ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Parashurama
Updated On : 22 Feb 2013, 10:39 am

ಸಿದ್ದಾಪುರದಿಂದ ವಿನಾಯಕ ಕಾಮತ್ ಅವರು ಬರೆಯುತ್ತಾರೆ- 'ಫೆ.16ರಂದು 'ಬೈಟು ಕಾಫಿ'ಯಲ್ಲಿ '6 ವರ್ಷಕ್ಕೆ ಕ್ಯಾಮರಾ ಮುಂದೆ ಸಿಂಧು ಚೇತನ್ ಸಿನಿಮಾ ಜೀವನಕ್ಕೆ ಈಗ 23 ವರ್ಷ' ಎಂದಿದೆ. ಅಂದರೆ ಸಿಂಧು ಚೇತನ್‌ಗೆ 29 ಆಗಿರ್ಬೇಕಿತ್ತು. ಆದರೆ ನಂಗೆ ಅನ್ನಿಸೋ ಹಾಗೆ ಸಿಂಧುಗೆ 25 ದಾಟಿಲ್ಲ. ಬಹುಶಃ ಅವರು ಸಿನಿಮಾ ಜೀವನಕ್ಕೆ 17 ವರ್ಷ ಎಂದಿರಬೇಕಿತ್ತಾ? ಆಗ ಅವರ ವಯಸ್ಸು 23 ಅಂತ ಆಗ್ತಿತ್ತು' ಎಂದಿದ್ದಾರೆ.
ಸಿಂಧು ಚೇತನ್ ಅವರು ಜನಿಸಿದ್ದು 1987ರ ಜುಲೈ 7ರಂದು. ಅವರೇ ಹೇಳುವಂತೆ ಅವರು ಮಕ್ಕಳ ಚಿತ್ರವೊಂದರಲ್ಲಿ ನಟಿಸಿದ್ದು 1990ರಲ್ಲಿ. ಅಲ್ಲಿಗೆ ಅವರ ಸಿನಿಮಾ ಜೀವನಕ್ಕೆ ಈಗ 23 ವರ್ಷ. ಅವರು 3 ವರ್ಷಕ್ಕೆ ಕ್ಯಾಮರಾಮುಂದೆ ಬಂದಿದ್ದು ಎಂದಾಗಬೇಕಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ಫೋಟೊ ಕೊಂಚ ಹಳೆಯದು.
ಮೈಸೂರಿನಿಂದ ಬ್ಯಾಂಕ್ ಶಿವಕುಮಾರ್ ಅವರು ಬರೆಯುತ್ತಾರೆ- 'ಫೆ.18ರಂದು (ಪುಟ 12) 'ಕ್ರೀಡಾಪುಟ'ದಲ್ಲಿ ರವಿಶಾಸ್ತ್ರಿಯವರ ಹೇಳಿಕೆಯೊಂದು ಪ್ರಕಟವಾಗಿದೆ. 'ಸಚಿನ್ ತೆಂಡೂಲ್ಕರ್ ಈಗ ರನ್‌ಗಳ ಹಸಿವಿನಲ್ಲಿದ್ದು ಆಸ್ಟ್ರೇಲಿಯಾ ಸರಣಿಯನ್ನು ಎದುರುನೋಡುತ್ತಿದ್ದಾರೆ. ಒಂದು ವೇಳೆ ಆಸೀಸ್ ಬೌಲರ್‌ಗಳು ತೆಂಡೂಲ್ಕರ್‌ಗೆ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸಲು ಅವಕಾಶ ನೀಡಿದರೆ ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಬಹುದು' ಎಂದು ವರದಿಯಾಗಿದೆ.'
'ಯಾವ ಬೌಲರ್‌ಗಳು ಒಬ್ಬ ಬ್ಯಾಟ್ಸ್‌ಮನ್ ತನ್ನ ಓವರ್‌ಗಳಲ್ಲಿ ರನ್ ಗಳಿಸಲಿ ಎಂದು ಬೌಲ್ ಮಾಡುವುದಿಲ್ಲ. ಅಷ್ಟಕ್ಕೂ ದಾಖಲೆಗಳ ವೀರ ಸಚಿನ್‌ಗೆ ಅಂತಹ ದುಸ್ಥಿತಿ ಬರುವುದೇ ಬೇಡ. ಬಹುಶಃ ರವಿಶಾಸ್ತ್ರಿಯವರ ಹೇಳಿಕೆ ತಪ್ಪಾಗಿ ಪ್ರಕಟವಾಗಿರಬಹುದು. ಒಂದು ವೇಳೆ ರವಿಶಾಸ್ತ್ರಿಯವರ ಹೇಳಿಕೆ ತಮ್ಮ ಪತ್ರಿಕೆಯಲ್ಲಿ ಹೇಳಿದಂತೆಯೇ ಇದ್ದರೆ, ಅದು ರವಿಶಾಸ್ತ್ರಿಯವರು ಸಚಿನ್‌ಗೆ ಮಾಡಿದ ಅವಮಾನವೇ ಸರಿಯೆಂದು ಹೇಳಬೇಕಾಗುತ್ತದೆ.'
'ಫೆ.19ರಂದು 'ಪತ್ರಪ್ರಭ' ವಿಭಾಗದಲ್ಲಿ 'ಇವರ ಪ್ರತಿಭಟನೆ ಏಕಿಲ್ಲ?' ಎಂಬ ಶೀರ್ಷಿಕೆ ಅಡಿಯಲ್ಲಿ ಬಿ.ವಿ. ರಾವ್ ಅವರು ಬರೆದಿರುವ ಪತ್ರದಲ್ಲಿ 'ಬಡವರ ಮತ್ತು ರೈತರ ಪಕ್ಷವೆಂದು ಹೇಳಿಕೊಳ್ಳುವವರು ಶ್ರೀರಾಮುಲು. ಅವರ ಸ್ನೇಹಿತರು ಕರುಣಾಕರ ರೆಡ್ಡಿಯವರು. ರೆಡ್ಡಿಯವರು ಏಕಾಏಕಿ ಹಾಲಿನ ಬೆಲೆಯನ್ನು ಲೀಟರಿಗೆ ನಾಲ್ಕು ರೂಪಾಯಿ ಜಾಸ್ತಿ ಮಾಡಿದಾಗ, ಬಡವರ ನಾಯಕ ಎಂದು ಹೇಳಿಕೊಳ್ಳುವ ಶ್ರೀರಾಮುಲು ಅವರು ಏನುಮಾಡುತ್ತಿದ್ದರು?' ಎಂಬುದು ಪತ್ರದ ಸಾಲುಗಳು. ಆದರೆ ಇಲ್ಲಿ 'ಸೋಮಶೇಖರ ರೆಡ್ಡಿ' ಎನ್ನುವ ಬದಲು 'ಕರುಣಾಕರ ರೆಡ್ಡಿಯವರು' ಎಂದಾಗಿದೆ. ಹಾಲಿನ ಬೆಲೆ ಏರಿಕೆಗೆ ಕಾರಣ 'ಹಾಲು ಮಹಾಮಂಡಳಿ' ಅಧ್ಯಕ್ಷರಾಗಿರುವ 'ಸೋಮಶೇಖರ ರೆಡ್ಡಿ'ಯೇ ಹೊರತು ಕರುಣಾಕರ ರೆಡ್ಡಿಯವರಲ್ಲ' ಎಂದಿದ್ದಾರೆ.
ರವಿಶಾಸ್ತ್ರಿಯವರ ಹೇಳಿಕೆ ಸರಿಯಾಗಿದೆ. ಮೊದಲೆರಡು ಟೆಸ್ಟ್‌ನಲ್ಲಿ ಸಚಿನ್‌ಗೆ ರನ್ ಗಳಿಸಲು ಅವಕಾಶ ನೀಡಿದರೆ, ಮತ್ತೆ ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದರರ್ಥ ಅವರಿಗೆ ಬೌಲರ್‌ಗಳು ರನ್ ನೀಡಬೇಕು ಅಥವಾ ನೀಡಿದರೆ ಎಂದರ್ಥವಲ್ಲ. ಬದಲಾಗಿ ಸಚಿನ್‌ರನ್ನು ಬೇಗ ಔಟ್ ಮಾಡದೇ, ಹೆಚ್ಚು ರನ್‌ಗಳಿಸಲು ಅವಕಾಶ ನೀಡಿದರೆ ಎಂದರ್ಥ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement