ವಿಶ್ವದ ಅತಿ ಬಡ ರಾಷ್ಟ್ರಾಧ್ಯಕ್ಷರ ಆಸೆ
ಜೋಸ್ ಮಜಿಕಾ 2010ರಿಂದ ಉರುಗ್ವೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಸೆನೆಟರ್ ಆಗಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ...
ಜೋಸ್ ಮಜಿಕಾ 2010ರಿಂದ ಉರುಗ್ವೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಸೆನೆಟರ್ ಆಗಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಅವರು ರಾಜಕೀಯಕ್ಕೆ ಬರುವ ಮೊದಲು ಕೃಷಿಕರಾಗಿದ್ದರು. 1969ರಲ್ಲಿ ಆಧ್ಯಕ್ಷರಾಗಿದ್ದ ಜಾರ್ಜ್ ಪಚಾಕೋ ನಾಗರಿಕರ ಅನೇಕ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದಾಗ ಜೋಸ್ ಅಂದಿನ ಆಡಳಿತದ ವಿರುದ್ಧ ಹೋರಾಡಿದ್ದರು. ಅದರ ಪರಿಣಾಮವಾಗಿ ಹಲವಾರು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. 1986 ರಲ್ಲಿ ಪ್ರಜಾಪ್ರಭುತ್ವ ಮರುಕಳಿಸಿದಾಗ ಜೋಸ್ ಅವರ ಬಿಡುಗಡೆಯಾಯಿತು. ನಂತರ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಜೋಸ್ರಿಗೆ ಕೃಷಿಯ ಮೇಲೆಯೇ ಒಲವು ಜಾಸ್ತಿ. ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಸ್ಪಂದಿಸುವ ಇವರು ತಮಗೆ ತಿಂಗಳಿಗೆ ನೀಡಲಾಗುತ್ತಿರುವ 12ಸಾವಿರ ಡಾಲರ್ ವೇತನದಲ್ಲಿ ಶೇ.90ರಷ್ಟು ಹಣವನ್ನು ಜನಸೇವೆಗೆ ಮತ್ತು ದಾನಧರ್ಮಗಳಿಗೆ ವಿನಿಯೋಗಿಸುತ್ತಿದ್ದಾರೆ.
ಇನ್ನು ಕೇವಲ 120 ಡಾಲರುಗಳಲ್ಲಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅದಕ್ಕಾಗಿ ವೈಭವೋಪೇತವಾದ ರಾಷ್ಟ್ರಾಧ್ಯಕ್ಷರ ನಿವಾಸವನ್ನು ತೊರೆದು ಅಲ್ಲಿಯೇ ನಗರದ ಹೊರವಲಯದಲ್ಲಿ ತಮ್ಮ ಜಮೀನಿನಲ್ಲಿರುವ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದನ್ನು ಕಾಯಲು ಯಾವ ರಕ್ಷಣಾ ಪಡೆಯನ್ನೂ ನೇಮಕ ಮಾಡಿಲ್ಲ. ಸರ್ಕಾರದ ಯಾವ ಆಡಂಬರಗಳನ್ನೂ ಬಯಸದ ಜೋಸ್ಗೆ ಸರಳ ಜೀವನದಲ್ಲಿಯೇ ನಂಬಿಕೆ. ಇದರಿಂದಾಗಿ ಜನರ ಪ್ರೀತಿಯನ್ನೂ, ಗೌರವವನ್ನೂ ಗಳಿಸಿದ್ದಾರೆ. ಅವರ ಪ್ರಕಾರ ಅಧಿಕಾರವೆನ್ನುವುದು ಸಾಮಾನ್ಯ ಜನರ ಹೃದಯಾಂತರಾಳದಿಂದ ಬರುತ್ತದೆಯೇ ವಿನಾ ಬೇರೆ ಮೂಲಗಳಿಂದ ಅಲ್ಲ ಎಂಬುದು. ಉರುಗ್ವೆ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿರುವ ಜೋಸ್ ತಮ್ಮ ಜನರಿಗಾಗಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವೆಲ್ಲಾ ಅವರಿಗೆ ಕೀರ್ತಿಯನ್ನೂ, ಜಗತ್ತಿನ ಅತಿ ಬಡ ರಾಷ್ಟ್ರಾಧ್ಯಕ್ಷರೆಂಬ ಅಭಿದಾನ ಪಡೆಯಲು ಕಾರಣವಾಗಿದೆ. ಅದಕ್ಕಾಗಿ ಅವರಿಗೆ ಸಂತಸವೂ ಆಗಿದೆ. 78 ವರ್ಷದ ಜೋಸ್ ತಮ್ಮ ಅಧಿಕಾರ ಮುಗಿದಮೇಲೆ 30ಕ್ಕೂ ಹೆಚ್ಚು ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಕೃಷಿ ಕಲಿಸಿ, ಅವರನ್ನು ಉತ್ತಮ ಕೃಷಿಕರನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಹಾಗೆಯೇ ತಮ್ಮ ಅಧಿಕಾರಾವಧಿ ಮುಗಿದ ನಂತರ ಮತ್ತೆ ತಮ್ಮ ಕೃಷಿ ಉದ್ಯೋಗಕ್ಕೆ ತೆರಳುವ ಆಲೋಚನೆಯನ್ನೂ ಮಾಡಿದ್ದಾರೆ. ಅವರ ಪತ್ನಿಯೂ ಸಹ ಸೆನೆಟರ್ ಆಗಿದ್ದು ಅವರೂ ಸಹ ತಮ್ಮ ಪತಿಯ ಕಾರ್ಯದಲ್ಲಿ ಜೊತೆಗೂಡಿದ್ದಾರೆ.
(ಗಾರ್ಡಿಯನ್ ಪತ್ರಿಕೆ ವರದಿ: ದಿನಾಂಕ 17.12.2013)
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.