ಪೊಲೀಸರ ಮನೆಗೆಲಸದ ಹೊಣೆ
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅವರ ಮನೆ ಕೆಲಸಕ್ಕೆಂದು ಆರ್ಡರ್ಲಿಗಳಾಗಿ ಕಾನ್ಸ್ಟೇಬಲ್ಗಳನ್ನು ಒದಗಿಸುವುದು ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ. ಅದಕ್ಕೆ ಆಧಾರ ಪೊಲೀಸ್ ಮ್ಯಾನ್ಯುಯೆಲ್ನಲ್ಲಿ ಆ ವ್ಯವಸ್ಥೆಗೆ ಅವಕಾಶವಿದೆ ಎನ್ನುವುದೇ.
ಪೊಲೀಸ್ ಮ್ಯಾನ್ಯುಯೆಲ್ ಬರೆದವರೂ ಪೊಲೀಸರೇ. ಒಮ್ಮೆ ಐಜಿಪಿ ಮಟ್ಟದ ಅಧಿಕಾರಿಯೊಬ್ಬರು ಅದನ್ನು ವಿಮರ್ಶಿಸಿದ್ದೂ ಆಗಿದೆ. ಆದರೆ ಬದಲಾವಣೆಗಳೇನೂ ಆಗಲಿಲ್ಲ. ಈಗಲೂ ಆರ್ಡರ್ಲಿ ವ್ಯವಸ್ಥೆ ಇದೆ.
ಇಂತಹ ಪಾಳೆಯಗಾರಿಕೆಯ ಪಳೆಯುಳಿಕೆ ಈಗಿನ ಜನತಂತ್ರ ವ್ಯವಸ್ಥೆಯಲ್ಲಿ ನಿಜವಾಗಲೂ ಬೇಕೆ ಎನ್ನುವುದು ಆಗಿಂದ್ದಾಗ್ಗೆ ಏಳುವ ಪ್ರಶ್ನೆ. ಹಲವು ಪ್ರಕಟಿತ ವರದಿಗಳಂತೆ ಕೆಲವು ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಐದು-ಆರು ಮಂದಿ ಆರ್ಡರ್ಲಿಗಳಿರುತ್ತಾರೆ. ಇಬ್ಬರು ಮಾಜಿ ಡಿಜಿಪಿಗಳು, ಲೋಕಾಯುಕ್ತ ವ್ಯವಸ್ಥೆಯ ಮುಂದೆ ಆರ್ಡರ್ಲಿಗಳ ಸಂಖ್ಯೆ ಹಾಗೂ ಬಳಕೆಯ ರೀತಿ ಕುರಿತು ಪರಸ್ಪರ ದೂರು ನೀಡಿದ್ದಾರೆಂದೂ ವರದಿಯಾಗಿದೆ.
ನಿಜ. ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ಸಂಬಳ- ಭತ್ಯದ ಜತೆಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸುವ ಪದ್ಧತಿಯನ್ನು ಸರ್ಕಾರ- ಸಮಾಜ ಒಪ್ಪಿರುವಂತಿದೆ. ಆದರೆ ಅದನ್ನು ಸರ್ಕಾರಿ ನೌಕರರನ್ನು, ಅಧಿಕಾರಿಗಳ ಮನೆಯ ಚಾಕರಿಗೆ ನೇಮಿಸುವುದು ಜನತಾಂತ್ರಿಕ ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲ. ಅಧಿಕಾರಿಗಳಿಗೆ ಮನೆಗೆಲಸಕ್ಕೆ ನೌಕರರನ್ನು ನೇಮಿಸಿಕೊಳ್ಳಲು ವಿಶೇಷ ಭತ್ಯೆ ಕೊಡುವುದು ಒಳಿತು. ಈ ಪದ್ಧತಿ ಕಾರ್ಪೊರೇಟ್ ವಲಯದಲ್ಲಿದೆ.
ಸುಮಾರು ಅರ್ಧ ಶತಮಾನದ ಹಿಂದೆ, ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವಾಗ, ಒಬ್ಬ ಪೊಲೀಸ್ ಅಧಿಕಾರಿಯ ಮನೆಗೆಲಸಕ್ಕೆ ನೇಮಕವಾಗಿದ್ದ ಕಾನ್ಸ್ಟೇಬಲ್ ಒಂದು ಬಕೆಟ್ನಲ್ಲಿ ಒದ್ದೆ ಸೀರೆಗಳನ್ನು ಹೊತ್ತು ವಿಧಾನ ಸೌಧಕ್ಕೇ ತಂದು ಅಮ್ಮಾವ್ರ ಸೀರೆ ಒಗೆಯಲಾರೆ ಎಂದು ಗೋಳಿಟ್ಟಿದ್ದ. ಆ ಕಾಲಕ್ಕೇ ಅದು ರಾಷ್ಟ್ರೀಯ ಪತ್ರಿಕೆಗಳಲ್ಲಿ ಅಗ್ರಲೇಖನಕ್ಕೆ ಗ್ರಾಸ ಒದಗಿಸಿತ್ತು. ಇನ್ನೂ ಕಾಲ ಬದಲಾಗಿಲ್ಲ.