ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪದವಿ ಉಪನ್ಯಾಸಕರ ನೇಮಕಾತಿ ಅರ್ಹತೆಗೆ ಮನ್ನಣೆ ಇರಲಿ

Mainashree
Updated On : 10 Feb 2013, 11:16 am

ಕಳೆದ ಬಾರಿ ಪದವಿ ಪೂರ್ವ ಶಿಕ್ಷಕರನ್ನು ನೇಮಕಗೊಳಿಸಿಕೊಂಡಿದ್ದ ಸರ್ಕಾರ, ಇದೀಗ ಪದವಿ ಉಪನ್ಯಾಸಕರ ನೇಮಕಕ್ಕೆ ಸದ್ಯದಲ್ಲೇ ಚಾಲನೆ ನೀಡುತ್ತಿರುವುದು, ಪಿಯು ಕಾಲೇಜು ಉಪನ್ಯಾಸಕ ಹುದ್ದೆಯನ್ನು ಪಡೆಯಲಾಗದೇ ಇದ್ದ ಅದೆಷ್ಟೋ ಸ್ನಾತಕೋತ್ತರ ನಿರುದ್ಯೋಗಿ ಪದವಿಧರರಿಗೆ ಹೊಸ ಭರವಸೆಯ ಬೆಳಕನ್ನು ಮೂಡಿಸಿದೆ. ಇತ್ತೀಚೆಗಷ್ಟೇ ಸರ್ಕಾರ ಮಂಡಿಸಿರುವ 2013-14ನೇ ಸಾಲಿನ ಬಜೆಟ್ನಲ್ಲಿ ಹೊಸದಾಗಿ 74 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ತರಗತಿಗಳು ಹಾಗೂ ವೃತ್ತಿಪರ ವಿಷಯಗಳನ್ನ ಪ್ರಾರಂಭಿಸಲಾಗುತ್ತದೆ ಎಂದು ಹೇಳಲಾಗಿರುವುದು, ಖಂಡಿತ ಕೆಲವೇ ದಿನಗಳಲ್ಲಿ ಪದವಿ ಉಪನ್ಯಾಸಕರನ್ನು ತಂಬಿಕೊಳ್ಳುವ ಮುನ್ಸೂಚನೆಯನ್ನು ನೀಡಿದಂತಾಗಿದೆ. ಅದರೆ, ಪದವಿ ಉಪನ್ಯಾಸಕರನ್ನು ಇದುವರೆಗೂ ಕೇವಲ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಈ ಕ್ರಮದಿಂದಾಗಿ ಸಂಶೋಧನೆ ಮಾಡಿ ಪಿ.ಎಚ್.ಡಿ ಪಡೆದ, ಯುಜಿಸಿ ನೆಡೆಸುವ ನೆಟ್ ಪಾಸುಮಾಡಿದ ಹಾಗೂ ರಾಜ್ಯದಿಂದ ನಡೆಸುವ ಎಸ್.ಎಲ್.ಇ.ಟಿ ಪಾಸುಮಾಡಿದ್ದರೂ, ಸ್ನಾತಕೋತ್ತರ ಪದವಿಯಲ್ಲಿ ಕಡಿಮೆ ಅಂಕ ಪಡೆದವರು ಅವಕಾಶ ವಂಚಿತರಾಗುವಂತೆ ಮಾಡಿದೆ. ಹೀಗಾಗಿ ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ಕ್ರಮ ಅಳವಡಿಸಿ, ಜೊತೆಗೆ ಮೂರು-ನಾಲ್ಕು ವರ್ಷಗಳ ಕಾಲ ಸಂಶೋಧನೆ ಮಾಡಿ ಪಿ.ಎಚ್.ಡಿ ಪದವಿ ಪಡೆದವರಿಗೆ, ಎನ್.ಇ.ಟಿ ಹಾಗೂ ಎಸ್.ಎಲ್.ಇ.ಟಿ ಪಾಸು ಮಾಡಿದವರಿಗೆ ಮೊದಲ ಮಾನ್ಯತೆ ನೀಡಿ. ಈ ಮೊದಲಿನ ಹಳೆಯ ಕ್ರಮದಂತೆ ಸ್ನಾತಕೋತ್ತರ ಪದವಿ ಅಂಕದ ಜೇಷ್ಠತೆ ಹಾಗೂ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳುವುದಾದರೇ ಅದೆಷ್ಟೋ ಸ್ನಾತಕೋತ್ತರ ಪದವೀಧರರು ಅರ್ಹತೆ ಇದ್ದೂ, ಉದ್ಯೋಗ ಅವಕಾಶ ವಂಚಿತವಾಗುವಂತ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಈ ಬಗ್ಗೆ ಪದವಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ, ಅರ್ಹತೆಗೆ ಮನ್ನಣೆ ದೊರಕಿಸಿಕೊಡುವಂತಾಗಲಿ.
-ವಸಂತ ಬಿ ಈಶ್ವರಗೆರೆ, ಹಿರಿಯೂರು
ಇವು ಕೊಡುವ ಸಂದೇಶವೇನು?
ಪತ್ರಿಕೆ ಓದಿದಾಗ ನನ್ನ ಮನಸ್ಸಿನಲ್ಲಿ ಉಂಟಾದ ಕೆಲವು ಭಾವನೆಗಳಿಗೆ ಶಬ್ದರೂಪ ಕೊಡಬೇಕೆಂಬ ಉತ್ಕಟ ಅಭಿಲಾಷೆಯಾದ್ದರಿಂದ ಈ ಪತ್ರ. ಮೊದಲ ಪುಟದ ಸುದ್ದಿ-ದೆಹಲಿ ಅತ್ಯಾಚಾರದ್ದು. ಆ ಹುಡುಗ (?) ಹುಡುಗಿಯ ಮೇಲೆ ಲೈಂಗಿಕ ಕ್ರಿಯೆ ನಡೆಸಬಲ್ಲ. ಲೈಂಗಿಕ ಕ್ರಿಯೆ ಏನೆನ್ನುವುದು ಅವನಿಗೆ ಗೊತ್ತು. ಅತ್ಯಾಚಾರವನ್ನೂ ಮಾಡಬಲ್ಲ. ಆ ನಂತರ ಹುಡುಗಿಯನ್ನು ಬಸ್ಸಿಂದ ಬೆತ್ತಲೆಯಾಗಿ ದಬ್ಬ ಬಲ್ಲ. ಮುಂದೆ ತನ್ನ ಕೆಟ್ಟ ಕಾರ್ಯ ಗೊತ್ತಾಗಬಾರದೆಂದು ಬಸ್ಸು ತೊಳೆಯಬಲ್ಲ. ಪುರಾವೆ ಸಿಗದಂತೆ ಮಾಡಲೂ ಬಲ್ಲ. ಹುಡುಗಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಬಲ್ಲ. ಆದರೂ ಅವನು ಬಾಲಕ?! ಅವನ ವಯಸ್ಸು 18 ಆಗಿಲ್ಲ. ಆದ್ದರಿಂದ ಅವನಿಗೆ ಶಿಕ್ಷೆ ಕೇವಲ 3 ವರ್ಷ. ಈ ಘಟನೆ ಮತ್ತು ನಮ್ಮ ಕಾನೂನು ಪರಿಶೀಲಿಸಿದರೆ ನನಗೆ ಆಶ್ಚರ್ಯವೂ, ಪ್ರಶ್ನಾರ್ಥಕವೂ ಆಯಿತು. ಒಂದು ವೇಳೆ ಬಾಲಕನಾದರೆ ತಪ್ಪು ಮಾಡಿದವನಿಗೆ ಶಿಕ್ಷೆ ಇದೆ ಆದ್ದರಿಂದ ಪುರಾವೆ ಇರಬಾರದು ಎಂದು ತರ್ಕಿಸುವವರ ಬಾಲಕನೇ? ಒಂದು ವೇಳೆ ಬಾಲಕನಾಗಿದ್ದರೂ ಅಪರಾಧವು ಹೀನಾಯಮಾನ ಇದ್ದುದರಿಂದ ಶಕ್ತಿ ಹೆಚ್ಚಿಗೆ ಇರಬೇಡವೇ? ನಮ್ಮ ಸಂಸದರು ಯಾಕೆ ಇದರ ಬಗ್ಗೆ ಚಿಂತಿಸಬಾರದು?
ಇನ್ನು ಮಾಣಿಕರಾವು ಸೂರ್ಯವಂಶಿಯವರ ಆತ್ಮಹತ್ಯೆ ಬಗ್ಗೆ. ಇವರ ಮಗ ಗ್ರಾಮ ಪಂಚಾಯತ್ನಲ್ಲಿ ಪಿ.ಡಿ.ಓ. ಮೇಲಧಿಕಾರಿಗಳ ಭ್ರಷ್ಟತೆ, ರಾಜಕಾರಣಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ. ನಂತರ ಈ ಘಟನೆಗೆ ಕಾರಣರಾದವರು ರಾಜಾರೋಷವಾಗಿ ಜೀವನ ಸಾಗಿಸುತ್ತಿರುವ ವಿದ್ಯಮಾನ. ತಂದೆಯ ಮನಸ್ಸಿಗೆ ಆಘಾತವಾಗಿ ಅವರೂ ಆತ್ಮಹತ್ಯೆ ಮಾಡಿಕೊಂಡದ್ದು ಎಂತಹ ದುರಂತ! ಭ್ರಷ್ಟರು ತಪ್ಪು ಮಾಡಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ರಾಜಾರೋಷದಿಂದ ಧೈರ್ಯದಿಂದ ಇದ್ದರೆ ದುರ್ಬಲ ಅಥವಾ ಹೆಚ್ಚು ಸೂಕ್ಷ್ಮ ಮನಸ್ಸಿನ ವ್ಯಕ್ತಿ ಇಂತಹವನ್ನು ನೋಡಲಾರದೇ ಸಾವಿಗೆ ಶರಣು. ಇಲ್ಲಿ ನಾವು ಯಾವ ಪಾಠ ಕಲಿಯಬಹುದು? ಸೂಕ್ಷ್ಮ ವಯಸ್ಸಿನವರಾದರೆ ಸಾಯಿರಿ; ಗಟ್ಟಿ ಮನಸ್ಸಿನವರಿದ್ದು ನಾಚಿಕೆ ಇಲ್ಲದವರಾದರೆ ಕಾನೂನು ನಿಮ್ಮನ್ನು ಏನೂ ಮಾಡದು, ರಾಜಾರೋಷವಾಗಿ ತಪ್ಪು ಮಾಡಿರಿ ಎಂದೇ? ಮನಸ್ಸಿಗೆ ಬಹಳ ಬೇಜಾರು ಮಾಡಿದ ಈ ಸುದ್ದಿ ಕಾನೂನಿನ ಬಗ್ಗೆಯೇ ಜಿಗುಪ್ಸೆ ತರುವಂತಿದೆ. ಸಾಧ್ಯವಾದಷ್ಟೂ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾದರೆ ಮಾತ್ರ ಇಂತಹ ಘಟನೆಗಳು ಕಡಿಮೆಯಾಗ ಬಹುದೆಂದು ನನ್ನ ಅನಿಸಿಕೆ.
-ಜಿ. ಗೋಪಾಲಕೃಷ್ಣ, ಬಳ್ಳಾರಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement