ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಖಿಜ್ರಾಖಾನ್ ಮತ್ತು ದೇವಲದೇವಿಯ ಪ್ರೀತಿ

Vishwanath S
Updated On : 23 Dec 2013, 11:32 am

ಅಲ್ಲಾವುದ್ದೀನ್ ಖಿಲ್ಜಿ ತನ್ನ ಮಾವ ಜಲಾಲುದ್ದೀನ್ ಖಿಲ್ಜಿಯನ್ನೇ ಕೊಂದು ಸಿಂಹಾಸನವನ್ನೇರಿದ ಕ್ರೂರಿ. ಚಿತ್ತೂರಿನ ರಾಣಿ ಪದ್ಮಿನಿಯ ಸೌಂದರ್ಯಕ್ಕೆ ಮಾರುಹೋಗಿ, ಹುಚ್ಚನಾಗಿ, ಅವಳನ್ನು ಪಡೆಯುವ ಭರದಲ್ಲಿ ನಿರತನಾಗಿದ್ದಾಗ ಅವಳು ಪತಿವ್ರತಾಧರ್ಮದಂತೆ ಅಗ್ನಿಕುಂಡದಲ್ಲಿ ತನ್ನ ಪ್ರಾಣತ್ಯಾಗ ಮಾಡಲು ಕಾರಣನಾದವನು. ಗುಜರಾತಿನ ದೊರೆ ರಾಯಕರ್ಣನು ಅಲ್ಲಾವುದ್ದೀನ್ ಖಿಲ್ಜಿಯೊಡನೆ ನಡೆದ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ನಂತರ ಅಲ್ಲಾವುದ್ದೀನನು ರಾಯಕರ್ಣನ ಪತ್ನಿ ರಾಣಿ ಕಮಲಾದೇವಿಯನ್ನು ತನ್ನ ಅಂತಃಪುರಕ್ಕೆ ಬಲವಂತವಾಗಿ ಸೇರಿಸಿಕೊಂಡ. ಆಗ ಅವಳ ಜೊತೆ ಅವಳ ಮಗಳು ದೇವಲದೇವಿಯೂ ಅರಮನೆ ಸೇರುವಂತಾಯಿತು. ಅಲ್ಲಾವುದ್ದೀನನ ಹಿರಿಯ ಮಗ ಖಿಜ್ರಾ ಖಾನ್ ಮತ್ತು ದೇವಲ ದೇವಿ ಒಟ್ಟಿಗೆ ಆಡಿ ಬೆಳೆದುದುರಿಂದ ಅವರಿಬ್ಬರ ನಡುವೆ ಚಿಗುರಿದ ಪ್ರೀತಿ ಹೆಮ್ಮರವಾಗಿ ಬೆಳೆಯಿತು. ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ವಿವಾಹವಾಗಲು ನಿರ್ಧರಿಸಿದರು. ಆ ಮದುವೆಗೆ ಅಲ್ಲಾವುದ್ದೀನ್ ಖಿಲ್ಜಿ ಸಮ್ಮತಿಸಿದನಾದರೂ, ಪಟ್ಟದ ರಾಣಿಗೆ ಮಾತ್ರ ಒಪ್ಪಿಗೆಯಾಗಲಿಲ್ಲ. ಅವಳು ತನ್ನ ಅಣ್ಣನ ಮಗಳನ್ನು ಖಿಜ್ರಾ ಖಾನನಿಗೆ ಬಲವಂತದಿಂದ  ಮದುವೆ ಮಾಡಿಸಿದಳು. ಇದರಿಂದ ಖಿಜ್ರಾಖಾನ್ ಮತ್ತು ದೇವಲದೇವಿ ಇಬ್ಬರೂ ವಿರಹ ವೇದನೆಯಿಂದ ಪರಿತಪಿಸುವಂತಾಯಿತು. ಪರಿಣಾಮ ಇಬ್ಬರೂ ಹುಚ್ಚರಂತಾದರು. ಅವರ ದಯನೀಯ ಸ್ಥಿತಿಯನ್ನು ನೋಡಿದ ಆಸ್ಥಾನ ಕವಿಯಾಗಿದ್ದ ಅಮೀರ್ ಖುಸ್ರು ರಾಜನಿಗೆ ಪರಿಸ್ಥಿತಿಯನ್ನು ವಿವರಿಸಿದ. ಮುಂದಿನ ರಾಜನಾಗಿ ಮೆರೆಯಬೇಕಾದ ರಾಜಕುಮಾರ ಹೀಗೆ ಹುಚ್ಚನಂತೆ ಆಗಿರುವುದು ಒಳ್ಳೆಯದಲ್ಲ, ಅವನಿಗೂ ದೇವಲದೇವಿಗೂ ವಿವಾಹ ಮಾಡಿಸುವುದುಚಿತ ಎಂದು ಸಲಹೆ ನೀಡಿದ. ಅವನ ಸಲಹೆಯನ್ನು ಮಾನ್ಯಮಾಡಿದ ಅಲ್ಲಾವುದ್ದೀನ್ ಅವರ ವಿವಾಹಕ್ಕೆ ಸಮ್ಮತಿಸಿದ. ನಾಲ್ಕಾರು ವರ್ಷ ಆ ಜೋಡಿಗಳು ತುಂಬಾ ಪ್ರೀತಿಯಿಂದ ಅನ್ಯೋನ್ಯವಾಗಿ ಅರಮನೆಯಲ್ಲಿ ಕಾಲಕಳೆದರು. ಅಲ್ಲಾವುದ್ದೀನನ ಮರಣದ ನಂತರ ಅವನ ದಂಡನಾಯಕನಾಗಿದ್ದ ಮಲಿಕ್ಕಾಫರನು ಖಿಜ್ರಾಖಾನನ ಕಣ್ಣುಗಳನ್ನು ಕೀಳಿಸಿ ಸೆರಮನೆಗೆ ತಳ್ಳಿದನು. ನಂತರ ಅವನು ಬದುಕಿದ್ದರೆ ತನಗೆ ತೊಂದರೆಯಾಗಬಹುದೆಂದು ಭಾವಿಸಿ ಅವನಿಗೆ ಚಾಟಿಯೇಟು ನೀಡುವ ಶಿಕ್ಷೆ ವಿಧಿಸಿದನು. ಒಂದೇ ಸಮನೆ ಚಾಟಿಯೇಟುಗಳು ಖಿಜ್ರಾಖಾನನ ಮೇಲೆ ಬೀಳಲು ಪ್ರಾರಂಭಿಸಿದಾಗ ದೇವಲದೇವಿ ತನ್ನ ಪತಿಯ ದೇಹದ ಮೇಲೆ ಬಿದ್ದುಕೊಂಡು ಎಲ್ಲ ಏಟನ್ನೂ ತಾನೇ ತಿಂದು, ದೈಹಿಕ ಯಾತನೆಯನ್ನು ತೋರಿಸಿಕೊಳ್ಳದೆ ನಗುನಗುತ್ತಾ ಶಾಂತ ಚಿತ್ತಳಾಗಿ ತನ್ನ ಪತಿಯ ಜೊತೆಗೆ ತಾನೂ ಅಸು ನೀಗಿದಳು. ಪತಿವ್ರತಾ ಧರ್ಮದ ಹಿರಿಮೆಯನ್ನು ಮೆರೆದ ದೇವಲದೇವಿಯ ಬಗ್ಗೆ ಅಮೀರ್ ಖುಸ್ರು ತನ್ನ ತುಘಲಕ್‌ನಾಮಾ ಕೃತಿಯಲ್ಲಿ ಶ್ಲಾಘಿಸಿದ್ದಾನೆ.
(ಆಧಾರ: ಕಸ್ತೂರಿ 2006 ಸೆಪ್ಟಂಬರ್ ಲೇ.ನಾರಾಯಣ ಘಳಗಿ-ಪು.50)



- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments