಾ ಎಂಬ ನಾಲ್ಕು ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ. ರಾಮಾನುಜಾಚಾರ್ಯರ ದೇಹಾಂತ್ಯವಾದ ಮೇಲೆ ಅವರ ವಿಗ್ರಹವನ್ನು ತಿರುಪತಿ ದೇವಾಲಯದಲ್ಲಿ ಸ್ಥಾಪಿಸಿದವರೂ ಅನಂತಾಚಾರ್ಯರೇ. ಒಮ್ಮೆ ಇಂಥ ಭಗವದ್ಭಕ್ತ ಅನಂತಾಚಾರ್ಯರು ತಿರುಪತಿಯಿಂದ ಹೊರಟು ಕ್ಷೇತ್ರ ಯಾತ್ರೆ ಮಾಡುತ್ತಾ ಕೇರಳದ ಕರ್ಪೂರಕುಲೈ ಎಂಬ ಕಾಲುವೆಯ ಹತ್ತಿರ ವಿಶ್ರಮಿಸಿದರು. ಸ್ನಾನಾಹ್ನಿಕವೆಲ್ಲ ಆದಮೇಲೆ ತಾವು ತಂದಿದ್ದ ಬುತ್ತಿಯನ್ನು ಬಿಚ್ಚಿದರು. ಅದರಲ್ಲಿ ತಿರುಪತಿಯ ಪ್ರಾಸಾದವಿತ್ತು. ಆದರೆ ಪ್ರಸಾದದ ಮೇಲೆಲ್ಲಾ ಇರುವೆಗಳು ಮುತ್ತಿಕೊಂಡಿದ್ದವು. ಅವುಗಳನ್ನು ನೋಡಿ ಅವರಿಗೆ ನಿರಾಸೆಯಾಗುವ ಬದಲು "ತಿರುಮಲೆಯ ಆ ನಿತ್ಯ ಸೂರಿಗಳು ಪ್ರತಿನಿತ್ಯ ತಿರುಪತಿಯಲ್ಲಿ ಶ್ರೀನಿವಾಸನ ಸನ್ನಿಧಿಯಲ್ಲಿರುತ್ತಿದ್ದವು. ಆದರೀಗ ಅವು ತಮ್ಮೊಡನೆ ಬಹುದೂರ ಬಂದಿವೆ. ಆ ಇರುವೆಗಳಿಗೆ ತಿರುಪತಿಯಲ್ಲಿರುವ ಸೌಭಾಗ್ಯ ತಪ್ಪಿತಲ್ಲಾ" ಎಂದು ಆಲೋಚಿಸಿ, ಮತ್ತೆ ತಿರುಪತಿಗೆ ವಾಪಸ್ಸು ಹೋಗಿ ಅವುಗಳನ್ನು ಬೆಟ್ಟದ ಮೇಲೆ ಬಿಟ್ಟುಬಂದರು!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.