ಅಪರಾಧದ ಗಾಂಭೀರ್ಯದ ಪರಿಗಣನೆ ಲೇಸು (ಪತ್ರಗಳು)
ನಮ್ಮ ಜನಪದ ಗಾದೆಯೊಂದಿದೆ: 'ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೋದರಂತೆ' ಎಂದು. ಆದರೆ, ನಮ್ಮ ಕಾನೂನು ವ್ಯವಸ್ಥೆಯ ದೃಷ್ಟಿಯಿಂದ ನೋಡುವುದಾದರೆ, 'ಗಡ್ಡಕ್ಕೆ ಬೆಂಕಿ ಬಿದ್ದರೂ, ಬಾವಿ ತೋಡಲು ಹೊರಡದಷ್ಟೂ ನಿಶ್ಚಲವಾಗಿದೆ ಅದು. ಯಾವುದೋ ಓಬಿರಾಯನ ಕಾಲದ ಕಾನೂನಿಗೆ ಈಗಲೂ ಮಣೆ ಹಾಕುತ್ತಿರುವ ನಮಗೆ ನಾವೇ ನಾಚಿಕೆ ಪಡಬೇಕಿದೆ.
ಪ್ರತಿದಿನ ಹಲವಾರು 'ಲೈಂಗಿಕಹಲ್ಲೆ' ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಆದರೆ ಅತ್ಯಾಚಾರಕ್ಕೆ ಒಳಗಾದವಳು ಪ್ರತಿಷ್ಠಿತ ರಾಜಕಾರಣಿಗಳ ಸಂಬಂಧಿಕಳೋ ಆಗಿದ್ದರೆ, ಇಷ್ಟೊತ್ತಿಗೆ ಕಾನೂನಿನ ಬುಡವನ್ನೇ ಅಲ್ಲಾಡಿಸಲು ಶುರು ಮಾಡುತ್ತಿದ್ದರು. ಪಾಪ! ನತದೃಷ್ಟ ಸಾಮಾನ್ಯ ಹೆಣ್ಣು ಮಕ್ಕಳಲ್ಲವೇ ಅವರು? ಹೀಗಾಗಿ ಒಂದಿಷ್ಟು ಪರಿಹಾರ ಘೋಷಿಸಿ, ಸಮಾಧಾನದ ಮಾತುಗಳನ್ನಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸುವ ಮಾತುಗಳನ್ನಾಡಿ ಸುಮ್ಮನಾಗಿ ಬಿಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿವೆಯಷ್ಟೇ. ದೆಹಲಿ ಗ್ಯಾಂಗ್‌ರೇಪ್ ಪ್ರಕರಣದಲ್ಲಿನ 'ಬಾಲಾಪರಾಧಿ'ಯ ವಿಷಯವನ್ನು ತೆಗೆದುಕೊಂಡರೆ, ಕೇವಲ ತಿಂಗಳುಗಳ ಅಂತರದಲ್ಲಿ ಅವನ ಮ್ಯಾಜಿಕ್ ವಯಸ್ಸು-18 ತುಂಬುತ್ತದೆ. ಅಂದರೆ, 18 ವರ್ಷಕ್ಕೆ ಒಂದೆರಡು ದಿನಗಳು ಅಂದರೆ, 17 ವರ್ಷ 11 ತಿಂಗಳು 28 ದಿನಗಳಾಗಿವೆ ಎಂದಿಟ್ಟುಕೊಳ್ಳೋಣ. ಆ ದಿನ ಆತ ಮಾಡಿದ ಘೋರ ಅಪರಾಧವು ನಮ್ಮ ಕಾನೂನಿನ ಪ್ರಕಾರ ಲೆಕ್ಕಕ್ಕಿಲ್ಲವೆ? 'ಕಸಬ್'ನಂತಹ ವಿಕೃತ ಮನಸ್ಸಿನವರು 18ರ ಆಸುಪಾಸಿನಲ್ಲಿದ್ದರೆ, ನಮ್ಮವರು ಕ್ಷಮಿಸಿ ಬಿಡುತ್ತಿದ್ದವರಲ್ಲವೆ? ಕೇವಲ ಒಂದೆರಡು ದಿನ ಅಥವಾ ತಿಂಗಳಲ್ಲೇ ದಿಢೀರನೆ ಅವನಿಗೆ ಜ್ಞಾನೋದಯವಾಗಿ ಬಿಡುತ್ತದೆಯೇ? ಸಂಸ್ಕಾರ ಹಾಗೂ ಆದರ್ಶ ಕೇವಲ ದಿಢೀರನೆ ಹುಟ್ಟುವುದಲ್ಲ. ಅದು ದೀರ್ಘಕಾಲಕ್ಕೆ ಸಂಬಂಧಿಸಿದುದು. ಆದರೆ, ಅಷ್ಟು ವಿಕೃತ ಮನಸ್ಸಿನ ಹುಡುಗನನ್ನು ಬಾಲಾಪರಾಧಿ -ಎಂಬ ಕಾರಣ ಒಡ್ಡಿ ಬಿಡುಗಡೆ ಮಾಡಿದ್ದೇ ಆದರೆ, ಯಾವ ಹೆಣ್ಣು ಮಕ್ಕಳು ತಾನೇ ನಿರ್ಭಯವಾಗಿ ಓಡಾಡುತ್ತಾರೆ? ಮತ್ತೊಬ್ಬ 'ಉಮೇಶ್‌ರೆಡ್ಡಿ'ಯನ್ನು ಬೆಳೆಸಿದಂತಾಗುವುದಿಲ್ಲವೆ? ಕೊನೆಪಕ್ಷ ಶಿಕ್ಷೆಯನ್ನು ವಿಧಿಸದಿದ್ದರೂ ಪರವಾಗಿಲ್ಲ, ಕೆಲವು ವರ್ಷಗಳು ಜೈಲಿನಲ್ಲಿ ಇರಿಸಿ, ಮನಃಪರಿವರ್ತನೆ ಮಾಡಿ, ಸಮಾಜಕ್ಕೆ ಬಿಡುಗಡೆಗೊಳಿಸಬಹುದಲ್ಲವೆ? ಕಾನೂನು ರೂಪಿಸುವಾಗ ಅಡ್ಡಗಾಲು ಹಾಕುವ ಮಕ್ಕಳ ಕಾನೂನು ರಕ್ಷಣೆ ಮಾಡುವವರು ಒಮ್ಮೆ ತಂಗಿ, ಅಕ್ಕ, ಹೆಂಡತಿಯರು ಈ ಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದರು ಎಂಬುದನ್ನು ಅರಿಯಲಿ. ಬಾಲಾಪರಾಧಿಯ ವಯಸ್ಸನ್ನು ನಿರ್ಧರಿಸುವುದಕ್ಕಿಂತ ಅವನ ಅಪರಾಧದ ಗಂಭೀರತೆಯನ್ನು ಪರಿಗಣಿಸುವುದೇ ಲೇಸು. ಸ್ಥಳೀಯ ಸಂಸ್ಥೆ ಚುನಾವಣೆಯಂತಹ ವಿಷಯದಲ್ಲಿ ಸ್ವಾರ್ಥಕ್ಕಾಗಿ ಒಗ್ಗಟ್ಟು ಪ್ರದರ್ಶಿಸುವ ಸ್ವಾರ್ಥ ರಾಜಕಾರಣಿಗಳು ಇಂತಹ ಕಾರ್ಯಗಳಿಗೂ ಒಗ್ಗಟ್ಟು ಪ್ರದರ್ಶಿಸಿ, ಸೂಕ್ತ ಕಾನೂನು ರೂಪಿಸಲು ನೆರವಾಗಲಿ.
-ಮಾಗಡಿ ಶ್ರೀನಿವಾಸ್, ರಾಮನಗರ
ಕಸಾಪ ನಿಲುವಳಿ ಅನುಷ್ಠಾನಗೊಳ್ಳಲಿ
1915ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಡಿದು, ಇಲ್ಲಿಯವರೆಗೆ, ನೇಕ ವಿಚಾರಗಳ ಬಗ್ಗೆ ಸಾಹಿತಿಗಳು, ಸಂಶೋಧಕರು ಮತ್ತು ಭಾಗವಹಿಸುವ ಆನೇಕ ಚಿಂತಕರು ಕನ್ನಡ ಕಾಳಜಿಯ ಹಲವು ಪ್ರಶ್ನೆಗಳನ್ನು, ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎತ್ತಿ ತೋರಿಸಿದ್ದಾರೆ.
ಆದರೆ ಆ ಪ್ರಶ್ನೆಗಳು ಕೇವಲ ಆ ಸಮ್ಮೇಳನದ ದಿನವಷ್ಟೇ ಗುಂಯ್‌ಗುಟ್ಟಿ ಮತ್ತೆ ಸ್ಥಬ್ದವಾಗುತ್ತವೆ. ಈ ಬಾರಿ ಗಡಿ ಭಾಗವಾದ ವಿಜಾಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಆ ಭಾಗದ ಅನೇಕ ಕನ್ನಡ ಶಾಲೆಗಳ, ಕನ್ನಡ ಉಳಿವಿನ ಸಮಸ್ಯೆಗಳು, ಈ ಸಮ್ಮೇಳನದಲ್ಲಿ ಚರ್ಚೆಗೊಳ್ಳ ಬಹುದೆಂದು ಜನ ಕನಸು ಕಾಣುತ್ತಿದ್ದಾರೆ. ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಗೋಷ್ಠಿಗಳ ವಿಚಾರಗಳು ಜಾರಿಗೆ ಬಾರದೇ ಇದ್ದರೂ, ಈ ಬಾರಿಯಾದರೂ ಉತ್ತರ ಕರ್ನಾಟಕದ ಗಡಿ ಭಾಗದ ಸಮಸ್ಯೆಗಳು ಕೇವಲ ಚರ್ಚೆಗಷ್ಟೇ ಸೀಮಿತವಾಗದೆ ಅನುಷ್ಠಾನಗೊಳ್ಳಲಿ.
-ವಸಂತ ಬಿ ಈಶ್ವರಗೆರೆ, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com