ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 23 Dec 2013, 11:28 am

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್.ಆನಂದರಾಮಶಾಸ್ತ್ರೀ ಪತ್ರ ಬರೆದಿದ್ದಾರೆ. "ಅಡಕೆ' ಎಂಬ ಪದದ ಬದಲಿಗೆ 'ಅಡಿಕೆ' ಎಂಬ ಪದ ಬಳಸಬೇಕಿತ್ತೆಂದು ಸಂಗಪ್ಪ ಎಂಬುವವರು ಬರೆದ ಪತ್ರಕ್ಕೆ ಉತ್ತರವಾಗಿ ನೀವು 'ಸ್ಟೈಲ್ ಶೀಟ್‌' ವಿಷಯ ಪ್ರಸ್ತಾಪಿಸಿದ್ದೀರಲ್ಲದೆ 'ಅಡಕೆ' ಎಂಬ ಪದ ಸಮರ್ಪಕವಾಗಿದೆ ಎಂದೂ ಹೇಳಿದ್ದೀರಿ, ಸರಿಯೇ. ಆದರೆ ಇಲ್ಲಿ ಸ್ವಾರಸ್ಯವೇನೆಂದರೆ 'ತಪ್ಪು' ತಿದ್ದಲು ಹೊರಟ ಸಂಗಪ್ಪನವರೇ ತಪ್ಪೆಸಗಿದ್ದಾರೆ! 'ಅಡಿಕೆ' ಎಂಬ ಪದವೇ ಇಲ್ಲ! 'ಅಡಕೆ' ಮಾತ್ರ ಸರಿಯಾದ ಪದ. ಯಾರಾದರೂ 'ಅಡಿಕೆ' ಎಂದು ಹೇಳುತ್ತಿದ್ದರೆ ಅದು ತಪ್ಪು.'
'ಇದೇ ರೀತಿ, 'ಮಡಕೆ' (ಗಡಿಗೆ)ಯನ್ನು 'ಮಡಿಕೆ' (ಪದರ) ಮಾಡುವವರೂ ಇದ್ದಾರೆ! ಕೆಲವರು 'ತಡಿಕೆ' (ಬಿದಿರಿನ ತಟ್ಟೆ)ಗೆ  ಬದಲಾಗಿ 'ತಡಕೆ' ಎಂಬ ನಿಘಂಟಿನಲ್ಲಿಲ್ಲದ ಪದವನ್ನು ಸೃಷ್ಟಿಸಿದ್ದಾರೆ ಕೂಡ! 'ಅರಳು-ಮರುಳು' ಎನ್ನುವುದರ ಬದಲು 'ಅರಳು-ಮರಳು' ಎನ್ನುವವರಿರುವಂತೆ, 'ಮಡಕೆ-ಕುಡಿಕೆ' ಎನ್ನುವುದರ ಬದಲಿಗೆ 'ಮಡಿಕೆ-ಕುಡಿಕೆ' ಎನ್ನುವವರೂ ಇದ್ದಾರೆ! ಇವರೆಲ್ಲರೂ ತಿದ್ಕೋಬೇಕು ಹೊರತು 'ಕನ್ನಡಪ್ರಭ' ತಿದ್ಕೋಬೇಕಾಗಿಲ್ಲ'.
'ಇಷ್ಟಕ್ಕೂ, 'ಅಡಕೆ' ಎಂಬ ಶಬ್ದದ ಮೂಲದ ಬಗ್ಗೆ ಯೋಚಿಸಿದಾಗ ನನಗೆ ಹೊಳೆದದ್ದಿಷ್ಟು. 'ಅಡಕೆ'ಗೆ ಸಂಸ್ಕೃತ ಭಾಷೆಯಲ್ಲಿ 'ಕ್ರಮುಕ' ಎನ್ನುತ್ತಾರಾದ್ದರಿಂದ 'ಅಡಕೆ'ಯು 'ಕ್ರಮುಕ'ದ ತದ್ಭವ ರೂಪವಾಗಲೀ, ಅಪಭ್ರಂಶವಾಗಲೀ ಆಗಿರಲು ಸಾಧ್ಯವಿಲ್ಲ. 'ಅಡಕಗೊಳಿಸುವುದು' ಎಂಬ ಶಬ್ದಕ್ಕೆ 'ಒತ್ತಿ ಗಾತ್ರವನ್ನು ಚಿಕ್ಕ ಮಾಡುವುದು' ಎಂಬ ಅರ್ಥವಿದೆ. ಸುಲಿದ ಹಸಿ ಅಡಕೆ ಕಾಯಿಯನ್ನು ಚೊಗರು ದ್ರವದಲ್ಲಿ ಕುದಿಸಿ ಒಣಗಿಸುತ್ತಾರೆ.  ಆಗ ಅದರ ಗಾತ್ರ ಚಿಕ್ಕದಾಗುತ್ತದೆ. 'ಬೆಟ್ಟೆ' (ಬಲಿತ ಅಡಕೆ)ಗಿಂತ, 'ಹಸ' (ಶ್ರೇಷ್ಠ-ರುಚಿಕರ) ಜಾತಿಯ ಅಡಕೆಯು ಸುರುಟಿ (ಮುದರಿಕೊಂಡು) ಗಾತ್ರದಲ್ಲಿ ಹೆಚ್ಚು ಇಳಿಯುವಿಕೆ ಕಂಡಿರುತ್ತದೆ. ಹೀಗೆ, ಗಾತ್ರವನ್ನು ಚಿಕ್ಕದಾಗಿಸುವ ಕ್ರಿಯೆಗೆ, ಅರ್ಥಾತ್ ಅಡಕಗೊಳಿಸುವ ಕ್ರಿಯೆಗೆ ತುತ್ತಾಗುವುದರಿಂದ ಅದನ್ನು 'ಅಡಕೆ' ಎಂದು ಕರೆಯುವ ಪರಿಪಾಟ ಜಾರಿಗೆ ಬಂದಿರಬೇಕೆನ್ನುವುದು ನನ್ನ ಊಹೆ. ('ಪರಿಪಾಟ'ನ್ನು ತಪ್ಪಾಗಿ 'ಪರಿಪಾಠ' ಎಂದು ಬರೆಯುವ ಪರಿಪಾಟ ಹೊಂದಿರುವವರನ್ನು ನಾನು ಕಂಡಿದ್ದೇನೆ! 'ಪಡಿಪಾಟು' ಎಂಬುದರ ಬದಲಿಗೆ 'ಪರಿಪಾಟಲು' ಎಂದು ಹೊಸ ಅಪಶಬ್ದ ಸೃಷ್ಟಿಸಿ ನನ್ನಂಥ ಕೇಳುಗರಿಗೆ ಪಡಿಪಾಟು(ಕಷ್ಟ)ನೀಡುವವರೂ ಇದ್ದಾರೆ!) ಸಂಗಪ್ಪನವರ 'ಅಡಿಕೆ'ಯ ಸಂಗದಿಂದಾಗಿ ನನ್ನ ಈ ಬಡಬಡಿಸುವಿಕೆಯೆಂಬ ಬುಡಬುಡಿಕೆಯ ಸಂಗ ನಿಮಗಾಯಿತು' ಎಂದಿದ್ದಾರೆ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement