ವಿಶ್ವವಿದ್ಯಾಲಯಗಳ ವ್ಯವಹಾರ ಸರ್ಕಾರದ ನಿಯಂತ್ರಣಾಧಿಕಾರ
ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ, ಸರ್ಕಾರದ ಹಸ್ತಕ್ಷೇಪ ಹಾಗೂ ನಿಯಂತ್ರಣಾಧಿಕಾರವಿದ್ದರೆ, ಅಲ್ಲಿ ರಾಜಕೀಯ ಆಧರಿತ ಸೆಣಸಾಟಕ್ಕೆ ಅವಕಾಶವಾಗಿ, ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಎನ್ನುವ ನಂಬಿಕೆ ಹಿಂದಿನ ದಶಕಗಳದ್ದು.
ಆ ಕಳಂಕವನ್ನು ತೊಡೆದು ಹಾಕಲೆಂದೇ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ನಿರ್ಧಾರದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಸಾಧ್ಯವಿರುವಷ್ಟು ಮಟ್ಟಿಗೂ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ, ಆ ಸಂಸ್ಥೆಗಳ ಸ್ವಾಯತ್ತ ಸ್ವರೂಪವನ್ನು ಕಾಪಾಡಿಕೊಳ್ಳಲೆಂದೇ ವಿಶೇಷ ಕಾಯಿದೆಗಳ ರಚನೆಯಾಯಿತು.
ಈಗಿನ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವವಿದ್ಯಾಲಯಗಳಿಗೆ ಅಗತ್ಯವಾದ ಹಣವನ್ನು ಒದಗಿಸಿದರೂ, ಆಡಳಿತ ಹಾಗೂ ಶೈಕ್ಷಣಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದು ದಶಕಗಳಾಗಿವೆ. ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಬೆಳೆದು ನಿಂತಿವೆ, ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ವಿಸ್ತರಣೆ ಸಹಜವಾಗಿ ತನ್ನದೇ ಆದ ಸಮಸ್ಯೆಗಳನ್ನು ತಂದೊಡ್ಡಿದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಕೂಗೂ ಇದೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿರುವುದು ನಾಲ್ಕೇ ತಾಲ್ಲೂಕುಗಳು. ಕೆಲವು ಜಿಲ್ಲೆಗಳನ್ನು ಸೇರಿಸಿಕೊಂಡರೆ ಪ್ರಾದೇಶಿಕ ಹಕ್ಕಿನ ಆಧರಿತ ಸಮಸ್ಯೆಗಳೂ ನಿರ್ಮಾಣವಾಗಬಹುದು. ಇಡೀ ದೇಶದಲ್ಲೇ ಖ್ಯಾತಿ ಗಳಿಸಿದ್ದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿನ, ವ್ಯವಹಾರ, ಅವ್ಯವಹಾರ, ಭ್ರಷ್ಟಾಚಾರ, ಜಾತೀಯತೆ, ವ್ಯಕ್ತಿ ದ್ವೇಷ ಆಧರಿತ ಪ್ರಕರಣಗಳನ್ನು ಗಮನಿಸಿದಾಗ ನಿಜ ರಾಜಕೀಯದ ಜನ ಇಂತಹ ಅವ್ಯವಸ್ಥೆಯನ್ನು ಸಹಿಸುತ್ತಿರಲಿಲ್ಲವೇನೋ ಎನ್ನುವ ಭಾವನೆ ಮೂಡುತ್ತಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾದ ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯದ ಕಾಯಿದೆಯ ಬದಲಾವಣೆಯ ವಿಧೇಯಕವನ್ನು ಗಮನಿಸಿದರೆ, ಅದು ಪ್ರತ್ಯಕ್ಷವಾಗಿ ವಿಶ್ವವಿದ್ಯಾಲಯದ ಸ್ವಾಯತ್ತ ಸ್ವರೂಪದ ಮೇಲೇ ದಾಳಿಯ ಪ್ರಯತ್ನ ಎನ್ನುವಂತಿದೆ.
ಕುಲಾಧಿಪತಿಯ ನೇಮಕಕ್ಕೂ ಸರ್ಕಾರದ ಒಪ್ಪಿಗೆ ಬೇಕು ಎನ್ನುವ ನಿಯಮದಿಂದ ಹಿಡಿದು ಅಕ್ರಮ ಹಾಗೂ ನಿಯಮ ಬಾಹಿರ ಚಟುವಟಿಕೆಯ ವಿರುದ್ಧದ ಶಿಸ್ತಿನ ಕ್ರಮ ಕೈಗೊಳ್ಳುವ ಅಧಿಕಾರದವರೆಗೂ ಸರ್ಕಾರದ ಬತ್ತಳಿಕೆಯಲ್ಲಿ ಅಸ್ತ್ರಗಳು ಸೇರಿದಂತಿದೆ.
ಸಂಸ್ಥೆಯ ಕಾರ್ಯಸಮಿತಿ ಹಾಗೂ ಸೆನೆಟ್ಗಳಲ್ಲೂ ಸರ್ಕಾರದ ಪ್ರತಿನಿಧಿಗಳೇ ಹೆಚ್ಚಾಗಿರುವುದರಿಂದ ವಿಶ್ವವಿದ್ಯಾಲಯ ಸರ್ಕಾರದ ವಶಕ್ಕೇ ಬಂದಂತೆ ಆಗಬಹುದು. ಆ ದರ್ಶನದ ದೃಷ್ಟಿಯಿಂದ ನೋಡಿದರೆ ವಿಶ್ವವಿದ್ಯಾಲಯಗಳ ವಲಯದಲ್ಲಿ ಈ ಬೆಳವಣಿಗೆ ಅಸಹನೀಯ. ಆದರೆ ಸ್ವಾಯತ್ತ ಅಧಿಕಾರ ಹಾಗೂ ಹಕ್ಕುಗಳನ್ನು ವಿಶ್ವವಿದ್ಯಾಲಯದ ನಿಯಂತ್ರಣ ಸಂಸ್ಥೆಗಳಲ್ಲಿ ಜಾಗ ಪಡೆದ ನಮ್ಮ ಸುಶಿಕ್ಷಿತ ಬೌದ್ಧಿಕ ಜನವರ್ಗ ಬಳಸಿದ ರೀತಿಯನ್ನು ಕಂಡಾಗ, ಜನಪ್ರತಿನಿಧಿಗಳ ನಿಯಂತ್ರಣ ಸ್ವಲ್ಪ ಮಟ್ಟಿಗಾದರೂ ಅಗತ್ಯ ಹಾಗೂ ಅನಿವಾರ್ಯ ಎನಿಸಬಹುದು. ಹೆಚ್ಚು ಕಡಿಮೆ ಇದೇ ಉದ್ದೇಶದಿಂದ ಸರ್ಕಾರ, ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಹಾಗೂ ಇತರ ಸಿಬ್ಬಂದಿಯ ವರ್ಗಾವರ್ಗಿಯ ಅಧಿಕಾರವನ್ನು ಪಡೆಯುವ ವಿಧೇಯಕವನ್ನು ಮಂಡಿಸಲಾಗಿದೆ. ಮೇಲ್ನೋಟಕ್ಕೆ ಈ ವ್ಯವಸ್ಥೆ ಯೋಗ್ಯ ಎನಿಸಿದರೂ ಇದೂ ಕೂಡಾ ಸರ್ಕಾರದ ನಿಯಂತ್ರಣ ಅಧಿಕಾರದ ವಿಸ್ತರಣೆಯ ಪ್ರಯತ್ನವೇ.
ಈಗಿನ ವ್ಯವಸ್ಥೆಯಲ್ಲಿ ನಿಯಂತ್ರಣ ಅಗತ್ಯ ಎನಿಸಿದರೂ, ಅದೇ ಶಾಶ್ವತ ವ್ಯವಸ್ಥೆಯಾಗಬಾರದು. ಆದಷ್ಟು ಬೇಗ ವಿಶ್ವವಿದ್ಯಾಲಯಗಳ (ಈಗ ಹಲವು ಬಗೆಯ ಸಂಸ್ಥೆಗಳಿವೆ) ಆಡಳಿತವನ್ನು ಸೂಕ್ತ ರೀತಿಯ ವ್ಯವಸ್ಥೆಗೆ ಒಳಪಡಿಸುವುದು ಸಾಧ್ಯವಾಗುವಂತಹ ಸಮಗ್ರ ಸ್ವರೂಪದ ಕಾಯಿದೆಯ ಅಗತ್ಯವಿದೆ. ಅದನ್ನು ಮರೆಯಬಾರದು.