ತಪ್ಪಾಯ್ತು ತಿದ್ಕೋತೀವಿ
ಉತ್ತರ ಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಪತ್ರ ಕಳುಹಿಸಿದ್ದಾರೆ. 'ಡಿ.16ರ 'ಒಳಸುರಳಿ' ಲೇಖನದ ಎರಡನೆ ಸಾಲು '......
ಉತ್ತರ ಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಪತ್ರ ಕಳುಹಿಸಿದ್ದಾರೆ. 'ಡಿ.16ರ 'ಒಳಸುರಳಿ' ಲೇಖನದ ಎರಡನೆ ಸಾಲು '...... ಅದು ಪೂರಕವಾಗಿರಬೇಕೇ ವಿನಃ.....' ಅಂತ ಬರೆದಿದೆ. ಆದೇ ಅಂಕಣದಲ್ಲಿ 'ವಿನಃ' ಶಬ್ದದ ಬಗ್ಗೆ ಚರ್ಚೆಯಾಗಿ, ಇದನ್ನು 'ವಿನಾ' ಅಂತಲೇ ಬಳಸಬೇಕೆಂಬ ಧ್ವನಿ ಹೊರಬಿದ್ದ ನೆನಪಿದೆ. ಇನ್ನು ಇದೇ ದಿನದ 'ಗಾಳಿಪಟ' ಅಂಕಣದಲ್ಲಿ 'ಚಿತಾಗಾರ ಉದ್ಘಾಟನೆಗೂ ಸಿಹಿ ಹಂಚಿ ಸಂಭ್ರಮ' ಸುದ್ದಿಯಲ್ಲಿ 'ಕವಡೆ'ಯೊಂದು ಮೃತಪಟ್ಟಿತ್ತು ಅಂತ ಒಂದೆಡೆ ಬರೆದರೆ, ಕೊನೆಯಲ್ಲಿ ಸತ್ತ 'ಕಡವೆ'ಯನ್ನು ಅಂತ ಮುಂದೆ ಬಳಸಲಾಗಿದೆ. ಇದು ಕವಡೆಯೋ? ಕಡವೆಯೋ?' ಎಂದು ಪ್ರಶ್ನಿಸಿದ್ದಾರೆ.
'ವಿನಃ' ಶಬ್ದ ಬಳಕೆಯೂ ಸಾಕಷ್ಟು ದಿನಗಳಿಂದ ಬಂದಿದೆ. ಆದ್ದರಿಂದ ಕಣ್ತಪ್ಪಿನಿಂದ ಹೀಗಾಗಿದೆ. ಚಿತಾಗಾರಕ್ಕೆ ಸಂಬಂಧಿಸಿ ಕಡವೆ ಎಂಬುದು ಸರಿಯಾದ ಪ್ರಯೋಗ.
ತಾಳಿಕೋಟೆಯ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವೀರೇಶ ಸಿಂದಗಿ ಪತ್ರ ಬರೆದಿದ್ದಾರೆ. 'ಡಿ.13ರ ಪತ್ರಿಕೆಯಲ್ಲಿ ಕೆಲವೊಂದು ಮುದ್ರಣ ದೋಷಗಳಾಗಿವೆ. ಪುಟ 2ರ ಶೀರ್ಷಿಕೆಯಲ್ಲಿ 'ಕೈ ಪಂಪ್ಗೆ ಧಕ್ಕೆ ಆಗದಂತೆ ಚರಂಡಿ ನಿರ್ಮಾಣ' ಎಂದಿದೆ. ಆದರೆ ವರದಿಯ ವಿವರಣೆಯಲ್ಲಿ ಚರಂಡಿಗೆ ಕೈ ಪಂಪಿನಿಂದ ಯಾವುದೇ ಧಕ್ಕೆ ಆಗದ ಹಾಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಪ್ರಕಟಿಸಿದ್ದೀರಿ. ಇದು ಚರಂಡಿಯಿಂದ ಕೈಪಂಪಿಗೆ ಯಾವುದೇ ಧಕ್ಕೆ ಆಗದ ಹಾಗೆ ಕ್ರಮಕೈಗೊಳ್ಳಲಾಗುತ್ತದೆ ಎಂದಾಗಬೇಕಿತ್ತಲ್ಲವೇ!'
'ಪುಟ 4ರ 'ಪೇಜಾವರರ ಪ್ರಗತಿಪರ ಚಿಂತನೆಗೆ ಸಂಪ್ರದಾಯವಾದಿಗಳ ಅಡ್ಡಿ' ಎಂಬ ವರದಿಯ ಕೊನೆಯಲ್ಲಿ ದಾವಣಗೆರೆಯ ಮೌಲಾನಾ ಇಬ್ರಾಹಿಂ ಸಕಾಫಿ ಮಾತನಾಡಿ ಮಾತನಾಡಿದರು ಎಂದಾಗಿದೆ. ಇದು ಕೇವಲ ಮಾತನಾಡಿದರು ಎಂದಾಗಬೇಕಿತ್ತು.'
'ಡಿ.14ರ ಪುಟ 10ರ 'ರಾಜತಾಂತ್ರಿಕ ಅಧಿಕಾರಿಯನ್ನು ಕೈಕೋಳ ತೊಡಿಸಿ ಬಂಧಿಸಿದ್ರು!' ಎಂಬ ವರದಿಯ 'ವೀಸಾ ವಂಚನೆ ಆರೋಪ'ದಲ್ಲಿ ಕಡಿಮೆ ವೇತನಕ್ಕೂ ಹೆಚ್ಚಿನ ಅವಧಿ ದುಡಿಸಲಾಗುತ್ತಿದ್ದರು' ಎಂದಾಗಿದೆ. ಇಲ್ಲಿ 'ದುಡಿಸಲಾಗುತ್ತಿದ್ದರು' ಎಂಬುದಕ್ಕಿಂತ 'ದುಡಿಸಿಕೊಳ್ಳುತ್ತಿದ್ದರು' ಎಂದು ಬರೆದಿದ್ದರೆ ಸೂಕ್ತವಾಗುತ್ತಿತ್ತು. ಪುಟ 11ರಲ್ಲಿ 'ಖಾಸಗೀಕರಣ ಮಾಡಬೇಡಿ' ಎಂಬ ವರದಿಯ 2ನೇ ಪ್ಯಾರಾದ ಕೊನೆಯಲ್ಲಿ 'ಕಾರ್ಮಿಕರೊಂದಿಗೆ' ಎಂಬುದು 'ಕಾರ್ಮಿರೊಂದಿಗೆ' ಎಂದು ತಪ್ಪಾಗಿ ಮುದ್ರಣಗೊಂಡಿದೆ' ಎಂದಿದ್ದಾರೆ.
ಸುದ್ದಿ ಬರೆಯುವಾಗ ಮಾತ್ರವಲ್ಲ ರೇಖಾಚಿತ್ರಗಳನ್ನು ರಚಿಸುವಾಗಲೂ ಎಚ್ಚರದಿಂದರಬೇಕು. ಓದುಗರು ಸಣ್ಣ ವಿಚಾರಗಳನ್ನು ಗಮನಿಸುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಿಕಾರಿಪುರದಿಂದ ಶಿಕ್ಷಕ ಗುರು ರಾಘವೇಂದ್ರ ಅವರು ಪತ್ರ ಕಳುಹಿಸಿದ್ದಾರೆ. 'ನ.18ರ 'ಬೈಟು ಕಾಫಿ' ಪುರವಣಿಯಲ್ಲಿ 'ಪ್ರದಕ್ಷಿಣೆ' ಚಿತ್ರದಲ್ಲಿ ಅಪ್ರದಕ್ಷಿಣೆಯ ಸಂಕೇತ ನೀಡಲಾಗಿದೆ. ಇದನ್ನು ಗಮನಿಸಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.
ಹೌದು. ಈ ತಪ್ಪಾಗಿರುವುದು ಗಮನಕ್ಕೆ ಬಂದಿದೆ. ಅಪ್ರದಕ್ಷಿಣೆಯ ಚಿತ್ರದ ಜತೆಗೆ ದೇವಸ್ಥಾನದ ಬದಲು ಮರದ ಚಿತ್ರ ಬಿಡಿಸಲಾಗಿದೆ. ಯುವತಿ-ಯುವಕರ ವಿಚಾರವಿರುವುದರಿಂದ ಬರವಣಿಗೆಯನ್ನು ಗಮನಿಸದೇ ಮರ ಸುತ್ತುವುದನ್ನು ಚಿತ್ರಿಸಲಾಗಿದೆ.
-ವಿಶ್ವೇಶ್ವರ ಭಟ್