ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿವಾಹಿತರಿಗಷ್ಟೇ ಇಲ್ಲಿ ಕೆಲಸ

ಕಡೆಂಗೋಡ್ಲು ಶಂಕರಭಟ್ಟರು ನಾಡಿನ ಕವಿವರ್ಯರಲ್ಲಿ ಒಬ್ಬರು. ಕೃಷಿಕ ಕುಟುಂಬದಲ್ಲಿ ಜನಿಸಿದ ಶ್ರೀಯುತರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ..

Rashmi Kasaragodu
Updated On : 30 Dec 2013, 1:23 am

ಕಡೆಂಗೋಡ್ಲು ಶಂಕರಭಟ್ಟರು ನಾಡಿನ ಕವಿವರ್ಯರಲ್ಲಿ ಒಬ್ಬರು. ಕೃಷಿಕ ಕುಟುಂಬದಲ್ಲಿ ಜನಿಸಿದ ಶ್ರೀಯುತರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಪರೂಪದ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದರು. ನವಯುಗ ಪತ್ರಿಕೆಯ ಉಪಸಂಪಾದಕರಾಗಿ, ರಾಷ್ಟ್ರಬಂಧು ಪತ್ರಿಕೆಯ ಸಂಪಾದಕರಾಗಿ, ರಾಷ್ಟ್ರಮತ ಪತ್ರಿಕೆಯ ಸ್ಥಾಪಕ - ಸಂಪಾದಕರಾಗಿ ಸೇವೆ ಸಲ್ಲಿಸಿದರು. ಸ್ಫಟಿಕಶುದ್ಧ ವ್ಯಕ್ತಿತ್ವದ ಕಡಂಗೋಡ್ಲುರಲ್ಲಿ ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಕಲಿಯುವಾಗಲೇ, ಕವಿತ್ವದ ಬೀಜಾಂಕುರವಾಯಿತು. ಅಲ್ಲಿ ಅವರು ಅವರ ಸೋದರಮಾವ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿದ್ದುಕೊಂಡು ಓದುತ್ತಿದ್ದರು. 1920 ರವೇಳೆಗೆ ವಿದ್ಯಾರ್ಥಿಗಳ ಕಾವ್ಯಶಕ್ತಿ ಪರೀಕ್ಷಣಕ್ಕಾಗಿ ಗೋವಿಂದ ಪೈ ಯವರು ಒಂದು ಆಶುಕವಿತಾ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅದರಲ್ಲಿ ಶಂಕರಭಟ್ಟರು ಬರೆದ ಗೂಡಿನ  ಹಕ್ಕಿ ಕವನಕ್ಕೆ ಬಹುಮಾನ ಬಂತು. ಅದನ್ನು ಓದಲೆಂದೇ ಸೇಡಿಯಾಪು ಕೃಷ್ಣಭಟ್ಟರು ಪುತ್ತೂರಿನಿಂದ ಮಂಗಳೂರಿಗೆ ನಡೆದು ಬಂದು ಕವಿತೆಯನ್ನು ಕೇಳಿ ಪಡೆದು ಓದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರಂತೆ ಮೆಟ್ರಿಕ್‌ನಂತರ ಗಾಂಧೀಜಿಯವರ ಪ್ರಭಾವಕ್ಕೆ ಮಣಿದು, ಕಾರ್ನಾಡು ಸದಾಶಿವರಾಯರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಆದರೂ ಅವರಿಗೆ ಓದುವ ತವಕ ಹೆಚ್ಚಾಗಿ ಎರಡು ವರ್ಷದ ಕನ್ನಡದ ವಿದ್ವತ್ ಪರೀಕ್ಷೆಯನ್ನು ಒಂದೇ ವರ್ಷದಲ್ಲಿ ಓದಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಆಗ ಅವರಿಗಿನ್ನೂ 23 ರ ಹರೆಯ. ಆಗ ಸೈಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಒಂದು ಸ್ಥಳ ತೆರವಾಗಿತ್ತು. ಅದಕ್ಕೆ ಪಂಜೆ ಮಂಗೇಶರಾಯರನ್ನು ಆಯ್ಕೆ ಮಾಡಿ ಹುದ್ದೆಯನ್ನು ಒಪ್ಪಿಕೊಳ್ಳಲು ಆಹ್ವಾನಿಸಲಾಯಿತು. ಆದರೆ ಪಂಜೆಯವರು ಆ ಹುದ್ದೆಗೆ ಕಡೆಂಗೋಡ್ಲು ಶಂಕರಭಟ್ಟರನ್ನು ಶಿಫಾರಸು ಮಾಡಿ ಅವರನ್ನು ನೇಮಿಸಿಕೊಳ್ಳಲು ಮನವಿ ಮಾಡಿದರು. ಆದರೆ ಆಡಳಿತ ಮಂಡಳಿಯವರು ಪಂಜೆಯವರ ಶಿಫಾರಸನ್ನು ಒಪ್ಪದೆ ತಮ್ಮ ಕಾಲೇಜಿನಲ್ಲಿ ಅವಿವಾಹಿತರನ್ನು ನೇಮಿಸಿಕೊಳ್ಳಲಾಗುವುದಿಲ್ಲವೆಂದೂ, ಅದು ಕೇವಲ ವಿವಾಹಿತರಿಗೆ ಮಾತ್ರ ಮೀಸಲಾಗಿರುವುದೆಂದೂ ವಿವರಿಸಿದರು. ಅದಕ್ಕೆ ಪಂಜೆಯವರು ಹೇಳಿದರು, "ನನ್ನ ಮೇಲೆ ಎಷ್ಟು ವಿಶ್ವಾಸ ಇದೆಯೋ ಅದೇ ವಿಶ್ವಾಸವನ್ನು ಶಂಕರಭಟ್ಟರ ಮೇಲೆ ಇಡಬಹುದು". ಇಷ್ಟು ಹೇಳಿದ್ದಷ್ಟೇ ಅಲ್ಲದೆ ಆ ಕೆಲಸವನ್ನು ಅವರಿಗೇ ಕೊಡಿಸಿದರು. ಅಲ್ಲಿ ಅವರು ಚಿತ್ತಾಪಹರಿ ಪ್ರಾಧ್ಯಾಪಕರಾಗಿ ಎಲ್ಲ ವಿದ್ಯಾರ್ಥಿನಿಯರ ಪ್ರೀತಿಗೆ ಪಾತ್ರರಾಗಿದ್ದರು. ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ಶಂಕರಭಟ್ಟರ ವಿವಾಹವಾದಾಗ ಆಡಳಿತ ಮಂಡಳಿಯವರಿಗೆ ತುಂಬಾ ಸಂತೋಷವಾಯಿತು. ಅದೇ ಕಾಲೇಜಿನಲ್ಲಿಯೇ ಅವರು ಕೊನೆಯವರೆಗೂ ಸೇವೆಸಲ್ಲಿಸಿ ನಿವೃತ್ತರಾದರು.




- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments