ಪ್ರತಿಕೂಲ ಸ್ಥಿತಿಯಲ್ಲೂ ಪ್ರಗತಿ
ಪವನ ಕುಮಾರ ಬನ್ಸಲ್ ಅವರು ರೈಲ್ವೆ ಮಂತ್ರಾಲಯದ ಅಧಿಪತಿಯಾಗಿ ಅಧಿಕಾರ ವಹಿಸಿಕೊಂಡು, 120 ದಿನಗಳಷ್ಟೇ ಕಳೆದಿರುವುದು. ಆದರೂ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಚೊಚ್ಚಲ ಬಜೆಟ್ನ ವಿವರಗಳನ್ನು ಪರಿಶೀಲಿಸಿದಾಗ ಪ್ರತಿಕೂಲ ಸ್ಥಿತಿಯಲ್ಲೂ ಪ್ರಗತಿಯ ಚಿತ್ರ ಮೂಡಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ವರ್ಷಕ್ಕೆ ಶತಕೋಟಿ ಟನ್ಗಳಷ್ಟು ಸಾಮಾನು ಸರಂಜಾಮುಗಳನ್ನು ಬಾರಾಮುಲ್ಲಾದಿಂದ ಕನ್ಯಾಕುಮಾರಿಗೆ, ಅರುಣಾಚಲ ಪ್ರದೇಶದಿಂದ ಹಿಡಿದು ದ್ವಾರಕಾ ತೀರದವರೆಗೂ ಸಾಗಿಸುವ ವ್ಯವಸ್ಥೆಯನ್ನು ತಲುಪಿರುವ ಭಾರತೀಯ ರೈಲ್ವೆ ಈ ವಿಚಾರದಲ್ಲಿ ಈಗ ಚೀನಾ, ಅಮೆರಿಕ, ರಷ್ಯದ ಅನಂತರದ ನಾಲ್ಕನೇ ರಾಷ್ಟ್ರ.
ಲಕ್ಷಾಂತರ ಕಿಲೋಮೀಟರ್ಗಳ ಉದ್ದದ ಹಳಿಗಳ ಮೇಲೆ ಹಗಲೂ - ರಾತ್ರಿ ಪುರುಸೊತ್ತೇ ಇಲ್ಲದಂತೆ ಸಾವಿರಾರು ರೈಲುಗಳು ಚಲಿಸುವ ವ್ಯವಸ್ಥೆ ಭಾರತೀಯ ರೈಲ್ವೆ. ದೂರುಗಳು ಸಾವಿರ ಇರಬಹುದು. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿನ ಜನರು ತಮಗೆ ಅನ್ಯಾಯವಾಗಿದೆ ಎಂದು ಭಾವಿಸಲೂಬಹುದು. ಆದರೆ ಇಂದಿನ ಸಂಕಷ್ಟದ ಸ್ಥಿತಿಯಲ್ಲಿ, ಸಾಧ್ಯವಿರುವಷ್ಟು ಪ್ರಗತಿ ಸಾಧಿಸುವ ಪ್ರಯತ್ನವನ್ನು ಬನ್ಸಲ್ ನಡೆಸಿದ್ದಾರೆ.
ರೈಲ್ವೆ ಬಜೆಟ್ ಎಂದರೆ ಜನರ ಗಮನ ಹರಿಯುವುದು ಪ್ರಯಾಣದ ದರ ಹಾಗೂ ಸಾಮಾನು ಸರಂಜಾಮು ದರಗಳ ಏರಿಳಿತದ ಕಡೆಗೆ. ತಮ್ಮ ತಮ್ಮ ಪ್ರದೇಶಗಳಿಗೆ ದೊರಕಲಿರುವ ಹೊಸ ರೈಲು ಸಂಪರ್ಕದ ಕಡೆಗೆ. ಪವನ ಬನ್ಸಲ್ ಬಜೆಟ್ನಲ್ಲಿ ಪ್ರಯಾಣ ದರ ಈಗ ಏರಿಲ್ಲ. ಆದರೆ ಮುಂದೆ ಡೀಸೆಲ್ ಬೆಲೆಗಳು ಏರಿದರೆ, ದರ ಏರುವ ಸೂಚನೆ ಇದೆ. ಈಗಲೂ ಕೆಲವು ಸೇವೆಗಳಿಗೆ ಕೊಡಬೇಕಾದ ಶುಲ್ಕ ಹೆಚ್ಚಿದೆ. ಸರಾಸರಿ ಲೆಕ್ಕದಲ್ಲಿ ಸಾಮಾನು ಸರಂಜಾಮುಗಳ ಸಾಗಣೆಯ ದರ ಶೇಕಡಾ 5 ರಷ್ಟು ಹೆಚ್ಚಿದೆ. ಅಷ್ಟರಿಂದಲೇ ರೈಲ್ವೆಯ ತಕ್ಕಡಿ ಮೇಲೇರುವುದಿಲ್ಲ.
ಕಳೆದ ವರ್ಷ, ದೇಶದ ಆರ್ಥಿಕ ವ್ಯವಸ್ಥೆಯಲ್ಲೇ ಪ್ರಗತಿಯ ವೇಗ ಕುಗ್ಗಿತ್ತು. ಸಹಜವಾಗಿಯೇ ಅದರ ಪರಿಣಾಮ ರೈಲ್ವೆಯ ಮೇಲೂ ಆಗಲೇಬೇಕು, ಆಗಿದೆ. ಕಳೆದ ಒಂದು ದಶಕದಲ್ಲಿ ರೈಲ್ವೆ ಮಂತ್ರಿಗಳು ರೈಲ್ವೆಯ ಸಂಪನ್ನೂಲಗಳನ್ನು ಹೆಚ್ಚಿಸುವ ಪ್ರಯತ್ನಕ್ಕೇ ಕೈ ಹಾಕಲಿಲ್ಲ. ಪರಿಣಾಮ; ರೈಲ್ವೆಯ ಸೇವೆಯ ಗುಣಮಟ್ಟ ಕುಸಿದಿತ್ತು. ಭದ್ರತಾ ವ್ಯವಸ್ಥೆ ಅತೃಪ್ತಿಕರವಾಗಿತ್ತು. ಅಪಘಾತಗಳ ಭೀತಿ ಕಾಡಿತ್ತು.
ಪವನ ಬನ್ಸಲ್ ತಮ್ಮ ಗಮನವನ್ನು ರೈಲ್ವೆ ಭದ್ರತೆ, ಅಪಘಾತಗಳು, ಪ್ರಯಾಣಿಕರ ಸೇವೆಯ ಗುಣಮಟ್ಟದತ್ತ ಹರಿಸಿದ್ದಾರೆ. ರೈಲ್ವೆ ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧರಿತ ಆಧುನಿಕತೆಯನ್ನು ಅಳವಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅಭಿನಂದನೆ ಸಲ್ಲಲೇ ಬೇಕು.
ರೈಲ್ವೆ ವ್ಯವಸ್ಥೆಗೆ ಸಂಬಂಧಿಸಿದಂತೆ, ಎಲೆಕ್ಟ್ರಾನಿಕ್ಸ್ ಆಧರಿಸಿದ ತಂತ್ರಜ್ಞಾನ ವಲಯದ ಒಂದು ಉನ್ನತ ಶಿಕ್ಷಣ ಸಂಸ್ಥೆ ನಾಗಪುರದಲ್ಲಿ ಸ್ಥಾಪನೆಯಾಗಲಿದೆ. ಆರು ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಡಾಕ್ಟೊರೇಟ್ ಪಡೆಯುವ ವ್ಯವಸ್ಥೆಯಾಗಲಿದೆ. ಖಾಲಿ ಇರುವ ಸುಮಾರು ಲಕ್ಷಕ್ಕೂ ಹೆಚ್ಚು ನೌಕರಿಗಳು ಭರ್ತಿ ಮಾಡಲು, ಅಗತ್ಯವಾದ ಅಭ್ಯರ್ಥಿಗಳಿಗೆ ಕೌಶಲದ ಶಿಕ್ಷಣ ನೀಡಲು ಬೆಂಗಳೂರೂ ಸೇರಿದಂತೆ 25 ನಗರಗಳಲ್ಲಿ ವಿಶೇಷ ವ್ಯವಸ್ಥೆಯಾಗಲಿದೆ.
ಅಪಘಾತಗಳಿಗೆ ಸಂಬಂಧಿಸಿದಂತೆ, ಎಲ್ಲ ಬಗೆಯ ಆಧುನಿಕ ತಂತ್ರಜ್ಞಾನದ ಬಳಕೆಗೆ ರೈಲ್ವೆ ಸಜ್ಜಾಗಿದೆ.
ಹನ್ನೆರಡನೆ ಪಂಚವಾರ್ಷಿಕ ಯೋಜನೆಯಲ್ಲಿ ರೈಲ್ವೆಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ರೈಲ್ವೆ ಮಂತ್ರಾಲಯ ಪ್ರತಿವರ್ಷ ಒಂದು ಲಕ್ಷ ಕೋಟಿ ರುಪಾಯಿಗಳನ್ನು ಸಂಗ್ರಹಿಸಬೇಕು. ಮೊದಲ ವರ್ಷದಲ್ಲಿ ಹತ್ತುಸಾವಿರ ಕೋಟಿಯಷ್ಟೇ ಸಾಧನೆಯಾಗಿದ್ದು. ಉಳಿದ ನಾಲ್ಕು ವರ್ಷಗಳಲ್ಲಿ 4,90,000 ಕೋಟಿ ರುಪಾಯಿಗಳನ್ನು ಗಳಿಸಬೇಕಾಗಿದೆ. ಅದು ಸಾಧ್ಯವಾಗದೇ ಹೋದರೆ, ರೈಲ್ವೆ ಪ್ರಗತಿಯ ಗುರಿ ಕುಗ್ಗಿಸಬೇಕಾಗಬಹುದು.
ಈ ವರ್ಷದ ಗಮನ ಹೆಚ್ಚಾಗಿ ಹೊಸ ಕೈಲು ಮಾರ್ಗಗಳ ಕಡೆ ಹರಿದಿಲ್ಲ. ಸಂಪನ್ಮೂಲದ ಅಭಾವವೇ ಅದಕ್ಕೆ ಕಾರಣವೆಂದು ಬನ್ಸಲ್ ಮುಚ್ಚುಮರೆ ಮಾಡದೇ ಹೇಳಿರುವುದು ಮೆಚ್ಚುವಂತಹದ್ದು. ಸಂಪನ್ಮೂಲ ಮೇಲಿನಿಂದ ಬರುವುದಿಲ್ಲ. ಕಷ್ಟಪಟ್ಟು ಅದನ್ನು ಸಾಧಿಸಬೇಕು.
ಪ್ರಯಾಣಿಕರ ಸೌಲಭ್ಯಗಳ ಗುಣಮಟ್ಟ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗಿದೆ. ಇಂಟರ್ನೆಟ್ ಮೂಲಕ ಟಿಕೆಟ್ಗಳ ವ್ಯವಹಾರದ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನ ನಡೆದಿದೆ. ದೇಶದ ಎಲ್ಲ ಕಡೆ, ಒಂದು ನಿಮಿಷಕ್ಕೆ 72000 ಟಿಕೆಟ್ಗಳನ್ನು ವ್ಯವಹರಿಸಬಲ್ಲ ಸಾಮರ್ಥ್ಯವಿರುವ ವ್ಯವಸ್ಥೆಯಲ್ಲಿ ಏಕಕಾಲದಲ್ಲಿ ಒಂದು ಲಕ್ಷ ವ್ಯವಹಾರಗಳು ನಡೆಯುವುದು ಅನತಿಕಾಲದಲ್ಲೇ ಸಾಧ್ಯವಾಗಬಹುದು.
ಹೊಸ ರೈಲುಗಳು, ಹಳೆಯ ರೈಲುಗಳ ವಿಸ್ತರಣೆ, ಹೆಚ್ಚಿನ ಸೌಲಭ್ಯಗಳ ವಿಚಾರದಲ್ಲಿ ದೇಶದ ಎಲ್ಲ ಕಡೆಗಳಲ್ಲೂ ನಿರೀಕ್ಷೆ ವಿಪರೀತ. ಆದ್ದರಿಂದಲೇ ಎಲ್ಲ ಪ್ರದೇಶಗಳಲ್ಲೂ ಅನೇಕರಿಗೆ ತಮಗೆ ಅನ್ಯಾಯವಾಗಿದೆ ಎನ್ನುವ ಭಾವನೆ ಮೂಡಬಹುದು. ಅದು ಜನತಂತ್ರದಲ್ಲಿ ಸ್ವಾಭಾವಿಕ. ಕರ್ನಾಟಕದ ವಿಚಾರಕ್ಕೆ ಬಂದರೆ, ಅನ್ಯಾಯ ಆಗಿದೆ ಎನ್ನುವಂತಿಲ್ಲ. ಆದರೆ ನ್ಯಾಯ ಸಿಕ್ಕಿಲ್ಲ ಎನ್ನಬಹುದೇನೋ.
ಪಟನಾ ಜಬಲಪುರದ ಜತೆ ಬೆಂಗಳೂರಿಗೆ ನೇರ ಸಂಪರ್ಕ ಸಿಕ್ಕಿದೆ. ಬೆಂಗಳೂರಿನಲ್ಲೇ ಅಂತ್ಯವಾಗುತ್ತಿದ್ದ ಕೆಲವು ರೈಲುಗಳು ಮೈಸೂರಿನ ವರೆಗೆ ಹೋಗಲಿವೆ. ಚಿಕ್ಕಬಳ್ಳಾಪುರದಿಂದ ಮದನಪಲ್ಲಿಗೆ, ಪುಟ್ಟಪರ್ತಿಗೆ ಸಂಪರ್ಕ ಸಿಗಲಿದೆ. ಚಿಕ್ಕಮಗಳೂರು - ಸಕಲೇಶವಪುರ, ಬೆಂಗಳೂರು-ಸತ್ಯಮಂಗಲ, ಗದಗ್-ವಾಡಿ, ಪಂಡರಪುರ-ಬಿಜಾಪುರ, ಹುಬ್ಬಳ್ಳಿ-ಮುಂಬೈ ರೈಲುಗಳ ಪ್ರಸ್ತಾಪದ ಜತೆಗೇ ಮಂಗಳೂರು-ಮಡಗಾಂವ, ಕಾರವಾರ-ಮಡಗಾಂವ ರೈಲುಗಳೂ ಓಡಬಹುದು. ಈ ವಿಚಾರದಲ್ಲಿ ಸಂಪೂರ್ಣ ಸಂತೃಪ್ತಿ ಎನ್ನುವುದು ಮರೀಚಿಕೆ.
ಪ್ರಧಾನಿ ಮನಮೋಹನ ಸಿಂಗ್ ಅವರು ರೈಲ್ವೆ ಬಜೆಟ್ಟನ್ನು 'ವಾಸ್ತವಿಕ ನೆಲೆಗಟ್ಟಿನ ಬಜೆಟ್' ಎಂದಿದ್ದಾರೆ. ಅದು ಒಂದು ರೀತಿಯಲ್ಲಿ ನಿರ್ವಿಕಾರದ ಮಾತು. ಬಿಜೆಪಿಯ ನಾಯಕರು ನಿರಾಶಾದಾಯಕವೆಂದು ಹೇಳಿದ್ದಾರೆ. ಅದು ರಾಜಕೀಯದ ಮಾತು.
ಕೇಂದ್ರ ಸರ್ಕಾರ ಅಧಿಕೃತವಾಗಿ ಕರ್ನಾಟಕದ ರಾಜಧಾನಿಯ ಹೆಸರನ್ನು ಬೆಂಗಳೂರು ಎಂದು ಬದಲಾಯಿಸುವುದಕ್ಕೆ ಮುಂಚೆಯೇ, ರೈಲ್ವೆಮಂತ್ರಿ ಪವನ ಬನ್ಸಲ್ ಅವರು ಬೆಂಗಳೂರು ಎನ್ನುವ ಪ್ರಯೋಗವನ್ನು ಸಂಸತ್ತಿನಲ್ಲಿ ಸರ್ಕಾರದ ಪರವಾಗಿ ಬಳಸಿದ್ದಾರೆ. ಧನ್ಯವಾದಗಳು.