ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಏಟಿಗೆ ಪ್ರತಿ ಏಟಾಯಿತು:ಈಗ ಗೌರವಯುತ ಸಂಧಾನ

Vishwanath S
Updated On : 19 Dec 2013, 11:29 am

ಅಮೆರಿಕದ ಭಾರತೀಯ ದೂತಾವಾಸದಲ್ಲಿ ಡೆಪ್ಯೂಟಿ ಕಾನ್ಸಲ್ ಆಗಿರುವ ದೇವಯಾನಿ ಖೊಬ್ರಗಡೆ ಅವರನ್ನು ಅಲ್ಲಿನ ಪೊಲೀಸರು ನಡೆಸಿಕೊಂಡ ಕೆಟ್ಟ ರೀತಿಯನ್ನು ಪ್ರತಿಭಟಿಸಿ, ಭಾರತ ಸರ್ಕಾರ, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಮೆರಿಕದ ದೆಹಲಿಯ ದೂತಾವಾಸದ ಅಧಿಕಾರಿಗಳ ವಿರುದ್ಧ ದಿಟ್ಟ ಕ್ರಮ ನಿರೀಕ್ಷಿತವಾದ ಪರಿಣಾಮವನ್ನೇ ಬೀರಿರುವುದು ದೇಶದ ಮರ್ಯಾದೆಯನ್ನು ಕಾಪಾಡಿದೆ.
ನಿಜ. ಈಗಲೂ ಅಮೆರಿಕದಲ್ಲಿ, ಪ್ರಾಸಿಕ್ಯೂಷನ್ ವಿಭಾಗದ ಮುಖ್ಯಸ್ಥರು, ದೇವಯಾನಿ ಅವರಿಗೆ ಬಹಿರಂಗವಾಗಿ ಕೈಕೋಳ ತೊಡಿಸಿದ್ದು ಹಾಗೂ ನಗ್ನ ಅವಸ್ಥೆಯಲ್ಲಿ ಅವರನ್ನು "ಪರಿಶೀಲನೆಗೆ ಒಳಪಡಿಸಿದ್ದು" ಅತಿರೇಕದ ವರದಿಗಳೆನ್ನುತ್ತಿದ್ದಾರೆ. ಆ ವರ್ತನೆಯನ್ನು ನಿರಾಕರಿಸುತ್ತಿದ್ದಾರೆ. ಅದು ಈ ಅಂತಾರಾಷ್ಟ್ರೀಯ ವಿವಾದದ ಒಂದು ಮುಖವಾದರೆ, ಅಮೆರಿಕದ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ವ್ಯವಹಾರಗಳ ವಿಭಾಗದ ಸಚಿವ ಸ್ಥಾನದಲ್ಲಿರುವ ಜಾನ್ ಕೆರ್ರಿ ಅವರು ದೇವಯಾನಿ ಅವರನ್ನು ನಡೆಸಿಕೊಂಡ ಕೆಲವು ಪೊಲೀಸರ ವರ್ತನೆ ಕುರಿತು ವಿಷಾದ ಸೂಚಿಸಿದ್ದು ಹಾಗೂ ಅಮೆರಿಕದಲ್ಲೇ ಪ್ರಕಟಿತ ಜನಾಭಿಪ್ರಾಯದ ಧ್ವನಿಯನ್ನು ಗಮನಿಸಿ, ಉಭಯ ರಾಷ್ಟ್ರಗಳೂ ಇಂತಹ ವಿಷಾದನೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯ ಎರಡೂ ದೇಶಗಳ ಜವಾಬ್ದಾರಿಯುತ ವಲಯಗಳಲ್ಲಿ ಮೂಡಿರುವುದು ಸ್ವಾಗತಾರ್ಹವೇ.
ಸಂಸತ್ತಿನಲ್ಲೇ ಈ ವಿಚಾರವನ್ನು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಸ್ಪಷ್ಟಪಡಿಸಿದ್ದಾರೆ. ಅವರೇನೂ ಭಾರತದ ಗಡಸು ನಿಲವನ್ನು ಅಳ್ಳಕಗೊಳಿಸಿಲ್ಲ. ದೇವಯಾನಿ ಅವರನ್ನು ಗೌರವ- ಪ್ರತಿಷ್ಠೆ- ಮರ್ಯಾದೆಗೆ ಕುಂದುಬಾರದಂತೆ ಸ್ವದೇಶಕ್ಕೆ ಕರೆದು ತರುವುದು ಈಗ ದೇಶದ ಮೊದಲ ಕರ್ತವ್ಯ. ಅನಂತರ ಅಮೆರಿಕದ ಜತೆ ಇತರ ಸಂಬಂಧಗಳನ್ನು ಕುರಿತಂತೆ ಮಾತುಕತೆ ಸಾಧ್ಯ ಎಂದಿದ್ದಾರೆ. ಭಾರತದ ಮಟ್ಟಿಗೆ ಅದೇ ಸೂಕ್ತ ನಿಲವು . ದೇವಯಾನಿ ಅವರ ವಿರುದ್ಧ ಯಾವುದೋ ಕಾರಣಕ್ಕಾಗಿ ಪಿತೂರಿ ನಡೆದಿದ್ದರ ಸುಳಿವು ಸಿಕ್ಕಿರುವುದು ನಿಜ. ಅದರ ಮೂಲವನ್ನು ಅಮೆರಿಕದ ಅಧಿಕಾರಿಗಳೇ ಹುಡುಕಬೇಕು. ಅಮೆರಿಕದ ನೆಲದಲ್ಲಿ ದೇವಯಾನಿ ಅವರಿಗೆ ಆದ "ಅಪಮಾನ", ಪ್ರತಿಭಟನೆಗೆ ಅರ್ಹವಾದ ಪ್ರಕರಣವೇ. ಅದನ್ನು ದೇಶಕ್ಕೆ ದೇಶವೇ ತಿಳಿದುಕೊಂಡಿದೆ ಎನ್ನುವುದರ ಪ್ರದರ್ಶನವಾಗಿದೆ. ಪ್ರಧಾನಿ ಮನಮೋಹನ ಸಿಂಗ್, ಸಚಿವ ಸಲ್ಮಾನ ಖುರ್ಷೀದ್ ಇಬ್ಬರೂ ಸಾಕಷ್ಟು ಗಡಸು ನಿಲವನ್ನೇ ತಾಳಿದ್ದಾರೆ. ಇದೆಲ್ಲ ಆದ ಅನಂತರ ಕ್ಷಮೆ ಕೋರಿಕೆ ಅಥವಾ ವಿಷಾದ ಸೂಚನೆ (ಇಂಗ್ಲಿಷಿನಲ್ಲಿ ನಿಘಂಟಿನಲ್ಲಿ ಎರಡೂ ಸಮಾನ ಧರ್ಮ ಸೂಚಕ ಪದಗಳೇ) ಕುರಿತ ಹಟಮಾರಿತನದ ವಿವಾದ ಬಹುಕಾಲ ನಡೆಯಬಾರದು. ಅಮೆರಿಕದ ಕೆಲವರ ಏಟಿಗೆ ಭಾರತ ಪ್ರತಿ ಏಟನ್ನು ಕೊಟ್ಟಾಗಿದೆ. ನಿಜ. ಇದು ಅಪರೂಪದಲ್ಲಿ ಅಪರೂಪವೆನ್ನುವಂತಹ ವರ್ತನೆ. ಅದರಿಂದ ಅನುಕೂಲಕರವಾದ ಪ್ರತಿಕ್ರಿಯೆಯನ್ನು ಮೂಡಿಸಿದ್ದೂ ಆಗಿದೆ.
ಇನ್ನು ಉಳಿದಿರುವುದು ದೇವಯಾನಿ ಅವರಿಗೆ, ಅವರ ಸ್ಥಾನ-ಮಾನಕ್ಕೆ ತಕ್ಕಂತೆ ಸಕಲ ಮರ್ಯಾದೆಯಿಂದ ಭಾರತಕ್ಕೆ ಹಿಂತಿರುಗುವ ವ್ಯವಸ್ಥೆ. ಅನಂತರ, ಉಭಯ ರಾಷ್ಟ್ರಗಳ ರಾಜತಾಂತ್ರಿಕರು, ಆಡಳಿತಗಾರರ ನಡುವೆ ಗೌರವಯುತವಾದ ಸನ್ನಿವೇಶದಲ್ಲಿ ಮಾತುಕತೆ ಮುಂದುವರಿಯಲು ಅಡ್ಡಿ ಇಲ್ಲ. ದೇವಯಾನಿ ಅವರ ಗೌರವ- ಪ್ರತಿಷ್ಠೆ ಉಳಿಯಬೇಕು. ಅದರ ಜತೆಯಲ್ಲೇ ಭಾರತೀಯ ಗಣರಾಜ್ಯದ ಹಿರಿಮೆಯೂ ಶೋಭಾಯಮಾನವಾಗಿ ಪ್ರಕಾಶಿಸಬೇಕು. ಅದು ಮುಖ್ಯ. ದೇವಯಾನಿ ಅವರಿಗೆ ಆದ ಅನುಭವ ಮುಂದೆ ಯಾರಿಗೂ ಆಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement