ರಾಷ್ಟ್ರೀಯ ಯೋಜನೆಗಳು ದೇಶಕ್ಕೆ ಮಾರಕವಾಗುತ್ತಿವೆಯೇ?
'ರಾಷ್ಟ್ರೀಯ' ಮತ್ತು ರಾಷ್ಟ್ರ ಎಂಬುದರ ನಡುವೆ ಸಂಘರ್ಷ ಉಂಟಾಗುವುದನ್ನು ಊಹಿಸುವುದಕ್ಕೆ ಸಾಧ್ಯವೇ? ಇದೆಂಥ ಅಪದ್ಧ ಹಾಗೂ ಅಸಾಧ್ಯವಾದದ್ದು ಎಂದು ಅನಿಸಬಹುದು. ಆದಾಗ್ಯೂ 'ರಾಷ್ಟ್ರೀಯ' ಎಂಬ ಹಣೆಪಟ್ಟಿಯೊಂದಿಗೆ ಆ ಸ್ವರೂಪದಲ್ಲಿ ರಚನೆಯಾಗುತ್ತಿರುವ ಯೋಜನೆ ಹಾಗೂ ಕಾನೂನುಗಳಲ್ಲಿ ಬಹುಪಾಲು ರಾಷ್ಟ್ರಹಿತದೊಂದಿಗೇನೂ ಹೋಲಿಕೆಯಾಗುವಂತೆ ಇರದೇ ಇರುವುದಕ್ಕೆ ಸಾಕಷ್ಟು ದೃಷ್ಟಾಂತಗಳನ್ನು ಕೊಡಬಹುದಾಗಿದೆ.
ಈ ಹಿಂದಿನ ಅಂಕಣದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಲೋಪಗಳ ಬಗ್ಗೆ ಬರೆದಿದ್ದ ಸಂದರ್ಭದಲ್ಲೇ ಹೀಗೊಂದು ಯೋಚನೆ ಕಾಡಿತ್ತು. 2010ರಲ್ಲಿ ರಾಷ್ಟ್ರೀಯ ಕಾಯ್ದೆಯಾದ ಶಿಕ್ಷಣ ಹಕ್ಕು ಆರರಿಂದ 14ರ ವಯೋವಾನದವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉನ್ನತವಾದ ಉದ್ದೇಶವನ್ನೇ ಇರಿಸಿಕೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ 2012ರ ಪ್ರಥಮ್ನ ವಾರ್ಷಿಕ ಶೈಕ್ಷಣಿಕ ವರದಿ ಪ್ರಕಾರ ಈ ಕಾಯ್ದೆಯ ಪ್ರಮಾಣಾತ್ಮಕ ಮತ್ತು ಗುಣಾತ್ಮಕ ಅಂಶಗಳ ನಡುವೆ ಸಾಕಷ್ಟು ಅಂತರ ಕಂಡು ಬಂದಿದೆ. ಹೀಗಾಗಿ ದಾಖಲಾತಿ ಅಷ್ಟೇ ಶಿಕ್ಷಣವನ್ನು ಖಾತ್ರಿಗೊಳಿಸದು ಎಂಬ ಅಂಶ ಮತ್ತೊಮ್ಮೆ ಸಾಬೀತಾದಂತೆ ಆಗಿದೆ. ಇದಕ್ಕೆ ಕೊಡುಗೆ ನೀಡಿರುವ ಒಂದು ಕಾರಣವೆಂದರೆ ರಾಷ್ಟ್ರೀಯ ಸ್ತರದ ಕಾನೂನು ನಿರೂಪಕರು ಹಾಗೂ ಶಿಕ್ಷಣ ವಲಯದ ಅಧಿಕಾರಿಗಳು ರೂಪಿಸಿದ 'ಪರೀಕ್ಷೆ ಇಲ್ಲ' ಎಂಬ ನೀತಿ. ಇದು ಅನೇಕ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಬೋಧನೆಯ ಗುಣಮಟ್ಟವನ್ನು ಪಾತಾಳಕ್ಕೆ ಇಳಿಸಿದೆ.
ಇದೊಂದು ಅಪರೂಪದ ಉದಾಹರಣೆ ಎಂದುಕೊಳ್ಳಬೇಕಿಲ್ಲ. ದೇಶಕ್ಕೆ ಯಾವುದು ಯೋಗ್ಯ ಎಂದು ತಾನಷ್ಟೇ ನಿರ್ಧರಿಸಬಲ್ಲೆ ಎಂದು ದೆಹಲಿ ಆಡಳಿತ ವಲಯ ಯೋಚಿಸಿರುವಂತಿದೆ. ಶಿಕ್ಷಣ, ಆರೋಗ್ಯ ವಲಯ, ನೈರ್ಮಲ್ಯ, ಉದ್ಯೋಗ, ಕೌಶಲ ಅಭಿವೃದ್ಧಿ ಹೀಗೆ ಎಲ್ಲ ವಿಭಾಗಗಳಲ್ಲೂ ಸಮಸ್ಯೆಯನ್ನು ಪರಿಹರಿಸುವುದಕ್ಕೆ ರಾಷ್ಟ್ರೀಯ ಮಾದರಿಯ ಯೋಜನೆಯೊಂದನ್ನು ಹಮ್ಮಿಕೊಂಡರಾಯಿತು ಎಂದು ದೆಹಲಿ ಅಂದುಕೊಂಡಿರುವಂತಿದೆ. ಒಂದು ನಿಯಮ ಎಲ್ಲರಿಗೂ ಅನ್ವಯ ಎಂಬ ಮಾನದಂಡದಲ್ಲೇ ನೀತಿ ನಿಯಮಗಳ ಚೌಕಟ್ಟು ಸಿದ್ಧಪಡಿಸಲಾಗುತ್ತಿದೆ. ಭಾರತವು ಬೃಹತ್ ವಿಸ್ತಾರವನ್ನು ಹೊಂದಿರುವ ವೈವಿಧ್ಯಗಳ ದೇಶ ಎಂಬ ಅಂಶವನ್ನು ಈ ಹಂತದಲ್ಲಿ ಗಣನೆಗೇ ತೆಗೆದುಕೊಳ್ಳಲಾಗುವುದಿಲ್ಲ. ಅದೇ ರೀತಿ ದೆಹಲಿ ಆಡಳಿತ ಉಪೇಕ್ಷೆ ಮಾಡುವ ಇನ್ನೊಂದು ಅಂಶವೆಂದರೆ ನಮ್ಮ ದೇಶದ ಜಿಲ್ಲೆ, ತಾಲೂಕು, ಹಳ್ಳಿಗಳಲ್ಲಿ ಇರುವ ಜನ ಸಮುದಾಯಕ್ಕೂ ಅದರದ್ದೇ ಆದ ಜ್ಞಾನ ಮತ್ತು ಅನುಭವಗಳ ನೆಲೆ ಇದ್ದು, ಅನೇಕ ಅಭಿವೃದ್ಧಿ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಭಾವಯುತ ಮಾರ್ಗ ಅವರ ಬಳಿ ಇದೆ ಎಂಬುದು.
ಇದನ್ನು ಸವಿವರವಾಗಿ ವಿವರಿಸಬೇಕೆಂದರೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ' ಯೋಜನೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಗಾಂಧೀಜಿ ಅವರು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಗ್ರಾಮೀಣ ಭಾಗದಲ್ಲಿ ಉದ್ಯೋಗವನ್ನು (ಅರೆಕಾಲಿಕ) ಖಾತ್ರಿ ಮಾಡುವ ಕೇಂದ್ರೀಕೃತ, ಅಧಿಕಾರಶಾಹಿ 'ರಾಷ್ಟ್ರೀಯ' ಯೋಜನೆಯೊಂದು ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ಅವರು ಭಯಭೀತಗೊಳ್ಳುತ್ತಿದ್ದರೇನೋ.
ಈ ಯೋಜನೆಯ ಪ್ರಸ್ತುತ ರಚನೆ ಬಗ್ಗೆ ಅವರು ಖಂಡಿತವಾಗಿಯೂ ಅಸಮ್ಮತಿ ಸೂಚಿಸುತ್ತಿದ್ದರು. ಅದು ಗ್ರಾಮೀಣ ಭಾರತದ ಕಾರ್ಮಿಕ ಮಾರುಕಟ್ಟೆಯನ್ನು ಅಲ್ಲಾಡಿಸಿ ಅಸ್ಥಿರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ವಸ್ತು ಉತ್ಪನ್ನವಾಗಬಲ್ಲ ಸುಸ್ಥಿರ ಉದ್ಯೋಗವನ್ನು ನೆಲೆಗೊಳಿಸುವುದೇನೂ ಆಗಿಲ್ಲ. ಈ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾರತದ ಚಿಕ್ಕ ಮತ್ತು ಮಧ್ಯಮ ಮಟ್ಟದ ರೈತರು ತಮ್ಮ ಹೊಲಗಳಲ್ಲಿ ದುಡಿಯುವುದಕ್ಕೆ ಕೂಲಿಗಳಿಲ್ಲದೇ ಒದ್ದಾಟ ಅನುಭವಿಸುತ್ತಿದ್ದಾರೆ. ಬಿತ್ತನೆ ಮತ್ತು ಸುಗ್ಗಿ ವೇಳೆಯಂತೂ ಕೂಲಿಗಳ ಅಭಾವ ಗಂಭೀರ ಸಮಸ್ಯೆಯನ್ನೇ ಸೃಷ್ಟಿಸಿದೆ. ಇದು ಕೃಷಿಯನ್ನು ಬಹಳ ಅಪಾಯಕಾರಿ ವಲಯವನ್ನಾಗಿಸಿ ಅದರಲ್ಲಿನ ಆಕರ್ಷಣೆ ಎಲ್ಲವನ್ನೂ ಮುಕ್ಕಾಗಿಸಿದೆ. ಹೆಚ್ಚಿನ ಸಂಖ್ಯೆಯ ರೈತರು ಕೃಷಿ ಕಾರ್ಯವನ್ನೇ ತೊರೆಯುವುದಕ್ಕೆ ಇದು ಕಾರಣವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗ ಖಾತ್ರಿ ಯೋಜನೆಯು ಸಂಸತ್ತಿನ ಕಾಯ್ದೆ ಮೂಲಕ ಅನುಷ್ಠಾನವಾಗಿರುವುದರಿಂದ ರಾಜ್ಯ ಸರ್ಕಾರಗಳು ಹಾಗೂ ಪಂಚಾಯತ್ಗಳಿಗೆ ತಮಗೆ ಅನುಕೂಲವಾಗುವ ಸುಧಾರಣೆಗಳನ್ನು ತಂದುಕೊಳ್ಳುವುದಕ್ಕೂ ಅಡ್ಡಗಾಲಾಗಿದೆ.
ಡ್ಯೂಕ್ ವಿಶ್ವವಿದ್ಯಾಲಯದ ಅನಿರುಧ್ ಕೃಷ್ಣನ್ ಎಂಬುವವರು ತಮ್ಮ ಲೇಖನವೊಂದರಲ್ಲಿ ಬರೆದಂತೆ.. 'ಎಲ್ಲವನ್ನೂ ರಾಷ್ಟ್ರೀಯ ನೀತಿಯ ಮೇಲೆ ಬಿಡುವುದು ಎಲ್ಲಾ ಪರಿಸ್ಥಿತಿಗಳಲ್ಲೂ ಸಮರ್ಪಕವೆನಿಸಿಕೊಳ್ಳುವುದಿಲ್ಲ. ಕೇರಳದಲ್ಲಿ ಏನು ಕಾರ್ಯಸಾಧು ಎನಿಸಿಕೊಳ್ಳುವುದೋ ಅದು ಅರುಣಾಚಲ ಪ್ರದೇಶಕ್ಕೆ ಲಗತ್ತಾಗುತ್ತದೆ ಎನ್ನುವುದಕ್ಕಾಗದು.' ಅನೇಕ 'ರಾಷ್ಟ್ರೀಯ' ಯೋಜನೆಗಳ ತರುವಾಯವೂ ಭಾರತದ ಶಿಕ್ಷಣ, ಆರೋಗ್ಯ ವಲಯ ಹಾಗೂ ಮಾನವ ಅಭಿವೃದ್ಧಿಯ ಇತರ ವಿಭಾಗಗಳಲ್ಲಿ ಭಾರತವಿನ್ನೂ ಪ್ರಗತಿಯಾಗದಿರುವುದಕ್ಕೆ ನೈಜ ಕಾರಣವೇ ಇದಾಗಿದೆ. ಕೃಷ್ಣನ್ ತಮ್ಮ ಲೇಖನದಲ್ಲಿ ಹೇಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಥಳೀಯ ಹಂತಗಳಲ್ಲಿ ವೈವಿಧ್ಯ ರೂಪುರೇಷೆಗಳನ್ನು ಪ್ರೋತ್ಸಾಹಿಸುವುದೇ ಎಲ್ಲ ಸಮಸ್ಯೆಗಳಿಗೆ ಮದ್ದಾಗಲಿದೆ.
ರಾಷ್ಟ್ರೀಯ ಯೋಜನೆಗಳಲ್ಲಿ ಹೆಚ್ಚಿನವುಗಳ ಅಧಿಕಾರಶಾಹಿ ರಚನೆಯಿಂದಾಗಿ ಸಾಮಾನ್ಯರಿಗೆ ಹಾಗೂ ಸಾಮಾಜಿಕವಾಗಿ ಬದ್ಧತೆ ತೋರುವುದಕ್ಕೆ ಮುಂದೆ ಬರುವ ವ್ಯಕ್ತಿಗಳಿಗೂ ಅಲ್ಲಿ ಪಾಲ್ಗೊಳ್ಳುವಿಕೆ ಸಾಧ್ಯವಾಗುವುದಿಲ್ಲ. ಇನ್ನು ಅವುಗಳ ಪರಿವೀಕ್ಷಣೆ, ಮೌಲ್ಯಮಾಪನ ಹಾಗೂ ಸುಧಾರಣೆಗಳ ಮಾತಂತೂ ಕೇಳುವುದು ಬೇಡ. ಹೆಚ್ಚಿನ ಸಂದರ್ಭಗಳಲ್ಲಿ ರಾಷ್ಟ್ರೀಯ ನೀತಿಯ ವಿಷಯಗಳ ಮೇಲೆ ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಜಾಗವಿರುವುದಿಲ್ಲ. ಕಳೆದ ನವೆಂಬರ್ನಲ್ಲಿ ಕಾಂಗ್ರೆಸ್ ಆಡಳಿತದ ಕೇರಳದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಸಿ. ಜೋಸೆಫ್ ಅವರು ಉದ್ಯೋಗ ಖಾತ್ರಿ ಯೋಜನೆ ಅಡಿ ಕೇಂದ್ರದ ನಿಧಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಯುಪಿಎ ಸರ್ಕಾರದ ದ್ವಂದ್ವ ನೀತಿಯನ್ನು ಜಾಡಿಸಿದ್ದರು. ಹೈನುಗಾರಿಕೆಯನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ತರುವುದಕ್ಕೆ ದೆಹಲಿ ಆಡಳಿತ ಸಮ್ಮತಿ ನೀಡುತ್ತಿಲ್ಲ ಎಂದೂ ವರದಿಯಾಗಿದೆ.
ಇತ್ತೀಚೆಗೆ ನಾನು ಕರ್ನಾಟಕದ ಬೆಳಗಾವಿಯಲ್ಲಿರುವ ನನ್ನ ಹಳ್ಳಿ ಸತ್ತಿಗೆ ಹೋಗಿದ್ದೆ. ನನ್ನ ಸಂಬಂಧಿಕನೂ ಆಗಿರುವ ಸ್ಥಳೀಯ ವೈದ್ಯನಿಗೆ ಕೇಳಿದೆ- 'ನೀನು ಮತ್ತು ನಿನ್ನಂಥ ವೈದ್ಯರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅನುಷ್ಠಾನದಲ್ಲಿ ಏನಾದರೂ ಪಾತ್ರ ಹೊಂದಿರುವಿರಾ?' ಆತ ಹೇಳಿದ, 'ಎಂಥದೂ ಇಲ್ಲ. ಸರ್ಕಾರದ ಅಧಿಕಾರಿಗಳಿಗೆ ನಮ್ಮ ಭಾಗವಹಿಸುವಿಕೆ ಬೇಕಾಗಿಯೇ ಇಲ್ಲ.' ನನ್ನ ಊರಿನ ಪಂಚಾಯತ್ ಸದಸ್ಯರಿಗೆ ಕೇಳಿದೆ- 'ರಾಷ್ಟ್ರೀಯ ಯೋಜನೆಗಳನ್ನು ರೂಪಿಸುವಲ್ಲಿ ನಿಮಗೆ ಇರುವ ಸ್ವಾತಂತ್ರ್ಯ ಏನು?' ಅದಕ್ಕೂ ಏನೂ ಇಲ್ಲ ಎಂಬ ಉತ್ತರ. 'ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಬರುವ ಹಣದ ವಿನಿಯೋಗಕ್ಕೆ ನಿಮಗೆ ಹೆಚ್ಚಿನ ಸ್ವಾತಂತ್ರ್ಯ ದೊರೆತರೆ ಫಲಿತಾಂಶ ಭಿನ್ನವಾಗಿರುತ್ತದೆ ಎಂದು ನಿಮಗನಿಸುತ್ತದೆಯೇ' ಎಂಬ ಪ್ರಶ್ನೆಗೆ ಅವರಿಂದ ನಿಶ್ಚಯವಾಗಿಯೂ ಎಂಬ ದೃಢ ಉತ್ತರ ಬಂತು. ಗ್ರಾಮ ಪಂಚಾಯತ್ಹಾಗೂ ಮುನ್ಸಿಪಲ್ ಅಂಗಗಳು ಕೇಂದ್ರ ಬಜೆಟ್ನ ಶೇಕಡ 7ರಷ್ಟು ಹಣವನ್ನು ನೇರವಾಗಿ ಪಡೆದು ತಮ್ಮದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು ಎಂದು ಕೆ. ಎನ್. ಗೋವಿಂದಾಚಾರ್ಯ ಮತ್ತು ಜಯಪ್ರಕಾಶ ನಾರಾಯಣರಂಥ ಚಿಂತಕರು ಆಗ್ರಹಿಸಿದ್ದರಲ್ಲಿ ಅರ್ಥವಿದೆ.
ಹಾಗಂತ ರಾಷ್ಟ್ರೀಯ ಯೋಜನೆಗಳನ್ನೇ ಸಾರಾಸಗಟಾಗಿ ತಿರಸ್ಕರಿಸಿ ಬಿಡಬೇಕು ಎಂಬ ಅಭಿಪ್ರಾಯವೇನೂ ನನ್ನದಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಂಥವು ಪವಾಡವನ್ನೇ ಮಾಡಿವೆ. ಅಲ್ಲದೇ ಬಹಳಷ್ಟು ಮುಖ್ಯಮಂತ್ರಿಗಳೂ ಇತ್ತೀಚಿನ ದಿನಗಳಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಯೋಜನೆಗಳಿಗೆ ಆಕ್ಷೇಪಿಸುತ್ತಿದ್ದಾರೆ. ಬಹಳಷ್ಟು ಯೋಜನೆಗಳು ನಮ್ಮ ಒಕ್ಕೂಟ ವ್ಯವಸ್ಥೆಯ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿವೆ. ನಮ್ಮ ಹಳ್ಳಿಗಳು ಹಾಗೂ ಸಣ್ಣ ಪಟ್ಟಣಗಳು ಬಲಗೊಳ್ಳಬೇಕಾದ ಕಾಲವಿದು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಪ್ರಜಾಪ್ರಭುತ್ವವಾದಿ ವಿಕೇಂದ್ರೀಕರಣವೇ ರಾಜಮಾರ್ಗ.
- ಸುಧೀಂದ್ರ ಕುಲಕರ್ಣಿ
ಅಂಕಣಕಾರರು