ಮಂತ್ರಿ ಹೇಳಿಕೆ ಪೊಲೀಸ್ ವರದಿ
ಗುರುವಾರ ಮುಸ್ಸಂಜೆಯ ಅನಂತರ ಹೈದರಾಬಾದ್ ನಗರದ ದಿಲ್ಸುಖ್ ಬಡಾವಣೆಯಲ್ಲಿ ಎರಡು ಬಾಂಬ್ ಸ್ಫೋಟಗಳಿಗೆ ಹದಿನಾರು ಮುಗ್ಧ ಜೀವಗಳು ಬಲಿಯಾಗಿವೆ. ನೂರ ಹತ್ತಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ತನಿಖೆ ನಡೆಯುತ್ತಿದೆ.
ಇಡೀ ದೇಶವನ್ನೇ ನಡುಗುವಂತೆ ಮಾಡಿ ಆತಂಕದ ಮಡುವಿಗೆ ತಳ್ಳಿದ ಘಟನೆ ಕುರಿತು ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ನೀಡಿದ ಇಂತಹ ಹೇಳಿಕೆ, ಅಕ್ಷರಶಃ ಹಾಗೂ ವಸ್ತುಶಃ ಒಂದು ಪೊಲೀಸ್ ಪತ್ರಿಕಾ ಪ್ರಕಟಣೆಯಂತೆಯೇ ಇರುವುದು ನಿಜ.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಮಂತ್ರಿ ಹೇಳಿಕೆಯನ್ನು ಒಂದು ಮಾಮೂಲಿ ಹೇಳಿಕೆಯಂತಿರುವುದನ್ನು ಗುರ್ತಿಸಿದ ತಕ್ಷಣವೇ ಇಂತಹ ಹೇಳಿಕೆಯಿಂದ ಏನೇನೂ ಫಲವಿಲ್ಲ ಎಂದಿದ್ದು ಇಡೀ ಸಂಸತ್ತಿನ ಹಾಗೂ ದೇಶದ ಆತಂಕದ ಧ್ವನಿಯನ್ನು ಪ್ರತಿಧ್ವನಿಸಿತ್ತು. ರಾಜ್ಯಸಭೆಯಲ್ಲಿ ಮಂತ್ರಿ ಹೇಳಿಕೆಗೆ ಬೇಕಾದಷ್ಟು ವಿರೋಧ ಪ್ರಕಟವಾಯಿತು. ಅದು ತೀರ ಸಹಜ ಪ್ರತಿಕ್ರಿಯೆ. ನಿಜ. ಹೈದರಾಬಾದ್ನ ಬಾಂಬ್ ಸ್ಫೋಟದಂತಹ ಪ್ರಕರಣವನ್ನು ಸಂಸದೀಯ ಸದನಗಳಲ್ಲಿ ಪ್ರಸ್ತಾಪಿಸಬೇಕಾದರೆ ಸರ್ಕಾರದ ಬಳಿ ಸಾಕಷ್ಟು ಮಾಹಿತಿ ಇರಬೇಕು. ಅದು ಮಂತ್ರಿ ಹೇಳಿಕೆಯಲ್ಲಿರಲಿಲ್ಲ.
ಆದರೆ ಈಗಿನ ಪ್ರಕರಣದಲ್ಲಿ ಕೇಂದ್ರ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ಬಾಂಬ್ ಸ್ಫೋಟದ ಸುಳಿವು ತಮಗೆ ಎರಡು ದಿನಗಳ ಹಿಂದೆಯೇ ಸಿಕ್ಕಿತ್ತೆಂದೂ, ಅದನ್ನು ಆಂಧ್ರಪ್ರದೇಶಕ್ಕೆ ರವಾನಿಸಿದ್ದರೂ ಬಾಂಬ್ ಸ್ಫೋಟವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದೇ ದೊಡ್ಡ ವಾಗ್ಯುದ್ಧಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಕೇಂದ್ರ ಸರ್ಕಾರ, ರಾಜ್ಯಕ್ಕೆ ಕಳುಹಿಸಿದ್ದ ಸಂದೇಶದಲ್ಲಿ ನಿಖರವಾಗಿ ಹೈದರಾಬಾದ್ ನಗರದಲ್ಲೇ ಸ್ಫೋಟ ಸಂಭವಿಸುವ ಸೂಚನೆ ಇರಲಿಲ್ಲ. ಹೈದರಾಬಾದ್, ಬೆಂಗಳೂರು ಹಾಗೂ ಇತರ ನಗರಗಳ ಹೆಸರುಗಳೂ ಆ ಸಂದೇಶದಲ್ಲಿ ಇದ್ದಿದ್ದರಿಂದ ಹೈದರಾಬಾದ್ ಪೊಲೀಸರಿಗೆ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುವ ಯೋಚನೆ ತತ್ಕ್ಷಣದಲ್ಲೇ ಹೊಳೆಯಲಿಲ್ಲ. ಈಗಲೂ ಕೇಂದ್ರ ಸರ್ಕಾರ ಅದೇ ರೀತಿ ವರ್ತಿಸುತ್ತಿರುವುದು. ದೇಶದ ಎಲ್ಲ ನಗರಗಳಲ್ಲೂ ಕಟ್ಟೆಚ್ಚರದ ಆದೇಶ ನೀಡಲಾಗಿದೆ. ಇದನ್ನೇ ಸುಷ್ಮಾ ಸ್ವರಾಜ್ ಮಾಮೂಲಿ ಹೇಳಿಕೆ ನೀಡುವಂತಹ ಪ್ರವೃತ್ತಿಗೆ ಹೋಲಿಸಿ, ಭಯೋತ್ಪಾದನೆಯನ್ನು ಹೇಳಿಕೆಗಳಿಂದಲೇ ತಡೆಯಲು ಸಾಧ್ಯವಾಗಲಿಕ್ಕಿಲ್ಲ ಎಂದಿದ್ದು ಸಮಯೋಚಿತವಾಗಿತ್ತು.
ಹೈದರಾಬಾದ್ ನಗರದಲ್ಲೂ ಹಿಂದೆ ಕೆಲವು ಭಯೋತ್ಪಾದಕ ಘಟನೆಗಳು ನಡೆದಿವೆ. ದೇಶದ ಇತರ ನಗರಗಳಲ್ಲೂ ಹಲವಾರು ಪ್ರಕರಣಗಳು ನಡೆದಿವೆ. ಆ ಸಂದರ್ಭಗಳಲ್ಲಿ ತನಿಖಾ ಪಡೆಗಳಿಗೆ, ಪ್ರಧಾನವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸಿಕ್ಕಿರುವ ಸಾಕ್ಷ್ಯ- ಆಧಾರಗಳಿಂದ ಹೆಚ್ಚು ಪ್ರಯೋಜನವಾದಂತಿಲ್ಲ. ದಶಕಕ್ಕೂ ಹಿಂದೆ ಮುಂಬೈ ಮಹಾನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಕಾಲದಿಂದಲೂ ಭಯೋತ್ಪಾದಕ ಘಟನೆಗಳು ನಮ್ಮ ಮಹಾನಗರಗಳ ಜನಜೀವನದಲ್ಲಿ ನಿರಂತರವಾಗಿ ಆತಂಕದ ಮನೋಧರ್ಮವನ್ನು ಬಿತ್ತುವಂತೆ ಆಗಿರುವುದು ನಿಜಕ್ಕೂ ಒಂದು ದುರಂತವೇ. ಘಟನೆ ನಡೆದ ಅನಂತರ, ತತ್ಕ್ಷಣದಲ್ಲೇ ಕಟ್ಟೆಚ್ಚರದ ಆದೇಶ ನೀಡಿ, ಕಾಲಕ್ರಮದಲ್ಲಿ ಅದನ್ನು ಮರೆತೇ ಬಿಡುವುದು ವಾಡಿಕೆಯಾಗಿದೆ. ಅದು ಪೊಲೀಸ್ ಪಡೆಗಳಿಗೆ ವಾಡಿಕೆಯಾಗಿರಬಹುದು. ಆದರೆ ಜನರಿಗಲ್ಲ. ಜನರ ಮನಸ್ಸಿನ ಅಂತರಾಳದಲ್ಲಿ ಆತಂಕ ಇದ್ದೇ ಇದೆ.
ಅನೇಕ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆಯ ಆಧುನೀಕರಣಕ್ಕೆಂದು ದುಬಾರಿ ಬೆಲೆಯನ್ನು ಕೊಟ್ಟು ಪಡೆದುಕೊಂಡ ಸಾಧನಗಳು ಇದ್ದಕ್ಕಿದ್ದಂತೆ ನಿರುಪಯುಕ್ತವಾಗುವುದು ತೀರ ಸಾಮಾನ್ಯ ಎನ್ನುವಂತಾಗಿದೆ. ಈಗಿನ ಬಾಂಬ್ ಸ್ಫೋಟ ನಡೆದ ಪ್ರದೇಶದಲ್ಲೇ ಅಳವಡಿಸಲಾಗಿದ್ದ ಸಿಸಿ ಟಿವಿ ಸಾಧನ ಗುರುವಾರ ಸಂಜೆ ಕೆಲಸ ಮಾಡುತ್ತಿರಲಿಲ್ಲ. ನಾಲ್ಕು ದಿನಗಳ ಹಿಂದೆ ಯಾರೋ ಅದರ ಸಂಪರ್ಕವನ್ನು ಕಡಿದು ಹಾಕಿದ್ದರಂತೆ. ಇಂತಹ ಉದಾಹರಣೆಗಳನ್ನು ಬೆಂಗಳೂರು ಸೇರಿದಂತೆ ದೇಶದ ಯಾವ ಊರಿನಿಂದಲಾದರೂ ಹೆಕ್ಕಿ ತೆಗೆಯಬಹುದು.ನಿಜವಾಗಲೂ ಇಂತಹ ಪರಿಸ್ಥಿತಿಯನ್ನು ದೇಶದಲ್ಲಿನ ಕಟ್ಟೆಚ್ಚರದ ಸ್ಥಿತಿ ಎಂದು ಹೇಳಲಾಗದು. ಸಂಸತ್ತಿನಲ್ಲಿ ಗುರುವಾರ ಭಾರತೀಯ ಜನತಾ ಪಾರ್ಟಿಯ ಪ್ರತಿನಿಧಿಗಳು ನೇರವಾಗಿ ಹೈದರಾಬಾದ್ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನಿ ಪ್ರಚೋದನೆ, ನೆರವು ಹಾಗೂ ತಂತ್ರಜ್ಞಾನದ ಬೆಂಬಲ ಇರಲೇಬೇಕೆಂದು ಆರೋಪಿಸಿದರು. ಅಂತಹ ಆರೋಪಕ್ಕೆ ತತ್ಕ್ಷಣದ ಪ್ರತಿಕ್ರಿಯೆ ನೀಡುವುದು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆದರೆ ಇತರ ಮೂಲಗಳಿಂದ ಪ್ರಕಟವಾದ ವಿವರಗಳಂತೆ ಗುರುವಾರದ ಘಟನೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಛಾಪು ಸ್ಪಷ್ಟವಾಗಿ ಕಂಡು ಬಂದಿದೆ. ದೆಹಲಿಯ ಪೊಲೀಸರು ಅಲ್ಲಿನ ಕೆಲವು ಆರೋಪಿಗಳನ್ನು ತನಿಖೆ ಮಾಡಿದಾಗಲೂ ಇದೇ ಮಾಹಿತಿ ಹೊರಬಿದ್ದಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರಮುಖರು, ದೇಶದಲ್ಲಿ ಭಯೋತ್ಪಾದನೆಯ, ಹಿಂಸಾಚಾರದ ಘಟನೆಗಳ ವಿರುದ್ಧ ಶಕ್ತಿಮೀರಿ ಹೋರಾಡಿ, ಅದನ್ನು ನಿಗ್ರಹಿಸಲು ತಾವು ಬದ್ಧರೆಂದು ಹೇಳಿದರೂ, ಅವರ ಅನಂತರದ ವರ್ತನೆಯಲ್ಲಿ ಆ ಬದ್ಧತೆಯ ಲಕ್ಷಣ ಕಂಡುಬರುತ್ತಿಲ್ಲ. ಲೋಕಸಭೆ - ರಾಜ್ಯಸಭೆಯಲ್ಲಿ ನಡೆದ ಮಾತುಗಳ ವಿನಿಮಯದ, ಚಕಮಕಿಯ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸದ್ಯದಲ್ಲಿನ ಪ್ರಮುಖ ವಿಚಾರ ಸ್ಫೋಟನೆಯಲ್ಲ ಆದರೆ ರಾಜ್ಯ ಸರ್ಕಾರ ಕೇಂದ್ರ ನೀಡಿದ್ದ ಎಚ್ಚರಿಕೆಯನ್ನು ಕಡೆಗಾಣಿಸಿತೇ ಎನ್ನುವಂತೆ ಭಾಸವಾಗುತ್ತಿದೆ. ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ, ಸಂಸತ್ತಿನ ಉಭಯ ಸದನಗಳಲ್ಲಿ ಓದಿದ ಹೇಳಿಕೆಯಲ್ಲಿ ಸರ್ಕಾರಕ್ಕೆ ತಕ್ಷಣಕ್ಕೆ ಸಿಕ್ಕಿದ್ದ ಪೊಲೀಸ್ ಮಾಹಿತಿ ಇತ್ತು ಎನ್ನುವುದನ್ನು ಬಿಟ್ಟರೆ, ಭಯೋತ್ಪಾದನೆಯ ನಿಗ್ರಹದಲ್ಲಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುವಂತಹ ವಾಕ್ಯಗಳೇ ಇರಲಿಲ್ಲ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಿರಂತರವಾದ ಕಟ್ಟೆಚ್ಚರ ಅಗತ್ಯ ಪ್ರಶ್ನೆಗೆ ಉತ್ತರ ಕೊಡುವಂತಹ ಮಾಹಿತಿಯ ರವಾನೆಯ ಮನೋವೃತ್ತಿ ಸರ್ಕಾರಕ್ಕೆ ಶೋಭೆ ತರುವುದಿಲ್ಲ.