ಬಾಂಬ್ ಸ್ಫೋಟ!
ಬಾಂಬ್ ಸ್ಫೋಟ!
ಹೈದರಾಬಾದ್ನಲ್ಲಿ ನಡೆದ ವಿಧ್ವಂಸಕ ಕೃತ್ಯ ಭಾರತೀಯರ ಪಾಲಿಗೆ ಇದು ಆಶ್ಚರ್ಯವೆನಿಸಬಹುದೆ? ನಮಗಂತೂ ಇಲ್ಲ ಎನಿಸುತ್ತದೆ, ಕಾರಣ ದೇಶದೊಳಗೆ ಶತ್ರುಗಳನ್ನು ಇಟ್ಟುಕೊಂಡಿರುವ ನಮ್ಮ ದೇಶಕ್ಕೆ ಇಂತಹ ಘಟನೆಗಳು ಆಶ್ಚರ್ಯದ ಸುದ್ದಿಯಾಗುವುದಿಲ್ಲ. ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಆಗದಿದ್ದಲ್ಲಿ ಇಂತಹ ಘಟನೆಗಳು ಇನ್ನು ಮುಂದೆಯೂ ಮರುಕಳಿಸಬಹುದು. ಭಾರತದಲ್ಲಿಯೇ ಇದ್ದುಕೊಂಡು ಭಾರತದ ವಿರೋಧಿ ಮಾತುಗಳನ್ನಾಡುವ ಮಹಾಶಯರೇ ದೇಶದೊಳಗೆ ದೇಶವಾಸಿಗಳಂತೆ ವಾಸಿಸುತ್ತಿರುವ ಉಗ್ರರಿಗೆ ಪ್ರೇರಣೆ. ಇತ್ತೀಚೆಗೆ ನಮ್ಮ ದೇಶದ ರಾಜಕೀಯ ನಾಯಕರ ನಿಲವುಗಳು ಮತ್ತು ಅವರ ಹೇಳಿಕೆಗಳನ್ನು ಗಮನಿಸಿದಾಗ ಹಿಂದೂಗಳು ಉಗ್ರರು ಎಂಬುವ ವಾದವನ್ನು ಅವರು ಮಂಡಿಸಿರುವುದನ್ನು ಕಂಡು ಆಶ್ಚರ್ಯವಾಯಿತು. ಬಹುಶಃ ಇದು ಭವಿಷ್ಯದಲ್ಲೊಂದು ದಿನ ಉಂಟಾಗಬಹುದೆನ್ನಿಸುತ್ತದೆ. ಕಾರಣ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ ಈ ಪರಿಸ್ಥಿತಿ ಉದ್ಭವಿಸಬಹುದೇನೋ? ಈ ಎಲ್ಲವನ್ನೂ ಗಮನಿಸಿದಾಗ ಮನೆ ಮಕ್ಕಳಿಗಿಂತ ಪರರಿಗೆ ಉದಾರತೆ ತೋರಿಸುತ್ತಿದ್ದಾರೆ ಎನಿಸುವುದಿಲ್ಲವೇ? ಉದಾಹರಣೆಗೆ ಅಂದು ದೇಶಾಭಿಮಾನವಿಲ್ಲದ ದೇಶನಾಯಕರನ್ನು ರಕ್ಷಿಸಲು ಉಗ್ರರೊಡನೆ ಸೆಣಸಾಡಿ ಪ್ರಾಣ ಬಿಟ್ಟ ಪಾರ್ಲಿಮೆಂಟ್ ಭವನ ರಕ್ಷಕರ ಸಾವಿಗೆ ಬೆಲೆಯಿಲ್ಲದಂತಾಯ್ತು. ಆದರೆ ಆ ಕೃತ್ಯ ಎಸಗಿದ ಉಗ್ರನ ಶಿಕ್ಷಿಸಲು ಯೋಚಿಸಿ ಯೋಚಿಸಿ, ಅವನ ರಕ್ಷಣೆಗೆ ಬಹಳಷ್ಟು ವ್ಯಯಿಸಿ ನಂತರ ತಮಗನುಕೂಲವಾಗುವ ಸಮಯಕ್ಕೆ ಅವನನ್ನು ನೇಣಿಗೇರಿಸಿದರು. ಈ ಅಂಶಗಳು ಸಾಕು ದೇಶದ ಆಂತರಿಕ ಭದ್ರತೆ ಯಾವ ಮಟ್ಟದಲ್ಲಿದೆ ಎಂಬುದು ಅರಿವಾಗುತ್ತದೆ. ದೇಶದೊಳಗೆ ಇರುವ ದೇಶದ್ರೋಹಿಗಳ ಸದೆ ಬಡೆಯದ ಹೊರತು ರಾಷ್ಟ್ರಕ್ಕೆ, ದೇಶವಾಸಿಗಳಿಗೆ ನೆಮ್ಮದಿ ಇರುವುದಿಲ್ಲ.
- ಕೌಡ್ಲೆರವಿ, ಬೆಂಗಳೂರು
ಬಂದ್ನಿಂದ ಯಾರಿಗೆ ಲಾಭವಾಯ್ತು?
ಕಾರ್ಮಿಕ ಸಂಘಟನೆಗಳು ಬಂದ್ ನೆಪದಲ್ಲಿ ಎರಡು ದಿನಗಳ ಕಾಲ ಕಾರ್ಖಾನೆಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾದವು. ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ. ಬಂದ್ಗಳಿಗೆ ಇಂದು ಯಾವುದೇ ಮಹತ್ವವಿಲ್ಲ ಎಂಬುದಕ್ಕೆ ಸಾಮಾನ್ಯ ಜನರ ನೀರಸ ಪ್ರತಿಕ್ರಿಯೆ ಸಾಕ್ಷಿ. ಸುಪ್ರೀಂಕೋರ್ಟ್ ಕೂಡ ಬಂದ್ ಕರೆ ಕೊಡುವುದನ್ನು ವಿರೋಧಿಸಿ, ಬಂದ್ನಿಂದ ಆಗುವ ನಷ್ಟಕ್ಕೆ ಬಂದ್ ಕರೆ ನೀಡುವವರೇ ಹೊಣೆ ಎಂದು ಆದೇಶಿಸಿದೆ. ಬಂದ್ ಮಾಡಿದಾಕ್ಷಣ ಕೇಂದ್ರ ಸರ್ಕಾರ ಬೆಲೆಗಳನ್ನು ಇಳಿಸುವುದಾಗಲೀ, ಕಾರ್ಮಿಕರ ಎಲ್ಲಾ ಸಮಸ್ಯೆ ಪರಿಹರಿಸುವುದಿಲ್ಲ. ಇದು ಆಡಳಿತ ಪಕ್ಷದ ವಿರುದ್ಧ ವಿರೋಧಿಗಳು ಬಳಸುವ ಒಂದು ಅಸ್ತ್ರ ಮಾತ್ರ. ಇಲ್ಲಿ ಕಾರ್ಮಿಕರು ನೆಪ ಮಾತ್ರ. ಎರಡು ದಿನಗಳ ಬಂದ್ಗೆ ಕಾರ್ಖಾನೆಗಳೇನು ವೇತನ ಸಹಿತ ರಜೆ ನೀಡುವುದಿಲ್ಲ. ಪರ್ಯಾಯವಾಗಿ ಇತರೆ ರಜಾ ದಿನದಂದು ದುಡಿಸಿಕೊಳ್ಳುತ್ತವೆ. ರಜೆ ಇರುವ ಬಂದ್ ದಿನಗಳಲ್ಲಿ ಕಾರ್ಮಿಕರು ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕ ಸಂಘಟನೆಗಳ ನಿರ್ಧಾರಗಳು ಕಾರ್ಮಿಕರ ಹಿತಕಾಯುವಲ್ಲಿ ವಿಫಲವಾಗಿ ಕಾರ್ಮಿಕರಿಗೆ ಮಾರಕವಾಗುತ್ತಿವೆ. ಈ ದೃಷ್ಟಿಯಿಂದ ಕಾರ್ಮಿಕ ಸಂಘಟನೆಗಳು ಯಾವುದೇ ಪ್ರತಿಭಟನೆ ಮಾಡುವುದಾದರೆ ಒಂದು ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿ ತಾವಿರುವಲ್ಲೇ ಒಂದು ತಾಸು (ಇಲ್ಲವೇ ನಿರ್ದಿಷ್ಟ ಸಮಯ) ಪ್ರತಿಭಟಿಸಿ ತಮ್ಮ ಅಹವಾಲು ಸಲ್ಲಿಸಿ ನಂತರ ಕೆಲಸ ಮುಂದುವರೆಸಲಿ. ಇಲ್ಲವೇ ಕಪ್ಪು ಪಟ್ಟಿ ಧರಿಸಿ ದಿನಪೂರ್ತಿ ಕೆಲಸ ಮಾಡುವ ಮೂಲಕ ಪ್ರತಿಭಟಿಸಲಿ. ಶ್ರಮ ವಹಿಸಿ ದುಡಿಯುವ ಕಾರ್ಮಿಕರಿಗೆ ವಾರದ ಒಂದು ದಿನವಾದರೂ ಅರ್ಥಪೂರ್ಣ ರಜೆ ಇರಲಿ. ಈ ಬಗ್ಗೆ ಕಾರ್ಮಿಕ ಮುಖಂಡರು ಯೋಚಿಸಬೇಕು. ಇಲ್ಲವಾದರೆ ಪ್ರತಿಭಟನೆಗೆ ಕಾರ್ಮಿಕರಿಂದ ಕನಿಷ್ಟ ಸ್ಪಂದನೆ ಕೂಡ ಸಿಗದೇ ಇರುವ ಅಪಾಯ ಬರಬಹುದು.
-ಎಚ್. ಗಿರೀಶ