ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಭ್ರಷ್ಟಾಚಾರ: ಮಾತು-ಕೆಲಸ

Vishwanath S
Updated On : 23 Dec 2013, 11:23 am

ಶನಿವಾರ- ಭಾನುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿ ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರಿಬ್ಬರೂ ಪ್ರತ್ಯೇಕ- ಪ್ರತ್ಯೇಕ ಸಂದರ್ಭಗಳಲ್ಲಿ ಭ್ರಷ್ಟಾಚಾರ ಪ್ರಸ್ತಾಪ ಮಾಡಿರುವುದರಿಂದ, ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಪ್ರಮುಖವಾದ ವಿಷಯವಾಗಬಹುದೇ ಎನ್ನುವ ಪ್ರಶ್ನೆ ಅಲ್ಲಲ್ಲಿ ಕೇಳಿ ಬಂದಿರುವುದು ಸಹಜ.
ರಾಹುಲ ಗಾಂಧಿ ಅವರು, ಕೆಲವು ಉದ್ಯಮಿಗಳ ಜತೆ ನಡೆಸಿದ ವಿಚಾರ ವಿನಿಮಯದಲ್ಲಿ ಭ್ರಷ್ಟಾಚಾರ ದೇಶದ ರಕ್ತವನ್ನೇ ಹೀರುತ್ತಿರುವ ಪಿಡುಗು ಎಂದು ಹೇಳಿ, ಅದನ್ನು ತಡೆಗಟ್ಟುವುದರಲ್ಲಿ ಉದ್ಯಮಿಗಳ ಪಾತ್ರವನ್ನು ಪ್ರಸ್ತಾಪಿಸಿದ್ದರು.
ಮರುದಿನವೇ ನರೇಂದ್ರ ಮೋದಿ ಅವರು ಮುಂಬೈನ ಕುರ್ಲಾ- ಬಾಂದ್ರಾ ಕಾಂಪ್ಲೆಕ್ಸ್‌ನ ಮೈದಾನದಲ್ಲಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡು ಆದರ್ಶ ವಸತಿ ನಿರ್ಮಾಣದ ಯೋಜನೆಯಲ್ಲಿನ ಅವ್ಯವಹಾರ ಕುರಿತ ನ್ಯಾಯಾಂಗ ತನಿಖೆಯ ಆಯೋಗದ ವರದಿಯನ್ನು ತಿರಸ್ಕರಿಸಿದ ಮಹಾರಾಷ್ಟ್ರದ ಕಾಂಗ್ರೆಸ್- ರಾಷ್ಟ್ರೀಯತಾ ಕೂಟ ಸರ್ಕಾರವನ್ನು ಖಂಡಿಸಿ, ಈ ಪಕ್ಷಗಳ ನಾಯಕರಿಂದ ದೇಶ ಭ್ರಷ್ಟಾಚಾರ ವಿರೋಧಿ ಆಂದೋಲನದ ಪಾಠ ಕಲಿಯಬೇಕಾಗಿದೆ ಎಂದು ಘರ್ಜಿಸಿದರು ಹೌದು. ನರೇಂದ್ರ ಮೋದಿ ಅವರು ಮುಂಬೈನಲ್ಲಿ ಘರ್ಜನೆಯ ಚಳವಳಿಯನ್ನೇ ಆರಂಭಿಸಿರುವಂತಿದೆ.
ಬಿಹಾರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾದ ಲಾಲು ಪ್ರಸಾದ ಯಾದವ್ ಅವರ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡಿರುವ ಕಾಂಗ್ರೆಸ್, ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಅರವಿಂದ ಕೇಜ್ರಿವಾಲ ಅವರಿಗೆ ಬೆಂಬಲ ನೀಡಿರುವುದು ನಿಜಕ್ಕೂ ಮಹಾಚೋದ್ಯದ ವಿಚಾರವೇ.  ನರೇಂದ್ರ ಮೋದಿ- ರಾಹುಲ ಗಾಂಧಿ ನಡುವಿನ ಸಮರ ಕನಿಷ್ಠ ಇನ್ನೂ ನಾಲ್ಕೈದು ತಿಂಗಳು ಹೀಗೇ ಮುಂದುವರಿಯಲಿದೆ. ಅದಕ್ಕೆ ಸಾಕ್ಷಿಯಾಗಬೇಕಾದ ದೌರ್ಭಾಗ್ಯ ಜನರದ್ದು. ಆದರ್ಶ ವಸತಿ ನಿರ್ಮಾಣ ಯೋಜನೆಯಲ್ಲಿ, ಕಾರ್ಗಿಲ್ ಸಮರದಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಪತ್ನಿಯರಿಗೆ ನೆರವು ನೀಡುವ ಪ್ರಚಾರದ ಪರಿಣಾಮವಾಗಿ, ಆ ಯೋಜನೆಯಲ್ಲಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಸೇನೆಯ ಕಮಾಂಡರ್‌ಗಳು ಹಾಗೂ ಇತರ ಪ್ರಭಾವಿ ವಲಯಗಳ ವ್ಯಕ್ತಿಗಳು ನಡೆಸಿದ "ಅತ್ಯಾಚಾರ" ದೇಶಕ್ಕೆ ದೇಶವನ್ನೇ ಕೆರಳಿಸಿತು. ಆ ಹಗರಣದ ತನಿಖೆ ನಡೆಸಿದ ಆಯೋಗದ ವರದಿಯಲ್ಲಿ ಪ್ರತಿಷ್ಠಿತರೆನಿಸಿಕೊಂಡ ಅನೇಕರನ್ನು "ವಿಚಾರಣೆಗೆ ಗುರಿಪಡಿಸಿದ" ಅನಂತರ ಮಾಜಿ ಮುಖ್ಯಮಂತ್ರಿಗಳಾದ ಅಶೋಕ ಚೌವಾಣ್ (ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು) ವಿಲಾಸರಾವ್ ದೇಶಮುಖ್ ಹಾಗೂ ಈಗಿನ ಗೃಹ ಮಂತ್ರಿ ಸುಶೀಲ ಕುಮಾರ ಶಿಂದೆ ಅವರ ಹೆಸರುಗಳು ಪ್ರಾಮುಖ್ಯವಾಗಿ ಪ್ರಸ್ತಾಪವಾಗಿವೆ ಎನ್ನುವ ವರದಿಗಳಿವೆ. ಮಹಾರಾಷ್ಟ್ರದ ಈಗಿನ ಮುಖ್ಯಮಂತ್ರಿ ಪೃಥ್ವಿರಾಜ ಚವಾಣ್ ಅವರು ತನಿಖಾ ಆಯೋಗದ ವರದಿಯಲ್ಲಿ ನಮೂದಾಗಿದ್ದ ಮೂರು ಅಂಶಗಳನ್ನು ಬಿಟ್ಟು, ಉಳಿದೆಲ್ಲಾ ಶಿಫಾರ್ಸುಗಳನ್ನು ಸರ್ಕಾರ ತಿರಸ್ಕರಿಸಿದೆ ಎಂದು ಹೇಳಿದ್ದಾರೆ. ಸಚಿವ ಸಂಪುಟದ ಇಂತಹ ನಿರ್ಣಯಕ್ಕೆ ಬೆಂಬಲ ರೂಪದಲ್ಲಿ ಅವರು ಏನನ್ನೂ ಹೇಳಿಲ್ಲ. ಮಹಾರಾಷ್ಟ್ರ ಸರ್ಕಾರ ಹಾಗೂ ಕಾಂಗ್ರೆಸ್- ರಾಷ್ಟ್ರೀಯತಾ ಕಾಂಗ್ರೆಸ್ ಪಕ್ಷಗಳು ಈ ವಿಚಾರದಲ್ಲಿ ಇನ್ನೂ ಮೌನ ತಾಳುವುದು ಸಲ್ಲದು. "ಸಾರ್ವಜನಿಕ ಹಿತರಕ್ಷಣೆಯ ದೃಷ್ಟಿಯಿಂದ" ಈ ನಿರ್ಧಾರವನ್ನು ಬಹಿರಂಗವಾಗಿ ಸಮರ್ಥಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement