ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 22 Dec 2013, 11:31 am

ಎಚ್.ಆನಂದರಾಮಶಾಸ್ತ್ರಿ ಪತ್ರ ಕಳುಹಿಸಿದ್ದಾರೆ. "ನೋಡ್ತಾ ಇರಿ, ಏನೇನ್ ಮಾಡ್ತೀವಿ!' ಅಂತಾ ನಮ್ಮಿಂದಲೂ ಏನ್ನ್ ಮಾಡಿಸ್ತೀರಪ್ಪ! ನಾನೀಗ ಕಾಮದ ಬಗ್ಗೆ ಬರೆಯಬೇಕಾಯ್ತು ನೋಡಿ! ತಪ್ಪೇನಿಲ್ಲ ಬಿಡಿ, ಕಾಮವೆಂಬುದು ಜೀವ ಸಹಜ ತಾನೆ. ವಿಷ್ಯ ಏನಪ್ಪಾ ಅಂದ್ರೆ, ಡಿ.12ರ ಮುಖಪುಟದಲ್ಲಿ ಒಂದು 'ತಪ್ಪಲ್ಲದ ತಪ್ಪು' ಉಂಟಾಗಿದೆ. 'ತಕ್ಷಣದಿಂದಲೇ ಸಲಿಂಗಕಾಮದಲ್ಲಿ ತೊಡಗಿರುವವರನ್ನು ಬಂಧಿಸಲು ಅವಕಾಶ' ಎಂದು ಸುದ್ದಿ ಸಾರಾಂಶವೊಂದು ಪ್ರಕಟಗೊಂಡಿದೆ. 'ತಕ್ಷಣದಿಂದಲೇ' ಎಂದು ಆರಂಭವಾಗುವ ಈ ಸುದ್ದಿಭಾಗವನ್ನು ಓದಿದ 'ತಕ್ಷಣ' ಅನೇಕರಿಗೆ ಏನನ್ನಿಸುತ್ತದೆಂದರೆ, 'ಸುಪ್ರೀಂ ಕೋರ್ಟು ತೀರ್ಪು ನೀಡಿದ ತತ್‌ಕ್ಷಣದಿಂದಲೇ ಯಾರು ಸಲಿಂಗಕಾಮದಲ್ಲಿ ತೊಡಗಿರುತ್ತಾರೋ ಅವರನ್ನು ಮಾತ್ರ ಬಂಧಿಸುವ ಅವಕಾಶ ಪೊಲೀಸರಿಗೆ ಲಭ್ಯವಾಗಿದೆ' ಅನ್ನಿಸುತ್ತದೆ! 'ಸಲಿಂಗಕಾಮದಲ್ಲಿ ತೊಡಗಿರುವವರನ್ನು ಬಂಧಿಸಲು ತಕ್ಷಣದಿಂದಲೇ ಅವಕಾಶ' ಎಂದು ಸುದ್ದಿಭಾಗವು ಪ್ರಕಟಗೊಂಡಿದ್ದಿದ್ದರೆ ಈ ರೀತಿ ಅಪಾರ್ಥ ಕಲ್ಪನೆಗೆ ಅವಕಾಶ ಇರುತ್ತಿರಲಿಲ್ಲ. ಆಳವಾಗಿ ವ್ಯಾಕರಣ, ವಾಕ್ಯರಚನೆಗಳನ್ನೆಲ್ಲ ಯೋಚಿಸುತ್ತ ವರದಿ ಬರೆಯುವಷ್ಟು ವ್ಯವಧಾನ ವರದಿಗಾರರಿಗೆ ಇರುವುದಿಲ್ಲ, ನಿಜ. ಆದರೆ ವಾಕ್ಯರಚನೆಯಲ್ಲಿ ಇಂಥ ಚೋದ್ಯಗಳು ನುಸುಳದಷ್ಟು ನೈಪುಣ್ಯವನ್ನು ಓದುಗನು ಬಯಸುವುದು ತಪ್ಪೇನಲ್ಲವಷ್ಟೆ.'
'ಸಲಿಂಗಕಾಮ ಕುರಿತ ತೀರ್ಪಿನ ಇನ್ನೊಂದು ವರದಿಯು ಒಳಪುಟದಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಒಂದು ತುಣುಕು ಇಂತಿದೆ. 'ನಾಝ್ ಫೌಂಡೇಶನ್ ಎನ್ನುವ ಎನ್‌ಜಿಒ 377ನೇ ಕಲಂ ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ.' ಈ ವಾಕ್ಯಭಾಗ ಕೂಡ ಅಪಾರ್ಥಕ್ಕೆಡೆಮಾಡಿಕೊಡುತ್ತದಲ್ಲವೇ? 'ನಾಝ್ ಫೌಂಡೇಶನ್ ಎನ್ನುವ ಸಂಸ್ಥೆಯ 377 ಕಲಂ ಅನ್ನು ರದ್ದು ಮಾಡಬೇಕು' ಎಂದು ಕೋರಿ ಇನ್ಯಾರೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಅಪಾರ್ಥ ಉಂಟಾಗುತ್ತದಲ್ಲವೇ? '377ನೇ ಕಲಂ ರದ್ದು ಮಾಡುವಂತೆ ಕೋರಿ ನಾಝ್ ಫೌಂಡೇಶನ್ ಎನ್ನುವ ಎನ್‌ಜಿಒನಿಂದ ನ್ಯಾಯಾಲಯಕ್ಕೆ ಅರ್ಜಿ' ಎಂದು ಪ್ರಕಟವಾಗಿದ್ದರೆ ಮೇಲ್ಕಂಡ ಅಪಾರ್ಥಕ್ಕೆ ಅವಕಾಶವಿರುತ್ತಿರಲಿಲ್ಲ, ಅಲ್ಲವೇ? ಅಥವಾ ಈಗ ಪ್ರಕಟವಾಗಿರುವ ವಾಕ್ಯಭಾಗದಲ್ಲೇ '......ಎನ್‌ಜಿಒದಿಂದ.....' ಎಂದಾದರೂ ಪ್ರಕಟಿಸಿದ್ದರೇ ಭೇಷಿತ್ತು, ಏನಂತೀರಿ?'
'ಇನ್ನು ಅದೇ ದಿನದ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಬಿ.ಕೆ.ಶ್ರೀಕಾಂತ್ ಅವರು 'ಗಾಳಿಪಟದ' ನಂಬಿರಾಜ್‌ರನ್ನು ಅಥವಾ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೀವೆಲ್ಲ ಕಣ್ಣುಮುಚ್ಚಿ ನಿದ್ದೆ ಮಾಡುತ್ತೀರಿ' ಎಂದು ವರದಿ ಪ್ರಕಟವಾಗಿದೆ. 'ಅವರು ಕಣ್ಣು ಮುಚ್ಚದೆ ನಿದ್ದೆ ಮಾಡ್ತಾರಾ ಸಾರ್?' ಎಂದು ಶ್ರೀಕಾಂತರು ಪ್ರಶ್ನಿಸಿದ್ದಾರೆ. ಶ್ರೀಕಾಂತ್‌ಗೆ ನಾನು ಹೇಳಲಿಚ್ಛಿಸುವುದಿಷ್ಟೆ, 'ಶಾಸಕರು ಹೇಳಿದ್ದನ್ನು ನಂಬಿರಾಜ್ ಯಥಾವತ್ತಾಗಿ ವರದಿಮಾಡಿದ್ದಾರೆ.
ಇಷ್ಟಕ್ಕೂ ಕಣ್ಣು ಮುಚ್ಚದೆ ನಿದ್ದೆ ಮಾಡುವ ಮನುಷ್ಯರೂ ಈ ಭೂಮಿ ಮೇಲಿದ್ದಾರೆ ಎನ್ನುವ 'ವಿಚಿತ್ರ, ಆದರೂ ಸತ್ಯ' ಶ್ರೀಕಾಂತ್‌ಗೆ ಗೊತ್ತಿದ್ದಂತಿಲ್ಲ. ಇನ್ನು, ಪೂರ್ತಿ ಕಣ್ಣು ಮುಚ್ಚದೆ ಅರೆಗಣ್ಣು ನಿದ್ದೆ ಮಾಡುವವರಂತೂ ವಿಧಾನಮಂಡಲದಲ್ಲೇ ಇದ್ದಾರೆ! ನಾನು ಸ್ವಯಂ ಅವರನ್ನು ನೋಡಿದ್ದೇನೆ, ಅಧಿವೇಶನ ವೀಕ್ಷಿಸಿ ಪುನೀತನಾಗಲು ಹೋಗಿದ್ದಾಗ' ಎಂದಿದ್ದಾರೆ.



- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement