ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾರ್ಪೊರೇಟ್ ವಲಯ- ಲೋಕಪಾಲರು

ಸಂಸತ್ತಿನ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದು, ರಾಷ್ಟ್ರಪತಿಯ ಅಂಗೀಕಾರದ ಮುದ್ರೆ ಬಿದ್ದ ಅನಂತರ ಕಾಯಿದೆಯ ರೂಪದಲ್ಲಿ ...

Rashmi Kasaragodu
Updated On : 31 Dec 2013, 12:46 pm

ಸಂಸತ್ತಿನ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದು, ರಾಷ್ಟ್ರಪತಿಯ ಅಂಗೀಕಾರದ ಮುದ್ರೆ ಬಿದ್ದ ಅನಂತರ ಕಾಯಿದೆಯ ರೂಪದಲ್ಲಿ ಜಾರಿಗೆ ಬರಲಿರುವ ಲೋಕಪಾಲ ವ್ಯವಸ್ಥೆ ಸರ್ಕಾರ, ಸರ್ಕಾರಿ ವಲಯದ ಉದ್ಯಮಗಳ ಮೇಲೆ ಪರಿಣಾಮ ಬೀರುವಂತೆಯೇ ಕಾರ್ಪೊರೇಟ್ ವಲಯದ ಮೇಲೂ ಪರಿಣಾಮ ಬೀರಲಿದೆ.
   ನೇರವಾಗಿ, ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದಂತೆಯೇ ಲೋಕಪಾಲ ವ್ಯವಸ್ಥೆಯಲ್ಲಿ ಹಲವಾರು ನಿಯಮಗಳು ಜಾರಿಗೆ ಬರಲೇ ಬೇಕು. ಲೋಕಪಾಲ ವ್ಯವಸ್ಥೆಯ ಯಶಸ್ಸು ಹಾಗೂ ಸೋಲಿಗೆ ಕಾರ್ಪೊರೇಟ್ ವ್ಯವಹಾರವೂ ಹೊಣೆಯನ್ನು ಹೊರಲೇ ಬೇಕು. ಈಗಾಗಲೇ ಎಲ್ಲರ ಗಮನಕ್ಕೂ ಬಂದಿರುವಂತೆ ಎರಡನೇ ತಲೆಮಾರಿನ ಟೆಲಿಕಾಮ್ ತರಂಗಾಂತರ ಗುಚ್ಛಗಳ ಹಂಚಿಕೆಯ ಹಗರಣದಲ್ಲಿ ಕಾರ್ಪೊರೇಟ್ ವಲಯದ ಪಾತ್ರ ಗಮನಾರ್ಹವಾಗಿತ್ತು. ಅದೇ ರೀತಿ ಅಕ್ರಮ ಗಣಿಗಾರಿಕೆ, ಕಲ್ಲಿದ್ದಲು ಗಣಿಗಳ ಹಂಚಿಕೆಯ ವ್ಯವಹಾರದಲ್ಲೂ ಆ ಪಾತ್ರ ಅನುಮಾನಕ್ಕೆ ಅವಕಾಶವೇ ಇಲ್ಲದಂತೆ ಪ್ರಚಾರ ಪಡೆದಿದೆ. ನಿಜ. ದೇಶದ ಕಾರ್ಪೊರೇಟ್ ವಲಯದ ಎಲ್ಲ ಸಂಸ್ಥೆಗಳೂ ಅಪ್ರಾಮಾಣಿಕವಲ್ಲ. ಬಹುತೇಕ ಸಂಸ್ಥೆಗಳ ವ್ಯವಹಾರ ಪ್ರಾಮಾಣಿಕವಾಗಿಯೇ ನಡೆದಿರಬಹುದು. ಈಗ ಕಾರ್ಪೊರೇಟ್ ವಲಯದ ಬೃಹತ್ ಸಂಸ್ಥೆಗಳೆಲ್ಲವೂ ನೂತನ ಲೋಕಪಾಲ ವ್ಯವಸ್ಥೆಯ ನಿಯಮಗಳ ವಿವರಗಳು ಹಾಗೂ ಅದರ ಜಾರಿಯಲ್ಲಿ ಸಂಸ್ಥೆಗಳ ಪಾತ್ರ ಕುರಿತಂತೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಮುಂದಾಗಿವೆ. ಇದು ಒಳ್ಳೆಯ ಸೂಚನೆ.   ಹೊಸ ವ್ಯವಸ್ಥೆಯಲ್ಲಿ ಸಂಸ್ಥೆಗಳ ವ್ಯವಹಾರ ಹಾಗೂ ವರ್ತನೆಯಲ್ಲಿ ನಿರ್ದೇಶಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಆ ಸ್ಥಿತಿಯನ್ನು ಎದುರಿಸಲು ಹಾಗೂ ನಿಭಾಯಿಸಲು ಕಾರ್ಪೊರೇಟ್ ವಲಯ, ಸಂಸ್ಥೆಗಳ ಮಟ್ಟದಲ್ಲಿ ವಿಶೇಷ ಚಿಂತನೆ ಹಾಗೂ ಕಾರ್ಯ ಪಡೆಗಳನ್ನು ರಚಿಸಿಕೊಳ್ಳುವುದು ಸೂಕ್ತ. ಸಂಸ್ಥೆಗಳು ತಮ್ಮ ಅನುಭವವನ್ನು ಲೋಕಪಾಲ ವ್ಯವಸ್ಥೆಯ ಜತೆ ಹಂಚಿಕೊಳ್ಳುವುದೂ ಒಳ್ಳೆಯದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement