ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಪತ್ರ ಕಳುಹಿಸಿದ್ದಾರೆ. 'ನ.30ರ ಸಂಚಿಕೆಯ ಪುಟ 2ರಲ್ಲಿ 'ಹೈಟೆಕ್ ಎಟಿಎಂ ಕದೀಮ ಸೆರೆ' ಶೀರ್ಷಿಕೆಯ ...

Rashmi Kasaragodu
Updated On : 26 Dec 2013, 12:07 pm

ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಪತ್ರ ಕಳುಹಿಸಿದ್ದಾರೆ. 'ನ.30ರ ಸಂಚಿಕೆಯ ಪುಟ 2ರಲ್ಲಿ 'ಹೈಟೆಕ್ ಎಟಿಎಂ ಕದೀಮ ಸೆರೆ' ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿದ ಉಪಶೀರ್ಷಿಕೆ 'ಐಷಾರಾಮಿ ಜೀವನ'ದ ವರದಿಯಲ್ಲಿ 'ಅಂತಾರಾಷ್ಟ್ರೀಯ ಜಾಲದೊಂದಿಗೆ ಸಂಪರ್ಕ ಹೊಂದಿ ಕಳೆದ ಎರಡು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದ ಜಯದೀಪ ಸುಲ್ತಾನ ಪಾಳ್ಯದ ಅಪಾರ್ಟ್ಮೆಂಟ್ವೊಂದರಲ್ಲಿ ಬಾಡಿಗೆ ಇದ್ದ. ಕಾರಿನಲ್ಲಿ ಓಡಾಡುತ್ತ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಯದೀಪ್ ಬಂಧಿಸಿರುವ ಪೊಲೀಸರು....' ಎಂದು ಪ್ರಕಟವಾಗಿದೆ. ಐಷಾರಾಮಿ ಜೀವನಕ್ಕೆ ಹೋಗುತ್ತಿದ್ದಂತ ಜಯದೀಪನು ಯದೀಪನಾದನೆ? ಇದೇ ವರದಿಯಲ್ಲಿ 'ಬಂಧನ ಹೇಗೆ?' ಎಂಬ ಬಾಕ್ಸ್ ಸುದ್ದಿಯಿದೆ. 'ಜಯದೀಪ ಕೆಲದಿನಗಳ ಹಿಂದೆ ಬೆನ್ಸನ್ ಟೌನ್ನ ಎಟಿಎಂ ಕೇಂದ್ರದಲ್ಲಿ ವ್ಯಕ್ತಿಯೊಬ್ಬರ ಅಕೌಂಟ್ನಿಂದ ಹಣ ಡ್ರಾ ಮಾಡಿಕೊಂಡಿದ್ದ. ಆದರೆ ಕಾರ್ಡ್ ಹಾಗೂ ಪಿನ್ ಸಂಖ್ಯೆ ತಮ್ಮಲ್ಲೇ ಇದ್ದರೂ ಹಣ ಡ್ರಾ ಆಗಿರುವ ಬಗ್ಗೆ ಮೊಬೈಲ್ ಫೋನ್ನಲ್ಲಿ ಸಂದೇಶ ಪಡೆದ ವ್ಯಕ್ತಿ ಗಾಬರಿಗೊಂಡು ಬ್ಯಾಂಕ್' ಎಂದು ಪ್ರಕಟವಾಗಿದೆಯಷ್ಟೆ. ಲೇಖನ ಅಪೂರ್ಣವಾಗಿದ್ದು ಓದುಗರು ಗಾಬರಿಪಡುವಂತಾಗಿದೆ' ಎಂದಿದ್ದಾರೆ. ಕೇವಲ ಸುದ್ದಿ ಸೇರಿಸಬೇಕು ಎಂಬ ಒಂದೇ ಉದ್ದೇಶದಿಂದ ಪುಟ ನಿರ್ಮಿಸಿದಾಗ ಹೀಗಾಗುತ್ತದೆ. ಈ ರೀತಿಯ ತಪ್ಪುಗಳು ಆಗಾಗ ಆಗುತ್ತಿವೆ, ಇದು ಒಳ್ಳೆಯ ಬೆಳವಣಿಗೆಯಲ್ಲ.
ಉಡುಪಿಯ ಕುಂದಾಪುರದಿಂದ ಪ್ರಕಾಶ ಹೆಬ್ಬಾರ್ ಪತ್ರ ಬರೆದಿದ್ದಾರೆ. 'ಡಿ.15ರ ಮಂಗಳೂರು ಆವೃತ್ತಿಯ 3ನೇ ಪುಟದಲ್ಲಿ 'ಆಳ್ವಾಸ್ ನುಡಿಸಿರಿ'ಯ ಬಗ್ಗೆ ಲೇಖನ ಪ್ರಕಟವಾಗಿದೆ. ಇದರಲ್ಲಿ ಇಬ್ಬರು ಕವಿಗಳ ಅಭಿಪ್ರಾಯವನ್ನು ಬಾಕ್ಸ್ನಲ್ಲಿ ನೀಡಿದ್ದೀರಿ. ಆದರೆ ಛಾಯಾಚಿತ್ರ ಮಾತ್ರ ಎರಡೂ ಒಂದೆ. ಎರಡೂ ಚೆನ್ನವೀರ ಕಣವಿಯವರದ್ದೇ ಪ್ರಕಟವಾಗಿದೆ. ಅಲ್ಲಿ ಕೆ.ಎಸ್.ನಿಸಾರ್ ಅಹಮದ್ ಅವರದ್ದಾಗಿರಬೇಕಿತ್ತು' ಎಂದು ಹೇಳಿದ್ದಾರೆ.
ಪ್ರಕಾಶ ಹೆಬ್ಬಾರ್ ಅವರು ತಪ್ಪಾಗಿ ಗ್ರಹಿಸಿದ್ದಾರೆ ಅಥವಾ ತಪ್ಪಾಗಿ ಪತ್ರ ಬರೆದಿದ್ದಾರೆ. ಛಾಯಾಚಿತ್ರವನ್ನು ಸರಿಯಾಗಿ ಬಳಸಲಾಗಿದೆ. ಆದರೆ ಎರಡೂ ಅಭಿಪ್ರಾಯಕ್ಕೆ ಚೆನ್ನವೀರ ಕಣವಿ ಅವರ ಹೆಸರು ನಮೂದಿಸಲಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಹಾಸನ ಜಿಲ್ಲೆಯ ಪುಟದಲ್ಲಾಗಿದೆ. ಡಿ.21ರ ಪುಟ 3 ಮತ್ತು 4ರಲ್ಲಿ ಪ್ರತ್ಯೇಕ ಸುದ್ದಿಗೆ ಒಂದೇ ಚಿತ್ರ ಬಳಸಲಾಗಿದೆ. 3ನೇ ಪುಟದಲ್ಲಿ ಸಣ್ಣದಾಗಿ ಪ್ರಕಟವಾಗಿದೆ. 4ನೇ ಪುಟದಲ್ಲಿ ಅದನ್ನು ಇನ್ನಷ್ಟು ದೊಡ್ಡದಾಗಿ ಮುದ್ರಿಸಿದ್ದಾರೆ. ಈ ಚಿತ್ರವು 'ಕಸಾಯಿಖಾನೆಗೆ ರವಾನಿಸುತ್ತಿದ್ದ ಕರುಗಳ ವಶ'ದ್ದಾಗಿತ್ತು. 3ನೇ ಪುಟದ ಸುದ್ದಿಗೆ ಇದು ಸರಿಯಾಗಿದೆ. ಆದರೆ 4ನೇ ಪುಟದಲ್ಲಿ ಕಾಡಾನೆಗೆ ಸಂಬಂಧಿಸಿದ ಸುದ್ದಿಯಲ್ಲೂ ದನಕರುಗಳು ಪ್ರವೇಶ ಪಡೆದಿವೆ. ಈ ವಿಚಾರವನ್ನು ಹಾಸನದಿಂದ ಮಂಜುನಾಥ್ ಎಂಬುವವರು ಕಚೇರಿಗೆ ಫೋನಾಯಿಸಿ ತಿಳಿಸಿದ್ದಾರೆ.
ಛಾಯಾಚಿತ್ರಗಳ ಅದಲು ಬದಲು ಪ್ರಕರಣ ಆಗಾಗ ಆಗುತ್ತಲೇ ಇರುತ್ತದೆ. ಪುಟ ನಿರ್ವಹಿಸುವಾಗ ನಿರ್ಲಕ್ಷ್ಯ ಮಾಡುವುದೇ ಇದಕ್ಕೆ ಕಾರಣ.

-ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement