ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಎಚ್.ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಡಿ.25ರ ಸಂಚಿಕೆಯ ಬೆಂಗಳೂರು ಆವೃತ್ತಿಯಲ್ಲಿ ನಾನು ಓದಿದ ಸುದ್ದಿ -...
ಬೆಂಗಳೂರಿನಿಂದ ಎಚ್.ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಡಿ.25ರ ಸಂಚಿಕೆಯ ಬೆಂಗಳೂರು ಆವೃತ್ತಿಯಲ್ಲಿ ನಾನು ಓದಿದ ಸುದ್ದಿ -ಬರಹಗಳಲ್ಲಿ ಕಂಡು ಬಂದ ದೋಷಗಳಲ್ಲಿ ಕೆಲವನ್ನು ಪ್ರಾತಿನಿಧಿಕವಾಗಿ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.'
'ಪುಟ 13: 'ಪೌರೋಹಿತ್ಯರಿಂದ' ಎಂಬ ಅಬದ್ಧ ಪದವೊಂದನ್ನು ನಿಮ್ಮ ವರದಿಗಾರರು ಸೃಷ್ಟಿಸಿದ್ದಾರೆ! ಅದು 'ಪುರೋಹಿತರಿಂದ' ಎಂದಾಗಬೇಕು. ಪುರೋಹಿತರು ವೇದೋಕ್ತ ವಿಧಿಯನ್ನು ನಡೆಸಿಕೊಡುತ್ತಾರಲ್ಲಾ, ಆ ನಡೆಸಿಕೊಡುವಿಕೆ ಪೌರೋಹಿತ್ಯವೆನಿಸುತ್ತದೆ. 'ಪೌರೋಹಿತ್ಯ'ವೆಂದರೆ ಅದು 'ಪುರೋಹಿತನ ಕೆಲಸ'. ಯಾರೇ ಆಗಲೀ ಮುಂದಾಳುತನ ವಹಿಸಿದರೆ ಆ 'ಮುಂದಾಳುತನ ವಹಿಸುವಿಕೆ'ಗೂ 'ಪೌರೋಹಿತ್ಯ' ವೆಂದೇ ಕರೆಯುತ್ತೇವೆ. 'ಪೌರೋಹಿತ್ಯದಿಂದ ಕ್ರಿಯಾದಿಗಳನ್ನು ನಡೆಸಬಾರದು....' ಎಂಬ ವರದಿ ಭಾಗವು ಈ ರೀತಿ ತಪ್ಪು ವಾಕ್ಯ ರಚನೆಯಿಂದ ಕೂಡಿದೆ.'
ಇದೇ ವರದಿಯಲ್ಲಿ, 'ತಂ' ಅಕ್ಷರಕ್ಕೆ 'ಟ ಒತ್ತು ನೀಡಿ', 'ಣು' ಅಕ್ಷರದ ಮೇಲೊಂದು ಅಡ್ಡ ಗೆರೆ ಎಳೆದು, ಮುಂದೆ 'ವರ' ಎಂಬ ಅಕ್ಷರ ಪದವನ್ನು ಸೇರಿಸಿ, ಕಂಪ್ಯೂಟರ್ ಕೀಲಿಮಣೆಯ ಚೋದ್ಯದಿಂದ ವಿಚಿತ್ರ ಪದವೊಂದನ್ನು ಸೃಷ್ಟಿಸಲಾಗಿದೆ! ಈ ಪದವು ನಾನು 'ತಂದೆಯವರ' ಎಂದು ಸರಿಯಾಗಿ ಓದಿಕೊಂಡೆ. ಮತ್ತೆ ಇದೇ ವರದಿಯಲ್ಲಿ 'ತತ್ವ' ಎಂದು ತಪ್ಪಾಗಿ ಪ್ರಕಟವಾಗಿದೆ. 'ಹಿಂದುತ್ವ' , 'ನಾಯಕತ್ವ' ಇದ್ದ ಹಾಗೆ ಇದು 'ತತ್ ತ್ವ 'ತತ್ತ್ವ' ಆಗಬೇಕು. ಈ ಪದದ ಬಗ್ಗೆ ಈ ಹಿಂದೆಯೇ ಈ ಅಂಕಣದಲ್ಲಿ ತಿಳಿಸಲಾಗಿದೆ.'
'ಪುಟ7: 'ಅಸ್ಪೃಷ್ಯತೆ' ಎಂಬ ಪದವೊಂದಿದ್ದು ಅದು 'ಅಸ್ಪೃಶ್ಯತೆ' ಎಂದಾಗಬೇಕು. 'ಸ್ಪರ್ಶ' ಎಂಬ ಪದವಿದೆಯೇ ಹೊರತು 'ಸ್ಪರ್ಷ' ಎಂಬ ಪದ ಇಲ್ಲ. ಲೇಖನಗಳ ಅನುವಾದಕರಿಗೆ ಉತ್ತಮ ಭಾಷಾ ಜ್ಞಾನ ಅಗತ್ಯ. ಪುಟ2: 'ವ್ಯವಹಾರಿಕ', 'ಗಂಭೀರತೆ', ಈ ಪದಗಳು ಕ್ರಮವಾಗಿ 'ವ್ಯಾವಹಾರಿಕ', 'ಗಾಂಭೀರ್ಯ' ಆಗಬೇಕು.'
'ಪುಟ9: 'ಕಡಗೋಲು' ಎಂಬ ತಪ್ಪು ಪದ ಕಾಣಿಸಿಕೊಂಡಿದೆ. ಇದು, 'ಕಡೆಯುವ ಕೋಲು' = ಕಡೆಗೋಲು ಆಗಬೇಕು. ಇದೇ ವರದಿಯಲ್ಲಿ ರಾಘವೇಂದ್ರ ಸ್ವಾಮಿಗಳು, ಪಾಪ, ರಾಘವಂದ್ರ ಸ್ವಾಮಿಗಳಾಗಿದ್ದಾರೆ! ಉಡುಪಿ ಶ್ರೀಕೃಷ್ಣನು ಮಧ್ವಾಚಾರ್ಯರಿಂದ ಪ್ರತಿಷ್ಠಾಪಿತನಾಗುವ ಬದಲು 'ಮಧ್ವಾಚಾರ್ಯರು ಪ್ರತಿಷ್ಠಾಪಿತನಾಗಿದ್ದಾನೆ!' 'ಪುಟ5 : 'ಹಸುಳೆ ಶಾರಿಕ ಮಗುವಿನ ಸಾವಿಗೆ' ಎಂದು ಗೇಟ್ಬಾಗಿಲನ್ನು ತೆರೆದು ಓಪನ್ ಮಾಡಲಾಗಿದೆ! 'ಹಸುಳೆ, ಮಗು' ಎರಡೇಕೆ, ಒಂದೇ ಸಾಲದೆ?'
'ಪುಟ12: ರೇಲ್ವೆ ಪದ ಸರಿಯಲ್ಲ. 'ರೈಲ್' ಅಂದರೆ ಹಳಿ- 'ರೈಲ್ವೇ' ಅಂದರೆ 'ಹಳಿಯ ದಾರಿ'. ಆದ್ದರಿಂದ 'ರೈಲ್ವೇ' ಎಂಬುದು ಸರಿಯಾದ ಪದ. ಅದೇ ದಿನದ ಸಂಪಾದಕೀಯದಲ್ಲಿ ಬರೆದಿರುವಂತೆ 'ರೈಲ್ವೆ' ಅಂದಿದ್ದರೂ ಆಗುತ್ತಿತ್ತು. ಇದೇ ಪುಟದಲ್ಲಿ 'ಬರಾಕ್ ಕ್ಷಿಪಣಿ ಹಗರಣ': ಫರ್ನಾಂಡೀಸ್ ನಿರಾಳ' ಎಂಬ ಶೀರ್ಷಿಕೆ ನೋಡಿ ನನಗೆ ಕೊಂಚ ಕಸಿವಿಸಿ ಉಂಟಾಯಿತು. ಶೀರ್ಷಿಕೆಯಲ್ಲಿ ತಪ್ಪೇನೂ ಇಲ್ಲ. ಆದರೆ, ಜಾರ್ಜ್ ಫರ್ನಾಂಡೀಸ್ ಅವರೀಗ 'ಸಿಬಿಐ'ನ ಸಮಾಪ್ತಿ ವರದಿ ಕಂಡು ನಿರಾಳರಾಗುವ ಅರ್ಥಾತ್, ಚಿಂತೆಯಿಂದ ಮುಕ್ತರಾಗುವ ಮಾನಸಿಕ ಸುಸ್ಥಿತಿಯಲ್ಲಿಲ್ಲ. ವಿಸ್ಮೃತಿಗೀಡಾಗಿದ್ದಾರೆ ಅವರು. ಆದ್ದರಿಂದ ನಿರಾಳ ಶಬ್ದದ ಬದಲು ನಿರ್ದೋಷಿ ಎಂಬ ಶಬ್ದವನ್ನೋ ಇನ್ನಾವುದಾದರೂ ಸೂಕ್ತ ಶಬ್ದವನ್ನೋ ಬಳಸಬಹುದಿತ್ತು. ಸ್ಥಳಾವಕಾಶವಿತ್ತು.
'ಹಿರಿಯರ ಹಾದಿ ಅಂಕಣದಲ್ಲಿ ಆಧಾರ ಗ್ರಂಥಗಳ ವಿವರ ನಮೂದಿಸುವುದು ಉತ್ತಮವೆಂದು ನಾನು ನೀಡಿದ್ದ ಸೂಚನೆಯು ತಪ್ಪಾಯ್ತು ಅಂಕಣದಲ್ಲಿ ಡಿಸೆಂಬರ್ 14ರಂದು ಪ್ರಕಟವಾಗಿತ್ತು. ಅದನ್ನು ಗಮನಿಸಿದ ಹಿರಿಯರ ಹಾದಿ ಅಂಕಣಕಾರ ಪ್ರೊ. ಎಂ.ಎನ್. ಸುಂದರರಾಜನ್ ಅವರೀಗ ಆಧಾರಗ್ರಂಥ ವಿವರ ನಮೂದಿಸುತ್ತಿದ್ದಾರೆ. ಶ್ರೀಯುತರಿಗೆ (ಮತ್ತು ನಿಮಗೂ) ಧನ್ಯವಾದಗಳು' ಎಂದಿದ್ದಾರೆ.
- ವಿಶ್ವೇಶ್ವರ ಭಟ್