ಯಾರಿಗೂ ಬೇಡವಾಗಿದೆ ಆಡಿಟ್ ಸೆಲ್!
16/2013ರ ಪತ್ರಿಕೆಯ ಸಂಪಾದಕೀಯದಲ್ಲಿ 'ಆಡಿಟ್ ವರದಿ ಯಾರಿಗೆ ಬೇಕು' ಓದಿದ ನಂತರ ರಾಜ್ಯ ನಿಗಮವೊಂದರ ಆಡಿಟ್ ಸೆಲ್ನಲ್ಲಿದ್ದಾಗಿನ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆನ್ನಿಸಿತು. ಯಾರಿಗೂ ಬೇಡವಾದ ಈ ವಿಭಾಗಕ್ಕೆ ಯಾರಿಗೂ ಬೇಡವಾದವರನ್ನು ತಳ್ಳುತ್ತಾರೆ. ಅಂದ ಮೇಲೆ ದಾಕ್ಷಿಣ್ಯಕ್ಕೊಳಗಾಗದ, ನೇರ ನಡೆಯ ಪ್ರಾಮಾಣಿಕ ಪ್ರಾಣಿಗಳನ್ನು ಆಡಿಟ್ ವಿಭಾಗದಲ್ಲಿ ಕೊಳೆ ಹಾಕುತ್ತಾರೆ. ಅಕಸ್ಮಾತ್ ಸಿಕ್ಕಿ ಹಾಕಿಕೊಂಡ ಭ್ರಷ್ಟರಿಗೂ ಇದು ತಂಗುದಾಣ. ಕೆಲ ದಿನಗಳ ನಂತರ ಈ ಪ್ರಭಾವಿ ಭ್ರಷ್ಟರು ಆಯಕಟ್ಟಿನ ಹುದ್ದೆಗಳನ್ನು ಖರೀದಿಸುತ್ತಾರೆ. ಸಣ್ಣಪುಟ್ಟ ಕಳ್ಳರಿಗೆ ನಾಮಕಾವಸ್ತೆ ಶಿಕ್ಷೆಯಾಗುತ್ತದೆ. ಲಕ್ಷಗಟ್ಟಲೆ, ಕೋಟಿಗಟ್ಟಲೆ ಲೂಟಿ ಮಾಡಿದವರು ಮೇಲೇರುತ್ತಲೇ ಇರುತ್ತಾರೆ. ಈ ನಿಗಮದಲ್ಲಿ ಕೆಲವೇ ವರ್ಷಗಳ ಹಿಂದೆ ಸಾಮಾನ್ಯ ಹುದ್ದೆಗೆ ನೇಮಕಗೊಂಡ ಕಿಲಾಡಿಗಳು ಈಗ ಎಕ್ಸಿಕ್ಯುಟಿವ್ ಡೈರಕ್ಟರು, ಜನರಲ್ ಮ್ಯಾನೇಜರ್ಗಳಾಗಿ ಮಿಂಚುತ್ತಾ ಭ್ರಷ್ಟ ರಾಜಕಾರಣಿಗಳ ಪಡಸಾಲೆಗಳಲ್ಲಿ ಅಡ್ಡಾಡುತ್ತಾರೆ. ಪ್ರಾಮಾಣಿಕ, ಕರ್ತವ್ಯ ನಿಷ್ಠೆಯ ಆಡಿಟ್ ಸಿಬ್ಬಂದಿ ನೀಡುವ ವರದಿಗಳು 'ರೆಕಾರ್ಡ್ಸ್' ಕೋಣೆಯಲ್ಲಿ ಧೂಳಿನಲ್ಲಿ ಮುಚ್ಚಿ ಹೋಗುತ್ತವೆ.
-ಹಾಡ್ಯ ಬ. ಜಯಾನಂದ, ಕೃಷ್ಣಮೂರ್ತಿಪುರಂ, ಮೈಸೂರು
ಆಧಾರ್ಗೆ ಪರ್ಯಾಯ ವ್ಯವಸ್ಥೆ ಮಾಡಿ
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಧಾರ್ ಕಾರ್ಡಿನ ಪ್ರಕ್ರಿಯೆ ಒಳ್ಳೆಯದೇ. ಇದು ಭಾರತದ ಪ್ರತಿಯೊಬ್ಬ ಪ್ರಜೆಗೂ ಅನಿವಾರ್ಯವೇ ಸರಿ. ಆದರೆ ಈ ಪ್ರಕ್ರಿಯೆಯನ್ನು ತಾಲೂಕು ಮಟ್ಟದಲ್ಲಿ ಅಂಚೆ ಕಚೇರಿಯ ಮುಖಾಂತರ ಮಾಡಿಸಿಕೊಳ್ಳುವಂತೆ ಮಾಡಿರುವುದು ಸರಿಯಲ್ಲ. ಈ ರೀತಿ ಮಾಡಿರುವುದರಿಂದ ಗ್ರಾಮೀಣ ಪ್ರದೇಶಗಳ ಜನತೆಯು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ತುಂಬಾ ತೊಂದರೆ ಪಡಬೇಕಾಗಿದೆ. ತಾಲೂಕಿನಲ್ಲಿ ಒಂದೇ ಕಡೆ ಆಧಾರ್ ಕಾರ್ಡ್ ಮಾಡುವುದರಿಂದ ಜನರ ನೂಕು ನುಗ್ಗಲು ಹೆಚ್ಚಾಗಿ ತೊಂದರೆಯಾಗುತ್ತಿದೆ. ಜನತೆ ಪ್ರತಿನಿತ್ಯ ತಮ್ಮ ದೈನಂದಿನ ಕೆಲಸ ಕಾರ್ಯವನ್ನು ಬಿಟ್ಟು ಪರದಾಡುವ ಸ್ಥಿತಿ ಉಂಟಾಗಿರುತ್ತದೆ. ಸಕಾಲಕ್ಕೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಆಧಾರ್ ಕಾರ್ಡ್ಗಳು ಮಾಡುವ ಕೇಂದ್ರಗಳನ್ನು ಆಯಾ ತಾಲೂಕಿನ ಹೋಬಳಿವಾರು ಅಥವಾ ಪಂಚಾಯಿತಿವಾರು ಮಾಡಿದರೆ ಗ್ರಾಮೀಣ ಪ್ರದೇಶಗಳ ಜನತೆಗೆ ಅನುಕೂಲವಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಶೀಲಿಸಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವುದು ಸೂಕ್ತ.
-ಸಿ.ಕೆ. ರಘುನಾಥ್ಸಿಂಗ್, ಚೊಕ್ಕಂಡಹಳ್ಳಿ, ಮಾಲೂರು
ಶಿವರಾಂ, ಹೇ ರಾಮ್!
ಕನ್ನಡದ ಕಂದ, ಐ.ಎ.ಎಸ್. ಅಧಿಕಾರಿ ಶಿವರಾಂ, ಹೇ ರಾಮ್, 212 ಎಕರೆ ಗುಳುಂ! ಬೇಲಿಯೇ ಎದ್ದು ಹೊಲ ಮೇಯ್ದೊಡೆ ಈ ಐ.ಎ.ಎಸ್. ಗಳೇ ಹೀಗೆ ಆದೊಡೆ, ಬಡಜನ ಯಾರನ್ನು ನಂಬೋದು? ಸಮಾಜದಲ್ಲಿ ವೈದ್ಯವೃತ್ತಿ ನಂತರ ಈ ವೃತ್ತಿಗೇ ಹೆಚ್ಚು ಮಾನ್ಯತೆ. ಅಂಥದ್ದರಲ್ಲಿ ಹರ ಕೊಲ್ಲಲ್ ನರ ಕಾಯ್ವನೇ? ಹರ-ಹರಾ ಶ್ರೀ ಚನ್ನ ಸೋಮೇಶ್ವರಾ!
- ಕಬ್ಬಿನಮನೆ ಕೃಷ್ಣಕುಮಾರ್, ಚಿಕ್ಕಮೇದೂರು ಅಂಚೆ