ಶಾಸಕರ ಪ್ರವಾಸದಿಂದ ಪ್ರಯೋಜನವೇನು?
ಶಾಸಕರು ಪ್ರತಿವರ್ಷವೂ ಅಧ್ಯಯನ ಪ್ರವಾಸಕ್ಕೆ ತೆರಳುವರು. ಈ ವರ್ಷ ವಿಶೇಷವೇನಲ್ಲ ಮತ್ತು ಇದು ತಮ್ಮ ನಿರ್ಧಾರವಲ್ಲ ...
ಶಾಸಕರು ಪ್ರತಿವರ್ಷವೂ ಅಧ್ಯಯನ ಪ್ರವಾಸಕ್ಕೆ ತೆರಳುವರು. ಈ ವರ್ಷ ವಿಶೇಷವೇನಲ್ಲ ಮತ್ತು ಇದು ತಮ್ಮ ನಿರ್ಧಾರವಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಅಧ್ಯಯನ ಮಾಡಿರುವಂತಹ ಕೆಲವು ಶಾಸಕರಾದರೂ ತಾವು ಮಾಡಿರುವ ಅಧ್ಯಯನದಿಂದ ಕಲಿತು ದೇಶಕ್ಕೆ ಮಾಡಿರುವ ಉಪಯೋಗವಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಜನ ಸಾಮಾನ್ಯರು ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಜ್ಯದಲ್ಲಿ ಕ್ಷಾಮ ಮತ್ತು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಿಶ್ಚಿಂತೆಯಿಂದ ಪ್ರವಾಸಕ್ಕೆ ಹೊರಟಿದ್ದಾರೆಂದರೆ ಇವರುಗಳಿಗೆ ಸಮಸ್ಯೆಗಳ ಅರಿವೇ ಆಗಿಲ್ಲವೆಂಬುವುದು ಸ್ಪಷ್ಟವಾಗುತ್ತದೆ.
35 ರಿಂದ 40 ವರ್ಷ ಸೇವೆ ಸಲ್ಲಿಸುವಂತಹ ಸರ್ಕಾರಿ ನೌಕರರಿಗೆ ಇದುವರೆವಿಗೂ ಸೇವೆಯಲ್ಲಿ ಒಮ್ಮೆ ಮಾತ್ರ ಎಲ್.ಟಿ.ಸಿ ಹೋಗುವ ಅವಕಾಶವಿದ್ದು ಇತ್ತೀಚೆಗೆ ಮಾತ್ರ ಸೇವೆಯಲ್ಲಿರುವಾಗ 2 ಬಾರಿ ಪ್ರವಾಸ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂದರೆ ಶಾಸಕರು ಒಂದೇ ಅವಧಿಗೆ ಚುನಾಯಿಸಲ್ಪಟ್ಟರೂ 5 ವರ್ಷದಲ್ಲಿ 5 ಬಾರಿ ಸಾರ್ವಜನಿಕರ ಹಣವನ್ನು ಉಪಯೋಗಿಸಿಕೊಂಡು ಪ್ರವಾಸಕ್ಕೆ ಹೋಗುವಂತಹ ಅದೃಷ್ಟವನ್ನು ಪಡೆಯುತ್ತಾರೆ. ಪ್ರವಾಸಕ್ಕೆ ಎಲ್ಲಾ ಪಕ್ಷದವರೂ ಪಕ್ಷಭೇದವನ್ನು ಮರೆತು ಹೋಗಿಬಂದರೂ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಾಗ ಒಂದು ಪಕ್ಷದವರು ಇನ್ನೊಂದು ಪಕ್ಷದವರ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ತತ್ವದ ಆಧಾರದ ಮೇಲಿರುವ ಭಿನ್ನಾಭಿಪ್ರಾಯಗಳಿಗಿಂತಲೂ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸುವುದಿಲ್ಲ. ಅಂದರೆ ಅಧ್ಯಯನ ಪ್ರವಾಸದಿಂದ ಶಾಸಕರು ಕಲಿತಿರುವುದಾದರೂ ಮತ್ತು ಕಲಿಯುವುದಾದರೂ ಏನು ಎಂದೆನಿಸುತ್ತದೆ. ಶಾಸಕರಿಗೂ ಸಂಬಳ ಸಾರಿಗೆ ಕೊಡುವುದರಿಂದ ಅವರು ತಮ್ಮ ವೆಚ್ಚದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಇದಕ್ಕೆ ಇವರಿಗೆ ಸಾರ್ವಜನಿಕರ ಹಣವೇ ಏಕೆ ಬೇಕು ಲಕ್ಷಾಂತರ ಮತ್ತು ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ಇವರ ಅಧ್ಯಯನಕ್ಕೆ ಸುರಿಯುವ ಬದಲು ರಾಜ್ಯದಲ್ಲಿ ವಿದ್ಯುತ್ ಅಭಾವವನ್ನು ನೀಗಿಸುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು ಮತ್ತು ದಶಕಕ್ಕೂ ಹೆಚ್ಚು ವರ್ಷಗಳಿಂದ ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಿಸುವುದು ಇಂತಹ ಕೆಲಸಗಳನ್ನು ಕೈಗೊಂಡರೆ, ಶಾಸಕರು ಮತದಾರರಿಂದ ಪಡೆದ ಮತಕ್ಕಾದರೂ ಬೆಲೆ ನೀಡಿದಂತಾಗುವುದು. ಸಾರ್ವಜನಿಕ ಹಣ ದುರ್ಬಳಕೆಯನ್ನು ಸಾರ್ವಜನಿಕರು ಮತ್ತು ಮಾಧ್ಯಮಗಳು ತೀವ್ರವಾಗಿ ಪ್ರತಿಭಟಿಸಲೇ ಬೇಕು. ಇಲ್ಲವಾದಲ್ಲಿ ಇವರು ಮಾಡಿರುವ ಖರ್ಚಿನ ಭಾರವನ್ನು ಸಾರ್ವಜನಿಕರೇ ಹೆಚ್ಚುವರಿ ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ.
-ಕೆ.ವಿ. ಸೀತಾರಾಮಯ್ಯ, ಹಾಸನ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com