ರಜೆ ಯಂತ್ರದಿಂದ ಪ್ರಯೋಜನವಾಗಿಲ್ಲ
ಈ ಹಿಂದೆ ಪ್ರಕಟವಾದ ಸುದ್ದಿಯಲ್ಲಿ ಕಿಯೋಕ್ಸ್, ಎಲ್.ಎಮ್.ಎಸ್. ಯಂತ್ರವನ್ನು ಅಳವಡಿಸಿ ನೌಕರರಿಗೆ ಪಾರದರ್ಶಕ ರಜೆ ನೀಡುವ ....
ಈ ಹಿಂದೆ ಪ್ರಕಟವಾದ ಸುದ್ದಿಯಲ್ಲಿ ಕಿಯೋಕ್ಸ್, ಎಲ್.ಎಮ್.ಎಸ್. ಯಂತ್ರವನ್ನು ಅಳವಡಿಸಿ ನೌಕರರಿಗೆ ಪಾರದರ್ಶಕ ರಜೆ ನೀಡುವ ವ್ಯವಸ್ಥೆ ಮಾಡಿದ್ದೇವೆಂದು ಸಾರಿಗೆ ಸಂಸ್ಥೆಯು ಹೇಳಿಕೊಂಡಿದೆ. ಆದರೆ ಇದರಿಂದ ನೌಕರರಿಗೆ ಯಾವುದೇ ಪ್ರಯೋಜನವಾಗಿಲ್ಲ ಮತ್ತು ಈ ಯಂತ್ರವು ದಿನದ 24 ಗಂಟೆ ಚಾಲೂ ಸ್ಥಿತಿಯಲ್ಲಿ ಇರಬೇಕು. ಆದರೆ ಇರುವುದಿಲ್ಲ. ಒಂದೋ ಸಂಪರ್ಕ ಇರುವುದಿಲ್ಲ ಅಥವಾ ದುರಸ್ತಿಯಲ್ಲಿರುತ್ತದೆ. ಕೆಲವು ಸಮಯದಲ್ಲಿ ರಜೆ ತೆಗೆದುಕೊಳ್ಳುತ್ತಾರೆ ಎಂದು ಮೇಲಾಧಿಕಾರಿಗಳು ಅದನ್ನು ದುರಸ್ಥಿ ಸ್ಥಿತಿಯಲ್ಲಿ ಇರುವ ಹಾಗೆ ವ್ಯವಸ್ಥೆ ಮಾಡುತ್ತಾರೆ. ಇದು ಯಾವ ಪಾರದರ್ಶಕತೆ? ಕೆಲವು ಸಂದರ್ಭದಲ್ಲಿ ರಜೆ ಯಂತ್ರವು ರಜೆ ನೀಡಿದರೂ ಅಲ್ಲಿರುವ ಅಧಿಕಾರಿಗಳು ಅದನ್ನು ತಿರಸ್ಕರಿಸಿ ಕೆಲಸ ನಿರ್ವಹಿಸಲು ಒತ್ತಡ ಹೇರುತ್ತಾರೆ. ಈ ಹಿಂದೆ ಮೇಲಾಧಿಕಾರಿಗಳು ರಜೆ ನೀಡುತ್ತಿರಲಿಲ್ಲ. ಈಗ ರಜೆ ಯಂತ್ರದ ಮುಖಾಂತರ ರಜೆ ನೀಡುವುದಿಲ್ಲವೆಂದು ಹೇಳಿಸುತ್ತಿದ್ದಾರೆ. ಇದು ಸಾರಿಗೆ ಸಂಸ್ಥೆಯವರು ಅಳವಡಿಸಿಕೊಂಡಿರುವ ಪಾರದರ್ಶಕತೆ! ಇದೆಷ್ಟರಮಟ್ಟಿಗೆ ಸರಿ? ಈ ಯಂತ್ರದಲ್ಲಿ 22 ದಿನಗಳ ಹಾಜರಾತಿ ಇದ್ದಾಗ ಮಾತ್ರ ರಜೆ ಕೊಡುವ ವ್ಯವಸ್ಥೆ ಇದೆ. ಇದರಲ್ಲಿ ತಾರತಮ್ಯವೂ ಇದೆ. ಬರೀ ಚಾಲಕ/ ನಿರ್ವಾಹಕ/ ತಾಂತ್ರಿಕ ಸಿಬ್ಬಂದಿಗಳಿಗೆ ಮಾತ್ರ ರಜೆ ಯಂತ್ರ. ಅಲ್ಲಿಯೇ ಕೆಲಸ ಮಾಡುತ್ತಿರುವ ಇನ್ನುಳಿದ ಸಿಬ್ಬಂದಿಗೆ ಅವರು ರಜೆ ತೆಗೆದುಕೊಳ್ಳುವಲ್ಲಿ ಯಾವುದೇ ಶಿಷ್ಟಾಚಾರ ಇರುವುದಿಲ್ಲ. ಇದು ಯಾವ ನ್ಯಾಯ? ಸುಮ್ಮನೆ ಯಂತ್ರ ಖರೀದಿಸಿರುವುದರಿಂದ ಸಂಸ್ಥೆಗೆ ಆರ್ಥಿಕವಾಗಿ ನಷ್ಟವಾಗಿರುತ್ತದೆ.
- ನೊಂದ ಸಾರಿಗೆ ನೌಕರರು
ಸಮಯೋಚಿತ ಲೇಖನ
ಗುರುವಾರದ ಕನ್ನಡಪ್ರಭದ 'ನೂರೆಂಟು ನೋಟ'ದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ 'ಆಸ್ಕರ್, ಮೊಯ್ಲಿ ಶಿರಾಡಿಘಾಟ್ನಲ್ಲಿ ಪ್ರಯಾಣಿಸಿದರೆ ಬೆಟ್ಸ್!' ಸಮಯೋಚಿತವಾಗಿದೆ. ಈ ಲೇಖನ ಓದಿಯಾದರೂ ನಮ್ಮ ಜನಪ್ರತಿನಿಧಿಗಳ ಕಣ್ಣು ತೆರೆಯುವುದೇ? ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳ, ಕೊಲ್ಲೂರು, ಸುಬ್ರಮಣ್ಯ, ಮಲ್ಪೆ ಪ್ರದೇಶಗಳಿಗೆ ದಿನನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಈ ರಸ್ತೆ ಕೊಡುವ ಯಾತನೆ ಅನುಭವಿಸಿದವರಿಗಷ್ಟೇ ಗೊತ್ತು. ಇಲ್ಲಿ ನಿತ್ಯವೂ ಅಪಘಾತಗಳಾಗುತ್ತವೆ. ಒಂದು ಅಪಘಾತವಾಯಿತೆಂದರೆ ಉಳಿದ ವಾಹನಗಳು ಇಡೀ ದಿನ ಅಲ್ಲೇ ನಿಲ್ಲಬೇಕು. ಹೆಂಡತಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದೇ ಒಂದು ಸಾಹಸ. ನಮ್ಮ ನಾಯಕರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಹೋಗುವ ಬದಲು ಒಮ್ಮೆ ಈ ರಸ್ತೆಯಲ್ಲಿ ಹಾದು ಹೋದರೆ ಅವರಿಗೆ ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ. ಸಾಧ್ಯವಾದರೆ ಕುಟುಂಬ ಸಮೇತ ಪ್ರಯಾಣ ಮಾಡಲಿ... ನಮ್ಮ ಪ್ರತಿನಿಧಿಗಳೆನಿಸಿಕೊಳ್ಳುವವರು ನಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎನ್ನುವುದು ಆಗ ಗೊತ್ತಾಗುತ್ತದೆ. ಇಂಥವರನ್ನು ನಮ್ಮ ಪ್ರತಿನಿಧಿಗಳೆನ್ನುವುದಕ್ಕೂ ಮುಜುಗರವಾಗುತ್ತದೆ.
- ರವಿಕುಮಾರ್. ಜಿ.ಬಿ. ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com