ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಜೆ.ಪಿ.ನಗರದಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಫೆ.7ರ ಸಂಚಿಕೆಯ (ಪುಟ 9) 'ಹಿರಿಯರ ಹಾದಿ' ಅಂಕಣದಲ್ಲಿ ಮಹಾತ್ಮರ ಹೆಸರು ಮಾಡಿದ ಮೋಡಿ ಲೇಖನದಲ್ಲಿ 'ಮೊಕದ್ದಮೆ ಹೂಡುವುದರಿಂದ ಸಂಬಂಧ ಕೆಡುವುದಲ್ಲದೆ, ವೃಥಾ ಹಣ ವ್ಯವವಾಗುತ್ತದೆ' ಎಂದು ಪ್ರಕಟವಾಗಿದೆ. 'ವ್ಯವ' ಎಂಬಲ್ಲಿ 'ವ್ಯಯ' ಎಂದಿರಬೇಕಿತ್ತು. ಅದೇ ಲೇಖನದಲ್ಲಿ ಮುಂದುವರಿದು 'ಅದು ಮಗಳಿಗೆ ಬರತ್ಕದೆಂದು' ಎಂದಿದೆ. ಬರತಕ್ಕದ್ದೆಂದು ಇರಬೇಕಿತ್ತು.'
'ಅದೇ ಪುಟದಲ್ಲಿ 'ಕಮಲ್ ಹಾಸನ್ಗೆ ಇಲ್ಲದ ಸ್ವಾತಂತ್ರ್ಯ ಅನಿರುದ್ಧನಿಗೇಕೆ?' ಲೇಖನದಲ್ಲಿ 'ಅವರ ವಿರುದ್ಧ ಸೊಲ್ಲೆತ್ತಲೂ ತಾಕ್ಕತ್ತಿಲ್ಲ' ಎಂದಿರುವಲ್ಲಿ 'ತಾಕತ್ತಿಲ್ಲ' ಇರಬೇಕು.'
'ಪುಟ 14ರ ಸುದ್ದಿ ಸಂಕ್ಷೇಪದಲ್ಲಿ 'ವಿವೇಕ್ಗೆ ಗಂಡು ಮಗು' ಲೇಖನದಲ್ಲಿ, 'ಹೊಸದಾದ ಪುಟ್ಟ ದೇವತೆಯ ಆಗಮನವಾಗಿ ಗಂಡು ಮಗು ಹುಟ್ಟಿದೆ' ಎಂದಿದೆ. ಗಂಡು ಇಲ್ಲಿ ದೇವತೆಯಾಗಲು ಸಾಧ್ಯವೇ? ದೇವತೆ ಅಂದರೆ ಹೆಣ್ಣು ಅಲ್ಲವೇ?'
'ಅಧಿಸೂಚನೆ ಅಗ್ರಲೇಖನದಲ್ಲಿ 'ಅಶ್ವನಿಕುಮಾರ್' ಎಂದಿದೆ. ಅಶ್ವಿನಿಕುಮಾರ್ ಸರಿಯೇ? ಅಶ್ವನಿಕುಮಾರ್ ಸರಿಯೇ? 'ಇಂಡಿಯಾ ಕ್ರೇಜ್ ಸೃಷ್ಟಿಸಿದ' ಲೇಖನದಲ್ಲಿ 'ದೇಶವು ಉತ್ತಮ ಆಡಳಿತವನ್ನು ಎದುರು ನೋಡುತ್ತಿದ್ದೇವೆ' ಎಂದಿದೆ. ಇದು ಎದುರು ನೋಡುತ್ತಿದೆ' ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಅವರ ಪತ್ರದಲ್ಲೇ ಅವರು ಕೇಳಿದ ಪ್ರಶ್ನೆಗೆ ಉತ್ತರವಿದೆ. ಅಶ್ವನಿ ಎಂದು ಬಳಸಿರುವುದು ಸರಿಯಾಗಿಯೇ ಇದೆ.
ಪ್ರೊ. ಎಂ.ಎನ್. ಸುಂದರರಾಜ್ ಅವರೇ 'ಹಿರಿಯರ ಹಾದಿ' ಅಂಕಣದಲ್ಲಾದ ತಪ್ಪಿನ ಬಗ್ಗೆ ಗಮನ ಸೆಳೆದಿದ್ದಾರೆ. 'ಫೆ.9ರಂದು 'ಹಿರಿಯರ ಹಾದಿ' ಅಂಕಣ 'ಮಧುದಂಡವತೆ' ಅವರಿಗೆ ಸಂಬಂಧಿಸಿದ್ದಾಗಿತ್ತು. ಆದರೆ ಅಂಕಣದಲ್ಲಿ 'ಮಧುಲಿಮಯೆ' ಎಂದು ಪ್ರಕಟವಾಗಿದೆ' ಎಂದು ಲೇಖಕರೇ ಹೇಳಿದ್ದಾರೆ.
ಬೆಂಗಳೂರಿನಿಂದ ಜಯಸಿಂಹ ಕೆ.ಆರ್. ಅವರು ಬರೆಯುತ್ತಾರೆ- ಫೆ.5ರಂದು ಮುಖಪುಟದಲ್ಲಿ 'ಅಟಾರ್ನಿ ಜನರಲ್ ಆಗಿ ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲೇ ರೋಹಿಂಟನ್ ನಾರಿಮನ್ ಪದತ್ಯಾಗ' ಎಂಬ ಸುದ್ದಿಯಿದೆ. ಆದರೆ ಅವರು ಅಟಾರ್ನಿ ಜನರಲ್ ಆಗಿರಲಿಲ್ಲ. ಅವರು ಸಾಲಿಸಿಟರ್ ಜನರಲ್ ಆಗಿದ್ದರು. ಪುಟ 14ರಲ್ಲಿ ಸರಿಯಾಗಿ ನೀಡಲಾಗಿದೆ. ಆದರೆ ಮುಖಪುಟದಲ್ಲಿಯೇ ತಪ್ಪಾಗಿ ವರದಿಯಾಗಿದೆ. ಮುಖಪುಟದ ಸುದ್ದಿಗೆ ಪ್ರಕಟಿಸಿದ ಫೋಟೊ ಕೂಡ ರೋಹಿಂಟನ್ ನಾರಿಮನ್ ಅವರದ್ದಲ್ಲ' ಎಂದಿದ್ದಾರೆ.
ರೋಹಿಂಟನ್ ನಾರಿಮನ್ ಅವರ ಸುದ್ದಿಯ ಜತೆ ಪ್ರಕಟವಾದ ಚಿತ್ರ ಗೋಪಾಲ ಸುಬ್ರಹ್ಮಣ್ಯಂ ಅವರದ್ದು. ಅಂತರ್ಜಾಲದಲ್ಲಿ ರೋಹಿಂಟನ್ ನಾರಿಮನ್ ಅವರ ಹೆಸರಿನಲ್ಲಿ ಇದೇ ಚಿತ್ರಗಳಿವೆ. ಹಲವು ಕಡೆ ಇದೇ ರೀತಿಯಾಗಿದೆ. ಇದರಿಂದ ಗೊಂದಲಕ್ಕೊಳಗಾಗಿಯೇ ನಮ್ಮವರೂ ಇದನ್ನೇ ರೋಹಿಂಟನ್ ನಾರಿಮನ್ ಅವರ ಚಿತ್ರ ಎಂದು ಭಾವಿಸಿ, ಪ್ರಕಟಿಸಿದ್ದಾರೆ.
-ವಿಶ್ವೇಶ್ವರ ಭಟ್