ತಪ್ಪಾಯ್ತು ತಿದ್ಕೋತೀವಿ
ಫ್ಯಾಷನ್ ಡಿಸೈನರ್ ಮಧು ಅವರು ಬರೆಯುತ್ತಾರೆ- 'ನ.23ರ 'ಕನ್ನಡಪ್ರಭ' ಪುಟ 7ರಲ್ಲಿ 'ಇಂಥಾ ಬಾಸ್ಗಳನ್ನು ಭಯವಿಲ್ಲದೇ ಬಯಲಿಗೆಳೆಯಬೇಕಿದೆ' ..
ಫ್ಯಾಷನ್ ಡಿಸೈನರ್ ಮಧು ಅವರು ಬರೆಯುತ್ತಾರೆ- 'ನ.23ರ 'ಕನ್ನಡಪ್ರಭ' ಪುಟ 7ರಲ್ಲಿ 'ಇಂಥಾ ಬಾಸ್ಗಳನ್ನು ಭಯವಿಲ್ಲದೇ ಬಯಲಿಗೆಳೆಯಬೇಕಿದೆ' ಶೀರ್ಷಿಕೆಯಲ್ಲಿ ಕಿರುತೆರೆ ನಟಿ 'ಮಾಳವಿಕ ಅವಿನಾಶ್' ಅವರ ಲೇಖನ ಪ್ರಕಟವಾಗಿದೆ. ತಮಾಷೆ ಅಂದ್ರೆ ಲೇಖನದ ಕೆಳಭಾಗದಲ್ಲಿ 'ಮಾಳವಿಕ ಅವಿನಾಶ್ ಬಿಜೆಪಿ ನಾಯಕಿ, ನಟಿ' ಎಂದು ಪ್ರಕಟವಾಗಿದೆ.'
'ಸರ್, ಮಾಳವಿಕ ನಟಿ ಅಷ್ಟೇ. ಈಗಷ್ಟೇ ದೇವೇಗೌಡರ ಪಕ್ಷದ 'ತೆನೆ'ಯ ಭಾರವನ್ನು ಹೊರಲಾಗದೆ ಬಿಜೆಪಿ ಪಕ್ಷವನ್ನು ಸೇರಿರುವ ಒಬ್ಬ ಕಾರ್ಯಕರ್ತೆ ಅಷ್ಟೇ. ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸದೇ, ಗೆಲುವು ಸಾಧಿಸದೇ ಮಾಳವಿಕ ಅವಿನಾಶ್ ಬಿಜೆಪಿ ನಾಯಕಿ ಆಗಿದ್ದಾದರೂ ಹೇಗೆ?' ಎಂದಿದ್ದಾರೆ.
ಮಧು ಅವರು ಚುನಾವಣೆಯಲ್ಲಿ ಗೆದ್ದವರು ಮಾತ್ರ ನಾಯಕ-ನಾಯಕಿ ಎಂದು ಅರ್ಥೈಸಿದ್ದಾರೆ. ಅವರ ದೃಷ್ಟಿಯಲ್ಲಿ ಅದು ಸರಿ ಇರಬಹುದು. ಆದರೆ ಚುನಾವಣೆ ಗೆಲ್ಲದೆಯೇ ಪಕ್ಷದ ನಾಯಕರಾದ, ನಾಯಕರಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಬಿಜೆಪಿಯಲ್ಲಿ ರಾಷ್ಟ್ರೀಯ ಸ್ಥರದಲ್ಲಿ ಕೆಲವು ಕಿರುತೆರೆ ನಟಿಯರಿದ್ದಾರೆ. ಅವರು ಜನಪ್ರಿಯತೆಯ ಆಧಾರದಲ್ಲಿಯೇ ನಾಯಕಿಯಾದವರು. ಅವರೇನು ಚುನಾವಣೆ ಗೆದ್ದು ನಾಯಕರಾದವರಲ್ಲ. ನಮ್ಮ ದೇಶದ ಪ್ರಧಾನಿಯೇ ಚುನಾವಣೆ ಗೆದ್ದು ನಾಯಕರಾದವರಲ್ಲ ಎಂಬುದನ್ನು ಮಧು ಅವರಿಗೆ ನೆನಪಿಸ ಬಯಸುತ್ತೇನೆ.
ಇನ್ನು ನಾಯಕನಾದವನು ಹೇಗಿರಬೇಕು? ಎಂಥವರು ನಾಯಕ-ನಾಯಕಿಯರಾಗಬೇಕು? ಈಗ ಎಂಥವರು ನಾಯಕರಾಗುತ್ತಿದ್ದಾರೆ? ಎಂಬುದೆಲ್ಲ ಚರ್ಚೆಯ ಸಂಗತಿ. ಅದರ ಬಗ್ಗೆ ಚರ್ಚೆ ಮಾಡಹೊರಟರೆ ಅದಕ್ಕೇ ಬೇರೆ ಅಂಕಣ ಬೇಕಾದೀತು. ಇನ್ನು ಅಕಸ್ಮಾತ್ ಮಾಳವಿಕ ಅವರನ್ನು 'ಬಿಜೆಪಿ ಕಾರ್ಯಕರ್ತೆ' ಎಂದು ಪ್ರಕಟಿಸಿದ್ದರೆ ಪತ್ರಿಕೆಗಾಗಲೀ, ಅವರು ಬರೆದ ಲೇಖನದ ಸಂಗತಿಗಳ ಮಹತ್ವವಾಗಲೀ ಕಡಿಮೆಯಾಗುತ್ತಿರಲಿಲ್ಲ. ಅವರನ್ನು ಬಿಜೆಪಿ ನಾಯಕಿ ಅಂತ ಬರೆದಾಕ್ಷಣ ಅವರ ಅಥವಾ ಅವರ ಬರವಣಿಗೆ ಮೌಲ್ಯ ಹೆಚ್ಚಾಗುವುದೂ ಇಲ್ಲ.
ಮೈಸೂರಿನ ಕುವೆಂಪು ನಗರದಿಂದ ಸಿ. ದಿನಮಣಿ ರಾವ್ ಬರೆಯುತ್ತಾರೆ- 'ನ.28ರಂದು ಪತ್ರಿಕೆಯ ಪುಟ 6ರಲ್ಲಿ (ಮೈಸೂರು ಆವೃತ್ತಿ) ಮೈಸೂರು ಪ್ರದೇಶಗಳ ವರದಿಗಳಲ್ಲಿ 'ಸುದ್ದಿ ಸಂಕ್ಷೇಪ' ಇದರಲ್ಲಿ 'ಬ್ಯಾಂಕ್ ನೌಕರ ನೀರುಪಾಲು' ಎಂಬ ಶೀರ್ಷಿಕೆಯ ವರದಿಯಲ್ಲಿ ಬಂದಿರುವ ಈ ಆಭಾಸವನ್ನು ದಯವಿಟ್ಟು ಗಮನಿಸಿ. 'ಮರಣೋತ್ತರ ಪರೀಕ್ಷೆ ವರದಿ ಬಂದ ಶಾವಿಗೆ ಕಾರಣ ಸ್ಪಷ್ಟವಾಗಲಿದೆ' ಎಂದಿದೆ. ಇಲ್ಲಿನ ತಪ್ಪನ್ನು ತಿದ್ದಿಕೊಂಡು 'ಮರಣೋತ್ತರ ವರದಿ ಬಂದನಂತರ ಸಾವಿಗೆ ಕಾರಣ ಸ್ಪಷ್ಟವಾಗಲಿದೆ' ಎಂದು ತಿದ್ದಿಕೊಂಡು ಓದಿಕೊಂಡರೆ ಅರ್ಥವಾಗುತ್ತದೆ.'
'ಇದೇ ಪುಟದಲ್ಲಿನ ಚಿತ್ರಸಹಿತ ವರದಿಯಲ್ಲಿ 'ಮುಂಬೈ ಸ್ಫೋಟ ಹುತಾತ್ಮರಿಗೆ ಮೈಸೂರಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಲಾಯಿತು' ಎಂದಿದೆ. ಇಲ್ಲಿ 'ಸಲ್ಲಿಸಲಾಯಿತು' ಪದವು ಸೂಕ್ತವಾಗಿಲ್ಲ. 'ಸಲ್ಲಿಸಿದರು' ಎಂದು ಇರಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರ ಭಟ್