ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನೌಕರ ಕಾರ್ಮಿಕ ಹರತಾಳ: ಸರ್ಕಾರಕ್ಕೆ ಸ್ಪಷ್ಟ ಸೂಚನೆ

Parashurama
Updated On : 17 Feb 2013, 9:52 am

ವಿತ್ತಮಂತ್ರಿ ಚಿದಂಬರಮ್ ಅವರು ಮನಮೋಹನ ಸಿಂಗ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟ ಸರ್ಕಾರದ ಕಟ್ಟಕಡೆಯ ಬಜೆಟ್ ತಯಾರಿಕೆಯಲ್ಲಿ ಮುಳುಗಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಇದೇ ಸರ್ಕಾರ ಬಜೆಟ್ ಮಂಡಿಸಿದರೂ ಅದೊಂದು ಕಾವಲುಗಾರ ಬಜೆಟ್. ವಾಸ್ತವದಲ್ಲಿ ಲೋಕಸಭೆ ಚುನಾವಣೆಯ ಅನಂತರ ಅಧಿಕಾರಕ್ಕೆ ಬರುವ ಸರ್ಕಾರವೇ ಆಗ ಹೊಸ ಬಜೆಟ್ ಮಂಡಿಸುವುದು.
ಈ ಹಿನ್ನಲೆಯಲ್ಲಿ, ಸರ್ಕಾರದ ಕಳೆದ ಒಂಬತ್ತು ವರ್ಷಗಳ ಸಾಧನೆ- ಸೋಲುಗಳನ್ನು ವಿವರಿಸಿ, ಸುಭದ್ರ ಶಕ್ತಿಶಾಲಿ ಭಾರತದ ನಿರ್ಮಾಣದ ಮಹಾಯಾತ್ರೆಯ ಮುಂದಿನ ದಿಕ್ಕನ್ನು ಸೂಚಿಸುವ ಸೂತ್ರಗಳನ್ನು ಚಿದಂಬರಮ್ ಹುಡುಕುತ್ತಿರುವಾಗಲೇ, ಬುಧವಾರ- ಗುರುವಾರ, ದೇಶದ ಹನ್ನೊಂದು ಅಖಿಲ ಭಾರತ ನೌಕರ- ಕಾರ್ಮಿಕ ಸಂಘಟನೆಗಳು ಹಾಗೂ ಹಲವು ರಾಜ್ಯಗಳ ಪ್ರತ್ಯೇಕ ಕೂಟಗಳು, ಎರಡು ದಿನಗಳ ಸಾರ್ವತ್ರಿಕ ಮುಷ್ಕರ ಹಾಗೂ ಹರತಾಳಕ್ಕೆ ಕರೆ ಕೊಟ್ಟಿರುವುದು ಗಮನಾರ್ಹ. ಒಂದು ಅಪರೂಪದ ಘಟನೆ.
ವಾಸ್ತವದಲ್ಲಿ ಈ ಸಂಘಟಿತ ನೌಕರ-ಕಾರ್ಮಿಕರು ಯಾವುದೇ ರಾಜಕೀಯ ಬೇಡಿಕೆಯನ್ನೂ ಮುಂದಿಡುತ್ತಿಲ್ಲ. ಭ್ರಷ್ಟಾಚಾರಗಳ, ಹಗರಣಗಳ ಪ್ರಸ್ತಾಪವನ್ನು ಮಾಡಿಲ್ಲ, ಎರಡು ದಶಕಗಳಿಗೂ ಹೆಚ್ಚಿನ ಅವಧಿಯ, ಆರ್ಥಿಕ ವ್ಯವಸ್ಥೆಯ ಉದಾರಿಕರಣದ ಹಿನ್ನೆಲೆಯಲ್ಲಿ, ಕೆಳ ಮಧ್ಯಮ ವರ್ಗದ ಜನಸಮುದಾಯಗಳ ನಿತ್ಯ ಜೀವನವೂ ದುರ್ಭರವಾಗಿರುವುದರತ್ತ ಸರ್ಕಾರದ ಗಮನವನ್ನು ಸೆಳೆಯವುದೇ ಮುಷ್ಕರದ ಉದ್ದೇಶ.
ಈಗ ರಾಜಕೀಯ ಮೇಲಾಟದ ಪ್ರಖರ ಬೆಳಕಿನಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಿರುವ ಗುಜರಾತ್ನ ಬಿಜೆಪಿಯ ಹ್ಯಾಟ್ರಿಕ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಉದಯೋನ್ಮುಖ ಹೊಸ ಮಧ್ಯಮ ವರ್ಗದ (ಅಂದರೆ ಈಗಷ್ಟೇ ಕಡುಬಡತನದ ರೇಖೆಯನ್ನು ದಾಟಿ ಮೇಲೆದ್ದು ನಿಂತು, ಮೇಲೆ ಮೇಲೇರುವ ಆಕಾಂಕ್ಷೆಯನ್ನು ಪ್ರದರ್ಶಿಸುತ್ತಿರುವ ಒಂದು ದೊಡ್ಡ ಜನವರ್ಗದ), ನಿತ್ಯ ಜೀವನದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕೇಳುವ ಸಂಘಟಿತ ಕಾನೂನುಬದ್ಧ ಶಾಂತಿಯುತ ಪ್ರಯತ್ನ ಈ ಸಾರ್ವತ್ರಿಕ ಮುಷ್ಕರ. ಹಣದ ಅತಿ ಪ್ರಸರಣದ ವೇಗದ ಹೆಚ್ಚಳದಿಂದ ತತ್ತರಿಸುತ್ತಿರುವ ಜನವರ್ಗ ಇದು. ಈ ವರ್ಗದ ಜನರ ಸಮಸ್ಯೆಗಳು ಬಹುಸಂಖ್ಯಾತ ಬಡ ಜನವರ್ಗಗಳಿಗೂ ಅನ್ವಯವಾಗುವುದೂ ನಿಜ.
ಆಹಾರ ಧಾನ್ಯಗಳ ಬೆಲೆ ಮುಗಿಲನ್ನೇ ಮುತ್ತಿಡಲು ಹೊರಟಿವೆ. ದೇಶದ ಎಲ್ಲ ಭಾಗಗಳಲ್ಲೂ ಕಾರ್ಮಿಕ ಕಾಯಿದೆಗಳ ಉಲ್ಲಂಘನೆ ತಡೆ ಇಲ್ಲದೆ ನಡೆಯುತ್ತಿದೆ. ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅದರ ನಿಜವಾದ ಫಲಾನುಭವಿಗಳು ಶ್ರಮಿಕ ವರ್ಗದಲ್ಲಿನ ಒಂದು ಸಣ್ಣ ಭಾಗ ಮಾತ್ರ. ಅಸಂಘಟಿತ ವಲಯಗಳಲ್ಲಿ ದುಡಿಯುವ ಬಿಡಿ ಬಿಡಿ ಶ್ರಮಿಕರು (ದಿನಗೂಲಿಗಳು) ಯಾವುದೇ ರೀತಿಯ ಭದ್ರತೆ, ಸೌಲಭ್ಯ, ಹಕ್ಕು ಆಸರೆಯೂ ಇಲ್ಲದೇ ದಿನದಿಂದ ದಿನಕ್ಕೆ ಎನ್ನುವಂತೆ ಬದುಕನ್ನು ಸಾಗಿಸುತ್ತಿದ್ದಾರೆ. ಅವರ ಬುದುಕೇ ಒಂದು ಪವಾಡ ಸದೃಶವಾದ ವಿಚಾರ.
ಈ ವರ್ಗದ ಜನಸಂಖ್ಯೆ ಕಡಿಮೆ ಏನೂ ಅಲ್ಲ. ಕೆಲವು ಅಂದಾಜುಗಳ ಪ್ರಕಾರ ಸುಮಾರು ಹತ್ತು ಕೋಟಿ ಜನರ ಬವಣೆ ಇದು. ಸಾಮಾನು- ಸರಂಜಾಮು ಬೆಲೆಗಳು ಕೈಗೆಟುಕುತ್ತಿಲ್ಲ. ಔಷಧಿಗಳನ್ನು ಕೊಳ್ಳುವುದಂತೂ ಕನಸಿನ ಮಾತು. ಮಕ್ಕಳನ್ನು ಶಾಲೆಗೆ ಕಳುಹಿಸುವುದೂ ಕಡುಕಷ್ಟ. ವಾಸ ಮಾಡುವ ಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಬೇಕಾದರೆ, ಸಾರಿಗೆ ವೆಚ್ಚಕ್ಕೂ ಅನೇಕ ಬಾರಿ ಜೇಬಿನಲ್ಲಿ ಕಾಸಿರುವುದಿಲ್ಲ.
ರಾಜಕೀಯವಾಗಿ ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನಾಡುವ ಸ್ಥಿತಿಯಲ್ಲೇ ಇಲ್ಲದಿರುವ ಪಕ್ಷಗಳಿಗೆ ಸೇರಿದ್ದರೂ ಬುಧವಾರ- ಗುರುವಾರದ ದಶಕದ ಮಹಾ ಮುಷ್ಕರದಲ್ಲಿ ಇತರ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಾಲುಗೊಳ್ಳಲು ಮುಂದಾಗಿರುವುದರ ಸಂದೇಶ ಸ್ಪಷ್ಟ. ಆರ್ಥಿಕ ಸುಧಾರಣೆಗಾಗಿ ಸುಧಾರಣೆಯನ್ನು, ಅದರಲ್ಲೂ ಅರೆಬರೆ ಬದಲಾವಣೆಗಳಿಂದ ಮಧ್ಯಮ ವರ್ಗ ಹಾಗೂ ಬಡಜನ ಸಮುದಾಯಗಳನ್ನು ಶಾಶ್ವತ ಸಂಕಷ್ಟದ ದವಡೆಗೆ ದೂಡುತ್ತಿರುವುದನ್ನು ಬಹುಜನ ಸಮಾಜ ಪ್ರತಿಭಟಿಸುವ ಕಾಲ ಬಂದಿದೆ.
ಎರಡು ದಶಕಗಳ ಸುಧಾರಣೆ ಕ್ರಮಗಳ ಜಾರಿಯ ಕಾಲದಲ್ಲಿ ಆರ್ಥಿಕ ಪ್ರಗತಿಯ ಸೂಚ್ಯಂಕಗಳು ಮೇಲೇರಿರಬಹುದು. ಆದರೆ ಜನಸಾಮಾನ್ಯ ವರ್ಗಗಳಿಗೆ ಉದ್ಯೋಗದ ಅವಕಾಶಗಳು ನಿರೀಕ್ಷಿಸಿದಷ್ಟು ಹೆಚ್ಚಾಗಿಲ್ಲ. ಈ ಪರಿಸ್ಥಿತಿಯೇ ಈಗ ಸುಧಾರಣೆ ನೀತಿಗೇ ಕೆಲವು ವರ್ಗಗಳ ವಿರೋಧ ಕಂಡು ಬಂದಿರುವುದಕ್ಕೆ ಕಾರಣ. ಅದನ್ನು ಆಳುವ ವರ್ಗಗಳು ಕಡೆಗಾಣಿಸಬಾರದು. ದೊಡ್ಡ ಸಮುದಾಯಗಳ ಹಿತರಕ್ಷಣೆಯನ್ನು ಕಡೆಗಾಣಿಸಿ, ಪ್ರಗತಿಯ ವೇಗದ ಹೆಚ್ಚಳದ ಅಂಕಿ- ಅಂಶಗಳನ್ನು ಪ್ರದರ್ಶಿಸಿದರೆ ಜನರಿಗೆ ಬಂದ ಭಾಗ್ಯವೇನು ಎಂದು ಪ್ರಶ್ನಿಸುವ ಕಾಲ ಬಂದಿದೆ.
ಕೆಲವು ಜನ ಕಲ್ಯಾಣ ಕಾರ್ಯಕ್ರಮಗಳನ್ನೇ ದೊಡ್ಡ ರೀತಿಯ ಸುಧಾರಣೆ ಎಂದು ಬಣ್ಣಿಸುವುದು ಬೇಡ. ಉದ್ಯೋಗದ ಬೆಳವಣಿಗೆ ಇಲ್ಲದ ಪ್ರಗತಿಯ ಚಿತ್ರವನ್ನು ದೇಶ ಎರಡು ದಶಕಗಳ ಕಾಲ ಕಂಡು ಅನುಭವಿಸಿದೆ. ಇನ್ನು ಮುಂದಾದರೂ, ಸುಧಾರಣೆಗೂ ಹೊಸ ಉದ್ಯೋಗಗಳಿಗೂ ಸಂಬಂಧವನ್ನು ಕಲ್ಪಿಸಲೇಬೇಕು. ಅದು ಚಿದಂಬರಮ್ ಅವರಂತಹವರ ಹೊಣೆಗಾರಿಕೆ. ಅದನ್ನು ಹೇಳಲೆಂದೇ ಮುಷ್ಕರದ ಸಂಘಟನೆ. ಇಡೀ ದೇಶದಲ್ಲಿ ಎರಡು ದಿನದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು ಇದೇ ಮೊದಲು. ಬೆಂಗಳೂರಿನ ಆಟೋರಿಕ್ಷಾ ಚಾಲಕರು ಈ ಅವಕಾಶವನ್ನು ತಮ್ಮ ಕುಂದು ಕೊರತೆಗಳನ್ನು ಸಾರ್ವತ್ರಿಕವಾಗಿ ಪರಿಚಯ ಪಡಿಸಲು ಬಳಸುವ ಪ್ರಯತ್ನ ಮಾಡಿದ್ದಾರೆ. ತಪ್ಪೇನಿಲ್ಲ. ಆದರೆ ಅದರ ನೆಪದಲ್ಲಿ ಜನರನ್ನು ಗೋಳುಗುಟ್ಟಿಸಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement