ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗ್ವಾದಾರ್ ತೀರಕ್ಕೆ ಚೀನಿಯರು ಬಂದರು!

Rashmi Kasaragodu
Updated On : 4 Feb 2013, 10:24 am

ಪಾಕಿಸ್ತಾನದ ಅತ್ಯಂತ ಆಯಕಟ್ಟಿನ ಸ್ಥಳವಾದ ಗ್ವಾದಾರ್ ಬಂದರಿನ ಮೇಲೆ ಚೀನಾ ಸಂಪೂರ್ಣ ನಿಯಂತ್ರಣ ಸಾಧಿಸ ಹೊರಟಿರುವುದು ನಿಜಕ್ಕೂ ಭಾರತಕ್ಕೆ ಕಳವಳ ಉಂಟುಮಾಡಿರುವ ವಿಷಯ. ಆದರೆ ಇಲ್ಲೊಂದು ಪ್ರಶ್ನೆಯೂ ಉದ್ಭವವಾಗುತ್ತಿದೆ: ತನಗೆ ಅಗಿಯಲು ಸಾಧ್ಯವಾಗುವುದಕ್ಕಿಂತ ತುಸು ಹೆಚ್ಚು ರೊಟ್ಟಿಯನ್ನೇ ಚೀನಾ ಬಾಯಲ್ಲಿ ತುರುಕಿಕೊಂಡಿತೇ? ಚೀನಾ ಬೆಂಕಿಯೊಂದಿಗೆ ಆಟವಾಡುತ್ತಿದೆಯೇ?
ಈ ಪ್ರಶ್ನೆ ಒತ್ತಟ್ಟಿಗಿರಲಿ. ಮೊದಲು ನಾವು ಗ್ವಾದಾರ್ ಬಂದರಿನ ಮೇಲೆ ಚೀನಾ ನಿಯಂತ್ರಣ ಸಾಧಿಸುವುದರಿಂದ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಚರ್ಚಿಸೋಣ. ಕಳೆದ 5 ವರ್ಷಗಳಿಂದ ಗ್ವಾದಾರ್ ಬಂದರಿನ ಕಾರ್ಯನಿರ್ವಹಣೆಯನ್ನು ಸಿಂಗಾಪುರ್ ಬಂದರು ಪ್ರಾಧಿಕಾರ(ಪಿಎಸ್‌ಎ) ನೋಡಿಕೊಳ್ಳುತ್ತಿದೆ, ಅಲ್ಲದೆ ಇನ್ನು 45 ವರ್ಷಗಳವರೆಗೂ ಆ ಬಂದರಿನ ನಿರ್ವಹಣೆಯನ್ನು ಅದು ಮುಂದುವರಿಸಬೇಕಿತ್ತು. ಈಗ ಅದರ ಮೇಲೆ ಚೀನಾ ನಿಯಂತ್ರಣ ಸಾಧಿಸಿತೆಂದರೆ ಕೇವಲ ಸ್ಥಳೀಯ ರಾಷ್ಟ್ರಗಳಿಗಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲೂ ತೊಡಕುಗಳು ಉದ್ಭವವಾಗಲಿವೆ. ಚೀನಾ, ಭಾರತ, ಪಾಕಿಸ್ತಾನಗಳಷ್ಟೇ ಅಲ್ಲದೆ ಇರಾನ್, ಸಂಯುಕ್ತ ಅರಬ್ ಸಂಸ್ಥಾನ ಮತ್ತು ಅಮೆರಿಕ ದೇಶಗಳೂ ಕೂಡ ಸಂಕಟದಲ್ಲಿ ಸಿಲುಕಲಿವೆ.
ಭಾರತ
ಈ ಸೈನೋ-ಪಾಕ್ ನಡೆಯಿಂದಾಗಿ ಅತಿ ತ್ವರಿತವಾಗಿ ಮತ್ತು ಅತಿ ಹೆಚ್ಚಾಗಿ ತೊಂದರೆಗೊಳಗಾಗುವ ದೇಶವೆಂದರೆ ಭಾರತ. ಭಾರತೀಯ ಸೇನೆಯ ನಿಲುಕಿನಿಂದ ಬಹುದೂರವಿರುವ ಗ್ವಾದಾರ್‌ನಂತಹ ಪ್ರದೇಶದ ಮೇಲೆ ಚೀನಾ ಹಿಡಿತ ಸಾಧಿಸಿತೆಂದರೆ ಅದರ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಅಭೂತಪೂರ್ವ ಬಲ ಬರಲಿದೆ! ಇದರಿಂದಾಗಿ, ಮಿಲಿಟರಿ ಘರ್ಷಣೆಯ ಸಮಯದಲ್ಲಿ ಭಾರತದ ಹಿಡಿತಕ್ಕೆ ಸಿಗದಂತಹ ಸ್ಥಾನದಿಂದ ದಾಳಿ ಮಾಡಬೇಕೆಂಬ ಪಾಕಿಸ್ತಾನದ ಕನಸು, ನನಸಾಗಲಿದೆ. ವ್ಯಾಕುಲಗೊಳಿಸುವ ಸಂಗತಿಯೆಂದರೆ, ಪರ್ಷಿಯನ್ ಮತ್ತು ಅದಾನ್ ಕೊಲ್ಲಿಯಲ್ಲಿನ ಭಾರತದ ನೌಕಾಪಡೆಯ ಚಟುವಟಿಕೆಗಳನ್ನು ಗಮನಿಸುವುದಕ್ಕೆ ಗ್ವಾದಾರ್ ಹೇಳಿ ಮಾಡಿಸಿದಂತಹ ಸ್ಥಳ. ಚೀನಾ ಅಥವಾ ಪಾಕಿಸ್ತಾನಕ್ಕೆ ಆ ಜಾಗ ಸಿಕ್ಕಿತೆಂದರೆ ಅವು ಸುಮ್ಮನೆ ಕೂಡುವವೇ?
ಕರಾಚಿಯ ಮೇಲೆ ಭಾರತ ಸುಲಭವಾಗಿ ದಾಳಿ ಮಾಡಬಹುದು ಎನ್ನುವ ಹೆದರಿಕೆ ಪಾಕಿಸ್ತಾನಕ್ಕೆ ಮೊದಲಿನಿಂದಲೂ ಇದೆ. ಗ್ವಾದಾರ್ ಬಂದರು ಚೀನಾದ(ಪಾಕಿಸ್ತಾನದ) ಹಿಡಿತಕ್ಕೆ ಬಂತೆಂದರೆಭಾರತ ಸೇನೆಯ ಕೂಗಳತೆಯಲ್ಲಿರುವ ಕರಾಚಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಅನಿವಾರ್ಯತೆಯೂ ಅದಕ್ಕೆ ತಪ್ಪಲಿದೆ.
1971ರ ಯುದ್ಧದಲ್ಲಿ ಭಾರತೀಯ ನೌಕಾಪಡೆ ಕರಾಚಿಯ ಕುತ್ತಿಗೆ ಹಿಚುಕುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪಾಕಿಸ್ತಾನದ 95 ಪ್ರತಿಶತದಷ್ಟು ವ್ಯಾಪಾರ ಸಮುದ್ರದ ಮೂಲಕವೇ ನಡೆಯುತ್ತದೆ ಮತ್ತು ಕರಾಚಿ ಈ ವ್ಯಾಪಾರದ ಕೇಂದ್ರ ಸ್ಥಾನ. ಇಂದಿಗೂ ಕೂಡ ಪಾಕಿಸ್ತಾನದ ರಫ್ತು ಮತ್ತು ಆಮದು ವ್ಯವಹಾರಗಳನ್ನು ಕರಾಚಿಯ ಬಂದರಿನಿಂದಲೇ ನಡೆಸಲಾಗುತ್ತದೆ. ಗ್ವಾದಾರ್ ಭಾರತದಿಂದ ಸುಮಾರು 400 ಕಿ.ಮಿ ದೂರವಿರುವ ಕಾರಣ ಭಾರತದೊಂದಿಗೆ ಮಿಲಿಟರಿ ಘರ್ಷಣೆ ಏರ್ಪಟ್ಟಿತೆಂದರೆ, ಸೂಕ್ತ ಪ್ರತ್ಯುತ್ತರ ನೀಡಲು ಆ ಭಾಗ ಪಾಕಿಸ್ತಾನದ ಸಹಾಯಕ್ಕೆ ಬರಲಿದೆ.
ಇರಾನ್
ಈ ಬೆಳವಣಿಗೆಯಿಂದಾಗಿ ಇರಾನಕ್ಕೆ ದೊಡ್ಡ ಪೆಟ್ಟೇ ಬೀಳುತ್ತದೆ. ಏಕೆಂದರೆ ಗ್ವಾದಾರ್ ಬಂದರು, ಇರಾನದ ಪ್ರಮುಖ ಬಂದರುಗಳಾದ 'ಚಬಹಾರ್‌' ಮತ್ತು 'ಬಂದರ್ ಅಬ್ಬಾಸ್‌ಗೆ' ಪ್ರತಿಸ್ಪರ್ಧಿಯಾಗಲಿದೆ. ಮಧ್ಯ ಏಷ್ಯಾ ರಾಷ್ಟ್ರಗಳ ಮತ್ತು ಜಾಗತಿಕ ಮಾರುಕಟ್ಟೆಯ ನಡುವೆ ಕೊಂಡಿಯಾಗುವಲ್ಲಿ ಇಲ್ಲಿಯವರೆಗೂ ಏಕಸ್ವಾಮ್ಯ ಸಾಧಿಸಿಕೊಂಡು ಬಂದ ಇರಾನಕ್ಕೆ ಗ್ವಾದಾರ್ ಗಂಭೀರ ಸಮಸ್ಯೆಯೊಡ್ಡುವುದು ನಿಶ್ಚಿತ. 'ಗ್ವಾದಾರ್ ಬಂದರಿನ ಅಭಿವೃದ್ಧಿಗೆ ನಾವು ಅಡ್ಡಿಪಡಿಸುವುದಿಲ್ಲ. ಪಾಕಿಸ್ತಾನದ ನಿರ್ಣಯಕ್ಕೆ ನಾವು ಬೆಂಬಲ ನೀಡುತ್ತೇವೆ' ಎಂದು ಇರಾನ್‌ನ ಮಾಜಿ ಸಚಿವ ಮತ್ತು ಆಯತೊಲ್ಲಾಹ್ ಖಮೇನಿ ಅವರ ಆಪ್ತ 'ಅಲಿ ಅಕ್ಬರ್ ವಲಾಯ್ತಿ' ಹೇಳುತ್ತಿದ್ದಾರಾದರೂ ಅವು ಅವರ ಮನದಾಳದ ಮಾತುಗಳಲ್ಲ ಎನ್ನುವುದಂತೂ ಸ್ಪಷ್ಟ.
ಸಂಯುಕ್ತ ಅರಬ್ ಸಂಸ್ಥಾನ(ಯುಎಇ)
ಚೀನಾದವರನ್ನು ಗ್ವಾದಾರ್‌ಗೆ ತಂದು ಕೂಡಿಸುವ ಉತ್ಸಾಹದಲ್ಲಿರುವ ಪಾಕಿಸ್ತಾನ, ಇದರಿಂದಾಗಿ ಅರಬ್ ರಾಷ್ಟ್ರಗಳ ಮೇಲೆ ಯಾವ ರೀತಿಯ ಪರಿಣಾಮ ಆಗಬಹುದು ಎನ್ನುವುದನ್ನೇ ನಿರ್ಲಕ್ಷಿಸಿಬಿಟ್ಟಿದೆ. ಪಾಕಿಸ್ತಾನ ಮೊದಲಿನಿಂದಲೂ ಅರಬ್ ರಾಷ್ಟ್ರಗಳನ್ನು ತನ್ನ ಮಿತ್ರರೆಂದೇ ಭಾವಿಸುತ್ತದೆ. ಆದರೆ ಗ್ವಾದಾರ್ ಬಂದರಿನ ವಿಷಯ ಬಂದಾಗ ಆ ರಾಷ್ಟ್ರಗಳು ಪಾಕಿಸ್ತಾನವನ್ನು ಎದುರಾಳಿ ಎಂಬಂತೇ ಮೊದಲಿನಿಂದಲೂ ನೋಡುತ್ತಿವೆ.
ಗ್ವಾದಾರ್ ಯೋಜನೆ ತನ್ನ ಕೈಗೆ ಸಿಗಬೇಕು ಎಂದು ಅರಬ್ ಕಳೆದೊಂದು ದಶಕದಿಂದಲೂ ಕನಸು ಕಾಣುತ್ತಿದೆ. ತನ್ನ ಟ್ರಾನ್ಸ್ ಶಿಪ್‌ಮೆಂಟ್(ವಾಹನಾಂತರಣ) ವಹಿವಾಟನ್ನು ದುಬೈ ಬಂದರಿನಿಂದ ಗ್ವಾದಾರ್‌ಗೆ ಸ್ಥಳಾಂತರಿಸಬೇಕೆಂಬ ಆಸೆ ಅದಕ್ಕೆ ಮೊದಲಿನಿಂದಲೂ ಇದೆ. ಇನ್ನು ಯುಎಇ, ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್‌ಎ)ಯ ಬಂಡವಾಳಗಾರನೂ ಹೌದು.
ವಿಕಿಲೀಕ್ಸ್‌ನ ಪ್ರಕಾರ, ಪಾಕಿಸ್ತಾನದ ಐಎಸ್‌ಐನ ಮಾಜಿ ಮುಖ್ಯಸ್ಥರೊಬ್ಬರು ಸಂಸತ್ ಸದಸ್ಯರನ್ನು ಉದ್ದೇಶಿಸಿ 'ಭಾರತ ಮತ್ತು ಯುಎಇ, ಬಲೂಚ್ ಸೇನೆಗೆ ಶಸ್ತ್ರಾಸ್ತ್ರ ಪೂರೈಸುತ್ತಿವೆ' ಎಂಬ ಆರೋಪ ಮಾಡಿದ್ದರಂತೆ. ಅಮೆರಿಕ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ ನಡೆಸುತ್ತಿರುವುದು ಬಲೂಚಿಸ್ತಾನದ ಶಮ್ಸಿ ವಾಯು ನೆಲೆಯಿಂದ. ವಿಶೇಷವೆಂದರೆ, ಇದನ್ನು ನಿರ್ಮಾಣ ಮಾಡಿ ಅಮೆರಿಕಕ್ಕೆ ಹಸ್ತಾಂತರಿಸಿದವರು ಅರಬ್‌ನ ಶೇಖ್‌ಗಳು!
ಅಮೆರಿಕ
ಗ್ವಾದಾರ್‌ನಲ್ಲಿ ಚೀನಾ ಮೊಕ್ಕಾಂ ಹೂಡಿತೆಂದರೆ ಮಧ್ಯಪೂರ್ವದಲ್ಲಿನ ಅಮೆರಿಕದ 'ಫಿಫ್ತ್ ಫ್ಲೀಟ್‌'(ಪರ್ಷಿಯನ್ ಕೊಲ್ಲಿ, ಕೆಂಪು ಸಮುದ್ರ, ಅರೇಬಿಯನ್ ಸಮುದ್ರ, ಪೂರ್ವ ಕರಾವಳಿ ಪ್ರದೇಶಗಳಲ್ಲಿರುವ ಅಮೆರಿಕದ ನೌಕಾಪಡೆ)ಗಳಿಗೆ ಅಪಾಯ ಎದುರಾಗಲಿದೆ. ಇನ್ನು ಗ್ವಾದಾರ್ ಬಂದರಿನಲ್ಲಿದ್ದರೆ ಚೀನಾಕ್ಕೆ, ಅಮೆರಿಕ ಮತ್ತು ಅರೇಬಿಯನ್ ದ್ವೀಪದಲ್ಲಿರುವ ಅದರ ಮಿಲಿಟರಿ ನೆಲೆಗಳ ನಡುವೆ ನಡೆಯುವ ಸಂವಹನವನ್ನು ಪ್ರತಿಬಂಧಿಸಲು ಸಾಧ್ಯವಾಗುತ್ತದೆ. ಇದಷ್ಟೇ ಅಲ್ಲದೆ ಅದು, ಹೋರ್ಮುಜ್ ಜಲಸಂಧಿಗೆ ಬಹು ಹತ್ತಿರದಲ್ಲಿದೆ.  ಹೋರ್ಮುಜ್ ತೈಲ ವ್ಯಾಪಾರಕ್ಕೆ ಖ್ಯಾತಿ ಪಡೆದಿರುವ ಸ್ಥಳ. ಅಲ್ಲಿಂದ ಸುಮಾರು 13 ಮಿಲಿಯನ್ ಬ್ಯಾರೆಲ್ಲುಗಳಷ್ಟು ತೈಲ ಪ್ರತಿದಿನ ರವಾನೆಯಾಗುತ್ತದೆ. ಎಲ್ಲಿ ಈ ಸ್ಥಳಕ್ಕೆ ಬೀಜಿಂಗ್‌ನಿಂದ ಪ್ರತಿಬಂಧದ ಬೆದರಿಕೆ ಎದುರಾಗುತ್ತದೋ ಎನ್ನುವ ಭಯ ಎಲ್ಲ ರಾಷ್ಟ್ರಗಳಿಗೆ ಎದುರಾಗಿದೆ.
ಮಿಲಿಟರಿ ಸಂಘರ್ಷದ ವೇಳೆ ಅಮೆರಿಕವೇನಾದರೂ ಮಲಾಕ್ಕಾ ಜಲಮಾರ್ಗವನ್ನು ಬಂದು ಮಾಡಿತೆಂದರೆ, ರಫ್ತು ವಹಿವಾಟುಗಳಿಗೆ ಭಾರೀ ಹೊಡೆತ ಬೀಳಬಹುದು ಎಂಬ ಭಯ ಚೀನಾಕ್ಕಿತ್ತು. ಆದರೆ ಅದಕ್ಕೀಗ ಹಿಂದೂ ಸಾಗರದಿಂದ ಪಶ್ಚಿಮ ಏಷ್ಯಾದವರೆಗೆ ಪಯಣ ಬೆಳೆಸಲು ಗ್ವಾದಾರ್ ಎಂಬ ಪರ್ಯಾಯ ಮಾರ್ಗ ಸಿಕ್ಕಂತಾಗಿದೆ.  
ಚೀನಾ
2009ರಲ್ಲಿ ಗ್ವಾದಾರ್‌ನಲ್ಲಿ 20 ಮಿಲಿಯನ್ ಟನ್ನಿನಷ್ಟು ಸಾಮರ್ಥ್ಯದ ತೈಲ ಸಂಗ್ರಹಣಾ ಘಟಕವನ್ನು ಸ್ಥಾಪಿಸಬೇಕೆಂದು ಪಾಕಿಸ್ತಾನ-ಚೀನಾ ಯೋಜಿಸಿದ್ದವು. ಆದರೆ ಬಲೂಚಿಸ್ತಾನದಲ್ಲಿ ಉದ್ಭವವಾದ ಬಿಕ್ಕಟ್ಟಿನಿಂದಾಗಿ ಇಲ್ಲಿಯವರೆಗೂ ಅವು ತಮ್ಮ ಆಸೆಯನ್ನು ಅದುಮಿಟ್ಟುಕೊಂಡಿದ್ದವು. ಎಲ್ಲವೂ ಅಂದುಕೊಂಡಂತೆ ಆದರೆ ಚೀನಾದ ಬಹು ದಿನದ ಕನಸು ನನಸಾಗಬಹುದು. ಗ್ವಾದಾರ್‌ನ ಮೇಲೆ ನಿಯಂತ್ರಣ ಸಿಕ್ಕಿತೆಂದರೆ ಭೂ ಆಧಾರಿತ ತೈಲ ಪೂರೈಕೆ ಬಂದರು(ಅಮೆರಿಕದ ನೌಕಾಪಡೆಯ ಹಿಡಿತದಲ್ಲಿಲ್ಲದ!) ಚೀನಾಕ್ಕೆ ಸಿಕ್ಕಂತಾಗುತ್ತದೆ.
ತಮ್ಮ ಕನಸಿನ ಯೋಜನೆಯಾದ ಗ್ವಾದಾರ್ ಸಂಗ್ರಹಣಾ ಘಟಕವನ್ನು ಪಶ್ಚಿಮ ಚೀನಾದ ಕಶ್‌ಘಾರನೊಂದಿಗೆ ಪೈಪ್‌ಲೈನ್ ಮೂಲಕ ಸೇರಿಸಿದರೆ ಮಲಕ್ಕಾ ಜಲಮಾರ್ಗ, ದಕ್ಷಿಣ ಚೀನಾದ ಸಮುದ್ರ, ಪೂರ್ವ ಚೀನಾದ ಸಮುದ್ರ ಮತ್ತು ಹಳದಿ ಸಮುದ್ರದ ತಾಪತ್ರಯಗಳಿಂದ ಬಚಾವಾಗಬಹುದು ಎನ್ನುವ ಯೋಜನೆ ಅದರದ್ದು. ಚೀನಾದ ಪೂರ್ವ ಸಮುದ್ರತಟೀಯ ಬಂದರುಗಳು ಕಶ್‌ಘಾರ್‌ನಿಂದ ಸುಮಾರು 3,500 ಕಿಲೋಮೀಟರ್‌ಗಳಷ್ಟು ದೂರದಲ್ಲಿವೆ. ಆದರೆ ಕಶ್‌ಘಾರ್‌ನಿಂದ ಗ್ವಾದಾರ್ ನಡುವಿನ ಅಂತರ 1,500 ಕಿಲೋಮೀಟರ್‌ಗಳು ಮಾತ್ರ. ಇದರರ್ಥವಿಷ್ಟೆ- ಗ್ವಾದಾರ್ ಎನ್ನುವ ಟ್ರಂಪ್ ಕಾರ್ಡ್‌ನ ಮೂಲಕ ಇರಾನ್ ಮತ್ತು ಆಫ್ರಿಕಾದಿಂದ ಬರುವ ಕಚ್ಚಾ ತೈಲವನ್ನು ವಾಯುವ್ಯ ಚೀನಾಕ್ಕೆ ಸುಲಭವಾಗಿ ಹರಿಸಿಕೊಳ್ಳುವ ಬಂಪರ್ ಅವಕಾಶ ಚೀನಾಕ್ಕೆ ಸಿಗಲಿದೆ!
ಜೊತೆಗೆ ಹಿಂದೂ ಮಹಾಸಾಗರದಲ್ಲಿ ನೌಕಾ ನೆಲೆಯನ್ನು ನಿರ್ಮಿಸಿ, ಆ ಭಾಗದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕೂ ಗ್ವಾದಾರ್ ಚೀನಾಕ್ಕೆ ಸಹಾಯಕವಾಗಲಿದೆ.
ಗ್ವಾದಾರ್ ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಚೀನಾ ತನ್ನ ಪಾಲಿಗೆ ಹೆಚ್ಚಿನ ಸಂಖ್ಯೆಯ ಶತ್ರುಗಳನ್ನೇ ಸೃಷ್ಟಿಸಿಕೊಳ್ಳುತ್ತಿದೆಯೇನೋ ಎನಿಸುತ್ತಿದೆ.
ಗ್ವಾದಾರ್ ತೀರವು ಕಶ್‌ಗರ್ ಎಂಬ ತನ್ನ ಸ್ಥಳವನ್ನು ಬೆಸೆಯುವುದಕ್ಕೆ ಅನುಕೂಲವಾಗುತ್ತದೆ ಎಂದು ಚೀನಾ ಮುಖ್ಯವಾಗಿ ಯೋಚಿಸಿದೆ. ಆದರೆ ಇದೇ ಈಗ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಕಶ್‌ಗರ್ ಇರುವುದು ಚೀನಾದ ಪ್ರಕ್ಷುಬ್ಧ ಹಾಗೂ ಅತಿ ವಿಸ್ತಾರದ ಪ್ರಾಂತ್ಯವಾದ ಕ್ಸಿನ್‌ಜಿಯಾಂಗ್‌ನಲ್ಲಿ. ಮುಸ್ಲಿಂ ಬಾಹುಳ್ಯದ ಈ ಚೀನಾ ಪ್ರಾಂತ್ಯವು ನಿರಂತರ ಹಿಂಸಾಚಾರದಿಂದ ಅದಾಗಲೇ ತಲೆನೋವಾಗಿ ಪರಿಣಮಿಸಿದ್ದು, ಜಿಹಾದಿ ಉಗ್ರರ ಉತ್ಪಾದಕ ನೆಲೆಯಾಗಿ ಪರಿವರ್ತನೆ ಆಗುತ್ತಿದೆ. ಗ್ವಾದಾರ್ ಬಂದರಿನ ಮೇಲೆ ನಿಯಂತ್ರಣ ಪಡೆದುಕೊಳ್ಳುವ ಮೂಲಕ ಚೀನಾ ಒಂದರ್ಥದಲ್ಲಿ ಜೇನುಗೂಡಿಗೆ ಕಲ್ಲೆಸದಂತೆ ಆಗಿರುವುದು ಸುಳ್ಳಲ್ಲ. ಬೇರೆ ದೇಶದ ಆಂತರಿಕ ಸಮಸ್ಯೆಯನ್ನು ಚೀನಾ ತನ್ನ ಮೇಲೆ ಎಳೆದುಕೊಳ್ಳುವುದಕ್ಕೆ ಹೊರಟಿದೆಯೇನೋ ಎಂಬ ಸೂಚನೆ ಸಿಗುತ್ತಿದೆ. ದಶಕದ ಹಿಂದೆ ಗ್ವಾದಾರ್ ಬಂದರಿನಲ್ಲಿ ಚೀನಿಯರು ಕಾಮಗಾರಿಗಳಲ್ಲಿ ತೊಡಗಿಸಿಕೊಂಡಾಗಲೇ ಪಾಕಿಸ್ತಾನದ ಬಲೂಚಿ ಪ್ರತ್ಯೇಕತಾವಾದಿಗಳಿಗೆ ಕುದಿ ಶುರುವಾಗಿತ್ತು. ಚೀನಾವನ್ನು ಯಾವತ್ತೂ ತಡೆಯನ್ನಾಗಿಯೇ ಗ್ರಹಿಸಿಕೊಂಡು ಬಂದವರು ಅವರು. ಇನ್ನಂತೂ ಚೀನಾ ಎಂದೊಡನೆ ಅವರು ಉರಿದು ಬೀಳಲಿದ್ದಾರೆ. ಕ್ಸಿನ್‌ಜಿಯಾಂಗ್‌ನ ಕಶ್‌ಗರ್ ಪ್ರಾಂತ್ಯಕ್ಕೆ ಗ್ವಾದಾರ್ ಬಂದರು ಆರ್ಥಿಕ ಚಟುವಟಿಕೆಯ ಸಂಪರ್ಕ ಕೊಡಲಿದೆ ಎಂದು ಮುಂದಡಿ ಇಟ್ಟಿದ್ದ ಚೀನಾಕ್ಕೆ ಈ ನಡೆಯಿಂದ ಜಿಹಾದಿ ಆಕ್ರಮಣದ ಆತಂಕ ಇನ್ನಷ್ಟು ಬಿರುಸಾಗುವ ಬಿಕ್ಕಟ್ಟು ಎದುರಾಗಿದೆ.
ಪಾಕಿಸ್ತಾನದ ಗ್ವಾದಾರ್ ಬಂದರನ್ನು ಚೀನಾ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖ ನಡೆಯೇ ಹೌದು. ಆದರೆ ಕೊನೆಗೂ ಇದು ಯಾರಿಗೆ ಲಾಭ ತರಲಿದೆ ಎಂಬುದು ಮಾತ್ರ ಯಕ್ಷಪ್ರಶ್ನೆ. ಸದ್ಯಕ್ಕಂತೂ ಬಲೂಚಿಸ್ತಾನದಲ್ಲಿ ಹಿಂಸೆಯ ಕೆನ್ನಾಲಿಗೆಗಳು ಬುಸ್ಸೆನ್ನುವುದು ಖಾತ್ರಿಯಾಗಿದೆ. ಪ್ರಾರಂಭದಲ್ಲಿ ಪಾಕಿಸ್ತಾನಕ್ಕಷ್ಟೇ ಅದರ ಬಿಸಿ ತಟ್ಟಿದರೂ ನಂತರ ಚೀನಾದತ್ತ ಅದರ ಪ್ರಯಾಣವೇನೂ ವಿಳಂಬವಾಗುವುದಿಲ್ಲ!


  -ರಾಜೀವ್ ಶರ್ಮಾ
ರಕ್ಷಣಾ ಪರಿಣತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement