ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Parashurama
Updated On : 17 Feb 2013, 9:57 am

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- "ಕನ್ನಡಪ್ರಭ'ದಲ್ಲಿ ಬರುತ್ತಿರುವ ಸುದ್ದಿ ಶೀರ್ಷಿಕೆಗಳು ಮನ ಸೂರೆಗೊಳ್ಳುತ್ತಿವೆ. ಶೀರ್ಷಿಕೆ ಆಕರ್ಷಣೆಗೆ ಒಳಗಾದವರು ಆ ಸುದ್ದಿಯನ್ನು ತಮಗೆ ಅರಿವಿಲ್ಲದಂತೆ ಓದಿಮುಗಿಸುತ್ತಾರೆ. ಇತ್ತೀಚೆಗೆ ನನ್ನ ಗಮನ ಸೆಳೆದ ಶೀರ್ಷಿಕೆ 'ಮೋದಿ ಪರ ಸಿನ್ಹಾ ಬ್ಯಾಟಿಂಗ್' (ಕ.ಪ್ರ. ಜ.29ರಂದು ಮುಖಪುಟ) ಆದರೆ ಈ ಬಗ್ಗೆ ನನ್ನದೊಂದು ಕ್ಯಾತೆ!!'
'ಬೇರೆ ಕ್ಷೇತ್ರಗಳಲ್ಲಿನ ಆಗು ಹೋಗುಗಳ ವರ್ಣನೆ ಮಾಡುವಾಗ ಕ್ರಿಕೆಟ್ ಆಟದ ಪಾರಿಭಾಷಿಕ ಶಬ್ದಗಳು ಬಳಕೆಯಾಗುತ್ತಿರುವುದು ಸರ್ವೇ ಸಾಮಾನ್ಯ. ಕ್ರಿಕೆಟ್ ಜನಪ್ರಿಯ ಆಟ ಆಗಿರುವುದರಿಂದ ಸುದ್ದಿ ಮನಸ್ಸಿಗೆ ಬಹಳ ಬೇಗ ನಾಟುತ್ತೆ. ಈ ಶೀರ್ಷಿಕೆ ಬರುವುದಾದರೆ ಯಶವಂತ ಸಿನ್ಹಾ, ಮೋದಿ ಪರವಾಗಿ ವಾಸ್ತವವಾಗಿ ಮಾಡಿರುವುದು ಫೀಲ್ಡಿಂಗ್ ಹೊರತು ಬ್ಯಾಟಿಂಗ್ ಅಲ್ಲ!!'
'ಕ್ರಿಕೆಟ್ ಆಟದಲ್ಲಿ ನಿಯಮದ ಪ್ರಕಾರ ಒಬ್ಬರು ಮತ್ತೊಬ್ಬರ ಪರವಾಗಿ ಬ್ಯಾಟಿಂಗ್ ಮಾಡುವಂತಿಲ್ಲ. ಆಟಗಾರ ರನ್ ಓಡಲು ಸಾಧ್ಯವಾಗದಿದ್ದರೆ ತಂಡದಲ್ಲಿ ಈ ಹಿಂದೆ ಬ್ಯಾಟಿಂಗ್ ಮಾಡಿದ ಆಟಗಾರ ಪ್ಯಾಡ್-ಗ್ಲೌಸ್ ಕಟ್ಟಿಕೊಂಡು ಓಡಬಹುದು. ಒಂದು ವೇಳೆ ಬೌಲಿಂಗ್ ಮಾಡುವಾಗ ಮೈ-ಕೈ ಉಳುಕಿಸಿಕೊಂಡರೆ ಉಳಿದ ಎಸೆತಗಳನ್ನು ಮತ್ತೊಬ್ಬ ಆಟಗಾರ ಮಾಡಿಮುಗಿಸಬಹುದು. ಫೀಲ್ಡಿಂಗ್ ವಿಚಾರದಲ್ಲಿ ಹೀಗಿಲ್ಲ. ತಂಡದಲ್ಲಿರದ ಆಟಗಾರನು ಕೂಡ ಬದಲಿ ಫೀಲ್ಡಿಂಗ್ ವಿಚಾರದಲ್ಲಿ ಮಾಡಲು ಅವಕಾಶವಿದೆ. ಆದ್ದರಿಂದ ಮೋದಿ ಪರವಾಗಿ ಯಶವಂತ ಸಿನ್ಹಾ ಮಾಡಿರುವುದು ಫೀಲ್ಡಿಂಗ್ ಹೊರತು ಬ್ಯಾಟಿಂಗ್ ಅಲ್ಲ!!' ಎಂದಿದ್ದಾರೆ.
ಕ್ರಿಕೆಟ್ ನಿಯಮಗಳ ಪ್ರಕಾರ ಒಬ್ಬರ ಬದಲಾಗಿ ಇನ್ನೊಬ್ಬರು ಬ್ಯಾಟಿಂಗ್ ಮಾಡುವಂತಿಲ್ಲ ಎಂಬುದು ನಮಗೂ ಗೊತ್ತು. ಬೇರೆ ಕ್ಷೇತ್ರಗಳ ವಿಚಾರವನ್ನು ಕ್ರಿಕೆಟ್ ಮೂಲಕ ಹೋಲಿಸಿ ಬರೆಯುವಾಗ 'ಅವರ ಪರವಾಗಿ ಬ್ಯಾಟ್ ಬೀಸಿದರು' ಎಂಬ ಬಳಕೆಯಿದೆ. ನೇರವಾದ ಮತ್ತು ಕ್ರಿಕೆಟ್ನ ನಿಯಮಗಳಿಗೆ ಒಳಪಟ್ಟ ಬ್ಯಾಟಿಂಗ್ ಎಂಬ ಪದದ ಅರ್ಥ ಒಂದಾದರೆ, ಅದನ್ನು ಬಳಸುವ ಧ್ವನ್ಯಾರ್ಥ ಬೇರೆ ಇದೆ. ಧ್ವನ್ಯಾರ್ಥದಲ್ಲಿ 'ಪರವಾಗಿ ಬ್ಯಾಟಿಂಗ್' ಅಂದರೆ 'ಪರ ವಹಿಸಿದರು', 'ಪರವಾಗಿ ಮಾತನಾಡಿದರು', 'ಬೆಂಬಲಕ್ಕೆ ನಿಂತರು' ಎಂದಾಗುತ್ತದೆ. ಕ್ರಿಕೆಟ್ನಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ಮುಖ್ಯವಾದರೂ ಬ್ಯಾಟಿಂಗಿಗೇ ಹೆಚ್ಚು ಪ್ರಾಶಸ್ತ್ಯ. ಆದ್ದರಿಂದಲೇ ಅವರ ಪರ ಫೀಲ್ಡಿಂಗ್ ನಡೆಸಿದರು, ಅವರ ಪರ ಬೌಲಿಂಗ್ ನಡೆಸಿದರು ಎಂಬ ಬಳಕೆಗಳು ಜಾರಿಯಲ್ಲಿಲ್ಲ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿಯವರು ಬರೆಯುತ್ತಾರೆ- 'ಸಣ್ಣದೊಂದು ತಪ್ಪಾಗಿದೆ. ಫೆ.11ರಂದು (ಪುಟ 7) 'ಕಿರುನಗೆ'ಯಲ್ಲಿ 'ಟೀಚರಲ್ಲಿ ಮರಿ ಕೋಲ್ಯ (ಗೆಳೆಯನತ್ತ ತಿರುಗಿ) ನಾನು ಹೇಳಿರ್ಲಿಲ್ವಾ? ಟೀಚರ್ ನನಗೆ ಲೈನ್ ಹೊಡೀತಾರೆ ಅಂತ?!' ಆದರೆ ಅದು 'ಟೀಟರ್' ಆಗಿದೆ.' ಎಂದಿದ್ದಾರೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement