ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಸತ್ತಿಗೆ ಹೆಲಿಕಾಪ್ಟರ್ ಬೇನೆ

Mainashree
Updated On : 14 Feb 2013, 10:47 am

ಸುಮಾರು ಹನ್ನೆರಡು ವರ್ಷಗಳ ಕಾಲ ಮೂರು ಸರ್ಕಾರಗಳು ಎಳೆದಾಡಿದ ಇಟಲಿ ಮೂಲದ ಸಂಸ್ಥೆಯಿಂದ, ಅತಿ ಪ್ರತಿಷ್ಠಿತರ ಬಳಕೆಗೆ, ಭಾರತ ಮೂರು ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚಿನ ಹಣ ಕೊಟ್ಟು ಕೊಳ್ಳಲಿರುವ ಹೆಲಿಕಾಪ್ಟರ್ ವ್ಯವಹಾರದಲ್ಲಿ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಆರೋಪ ಹೊರಬಿದ್ದಿದ್ದು, ಮುಂದಿನ ವಾರದಿಂದ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದ ಕಾರ್ಯಕ್ರಮದ ಆದ್ಯತೆ ನಿರ್ಧಾರವಾದಂತಿದೆ.
ವಾಜಪೇಯಿ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡಿಸ್ ರಕ್ಷಣಾ ಮಂತ್ರಿಯಾಗಿದ್ದಾಗಲೇ, ಇಂತಹ ಹೆಲಿಕಾಪ್ಟರ್ (18,000 ಅಡಿಗಳ ಎತ್ತರದಲ್ಲಿ ಹಾರುವ ಸಾಮರ್ಥ್ಯ) ಕೊಳ್ಳಬೇಕೆನ್ನುವ ಪ್ರಸ್ತಾಪ ಇತ್ತು. ಆದರೆ ಅಂತಿಮ ಒಪ್ಪಂದವಾಗಿದ್ದು ಮನಮೋಹನ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದಾಗ (2010). ಈ ವ್ಯವಹಾರವೇನೂ ಹೊಸದಲ್ಲ. ಆಗಿಂದಾಗ್ಗೆ ಮಾಧ್ಯಮ ಪ್ರಪಂಚದಲ್ಲಿ ಕಾಣಿಸಿಕೊಂಡಿರುವ ವ್ಯವಹಾರವೇ.. ಈಗ ಇದಕ್ಕೆ ಪ್ರಾಮುಖ್ಯ ಸಿಕ್ಕಿರುವುದು ಇಟಲಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಿರುವುದರಿಂದಲೇ. ಸರ್ಕಾರಕ್ಕೂ ಈ ಪ್ರಕರಣ, ಅದರ ಹಿಂದಿರುವ ಆಯಾಮದ ರಾಜಕೀಯ ಆರೋಪದ ಪರಿಚಯವಾಗಿದೆ. ಸಂಸತ್ತಿನಲ್ಲಿ ಒತ್ತಾಯ ಬರುವುದಕ್ಕೆ ಮುಂಚೆಯೇ ಸರ್ಕಾರ ಆರೋಪಗಳನ್ನು ಕುರಿತು ಸಿಬಿಐ ಸಂಸ್ಥೆಯ ಮೂಲಕ ತನಿಖೆ ನಡೆಸುವ ನಿರ್ಧಾರವನ್ನು ಪ್ರಕಟಿಸಿದ್ದು ಉಚಿತವಾಗಿಯೇ ಇದೆ. ಹೇಗಿದ್ದರೂ ಇಂತಹ ಒತ್ತಾಯ ಬರುವುದು ಸರ್ಕಾರಕ್ಕೂ ಖಚಿತವಾಗಿರಬೇಕು. ಈ ವ್ಯವಹಾರದಲ್ಲಿ ರಕ್ಷಣಾ ಮಂತ್ರಾಲಯ ಒಂದು ಏಜನ್ಸಿಯಂತೆ ಹೆಲಿಕಾಪ್ಟರ್‌ನ ಆಯ್ಕೆ, ಬೆಲೆ ಎಲ್ಲವನ್ನೂ ನಿರ್ಧರಿಸಿದ್ದು, ಅತಿ ಪ್ರತಿಷ್ಠಿತರ ರಕ್ಷಣಾ ಪಡೆಯ ಜತೆ, ವಾಯುದಳದ ಪ್ರಮುಖರು ಹಾಗೂ ಇತರ ಅಧಿಕಾರಿಗಳು.  ಆದರೆ ಈಗಿನ ವ್ಯವಸ್ಥೆಯಲ್ಲಿ ಇಟಲಿಯ ಪ್ರಸ್ತಾಪ ಬಂದರೆ ಸಂಸತ್ತು ಅದನ್ನು ಹಾಗೆಯೇ ಬಿಡುವಂತಿಲ್ಲ. ಪ್ರಧಾನಿ ಮನಮೋಹನ ಸಿಂಗ್ ಹಾಗೂ ರಕ್ಷಣಾಮಂತ್ರಿ ಎ.ಕೆ.ಆಂಟನಿ ವೀರಾವೇಶದ ಮಾತುಗಳನ್ನೇ ಆಡಿದ್ದಾರೆ. ಅವರಿಬ್ಬರೂ ತಮ್ಮ ಮಾತಿಗೆ ಬದ್ಧರಾಗಿ ನಡೆಯುವುದು, ಅದನ್ನು ಪಾರದರ್ಶಕವಾಗಿ ಪ್ರತಿಬಿಂಬಿಸುವುದು ಅಗತ್ಯ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement