ನೇಮಕ ಸಮಾಧಾನ ತಂದಿಲ್ಲ (ಪತ್ರಗಳು)
ಅಂತೂ ಬಹು ದಿನಗಳ ನಂತರ ರಾಜ್ಯ ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ ..
ಅಂತೂ ಬಹು ದಿನಗಳ ನಂತರ ರಾಜ್ಯ ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗಾಗಿ ಅರ್ಜಿ ಕರೆದಿರುವುದು ಸಂತೋಷದ ವಿಷಯ. ಆದರೆ ಸಾಕಷ್ಟು ವರ್ಷಗಳಿಂದ ಖಾಲಿ ಇರುವ ಸಾವಿರಾರು ಹುದ್ದೆಗಳಲ್ಲಿ ಕೇವಲ 4000 ಶಿಕ್ಷಕರ ಆಯ್ಕೆ ನಡೆಯುತ್ತಿರುವುದು 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಯಂತಾಗಿದೆ. ಅತಿಯಾದ ಕಾರ್ಯಭಾರದಲ್ಲಿ ಬಳಲುತ್ತಿರುವ ಶಿಕ್ಷಕರಿಗೆ ಇದರಿಂದ ಅಷ್ಟೇನೂ ಪ್ರಯೋಜನವಾಗುತ್ತಿಲ್ಲ. ಕಾರಣ ಬೃಹತ್ ಸಂಖ್ಯೆಯಲ್ಲಿ ಕೊರತೆ ಇರುವ ಜಾಗದಲ್ಲಿ ನಾಲ್ಕು ಸಾವಿರ ಸಂಖ್ಯೆಯ ಶಿಕ್ಷಕರು ಕೊರತೆಯನ್ನು ನೀಗಿಸುವುದು ಸಾಧ್ಯವೇ?
ಇನ್ನು ಸರ್ಕಾರಿ ಶಾಲೆಗಳು 'ಪ್ರಯೋಗಶಾಲೆ' ಗಳಾಗುತ್ತಿರುವುದು ಮತ್ತೊಂದು ದುರಂತ. ಹೊಸ ಹೊಸ ಯೋಜನೆಗಳು ಪ್ರತಿ ವರ್ಷ ಇಲ್ಲವೆ, ಎರಡು ಮೂರು ವರ್ಷಗಳಲ್ಲಿ ಜಾರಿಯಾಗುತ್ತಿವೆ. ವಿರೋಧದ ನಡುವೆ ಒಲ್ಲದ ಮನಸ್ಸಿನಿಂದ ಅವನ್ನು ಸ್ವೀಕರಿಸಿ ಶಾಲೆಯಲ್ಲಿ ಅನುಷ್ಠಾನಗೊಳಿಸಿ ಯಶಸ್ವಿಯಾಗುವ ಮೊದಲೇ ಮತ್ತೊಂದು ಪ್ರಯೋಗ- ಯೋಜನೆ ಜಾರಿಗೊಂಡಿರುತ್ತದೆ. ಇದೂ ಕೂಡ ಶಿಕ್ಷಕರ ಹಾಗೂ ಪೋಷಕರ ಅಸಹನೆಗೆ ಕಾರಣವಾಗಿದೆ. ಇತ್ತೀಚಿನ ರಚನಾ ತರಬೇತಿ, ಸಿ.ಸಿ.ಇ. ತರಬೇತಿ, ನಲಿಕಲಿ ಹಾಗೂ ಇತರ ತರಬೇತಿಗಳ ಅನುಷ್ಠಾನವಾಗಬೇಕಾದರೆ, ಶಾಲೆಯಲ್ಲಿ ಶಿಕ್ಷಕರ ಕೊರತೆ ಇರಬಾರದು. ಎಷ್ಟೋ ಶಾಲೆಗಳಲ್ಲಿ ಒಬ್ಬ ಶಿಕ್ಷಕರೇ ಎಲ್ಲಾ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಯಾಕೆ, ಕನಕಪುರ ತಾಲೂಕಿನಂತಹ ಹಿಂದುಳಿದ ತಾಲೂಕಿನಲ್ಲಿಯೇ ಎಷ್ಟೋ ಶಾಲೆಗಳಲ್ಲಿ 'ಶೂನ್ಯ' (0) ಶಿಕ್ಷಕರಿದ್ದು, ಪಕ್ಕದ ಶಾಲೆಗಳಿಂದ ನಿಯೋಜನೆ ಮೇರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ವಿಚಿತ್ರವೆಂದರೆ, ರಾಮನಗರ ಜಿಲ್ಲೆಗೆ ಕೇವಲ 160 ಶಿಕ್ಷಕರನ್ನು ಮಾತ್ರ ತುಂಬಲಾಗುತ್ತಿದೆ. ಇದು ಕೇವಲ ಕನಕಪುರ ತಾಲ್ಲೂಕಿನ ಕೊರತೆಯನ್ನೂ ನೀಗಿಸಲಾರದೆಂದರೆ ಆಶ್ಚರ್ಯವಿಲ್ಲ! ಇನ್ನೂ 3 ತಾಲ್ಲೂಕಿಗೆ?
ಹಾಗೆಯೇ 'ಅಕ್ಷರದಾಸೋಹ' ಕಾರ್ಯಕ್ರಮದ ಒತ್ತಡವನ್ನು ಕಡಿಮೆ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಶಿಕ್ಷಕರ (ಮುಖ್ಯ ಶಿಕ್ಷಕರು) ಮೇಲೆಯೇ ಹೆಚ್ಚು ಜವಾಬ್ದಾರಿ ಇದೆ. ಒಂದೆರಡು ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಶಿಕ್ಷಕರಲ್ಲಿ ಅಸಹನೆ ಹುಟ್ಟಿಸಿದೆ. ಮೊದಲು ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಯ ನಿರ್ವಹಣೆ ನಡೆಯುತ್ತಿತ್ತು. ನಂತರ ಮುಖ್ಯ ಅಡುಗೆಯವರು ಹಾಗೂ ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ನಿರ್ವಹಿಸಬೇಕೆಂಬ ಆದೇಶ ಬಂತು. ಈಗ ಮತ್ತೆ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆ ನಿರ್ವಹಿಸಬೇಕೆಂಬ ಆದೇಶ ಬಂದಿದೆ. ಹೀಗೆ ದಿನಕ್ಕೊಂದು ಬದಲಾವಣೆಗಳಾಗುತ್ತಿದ್ದರೆ, ಈ ಬದಲಾವಣೆಗೆ ಸಾಕಷ್ಟು ಪ್ರಕ್ರಿಯೆ ನಡೆಸಬೇಕಾಗಿರುವ ಕಾರಣ, ಶಿಕ್ಷಕರ ಕೊರತೆಯ ಶಾಲೆಗಳು ಹಾಗೂ ಏಕೋಪಾಧ್ಯಾಯ ಶಾಲೆಗಳು ಏನು ಮಾಡಬೇಕು? ಶಾಲೆ ಬಿಟ್ಟು ಇದೇ ಕೆಲಸ ನಿರ್ವಹಿಸಬೇಕೆ? ಇಷ್ಟೆಲ್ಲಾ ಅಸಹನೆಗಳ ಜೊತೆಗೆ ಶಿಕ್ಷಕರ ಬೋಧನೆ ಪರಿಣಾಮಕಾರಿಯಾಗುವುದೆ?
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ ಜಿಲ್ಲೆ