ಹೊಸ ಮರಳು ನೀತಿ
ರಾಜ್ಯ ಸರ್ಕಾರ ಹಿಂದೆಯೇ ಪ್ರಕಟಿಸಿದ್ದಂತೆ, ಹೊಸ ಮರಳು ನೀತಿಯ ನಿಯಮಾವಳಿಯನ್ನು ಪ್ರಕಟಿಸಿ, ತತ್ಕ್ಷಣದಿಂದಲೇ ಅದನ್ನು ಜಾರಿಗೆ ಕೊಟ್ಟಿದ್ದು ಸ್ವಾಗತಾರ್ಹ. ಮರಳು, ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಅತ್ಯಗತ್ಯವಾಗಿ ಬೇಕಾದ ವಸ್ತುಗಳಲ್ಲಿ ಒಂದು. ಈಚೆಗೆ ಮರಳಿನ ಲಭ್ಯತೆಯ ಪ್ರಮಾಣವೂ ಕಡಿಮೆಯಾಗಿ, ಆ ವ್ಯವಹಾರದಲ್ಲಿ ವಿಪರೀತವಾದ ಅವ್ಯವಹಾರ ಕಾಣಿಸಿಕೊಂಡು, ಬೆಲೆ ಮುಗಿಲನ್ನೇ ಚುಂಬಿಸಲು ಹೊರಟಿತ್ತು. ಹೊಸ ಮರಳು ನೀತಿಯಲ್ಲಿ ಮರಳಿನ ನಿಕ್ಷೇಪಗಳನ್ನು ಗುರ್ತಿಸುವುದು ಅದರ ಗುತ್ತಿಗೆಯನ್ನು ವಹಿಸುವುದು, ಸಾಗಾಣಿಕೆಗೆ ಪರವಾನಗಿ ಕೊಡುವುದು ಎಲ್ಲವೂ ಸರ್ಕಾರ ಜಿಲ್ಲೆ, ಸಬ್ ಡಿವಿಷನ್ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳ ಮೂಲಕವೇ ಪಾರದರ್ಶಕವಾಗಿ ನಡೆಯಬೇಕು.
ಅದಕ್ಕೆ ಪೂರಕವಾಗಿ, ಮರಳು ಗುತ್ತಿಗೆ ಹಾಗೂ ಮಾರಾಟದಲ್ಲಿ ಅವ್ಯವಹಾರ ನಡೆಸಿದರೆ, ಅದು ಶಿಕ್ಷಾರ್ಹ ಅಪರಾಧ, ಜೈಲು ಶಿಕ್ಷೆ ಕಡ್ಡಾಯ ಎನ್ನುವ ನಿಯಮವೂ ಜಾರಿಗೆ ಬರಲಿದೆ. ಇನ್ನು ಮುಂದೆ ಮರಳಿನ ಸಾಕಾಣಿಕೆ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಮಾತ್ರ. ರಾತ್ರಿ ಮರಳನ್ನು ಲಾರಿಗಳಲ್ಲಿ ಸಾಗಿಸಿದರೆ, ಅದು ಶಿಕ್ಷಾರ್ಹವಾದ ಅಪರಾಧವೇ. ಈ ನಿಯಮಗಳ ಜಾರಿಯಿಂದ ಮರಳಿನ ಬೆಲೆ ಮುಕ್ತ ಪೇಟೆಯಲ್ಲಿ ಇಳಿಯಲೇಬೇಕು. ಅದಕ್ಕೆ ಬೇಕಾದ್ದು, ಹೊಸ ನೀತಿಯನ್ನು ಜಾರಿಗೆ ತರುವ ಸಿಬ್ಬಂದಿ, ಹೊಸ ನಿಯಮಗಳನ್ನು ಚಾಚೂ ತಪ್ಪದೇ ಜಾರಿಗೊಳಿಸುವ ಪ್ರಾಮಾಣಿಕತೆಯನ್ನು ಪ್ರದರ್ಶಿಸುವುದು. ಅದನ್ನು ಖಚಿತಪಡಿಸಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.